ಪಾದರಾಯನಪುರ ಮತ್ತು ಚನ್ನೈ ವೈದ್ಯನ ಸಾವಿನ ಘಟನೆ: ಇದು ನಮ್ಮೊಳಗಿನ ವೈರಸ್!

ಪ್ರತಿಯೊಂದು ವಿಷಯವನ್ನು ಈ ರೀತಿ ಧರ್ಮದ ಕನ್ನಡಕದಲ್ಲೇ ನೋಡುತ್ತ ಹೋದರೆ, ನಾಳೆ ದೇಶ ಕೊರೋನ ಮುಕ್ತವಾದರೂ ಈ ಕೋಮು ದ್ವೇಷ ಹುಟ್ಟು ಹಾಕುವ ಸಮಸ್ಯೆಯಿಂದ ಮುಕ್ತವಾಗಲಾರದು. ಇದರಿಂದಾಗಿ ಶಾಂತಿ ಮತ್ತು ಸುವ್ಯವಸ್ಥೆಯ ಸಮಸ್ಯೆ ಇಡೀ ದೇಶದಲ್ಲಿ ಬೃಹದಾಕಾರವಾಗಿ ದೇಶ ಅಭಿವೃದ್ಧಿಯ ಪಥದಲ್ಲಿ ಕುಂಟುತ್ತ ಸಾಗಬೇಕಾಗುತ್ತದೆ.

0
ಘಟನೆ ಒಂದು:

ಬೆಂಗಳೂರಿನ ಪಾದರಾಯನಪುರ ಪ್ರದೇಶದಲ್ಲಿ ಭಾನುವಾರ ರಾತ್ರಿ ಶಂಕಿತ ಕೊರೋನ ಸೋಂಕಿತರನ್ನು ಕ್ವಾರಂಟೈನ್ ಮಾಡಲೆಂದು ತೆರಳಿದ್ದ ಆಶಾ ಕಾರ್ಯಕರ್ತೆಯರು, ಪೊಲೀಸರು ಮತ್ತು ಬಿಬಿಎಂಪಿ ಸಿಬ್ಬಂದಿ ಮೇಲೆ ಸ್ಥಳೀಯರು ದಾಳಿ ಮಾಡಿದ್ದಾರೆಂದು ಸುದ್ದಿ ಬಂದಿತು.

ಭಾನುವಾರ ರಾತ್ರಿ ಸುದ್ದಿವಾಹಿನಿಗಳಲ್ಲಿ ಈ ಘಟನೆಯ ವಿವರ ನೋಡಿ ಮಲಗಿದ್ದ ನನಗೆ ಸೋಮವಾರ ಬೆಳಿಗ್ಗೆ ಏಳುತ್ತಿದ್ದಂತೆಯೇ ಸೋಷಿಯಲ್ ಮೀಡಿಯಾದಲ್ಲಿನ ಪ್ರತಿಕ್ರಿಯೆಗಳನ್ನು ನೋಡಿ ಗಾಬರಿ ಆಯ್ತು. ಏಕೆಂದರೆ, ಸೋಷಿಯಲ್ ಮೀಡಿಯಾದಲ್ಲಿನ ಪ್ರತಿಕ್ರಿಯೆಗಳು ನಿರೀಕ್ಷಿತವೇ ಆಗಿದ್ದರೂ ಅವುಗಳಲ್ಲಿನ ಮೇರೆ ಮೀರಿದ ಆಕ್ರೋಶ ನನ್ನ ಗಾಬರಿಗೆ ಕಾರಣವಾಗಿತ್ತು.

ಪಾದರಾಯನಪುರ ದ ದಾಳಿಕೋರರನ್ನು ಲಾಠಿಗಳಿಂದ ಹೊಡೆಯಿರಿ, ಕೈಕಾಲು ಮುರೀರಿ, ಗುಂಡಿಟ್ಟು ಕೊಲ್ಲಿರಿ, ದೇಶದ್ರೋಹದ ಕೇಸು ಜಡೀರಿ, ಆಸ್ತಿ ಮುಟ್ಟುಗೋಲು ಹಾಕೊಳ್ರಿ ಎಂಬ ಚೀತ್ಕಾರಗಳೇ ಸೋಷಿಯಲ್ ಮೀಡಿಯಾ ತುಂಬ ತುಂಬಿ ಹೋಗಿದ್ದವು. ಬಹುತೇಕರು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಗೃಹ ಸಚಿವ ಬೊಮ್ಮಾಯಿ ಅವರನ್ನು ಮನಸೋಇಚ್ಛೆ ವೈಯಕ್ತಿಕವಾಗಿ ನಿಂದಿಸತೊಡಗಿದರು.

ಸಿಎಂ, ಗೃಹ ಸಚಿವರಿಬ್ಬರೂ ಕೈಲಾಗದವರು, ಅಸಮರ್ಥರು, ಷಂಡರು ಎಂದೆಲ್ಲಾ ತಮ್ಮ ಕೋಪಾಗ್ನಿ ಪ್ರದರ್ಶಿಸಿದರು. ಈ ಇಬ್ಬರೂ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು, ಅನಂತಕುಮಾರ್ ಹೆಗಡೆ ಅಥವಾ ಬಸನಗೌಡ ಯತ್ನಾಳ ಅಂಥವರಿಗೆ ಅಧಿಕಾರ ಕೊಡಬೇಕು ಎಂಬ ಒತ್ತಾಯವನ್ನು ಸಹ ಮಾಡಿದರು.

ಒಂದರ್ಥದಲ್ಲಿ ಸೋಷಿಯಲ್ ಮೀಡಿಯಾದ ಈ ಎಲ್ಲಾ ಅಭಿಪ್ರಾಯಗಳಲ್ಲಿ ತಪ್ಪೇನೂ ಇರಲಿಲ್ಲ. ಪಾದರಾಯನಪುರದಲ್ಲಿ ನಡೆದ ಘಟನೆ ಅತ್ಯಂತ ಕಟುಶಬ್ದಗಳಲ್ಲಿ ನಿಂದನೆಗೆ ಯೋಗ್ಯವೇ ಆಗಿತ್ತು. ವೈದ್ಯಕೀಯ ಸಿಬ್ಬಂದಿ ಮತ್ತು ಬಿಬಿಎಂಪಿ ನೌಕರರು ತಮ್ಮ ಪ್ರಾಣದ ಹಂಗು ತೊರೆದು ಕೊರೋನ ಚಿಕಿತ್ಸೆಗೆ ಶ್ರಮಿಸುತ್ತಾ ಕ್ವಾರಂಟೈನ್‍ಗೆ ಕರೆದೊಯ್ಯಲು ಬಂದಾಗ ಪಾದರಾಯನಪುರ ದ ಈ ರೀತಿಯ ಪುಂಡಾಟಿಕೆ ನಡೆದದ್ದು ಅಕ್ಷಮ್ಯ ಅಪರಾಧವೇ ಎಂಬುದರಲ್ಲಿ ಎರಡನೇ ಮಾತಿಲ್ಲ. ಆದರೆ, ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತವಾದ ಅಭಿಪ್ರಾಯಗಳಲ್ಲಿನ ಪದಬಳಕೆ, ಭಾಷೆ ಮಾತ್ರ ಅತ್ಯಂತ ಕೀಳುಮಟ್ಟದ್ದಾಗಿತ್ತು. ಕೊರೋನ ಬಗೆಗಿನ ಆತಂಕ, ಜನರ ಆರೋಗ್ಯದ ಬಗೆಗಿನ ಕಾಳಜಿಗಿಂತ ಹೆಚ್ಚಾಗಿ ಈ ಟೀಕೆ, ಆಕ್ರೋಶಗಳಲ್ಲಿ ಬೇರೆಯದೇ ವಾಸನೆ ಬರುತ್ತಿತ್ತು.

ಘಟನೆ ಎರಡು:

ಈಗ ಇಂಥದೇ ಇನ್ನೊಂದು ಘಟನೆ ನೋಡೋಣ. ಅದೇ ಭಾನುವಾರ ಚೆನ್ನೈ ಸಮೀಪ ನಡೆದ ದಾರುಣ ಘಟನೆ. ಕೊರೋನ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುತ್ತ ಸ್ವತಃ ಕೊರೋನಕ್ಕೆ ಬಲಿಯಾದ 55 ವರ್ಷದ ಡಾ.ಸೈಮನ್ ಅವರ ಕರುಣಾಜನಕ ಕಥೆ ಇದು.

ಕೊರೋನ ರೋಗಿಗಳಿಗೆ ಚಿಕಿತ್ಸೆ ನೀಡುವಾಗ ದುರದೃಷ್ಟವಶಾತ್ ಡಾ.ಸೈಮನ್ ಅವರಿಗೂ ಕೊರೋನ ಸೋಂಕು ತಗುಲಿದೆ. ಅವರಿಂದಾಗಿ ಪುತ್ರಿಗೂ ರೋಗ ಹರಡಿದೆ. ಡಾ.ಸೈಮನ್ ಅವರು ಕೊರೋನ ವಿರುದ್ದ ಹೊರಗೂ ಮತ್ತು ಒಳಗೂ ಹೋರಾಟ ನಡೆಸಿದ್ದರು.

ಹೊರಗಿನ ಹೋರಾಟದಲ್ಲಿ ಜಯ ಸಾಧಿಸಿ ಅನೇಕ ರೋಗಿಗಳನ್ನು ಕೊರೋನ ಮುಕ್ತ ಮಾಡಿದ್ದ ಅವರು, ಒಳಗಿನ ಹೋರಾಟದಲ್ಲಿ ಜಯ ಕಾಣದೇ ಸೋಮವಾರ ಕೊನೆಯುಸಿರೆಳೆದರು.

ಡಾ.ಸೈಮನ್ ಕೊರೋನದಿಂದಾಗಿ ತೀರಿ ಹೋದರು ಎಂಬುದು ತಿಳಿಯುತ್ತಿದ್ದಂತೆಯೇ ಅವರ ನೆರೆ ಹೊರೆಯವರು ಅವರ ಪಾರ್ಥಿವ ಶರೀರವನ್ನು ಮನೆ ಬಳಿ ತರಲೂ ಅವಕಾಶ ಕೊಡಲಿಲ್ಲ. ಅವರ ಅಂತ್ಯಕ್ರಿಯೆ ನಡೆಯಬೇಕಿದ್ದ ಸ್ಮಶಾನದ ಪ್ರದೇಶದಲ್ಲಿನ ಜನ ಇವರ ಅಂತ್ಯಕ್ರಿಯೆಗೆ ಅವಕಾಶ ಕೊಡುವುದಿಲ್ಲ ಎಂದು ಹೇಳಿ ದೊಡ್ಡ ಸಂಖ್ಯೆಯಲ್ಲಿ ಸೇರಿ ವಿರೋಧ ವ್ಯಕ್ತಪಡಿಸಿದರು.

ಡಾ.ಸೈಮನ್ ಪಾರ್ಥಿವ ಶರೀರ ಹೊತ್ತು ತಂದಿದ್ದ ಅಂಬುಲೆನ್ಸ್ ಮೇಲೆ ಕಲ್ಲು ತೂರಿದರು. ಡಾ.ಸೈಮನ್ ಅವರ ಸಹೋದ್ಯೋಗಿಗಳ ಮೇಲೆ ಹಲ್ಲೆ ನಡೆಸಿದರು. ಅಲ್ಲಿಂದ ಕಾಲ್ಕಿತ್ತ ಮೃತರ ಸಹೋದ್ಯೋಗಿಗಳು ಮತ್ತು ಕುಟುಂಬದವರು ನಂತರ ಪೊಲೀಸ್ ಭದ್ರತೆಯಲ್ಲಿ ಹೋಗಿ ಡಾ.ಸೈಮನ್ ಅಂತ್ಯಕ್ರಿಯೆ ನಡೆಸಬೇಕಾಯಿತು.

ಸದಾ ರೋಗಿಗಳ ಬಗ್ಗೆಯೇ ಚಿಂತಿಸುತ್ತಿದ್ದ ಡಾ.ಸೈಮನ್ ಜನಾನುರಾಗಿ ಆಗಿದ್ದರು, ಅಜಾತಶತ್ರು ಆಗಿದ್ದರು. ಬದುಕಿದ್ದಾಗ ಲೆಕ್ಕವಿಲ್ಲದಷ್ಟು ಜನರಿಗೆ ಅವರು ಫಲಾಪೇಕ್ಷೆ ಇಲ್ಲದೇ ತಮ್ಮ ಕೈಲಾದ ನೆರವು ನೀಡಿದ್ದಾರೆ. ಅಂಥವರಿಗೆ ಇಂಥ ದುಸ್ಥಿತಿ ಬರಬಾರದಿತ್ತು. ಅವರಿಗೆ ಗೌರವಯುತ ವಿದಾಯ ಸಿಗಬೇಕಿತ್ತು ಎಂದು ಅವರ ಸಹೋದ್ಯೋಗಿ ಡಾ.ಪ್ರದೀಪಕುಮಾರ್ ಕಣ್ಣೀರು ಸುರಿಸುತ್ತಿದ್ದಾರೆ.

ಲಾಕ್ಡೌನ್ ಅವಧಿಯಲ್ಲಿ ಇಂಥ ನೂರಾರು ಘಟನೆಗಳು ದೇಶಾದ್ಯಂತ ನಡೆದಿವೆ. ಮೇಲಿನ ಈ ಎರಡೂ ಘಟನೆಗಳನ್ನು ಪ್ರತ್ಯೇಕವಾಗಿ ಅಥವಾ ಒಟ್ಟಾಗಿ ಒಂದೇ ಅಳತೆಗೋಲು ಇಟ್ಟುಕೊಂಡು ವಿಶ್ಲೇಷಣೆ ಮಾಡಿದರೆ ಈ ಕೊರೋನ ಮತ್ತು ಲಾಕ್ಡೌನ್ ಉಂಟು ಮಾಡುತ್ತಿರುವ ಸಾಮಾಜಿಕ ತಲ್ಲಣಗಳ ಬಗ್ಗೆ ಅರಿವಾಗುತ್ತದೆ.

ಇಂಥ ಘಟನೆಗಳಿಗೆ ಕಾರಣರಾದವರು ಯಾವುದೇ ಜಾತಿ ಅಥವಾ ಧರ್ಮದವರು ಆಗಿರಬಹುದು. ಪಾದರಾಯನಪುರದ ವಿಷಯದಲ್ಲಿ ಮುಸ್ಲಿಂರು ತಪ್ಪೆಸಗಿದರೆ, ಚೆನ್ನೈನಲ್ಲಿ ನಡೆದ ಘಟನೆಗೆ ಹಿಂದುಗಳು ಅಥವಾ ಡಾ.ಸೈಮನ್ ಅವರ ಕ್ರೈಸ್ತ ಧರ್ಮೀಯರು ಕಾರಣ ಇರಬಹುದು. ಎಷ್ಟೋ ಸಾರಿ ಸರಿಯಾದ ಮಾಹಿತಿಯ ಕೊರತೆ, ಸಮಾಜ ಘಾತಕ ಶಕ್ತಿಗಳ ಕೈವಾಡ, ಆಡಳಿತ ವೈಫಲ್ಯದ ಜೊತೆಗೆ ಸಮೂಹ ಮಾನಸಿಕತೆಯೂ ಈ ತರಹದ ಘಟನೆಗಳಿಗೆ ಕಾರಣವಾಗಿರುತ್ತದೆ.

ಇವತ್ತು ಕೊರೋನ ವೈರಸ್ ಬಗ್ಗೆ ಖಂಡಿತ ಮಾಹಿತಿಯ ಕೊರತೆ ಇದೆ. ಒಂದೆಡೆ ಮಾಹಿತಿ ಕೊರತೆಯ ಸಮಸ್ಯೆ ಇದ್ದರೆ, ಇನ್ನೊಂದೆಡೆ ಸೋಷಿಯಲ್ ಮೀಡಿಯಾದಲ್ಲಿ ತಪ್ಪು ಮಾಹಿತಿಯ ಸಾಗರವೇ ಹರಿದು ಬರುತ್ತಿದೆ. ಕೊರೋನದಿಂದ ಸಾವಿಗೀಡಾದ ವ್ಯಕ್ತಿಯ ಶವ ಸಂಸ್ಕಾರಕ್ಕೂ ಜನ ವಿರೋಧ ಮಾಡುತ್ತಿರುವುದಕ್ಕೆ ಮತ್ತು ವೈದ್ಯಕೀಯ ಸಿಬ್ಬಂದಿ, ಪೊಲೀಸರ ಮೇಲೆಯೇ ಜನ ಹಲ್ಲೆ ಮಾಡುತ್ತಿರುವುದಕ್ಕೆ ಖಂಡಿತವಾಗಿ ಇಂಥ ತಪ್ಪು ಮಾಹಿತಿ, ತಪ್ಪು ಗ್ರಹಿಕೆಗಳೂ ಕಾರಣವಿರಬಹುದು.

ಆದರೆ, ಉಳಿದೆಲ್ಲ ಕಾರಣಗಳನ್ನು ಮರೆಮಾಚಿ ಇಂಥ ಘಟನೆಗಳಿಗೆ ಕಾರಣರಾದವರ ಧರ್ಮ, ಜಾತಿ ಹುಡುಕಿ ಅದನ್ನೇ ದೊಡ್ಡದಾಗಿ ಬಿಂಬಿಸಿ ಇಂಥ ಸಂಕಟದ ಸಮಯದಲ್ಲೂ ರಾಜಕೀಯ ಮಾಡುವುದು ಸಮಸ್ಯೆಗೆ ಪರಿಹಾರ ಒದಗಿಸುವ ಬದಲು ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸುವುದರಲ್ಲಿ ಯಾವುದೇ ಸಂಶಯವಿಲ್ಲ.

ಪ್ರತಿಯೊಂದು ವಿಷಯವನ್ನು ಈ ರೀತಿ ಧರ್ಮದ ಕನ್ನಡಕದಲ್ಲೇ ನೋಡುತ್ತ ಹೋದರೆ, ನಾಳೆ ದೇಶ ಕೊರೋನ ಮುಕ್ತವಾದರೂ ಈ ಕೋಮು ದ್ವೇಷ ಹುಟ್ಟು ಹಾಕುವ ಸಮಸ್ಯೆಯಿಂದ ಮುಕ್ತವಾಗಲಾರದು. ಇದರಿಂದಾಗಿ ಶಾಂತಿ ಮತ್ತು ಸುವ್ಯವಸ್ಥೆಯ ಸಮಸ್ಯೆ ಇಡೀ ದೇಶದಲ್ಲಿ ಬೃಹದಾಕಾರವಾಗಿ ದೇಶ ಅಭಿವೃದ್ಧಿಯ ಪಥದಲ್ಲಿ ಕುಂಟುತ್ತ ಸಾಗಬೇಕಾಗುತ್ತದೆ.

ದುರಂತವೆಂದರೆ, ವೈಚಾರಿಕವಾಗಿ ತದ್ವಿರುದ್ಧ ದಿಕ್ಕಿನಲ್ಲಿ ನಿಂತವರು ತಮಗೆ ಅನುಕೂಲಕರ ಸ್ಥಿತಿಯಿದ್ದಾಗ ಮಾತ್ರ ಬಾಯಿ ತೆರೆಯುತ್ತಾರೆ, ಪ್ರತಿಕೂಲ ಸ್ಥಿತಿ ಇದ್ದಾಗ ತೆಪ್ಪಗಿರುತ್ತಾರೆ. ಕ್ರಿಕೆಟ್‍ನಲ್ಲಿ ಚತುರ ದಾಂಡಿಗನೊಬ್ಬ ಲೂಸ್ ಬಾಲ್ ಸಿಕ್ಕಾಗ ಮಾತ್ರ ಬ್ಯಾಟ್ ಬೀಸುವಂತೆ. ಪಾದರಾಯನಪುರದಂಥ ಘಟನೆ ನಡೆದಾಗ ಒಂದು ಗುಂಪು ರಣಕೇಕೆ ಹಾಕಿದರೆ, ಇನ್ನೊಂದು ಗುಂಪು ಮೌನವಾಗಿದ್ದು ಅಂಥದೇ ಸೂಕ್ತ ಅವಕಾಶಕ್ಕೆ ಕಾದು ಕುಳಿತಿರುತ್ತದೆ.

ಅದೇ ಕಾರಣಕ್ಕೆ ನಮ್ಮ ನಮ್ಮ ಜಾತಿ, ಧರ್ಮವನ್ನು ನಮ್ಮ ನಮ್ಮ ಮನೆಗಳಿಗೆ ಸೀಮಿತವಾಗಿ ಇಟ್ಟುಕೊಂಡರೆ ತಪ್ಪಲ್ಲ. ನಮ್ಮ ನಮ್ಮ ಜಾತಿ, ಧರ್ಮದ ಬಗ್ಗೆ ಅಭಿಮಾನ ಇರೋದೂ ತಪ್ಪಲ್ಲ. ಆದರೆ, ಧರ್ಮವನ್ನು ಅತಿಯಾಗಿ ತಲೆಗೆ ಹೊಕ್ಕಿಸಿಕೊಂಡು ಪರಧರ್ಮದ ಬಗ್ಗೆ ದ್ವೇಷಾಸೂಯೆ ಹೊಂದುವುದು ಮಾತ್ರ ಸರ್ವಥಾ ತಪ್ಪು. ಇದನ್ನು ಮಾಡುವವರು ಯಶಸ್ವಿಯಾಗಲು ಸಾಧ್ಯವೇ ಇಲ್ಲ. ಮುಂದೊಂದು ದಿನ ಎಲ್ಲರಿಗೂ ತಮ್ಮ ತಪ್ಪಿನ ಅರಿವಾಗಬಹುದು. ಅಷ್ಟೊತ್ತಿಗೆ ನಾವು ಬಹಳಷ್ಟನ್ನು ಕಳೆದುಕೊಂಡಿರುತ್ತೇವೆ.


ಇದನ್ನೂ ಓದಿ: ಪಾದರಾಯನಪುರ-ಬೆಳೆಸಲಾಗುತ್ತಿರುವ ಬಿಕ್ಕಟ್ಟು: ಅಧಿಕಾರಿಗಳಿಗೆ ಒತ್ತಡ? ಕಾಣದ ಕೈಗಳೇಕೆ ಕೆಲಸ ಮಾಡುತ್ತಿವೆ?

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here