Homeಮುಖಪುಟಮುಸ್ಲಿಂ ಮೀಸಲಾತಿ ರದ್ದು ಕುರಿತು ಅಮಿತ್ ಷಾ ಹೇಳಿಕೆ; ಸುಪ್ರೀಂಕೋರ್ಟ್ ಗರಂ

ಮುಸ್ಲಿಂ ಮೀಸಲಾತಿ ರದ್ದು ಕುರಿತು ಅಮಿತ್ ಷಾ ಹೇಳಿಕೆ; ಸುಪ್ರೀಂಕೋರ್ಟ್ ಗರಂ

‘ಮೀಸಲಾತಿ ರದ್ದು ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಯಲ್ಲಿದ್ದರೂ ಅಮಿತ್ ಷಾ ಇದರ ಕುರಿತು ಮಾತನಾಡುತ್ತಿದ್ದಾರೆ’

- Advertisement -
- Advertisement -

ಕರ್ನಾಟಕದಲ್ಲಿ ಮುಸ್ಲಿಂ ಒಬಿಸಿ ಮೀಸಲಾತಿ ವಿಷಯದ ಕುರಿತು ಜವಾಬ್ದಾರಿಯುತ ಸ್ಥಾನದಲ್ಲಿರುವವರು ಸಾರ್ವಜನಿಕವಾಗಿ ನೀಡುತ್ತಿರುವ ಅಭಿಪ್ರಾಯಗಳಿಗೆ ಸುಪ್ರೀಂ ಕೋರ್ಟ್ ಮಂಗಳವಾರ ಅಸಮ್ಮತಿ ಸೂಚಿಸಿದೆ. ಮುಸ್ಲಿಂ ಮೀಸಲಾತಿ ರದ್ದು ಪ್ರಕರಣವನ್ನು ನ್ಯಾಯಾಲಯ ಆಲಿಸುತ್ತಿದ್ದು, ತೀರ್ಪು ಬಾಕಿ ಉಳಿದಿದೆ.

ಕರ್ನಾಟಕ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ವಿಷಯದ ಕುರಿತು ನೀಡುತ್ತಿರುವ ಹೇಳಿಕೆಗಳ ಕುರಿತು ಹಿರಿಯ ವಕೀಲ ದುಷ್ಯಂತ್ ದವೆ ಅವರು ನ್ಯಾಯಪೀಠದ ಗಮನ ಸೆಳೆದರು.

ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್, ಬಿ.ವಿ.ನಾಗರತ್ನ ಮತ್ತು ನ್ಯಾಯಮೂರ್ತಿ ಅಹ್ಸಾನುದ್ದೀನ್ ಅಮಾನುಲ್ಲಾ ಅವರನ್ನೊಳಗೊಂಡ ಪೀಠವು, ಇಂತಹ ಸಾರ್ವಜನಿಕ ಹೇಳಿಕೆಗಳ ಬಗ್ಗೆ ಮೌಖಿಕವಾಗಿ ಅಸಮಾಧಾನ ವ್ಯಕ್ತಪಡಿಸಿತು.

ಇತರ ಹಿಂದುಳಿದ ವರ್ಗದಲ್ಲಿ ಮುಸ್ಲಿಮರಿಗೆ ಇದ್ದ 4% ಮೀಸಲಾತಿಯನ್ನು ರದ್ದುಗೊಳಿಸುವ ಕರ್ನಾಟಕ ಸರ್ಕಾರದ ಇತ್ತೀಚಿನ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಅರ್ಜಿದಾರರ ಪರವಾಗಿ ದವೆ ಹಾಜರಿದ್ದಾರೆ.

“ಮುಸ್ಲಿಮರಿಗೆ ಇದ್ದ ಮೀಸಲಾತಿಯನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ಗೌರವಾನ್ವಿತ ಗೃಹ ಸಚಿವರನ್ನು ಹೊರತುಪಡಿಸಿ ಬೇರೆ ಯಾರೂ ಹೇಳಿಕೆ ನೀಡುತ್ತಿಲ್ಲ” ಎಂದು ದವೆ ಹೇಳಿದ್ದಾರೆ. ಭಾರತದ ಸಾಲಿಸಿಟರ್ ಜನರಲ್ ಈಗಾಗಲೇ ನ್ಯಾಯಾಲಯದ ಮುಂದೆ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದು, ಇದನ್ನು ಸದ್ಯಕ್ಕೆ ಜಾರಿಗೊಳಿಸುವುದಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ನ್ಯಾಯಾಲಯಕ್ಕೆ ನೀಡಿದ ಭರವಸೆಯ ಹೊರತಾಗಿಯೂ ಇಂತಹ ಹೇಳಿಕೆಗಳನ್ನು ನೀಡುವುದು ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಹಿರಿಯ ವಕೀಲ ದವೆ ಗಮನ ಸೆಳೆದಿದ್ದಾರೆ. “ಇದು ನ್ಯಾಯಾಂಗ ನಿಂದನೆಯಾಗಿದೆ. ಅವರು (ಅಮಿತ್‌ ಷಾ) ಬಿಜೆಪಿ ಸರ್ಕಾರವನ್ನು ಪ್ರತಿನಿಧಿಸುತ್ತಾರೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವಿದೆ” ಎಂದು ದವೆ ತಿಳಿಸಿದ್ದಾರೆ.

ಆಶ್ಚರ್ಯ ವ್ಯಕ್ತಪಡಿಸಿದ ನ್ಯಾಯಮೂರ್ತಿ ನಾಗರತ್ನ ಅವರು, “ನೀವು ಹೇಳುತ್ತಿರುವುದು ನಿಜವಾಗಿದ್ದರೆ, ಈ ವಿಷಯವು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯಲ್ಲಿರುವಾಗ, ಯಾರಾದರೂ ಅಂತಹ ಹೇಳಿಕೆಗಳನ್ನು ಏಕೆ ನೀಡುತ್ತಿದ್ದಾರೆಂದು ನಾವು ಆಶ್ಚರ್ಯ ಪಡುತ್ತೇವೆ” ಎಂದಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ದವೆ, “ನಾವು ಮುಸ್ಲಿಂ ಮೀಸಲಾತಿಯನ್ನು ಹಿಂತೆಗೆದುಕೊಂಡಿದ್ದೇವೆ ಎಂದು ಅವರು ಹೆಮ್ಮೆಯಿಂದ ಹೇಳುತ್ತಿದ್ದಾರೆ” ಎಂದು ತಿಳಿಸಿದ್ದಾರೆ.

ನಂತರ ಮಧ್ಯಪ್ರವೇಶಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, “ಹೇಳಿಕೆಯ ವಿಷಯ ಮತ್ತು ಸಂದರ್ಭದ ಬಗ್ಗೆ ಪೀಠಕ್ಕೆ ತಿಳಿಸಲಾಗಿಲ್ಲ” ಎಂದು ವಾದಿಸಿದ್ದಾರೆ.

ಸಾಲಿಸಿಟರ್ ಜನರಲ್, “ನಾನು ಇಲ್ಲಿ ರಾಜಕೀಯ ಮಾಡಲು ಬಯಸುವುದಿಲ್ಲ. ಅವರು (ದವೆ) ಅಪ್ಲಿಕೇಶನ್ ತೋರಿಸಬಹುದು. ಯಾವ ಹೇಳಿಕೆಯನ್ನು ಆರೋಪಿಸಲಾಗಿದೆ ಎಂದು ನಮಗೆ ತಿಳಿದಿಲ್ಲ” ಎಂದಿದ್ದಾರೆ.

“ಮುಸ್ಲಿಮರಿಗೆ ನೀಡಲಾಗಿರುವ 4% ಮೀಸಲಾತಿ ಅಸಾಂವಿಧಾನಿಕ ಎಂದು ಅಮಿತ್ ಷಾ ಹೇಳಿದ್ದಾರೆ. ಬಿಜೆಪಿ ಅದನ್ನು ತೆಗೆದುಹಾಕಿದೆ ಎಂದು ಪ್ರಚಾರ ಮಾಡುತ್ತಿದ್ದಾರೆ” ಎಂದು ದವೆ ತಿಳಿಸಿದ್ದಾರೆ.

ನ್ಯಾಯಮೂರ್ತಿ ಜೋಸೆಫ್ ಪ್ರತಿಕ್ರಿಯಿಸಿ, “ನ್ಯಾಯಾಲಯದ ವಿಚಾರಣೆಗೆ ಒಳಪಟ್ಟಿದ್ದ ಪಡಿತರ ಆದೇಶವನ್ನು ಸಮರ್ಥಿಸಲು ಪತ್ರಿಕಾಗೋಷ್ಠಿಯನ್ನು ನಡೆಸಿದ್ದಕ್ಕಾಗಿ ಪಶ್ಚಿಮ ಬಂಗಾಳ ಸಿಎಂ ಅವರನ್ನು ನ್ಯಾಯಾಂಗ ನಿಂದನೆ ಅಡಿಯಲ್ಲಿ 1971ರಲ್ಲಿ ಬಂಧಿಸಲಾಗಿತ್ತು” ಎಂದು ನೆನಪಿಸಿದ್ದಾರೆ.

ಮೀಸಲಾತಿಗೆ ತಡೆ ನೀಡಿದ್ದ ಸುಪ್ರೀಂಕೋರ್ಟ್

ಕರ್ನಾಟಕ ರಾಜ್ಯ ಸರ್ಕಾರವು 2ಬಿ ಮೀಸಲಾತಿ ರದ್ದು ಮಾಡಿದ ಆದೇಶಕ್ಕೆ ಏಪ್ರಿಲ್‌ 25ರಂದು ಸುಪ್ರೀಂಕೋರ್ಟ್ ತಡೆ ನೀಡಿತ್ತು.

ಕರ್ನಾಟಕದಲ್ಲಿ ಸುಮಾರು ನಾಲ್ಕು ದಶಕಗಳಿಂದ 2ಬಿ ಕೆಟಗರಿ ಅಡಿಯಲ್ಲಿ ಮುಸ್ಲಿಮರಿಗೆ ಶೇ. 4ರಷ್ಟು ಮೀಸಲಾತಿ ನೀಡಲಾಗುತ್ತಿತ್ತು. ಆದರೆ ಇತ್ತೀಚೆಗೆ ರಾಜ್ಯ ಸರ್ಕಾರ ಮುಸ್ಲಿಮರ 2ಬಿ ಮೀಸಲಾತಿ ರದ್ದುಪಡಿಸಿ ಆ 4% ಅನ್ನು ಒಕ್ಕಲಿಗ ಮತ್ತು ಲಿಂಗಾಯತರಿಗೆ ತಲಾ ಶೇ. 2ರಷ್ಟು ಮೀಸಲಾತಿ ಹಂಚಿಕೆ ಮಾಡಿತ್ತು. ಅದರ ಬದಲು ಮುಸ್ಲಿಮರಿಗೆ ಇಡಬ್ಲೂಎಸ್ ಕೋಟಾದಲ್ಲಿ ಮೀಸಲಾತಿ ನೀಡಲಾಗುವುದು ಎಂದು ತಿಳಿಸಿತ್ತು.

ಸರ್ಕಾರದ ಈ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಕೆ ಎಂ ಜೋಸೆಫ್‌ ಅವರ ನೇತೃತ್ವದ ಪೀಠ ರಾಜ್ಯ ಸರ್ಕಾರದ ಆದೇಶಕ್ಕೆ ತಡೆ ನೀಡಿತ್ತು. ತಡೆಯಾಜ್ಞೆ ನೀಡಿ, ಮುಂದಿನ ವಿಚಾರಣೆಯನ್ನು ಮೇ 09ಕ್ಕೆ ಮುಂದೂಡಿತ್ತು.

ಇದನ್ನೂ ಓದಿರಿ: ‘ಎದ್ದೇಳು ಕರ್ನಾಟಕ’ ತಂಡದ ಮೇಲೆ ಬಿಜೆಪಿ ಗೂಂಡಾಗಳಿಂದ ಹಲ್ಲೆ; ಆರೋಪ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿಯನ್ನು ಟೀಕಿಸಿದ್ದಕ್ಕೆ ಸ್ವಪಕ್ಷದ ನಾಯಕನ ಬಂಧನ: ಮೌನಕ್ಕೆ ಶರಣಾದ ಬಿಜೆಪಿ ಅಲ್ಪಸಂಖ್ಯಾತ ಘಟಕದ ನಾಯಕರು

0
ರಾಜಸ್ಥಾನದಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಉಸ್ಮಾನ್‌ ಘನಿ ಬಂಧನದ ಬಗ್ಗೆ ಮಾತನಾಡಲು ಸ್ವಪಕ್ಷದ ಅಲ್ಪಸಂಖ್ಯಾತ ಘಟಕದ ನಾಯಕರು ಮುಂದೆ ಬರುತ್ತಿಲ್ಲ. 'ಪ್ರಜಾಪ್ರಭುತ್ವ' ದೇಶದಲ್ಲಿ ಅಭಿಪ್ರಾಯ ವ್ಯಕ್ತಪಡಿಸುವುದು ಅಪರಾಧವಲ್ಲ ಎಂದು ತಿಳಿದಿದ್ದರೂ ಈ...