ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಕುಟುಂಬಕ್ಕೆ ಕೊಲೆ ಬೆದರಿಕೆ ಹಾಕಿರುವ ಆರೋಪದ ಮೇಲೆ ಚಿತ್ತಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ರೌಡಿಶೀಟರ್ ಮಣಿಕಂಠ ರಾಠೋಡ್ ವಿರುದ್ಧ ರಾಜಸ್ಥಾನದಲ್ಲಿ ಪ್ರಕರಣ ದಾಖಲಾಗಿದೆ.
ಖರ್ಗೆ ಅವರ ವಿರುದ್ಧ ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ಮತ್ತು ರಾಜಸ್ಥಾನದ ಬಿಜೆಪಿ ಶಾಸಕ ಮದನ್ ದಿಲಾವರ್ ವಿರುದ್ಧ ರಾಜಸ್ಥಾನ ಪೊಲೀಸರು ಕೊಲೆ ಮತ್ತು ಕ್ರಿಮಿನಲ್ ಬೆದರಿಕೆ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ.
ರಾಜಸ್ಥಾನ ಕಾಂಗ್ರೆಸ್ ಕಾರ್ಯದರ್ಶಿ ರಾಮ್ ಸಿಂಗ್ ಕಸ್ವಾನ್ ನೀಡಿದ ದೂರಿನ ಮೇರೆಗೆ ಸಂಜಯ್ ವೃತ್ತ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
“ರಾಮಗಂಜ್ ಮಂಡಿ ಕ್ಷೇತ್ರದ ಬಿಜೆಪಿ ಶಾಸಕ ಮದನ್ ದಿಲಾವರ್ ಮತ್ತು ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಚಿತ್ತಾಪುರದಿಂದ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ” ಎಂದು ಕೊತ್ವಾಲಿ ಎಸಿಪಿ ನರೇಂದ್ರ ಕುಮಾರ್ ಮಾಹಿತಿ ನೀಡಿದ್ದಾರೆ.
ಮದನ್ ದಿಲಾವರ್ ಹಾಲಿ ಶಾಸಕರಾಗಿರುವುದರಿಂದ ಈ ಪ್ರಕರಣವನ್ನು ಸಿಬಿ-ಸಿಐಡಿ ತನಿಖೆ ನಡೆಸಲಿದೆ ಎಂದು ಪ್ರಕರಣದ ತನಿಖಾಧಿಕಾರಿಯೂ ಆಗಿರುವ ಕುಮಾರ್ ಹೇಳಿದ್ದಾರೆ.
ಇಬ್ಬರ ವಿರುದ್ಧ ಐಪಿಸಿ ಸೆಕ್ಷನ್ 302 (ಕೊಲೆ), 506 (ಕ್ರಿಮಿನಲ್ ಬೆದರಿಕೆ), ಮತ್ತು ಎಸ್‌ಸಿ/ಎಸ್‌ಟಿ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದೇ ವಿಚಾರವಾಗಿ ಉತ್ತರಾಖಂಡ ಮತ್ತು ಬಿಹಾರ ಕಾಂಗ್ರೆಸ್ ಕೂಡ ರಾಠೋಡ್ ವಿರುದ್ಧ ಪೊಲೀಸರಿಗೆ ದೂರು ನೀಡಿದೆ.
ಮಣಿಕಂಠ ಹೇಳಿದ್ದೇನು?
‘ಖರ್ಗೆ, ಹೆಂಡತಿ ಮಕ್ಕಳನ್ನು ಸಾಫ್ ಮಾಡ್ತೀನಿ…’ ಎಂದು ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಹೇಳಿರುವ ಆಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ್ದ ಸುರ್ಜೇವಾಲ, “ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಕುಟುಂಬ ಸದಸ್ಯರನ್ನು ಹತ್ಯೆ ಮಾಡಲು ಬಿಜೆಪಿ ನಾಯಕರು ಸಂಚು ರೂಪಿಸುತ್ತಿದ್ದಾರೆ. ಪ್ರಧಾನಿ ಮೋದಿ ಮತ್ತು ಸಿಎಂ ಬೊಮ್ಮಾಯಿ ಅವರ ನೀಲಿ ಕಣ್ಣಿನ ಹುಡುಗ ಚಿತ್ತಾಪುರದ ಬಿಜೆಪಿ ಅಭ್ಯರ್ಥಿಯ ರೆಕಾರ್ಡಿಂಗ್‌ನಿಂದ ಇದು ಈಗ ಸ್ಪಷ್ಟವಾಗಿದೆ” ಎಂದಿದ್ದರು.
ರವಿ ಎಂಬ ಬಿಜೆಪಿ ಕಾರ್ಯಕರ್ತನೊಬ್ಬ ಮಣಿಕಂಠ ರಾಠೋಡ್‌ರವರಿಗೆ ಫೋನ್ ಮಾಡಿ ನಿಮ್ಮ ಮೇಲೆ 40 ಕೇಸುಗಳಿವೆ ಅನ್ನುತ್ತಾರೆ. ಈ ಕುರಿತು ಖರ್ಗೆಯವರನ್ನು ಪ್ರಶ್ನೆ ಮಾಡ್ತೀನಿ ಅವರ ನಂಬರ್ ಕೊಡಿ ಅಣ್ಣ ಎಂದು ಕೇಳುತ್ತಾನೆ. ಇದಕ್ಕೆ ಉತ್ತರಿಸುವ ಮಣಿಕಂಠ ರಾಠೋಡ್, “ನನ್ನ ಬಳಿ ಅವರ ಫೋನ್ ನಂಬರ್ ಇದ್ರೆ ಅವರ ಹೆಂಡ್ರು ಮಕ್ಕಳು ಎಲ್ಲರನ್ನು ಸಾಫ್ ಮಾಡ್ತೀನಿ. ಅದಕ್ಕೆ ನನ್ನ ಬಳಿ ನಂಬರ್ ಇಲ್ಲ” ಎನ್ನುವುದು ದಾಖಲಾಗಿದೆ.
ಯಾರ ಹೆಂಡ್ರ ಮಕ್ಕಳನ್ನು ಸಾಫ್ ಮಾಡ್ತೀರಿ ಎಂದು ರವಿ ಪ್ರಶ್ನಿಸಿದಾಗ, ಈಗ ನೀನು ಯಾರ ಹೆಸ್ರು ತಗೊಂಡೆ ಎಂದು ಕೇಳಿ, ಆನಂತರ ಖರ್ಗೆಯವರ ನಂಬರ್ ಇದ್ರೆ ಅವರಿಗೆ ಬಾಯಿಗೆ ಬಂದಾಂಗೆ ಬೈಯ್ಯುತ್ತಿದ್ದೆ ಎಂದು ಸಮಜಾಯಿಸಿ ಕೊಡುವುದು ಸಹ ವೈರಲ್ ವಿಡಿಯೋದಲ್ಲಿ ದಾಖಲಾಗಿದೆ.
ಬಿಜೆಪಿ ಅಭ್ಯರ್ಥಿಯೊಬ್ಬ ಖರ್ಗೆ ಕುಟುಂಬವನ್ನು ಕೊಲ್ಲುವ ಬೆದರಿಕೆಯೊಡ್ಡಿದ್ದಾರೆ. ಆತ ಬಿಜೆಪಿ ಪಕ್ಷದ ನೀಲಿ ಕಣ್ಣಿನ ಹುಡುಗನಾಗಿದ್ದಾನೆ. ಈ ಕುರಿತು ಪ್ರಧಾನಿ ಮೋದಿಯವರು ಪ್ರತಿಕ್ರಿಯಿಸುವರೆ ಎಂದು ಕಾಂಗ್ರೆಸ್ ವಕ್ತಾರ ಪವನ್ ಖೇರಾ ಟ್ವೀಟ್ ಮಾಡಿದ್ದರು.
ಚಿತ್ತಾಪುರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ ಮೇಲೆ 40ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಿವೆ ಎಂದು ಅವರೇ ಘೋಷಿಸಿಕೊಂಡಿದ್ದಾರೆ. ಮೂಲತಃ ಯಾದಗಿರಿಯವರಾದ ಅವರ ಮೇಲೆ ಕಳ್ಳತನ, ಅಕ್ಕಿ, ಹಾಲಿನ ಪುಡಿ ಅಕ್ರಮ ಸಾಗಾಣೆ, ಕೊಲೆ ಬೆದರಿಕೆ ಸೇರಿ ಹಲವಾರು ಆರೋಪಗಳನ್ನು ಎದುರಿಸುತ್ತಿದ್ದಾರೆ. ಅನ್ನಭಾಗ್ಯ ಅಕ್ಕಿಯನ್ನು ಕದ್ದ ಪ್ರಕರಣದಲ್ಲಿ ಒಂದು ವರ್ಷ ಶಿಕ್ಷೆಯೂ ಆಗಿದ್ದು ನ್ಯಾಯಾಲಯದಿಂದ ತಡೆಯಾಜ್ಞೆ ಪಡೆದಿದ್ದಾರೆ.
ಯಾದಗಿರಿ, ವಿಜಯಪುರ, ಕಲಬುರಗಿ ಮೂರು ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಪ್ರಕರಣಗಳನ್ನು ಎದುರಿಸುತ್ತಿರುವ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್‌ನನ್ನು ಒಂದು ವರ್ಷಗಳ ಕಾಲ ಗಡಿಪಾರು ಮಾಡಿ ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ. ವೈ. ಎಸ್. ರವಿಕುಮಾರ ಆದೇಶ ಹೊರಡಿಸಿದ್ದರು. ಇದಕ್ಕೆ ಮಣಿಕಂಠ, ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದರು.


