Homeಮುಖಪುಟಪ್ರಪಂಚವನ್ನೇ ಕಟ್ಟಿದ ಮೂಲನಿವಾಸಿಗಳ ಬದುಕು ಬೀದಿಗೆ ಬಿದ್ದಿದ್ದೇಕೆ?

ಪ್ರಪಂಚವನ್ನೇ ಕಟ್ಟಿದ ಮೂಲನಿವಾಸಿಗಳ ಬದುಕು ಬೀದಿಗೆ ಬಿದ್ದಿದ್ದೇಕೆ?

“ಸಬ್ ಯಾದ್ ರಖ್ಖಾ ಜಾಯೇಗಾ” ಎಂಬ ಕವಿತೆ ಎಲ್ಲೋ ಹುಟ್ಟಿ ಈಗ ಎಲ್ಲಾ ಕಡೆ ಅನುರಣಿಸುತ್ತಿರುವಾಗ ಕನಸು ಹುಟ್ಟಬಹುದೆಂಬ ಭರವಸೆ ಉಳಿದಿದೆ. ಹೇಗೂ ಶಾಹೀನ್ ಬಾಗ್‍ನ ಹೆಣ್ಣು ಮಕ್ಕಳು ಭರವಸೆಯೊಂದನ್ನು ಬಿಟ್ಟು ಹೋಗಿದ್ದಾರಲ್ಲ!

- Advertisement -
- Advertisement -

“ಇತಿಹಾಸವನ್ನು ಒಂದು ಕುದುರೆಯು ಬರೆದಿತ್ತು ಎಂದೇನಾದರೂ ಆಗಿದ್ದಲ್ಲಿ ಅದು ತನಗೆ ತಿಳಿದಂತೆ ಬರೆದಿರುತ್ತಿತ್ತು” ಎಲ್ಲೊ ಓದಿದ ಇಂಥ ಒಂದು ವಾಕ್ಯಕ್ಕೆ ನನ್ನದೊಂದು ಸೇರ್ಪಡೆ: ಅದು ತನ್ನ ಮೇಲೆ ಕುಳಿತ ಸವಾರನಿಗೆ ತಿಳಿದಂತೆ ಬರೆದಿರುತ್ತಿತ್ತು ಎಂದು.

ಚರಿತ್ರೆಯ ಪುಟಗಳುದ್ದಕ್ಕೂ ದೊಡ್ಡ ದೊಡ್ಡ ಯುದ್ಧಗಳು ಮತ್ತು ಅವುಗಳಲ್ಲಿ ಜಯಿಸಿದವರ ವಿವರಗಳೇ ಕಾಣುತ್ತವೆ. ಇತಿಹಾಸಕಾರರು ಈ ವಿಜಯೀ ಪಡೆಯ ಆಸ್ಥಾನ ಪಂಡಿತರೇ ಆಗಿರುತ್ತಿದ್ದು, ಆ ಕಾಳಗಗಳನ್ನು ಹೆಚ್ಚು ಹೆಚ್ಚು ವರ್ಣರಂಜಿತವಾಗಿ ವಿವರಿಸಿ ದಾಖಲಿಸಿದಷ್ಟೂ ಅವರ ಇನಾಮು ದೊಡ್ಡದಾಗಿರುತ್ತಿತ್ತು. ಸೋಲಿನ ವಿವರಣೆಗಳು ಅದರ ಹೀನಾಯತೆಯನ್ನು ಒತ್ತಿ ಹೇಳಲು ಮತ್ತು ಅದರ ಮುಖಾಂತರ ವಿಜಯಿಗಳ ಶೌರ್ಯಕ್ಕೆ ಮತ್ತಷ್ಟು ಮೆರುಗನ್ನು ತುಂಬುವ ಕಾರಣಕ್ಕಾಗಿರುತ್ತಿತ್ತೇ ವಿನಃ ಸೋಲನ್ನುಂಡ ಜನರ ದಾರುಣ ಸ್ಥಿತಿಗತಿಯ ಬಗ್ಗೆ ಬೆಳಕು ಚೆಲ್ಲುವುದಕ್ಕಾಗಿರಲಿಲ್ಲ.

ಹೀಗಿದ್ದರೂ, ದಾರುಣತೆಯ ಚಿತ್ರಣವೂ ಸಹ ದಾಖಲಾಗಿದೆ. ಅದು ಸೋಲನ್ನುಂಡು ಪಲಾಯನ ಮಾಡಿ ಮತ್ತೊಂದು ನೆಲೆ ಹುಡುಕಿಕೊಂಡ ಜನರ ನೆನಪುಗಳಲ್ಲಿ. ಹೊಸ ನೆಲೆಗಳನ್ನು ಹುಡುಕಿಕೊಂಡ ಅವರು ನೆನಪುಗಳನ್ನು ಉತ್ತಿ ಬಿತ್ತಿ ಕಥೆಯಾಗಿಸಿದರು, ಹಾಡಾಗಿಸಿದರು. ಮುಂದಿನ ಪೀಳಿಗೆಗೆ ನೆನಪುಗಳನ್ನು ಉಳಿಸಿದರು, ಕನಸುಗಳು ಹುಟ್ಟುವಂತೆ ನೋಡಿಕೊಂಡರು. ಜೊತೆಗೆ ಚರಿತ್ರೆಗೆ ಇದನ್ನೂ ತೆರೆದಿಟ್ಟರು: ಸಂಪನ್ಮೂಲಗಳನ್ನು ದೋಚಲು, ಭೂಮಿಯಿರಲಿ, ನೀರಿನ ಸೆಲೆಗಳಾಗಿರಲೀ, ಯುದ್ಧಸಂಹಿತೆಗಳನ್ನೆಲ್ಲಾ ಗಾಳಿಗೆ ತೂರಿ, ಅತ್ಯಂತ ಕುಟಿಲೋಪಾಯಗಳಿಂದ ಮೇಲೆ ಬಿದ್ದು ನಡೆಸಿದ ಹೇಯ ಅಕ್ರಮಣಗಳೇ ಇವು ಎಂದು.

ಮೂಲನಿವಾಸಿಗಳ ಮೇಲೆ ಹೊರಗಿನಿಂದ ಬಂದ ಆಕ್ರಮಣಕಾರರು ನಿರಂತರವಾಗಿ ಯುದ್ಧ ಮಾಡುತ್ತಾ ಅವರಲ್ಲಿದ್ದ ಸಂಪನ್ಮೂಲಗಳನ್ನು ದೋಚುತ್ತಲೂ, ಅವರನ್ನು ದೂರ ದೂರಕ್ಕೆ ಅಟ್ಟುತ್ತಲೂ ತಮ್ಮ ಸಾಮ್ರಾಜ್ಯಗಳನ್ನು ವಿಸ್ತರಿಸಿಕೊಂಡಿದ್ದೇ ಇವತ್ತು ಚರಿತ್ರೆಯಾಗಿದೆ. ‘ಕೀಳು ಜನರ ಮೇಲೆ ಮಾಡಿದ ಪವಿತ್ರ ಯುದ್ಧ’ವೆಂದು ಅದನ್ನು ವಿಜೃಂಭಿಸಲಾಗಿದೆ. ಅಸುರರು, ರಾಕ್ಷಸರು ಎಂಬ ಸಹಜ ನಾಮಗಳಿಗೆ ಕೀಳಿನ, ಕೇಡಿನ ಗುಣವಾಚಕಗಳನ್ನು ಆರೋಪಿಸಿ, ಅಸುರ, ರಾಕ್ಷಸ ಎಂದರೆ ಕೀಳೇ, ಕೇಡೇ, ಎನ್ನುವಷ್ಟು ಎಲ್ಲವನ್ನು ಸಮೀಕರಿಸಿ, ತಿರುಚಿ ಚರತ್ರೆ ಬರೆಯಲಾಗಿದೆ ಮತ್ತು ನಮ್ಮ ತಲೆಯೊಳಗೆ ಈ ನಂಬಿಕೆಗಳು ಭದ್ರವಾಗಿ ಬೇರೂರುವಂತೆ ಮಾಡಲಾಗಿದೆ.

ಇದು ಕೇವಲ ಭಾರತದಾದ್ಯಂತ ನಡೆದ ಯುದ್ಧಗಳಲ್ಲ. ಜಗತ್ತಿನುದ್ದಕ್ಕೂ ಈ ಬಗೆಯವು ನಡೆದು ಹೋಗಿದ್ದಾವೆ ಮತ್ತು ಹೊಸ ಹೊಸ ರೂಪಗಳಲ್ಲಿ ನಡೆಯುತ್ತಲೇ ಇವೆ.

ಬಂದೂಕಿನ ನಳಿಕೆಯಡಿಯಲ್ಲಿ ಆಫ್ರಿಕಾ ಖಂಡದಿಂದ ಅಪಹರಿಸಲ್ಪಟ್ಟು ದೂರದ ಯಾವುದೋ ದೇಶದಲ್ಲಿ ಕಬ್ಬಿಣದ ಸಂಕೋಲೆಗಳಿಂದ ಬಂಧಿಸಲ್ಪಟ್ಟು ಶತಮಾನದುದ್ದಕ್ಕೂ ದಾಸ್ಯದಲ್ಲಿ ಪ್ರಾಣಿಗಳಂತೆ ಬದುಕಿದ್ದವರು, ದಾಸ್ಯದಿಂದ ಮುಕ್ತರಾಗುತ್ತಲೇ ಕಾಡು, ಮೇಡು, ಮರುಭೂಮಿಯೆಂದು ಸಿಕ್ಕ ಸಿಕ್ಕ ಕಡೆ ಪಲಾಯನ ಮಾಡಿದರು. ಎಲ್ಲೆಲ್ಲಿ ತಲುಪಿಕೊಂಡರೋ ಅಲ್ಲಲ್ಲೇ ನೆಲೆ ನಿಂತರು, ನೆಲೆ ನಿಂತ ಜಾಗವನ್ನೇ ಸಾಗುವಳಿ ಮಾಡಿಕೊಂಡರು. ಇನ್ನೇನು ಹಸಿವನ್ನು ನೀಗಿಸಿಕೊಂಡಿದ್ದೇವೆ ಎನ್ನುತ್ತಲೇ, ಕಪ್ಪು ವರ್ಣೀಯರು ಎಂದೇ ಕರೆಸಿಕೊಂಡಿದ್ದ ಈ ಜನರು ಸಾಗುವಳಿ ಮಾಡಿಕೊಂಡಿದ್ದ ಅಷ್ಟೂ ಭೂಮಿಯನ್ನು ಅವರಿಂದ ಕಿತ್ತುಕೊಳ್ಳಲಾಯಿತು. ಅಮೇರಿಕಾ ದೇಶವು ಅದರ ಕೃಷಿ ಇಲಾಖೆಯಡಿಯಲ್ಲಿ ಹೊಸ ಹೊಸ ಕಾನೂನನ್ನು ಮಾಡಿ ಆ ಭೂಮಿಯೂ ಅವರ ಕೈ ತಪ್ಪಿಹೋಗುವಂತೆ ಮಾಡುವುದರಲ್ಲಿ ಯಶಸ್ವಿಯಾಯಿತು. ಎರಡೆರಡು ಬಾರಿ ಬೇರು ಸಮೇತ ಬುಡಕಿತ್ತು ಬಿಸುಡಲಾಗಿದ್ದ ಈ ಜನರು ಬದುಕುಳಿಯುವುದಕ್ಕೆ ದೊಡ್ಡ ನಗರಗಳ ಸ್ಲಂಗಳಲ್ಲಿ ಕಿಕ್ಕಿರಿದು ತುಂಬಿಹೋದರು.

ಈ ಸಂದರ್ಭದಲ್ಲೇ ಅವರನ್ನೆಲ್ಲಾ ಒಗ್ಗೂಡಿಸುತ್ತಾ, ಮೂವತ್ತೆರಡು ವರ್ಷದ ತರುಣನೊಬ್ಬ “ನನಗೊಂದು ಕನಸಿದೆ” ಎಂದು ಮಾತು ಆರಂಭಿಸುತ್ತಾನೆ. ಬದುಕುಳಿಯಲು ಬೇಕೇ ಬೇಕಾಗಿದ್ದ ಹೋರಾಟವನ್ನು ಮುಂದುವರೆಸಲು ಕರೆಕೊಡುತ್ತಾನೆ. ಈಗವರು ಅಮೇರಿಕಾದ ಕೃಷಿ ಇಲಾಖೆಯ ಮೇಲೆ ದಾವೆ ಹೂಡಿದ್ದಾರೆ. ಪ್ರಪಂಚದಾದ್ಯಂತ ಜನರಿಗೆಲ್ಲಾ ಮಾದರಿಯಾಗುವಂತೆ ತಮ್ಮದೇ ಚರಿತ್ರೆಯನ್ನು ಬರೆಯುತ್ತಿದ್ದಾರೆ.

ಯುರೋಪಿನ ದಾಳಿಕೋರರು ಕಾಲಿಡುವವರೆಗೂ ಅಮೇರಿಕಾದ ನೆಲದಲ್ಲಿ ಉತ್ಕ್ರಷ್ಟವಾದೊಂದು ನಾಗರೀಕತೆಯನ್ನು ಕಟ್ಟಿಕೊಂಡು ಆ ನೆಲದುದ್ದಕ್ಕೂ ಬಾಳಿಕೊಂಡಿದ್ದ ರೆಡ್ ಇಂಡಿಯನ್ನರು, ನಂತರ ಕೇವಲ ಬೆರಳೆಣಿಕೆಯ ಸಂಖ್ಯೆಯಲ್ಲಿ ಬದುಕುಳಿಯತ್ತಾರೆ. ಅಲ್ಲಲ್ಲೇ ರಿಸರ್ವೇಶನ್‍ಗಳಲ್ಲಿ ವಾಸಮಾಡುತ್ತಿರುವ ಈ ಜನರೀಗ ತಮ್ಮ ನಾಗರಿಕತೆಯನ್ನು ಜೀವಂತವಾಗಿಡಲು ಹೆಣಗಾಡುತ್ತಿದ್ದಾರೆ. ಅದೇ ರೀತಿ ಆಸ್ಟ್ರೇಲಿಯನ್ ಅಬ್‍ಓರಿಜಿನ್ ಜನರೂ ಈಗ ರಿಸರ್ವೇಶನ್‍ಗಳಲ್ಲಿ ವಾಸಿಸುತ್ತಿದ್ದಾರೆ. ಪ್ರಕೃತಿಯ ಬಗೆಗಿನ ಒಂದು ಅತ್ಯದ್ಭುತ ಒಳನೋಟವನ್ನು ಮತ್ತು ಸಾಮರಸ್ಯವನ್ನು ತಮ್ಮದಾಗಿಸಿಕೊಂಡು ಬದುಕಿಕೊಂಡಿದ್ದ ಜನರಿವರು.

ಇನ್ನು ಯುರೋಪಿನಾದ್ಯಂತ ಒಂದು ಕಡೆಯಿಂದ ಇನ್ನೊಂದು ಕಡೆಗೆ ಅಟ್ಟಾಡಿಸಿಕೊಳ್ಳುತ್ತಾ ಬದುಕುತ್ತಿರುವ ಜಿಪ್ಸಿ ಜನಾಂಗದವರು ಇವತ್ತಿಗೂ ಸರಿಯಾದ ನೆಲೆ ಇಲ್ಲದೇ ಅಲೆಮಾರಿಗಳಂತೆಯೇ ಉಳಿದಿದ್ದಾರೆ.

ಪಶ್ಚಿಮದ ಶ್ರೀಮಂತ ರಾಷ್ಟ್ರಗಳ ಪೂರಾ ಸಹಕಾರಕೊಂದಿಗೇ ಇಸ್ರೇಲು ಪ್ಯಾಲೆಸ್ತೈನ್ ಮೇಲೆ ಆಕ್ರಮಣ ಮಾಡುತ್ತದೆ ಮತ್ತು ಅವರ ಭೂಮಿಯನ್ನು ಆಕ್ರಮಿಸಿಕೊಳ್ಳುತ್ತಲೇ ಮುಂದುವರೆದಿದೆ. ಅದೇ ಹೊತ್ತಿಗೆ ಈ ಪುಟ್ಟ ಪ್ಯಾಲೆಸ್ತೈನ್ ದೇಶದ ಜನರು, ನೆರೆಹೊರೆಯ ಅರಬ್ ದೇಶಗಳ ಸಹಕಾರವಿಲ್ಲದೇ ತಮ್ಮ ದೇಹಗಳನ್ನೇ ಬಾಂಬುಗಳನ್ನಾಗಿ ಮಾಡಿಕೊಂಡು ತಮ್ಮ ನೆಲವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಇದೇ ಇಸ್ರೇಲಿನಲ್ಲಿರುವವರು ದಶಕಗಳ ಹಿಂದೆಯಷ್ಟೇ ನಾಜಿಗಳು ನಡೆಸಿದ ಮೈ ನಡುಗಿಸುವಂತ ಹಿಂಸೆ ಮತ್ತು ನರಮೇಧದಿಂದ ಬದುಕುಳಿದು ಪಲಾಯನ ಮಾಡಿದವರೇ ಎನ್ನುವುದು ಜಗತ್ತಿನ ವಿಪರ್ಯಾಸಗಳಲ್ಲೊಂದು.

ನೆಲ ಮತ್ತು ನೀರಿನಂತೆ, ತೈಲವೂ ಅತ್ಯಮೂಲ್ಯವಾದ ಸಂಪನ್ಮೂಲವಾದ ಕೂಡಲೇ ಅದರ ಮೇಲಿನ ಹಿಡಿತಕ್ಕಾಗಿ ಜಗತ್ತಿನ ಶ್ರೀಮಂತ ರಾಷ್ಟ್ರಗಳು ತೈಲ ಸಂಪತ್ತು ತುಂಬಿದ ದೇಶಗಳ ಮೇಲೆ ನಿರಂತರವಾಗಿ ಬಾಂಬ್ ಬೀಳಿಸುತ್ತಿದ್ದಾರೆ ಅಥವಾ ಬಾಂಬ್ ಬೀಳುವಂತೆ ನೋಡಿಕೊಳ್ಳುತ್ತದ್ದಾರೆ. ಸಿರಿಯಾ ನಿರಾಶ್ರಿತರ ಪಲಾಯನ, ಯೆಮನ್ನರ ಹಸಿವು ಇವತ್ತು ಅತ್ಯಂತ ದಾರುಣ ಸ್ಥಿತಿಯಲ್ಲಿದೆ. ಅಳಲೂ ಶಕ್ತಿಯಿಲ್ಲದಂತಾಗಿರುವ ಯೆಮೆನ್ನಿನ ಮಕ್ಕಳು ಅಸುನೀಗುತ್ತಿದ್ದರೆ, ನೆಲೆದಾಳದ ಬಂಕರ್‌ಗಳಲ್ಲಿ ಆಶ್ರಯ ಪಡೆದ ಸಿರಿಯಾದ ಮಕ್ಕಳು ಗೋಳಿಡುತ್ತಾ, ನಿರಂತರವಾಗಿ ಬೀಳುತ್ತಿರುವ ಬಾಂಬ್‍ಗಳಿಂದ ನಮ್ಮನ್ನು ರಕ್ಷಿಸಿ ಎಂದು ಇಡೀ ಪ್ರಪಂಚಕ್ಕೆ ಕರೆಕೊಡುತ್ತಿದ್ದಾರೆ.

ಹಾಗೇ ಉತ್ತರ ಆಫ್ರಿಕಾ ದೇಶಗಳಿಂದ ಯುರೋಪಿಗೆ ವಲಸೆ ಹೋಗುವ ಜನಗಳನ್ನು ಮೆಡಿಟರೇನಿಯನ್ ಸಮುದ್ರವು ಅಪೋಷನ ತೆಗೆದುಕೊಳ್ಳುವ ಬಗೆ ಬಗೆ ಚಿತ್ರಗಳು ತೆರೆದುಕೊಳ್ಳುತ್ತಿರುವದನ್ನು ನಾವು ನೋಡುತ್ತಲೇ ಇದ್ದೇವೆ. ಇತ್ತ ಡ್ರಗ್ ಮಾಫಿಯಾದ ಹಿಂಸೆಯಿಂದ ಪಾರಾಗಲು ಮೆಕ್ಸಿಕನ್ನರು ಅಮೇರಿಕಾ ದೇಶಕ್ಕೆ ವಲಸೆ ಹೋಗುವುದೂ, ಅವರನ್ನು ತಡೆಯಲು ನೂರಾರು ಮೈಲಿಯುದ್ದೂಕ್ಕೂ ಎತ್ತೆತ್ತರ ಗೋಡೆ ಕಟ್ಟುವುದೂ ನಡೆದೇ ಇದೆ. ಇತ್ತೀಚಿಗೆಷ್ಟೇ ಮಯನ್ಮಾರ್ ಬೌದ್ಧರು ನಡೆಸಿದ ಆಕ್ರಮಣದಲ್ಲಿ ಜೀವವುಳಿಸಿಕೊಳ್ಳಲು ಬಾಂಗ್ಲಾ ಮತ್ತು ಭಾರತದ ಗಡಿಗೆ ಓಡಿಬಂದಿದ್ದ ರೊಹಿಂಗ್ಯಗಳ ನೆನಪು ನಮ್ಮಲ್ಲನ್ನೂ ಮಾಸಿಲ್ಲ. ಟೆಬೆಟಿಯನ್ನರು ಮತ್ತೆ ತಮ್ಮ ನೆಲ ಸೇರಿಕೊಳ್ಳುವ ಕನಸನ್ನು ಜೀವಂತವಾಗಿರಿಸಿಕೊಂಡೇ ಇಲ್ಲಿ ಬದುಕು ಕಟ್ಟಿಕೊಂಡಿದ್ದಾರೆ.

ಮೊದಲು ಅಲ್ಲೊ ಇಲ್ಲೊ ನಡೆಯುತ್ತಿದ್ದ ಈ ಪಲಾಯನಗಳು ಪ್ರಕೃತಿ ವಿಕೋಪದ ಕಾರಣವೂ ಸೇರಿಕೊಂಡು ಮತ್ತಷ್ಟು ವ್ಯಾಪಕವಾಗಿಯೂ ನಿರಂತರವಾಗಿಯೂ ಆಗಿಹೋಗುತ್ತಿರುವುದೇ ಇವತ್ತಿನ ವಾಸ್ತವ.

ಇದಲ್ಲಕ್ಕಿಂತಲೂ ಮಿಗಿಲಾಗಿ ಜನರಿಂದಲೇ ಆರಿಸಿಬಂದು ಆಡಳಿತ ಮಾಡುವ ಪ್ರತಿನಿಧಿಗಳು ಕಾರ್ಪೋರೇಟ್ ಕುಳಗಳ ಏಜೆಂಟರುಗಳಾಗಿ ಬದಲಾದ ಈ ಕಾಲಘಟ್ಟದಲ್ಲಿ ಕೆಳಸ್ತರದಲ್ಲಿ ಬದುಕು ಮಾಡಿಕೊಂಡಿರುವ ಜನರಿಗೆ ಇದಕ್ಕಿಂತ ಹೊರತಾದ ಬದುಕೇ ಇಲ್ಲವೆನೋ ಎನ್ನುವಂತ ಸ್ಥಿತಿ ಪ್ರಪಂಚದಾದ್ಯಂತವೂ ತರೆದುಕೊಳ್ಳುತ್ತಿದೆ. ಇಂಥ ಒಂದು ಸಂದರ್ಭದಲ್ಲೇ ಮಾರ್ಚ್ 26ರ ಬೆಳಗ್ಗೆ, ಲಾಕ್‍ಡೌನ್ ಕಾರಣಕ್ಕಾಗಿ ವಲಸೆಕಾರ್ಮಿಕರು ಭಾರತದ ಮಹಾನಗರಗಳ ರಸ್ತೆಯಲ್ಲಿ ಕಿಕ್ಕಿರಿದು ತುಂಬಿಹೋದರು. ಬೇಕೆಂದಾಗ ಕೆಲಸಕ್ಕೆ ಹಾಜರಿರಬೇಕು, ಅನಂತರ ಎಲ್ಲೂ ಕಾಣಿಸಿಕೊಳ್ಳಬಾರದೆನ್ನುವ ಅಲಿಖಿತ ಕಾನೂನು ಇರುವುದರಿಂದ ಕೆಲಸವಾದ ಕೂಡಲೇ ಎಲ್ಲೋ ಸಂದಿಗೊಂದಿಗಳಲ್ಲಿ, ಸ್ಲಂಗಳಲ್ಲಿ, ರೈಲ್ವೇ ಲೈನಿನ ಪಕ್ಕದಲ್ಲಿ ಬದುಕಿಕೊಂಡಿದ್ದ ಜನರು ಆದಿನ ಬುದಬುದನೇ ಬೀದಿಗೆ ಬಂದು ಬಿದ್ದರು. ಪೋಲೀಸರ ಲಾಠಿ ಏಟುಗಳೂ ಅವರನ್ನು ತಡೆಯಲಿಲ್ಲ. ಊರಿಗೆ ಹೋಗುತ್ತೇವೆಂದು ತಯಾರಾಗಿ ನಿಂತರು. ಗಾಡಿಗಳ ವ್ಯವಸ್ಥೆ ನಿಂತುಹೋಗಿದ್ದರಿಂದ ನಡೆದೇ ಬಿಡುತ್ತೇವೆಂದರು. ಲಾಕ್‍ಡಾನ್ ಕಾರಣಕ್ಕಾಗಿ ಆಹಾರ ನೀರಿನ ಯಾವ ವ್ಯವಸ್ಥೆಯೂ ಇಲ್ಲದಿದ್ದರೂ, ಬೇಸಿಗೆಯ ದಿನಗಳಲ್ಲಿ ಎಲೆಗಳನ್ನೆಲ್ಲಾ ಉದುರಿಸಿಕೊಂಡು ಬೋಳಾದ ಮರಗಳ ಕೆಳಗೆ ರಸ್ತೆ ಕಾದು ನಿಂತಿದ್ದರೂ ಈ ಕಠೋರ ಪರಸ್ಥಿತಿ ಅವರನ್ನು ಹಿಮ್ಮೆಟಿಸಲ್ಲಿಲ್ಲ.

ಸರ್ಕಾರದ ಅಣತಿಯಂತೆ ಎಲ್ಲಾದರೂ ವಾಪಾಸು ಉಳಿದುಬಿಟ್ಟಿದ್ದರೆ ಇದಕ್ಕಿಂತಲೂ ಘೋರ ವಾಸ್ತವವನ್ನು ಎದುರಿಸಬೇಕಾಗಬಹುದು ಎಂಬ ಅರಿವು ಅವರೊಳಗೆ ಇತ್ತೆ? ಅಥವಾ ಕಂಬಳಿಹುಳಗಳಂತೆ ಒಬ್ಬರನ್ನೊಬ್ಬರು ಸುಮ್ಮನೇ ಹಿಂಬಾಲಿಸಿಕೊಂಡು ನಡೆದರೆ? ಅಂತೂ ಲಕ್ಷ ಲಕ್ಷ ಕಾರ್ಮಿಕರು ತಂತಮ್ಮ ಗ್ರಾಮಗಳಿಗೆ ನಡೆದು ಹೊರಟೇ ಬಿಟ್ಟರು.

ಅದೆಂಥ ಶಕ್ತಿ ಅವರನ್ನು ಹಾಗೆ ಮಾಡಿಸಿತ್ತು? ಆಹಾರ ನೀರಿನ ವ್ಯವಸ್ಥೆ ಇಲ್ಲದೆಯೂ 600-700 ಕಿ.ಮೀ ನಡೆದೇ ಬಿಡುವಂಥ ಅದೆಂಥ ಕಠಿಣಬಾಳು ಅವರಿಗೆ ಆ ಸಹಿಷ್ಣುತೆಯನ್ನು ತಂದುಕೊಟ್ಟಿತ್ತು?

ಈಗ ಆ ಕಾಲುಗಳೆಲ್ಲಾ ದೂರ ದೂರ ಸರಿದು ಹೋಗಿದ್ದಾವೆ. ಶುರುವಿನಲ್ಲಿ ಮಾಧ್ಯಮದವರು ಅವರನ್ನು ಹಿಂಬಾಲಿಸಿ ತಾಜಾ ತಾಜಾ ಚಿತ್ರಗಳನ್ನು ಮುಟ್ಟಿಸಿದರು. ಅವರಾದರೂ ಎಷ್ಟು ದೂರ ಹಿಂಬಾಲಿಸಿಯಾರು? ಕುಂಟುವ ಕಾಲುಗಳು, ರಕ್ತ ವಸರುವ ಕಾಲುಗಳು, ಚಪ್ಪಲಿ ಇಲ್ಲದ ಕಾಲುಗಳು, ಪುಟ್ಟ ಪುಟ್ಟ ಕಾಲುಗಳು, ವಯಸ್ಸಾದ ಕಾಲುಗಳು, ಗರ್ಭಿಣಿ ಬಾಣಂತಿಯರ ಕಾಲುಗಳು ಎಲ್ಲವೂ ದೂರ ದೂರ ಸರಿದು ಹೋದವು.

ಸೈಕಲ್ಲಿನ ಮುಂದೆ ಹಗ್ಗದಿಂದ ಕಟ್ಟಿದ್ದ, ಬಾಡಿದ ಹರಿವೆ ಸೊಪ್ಪಿನಂತೆ ಮುಂದಕ್ಕೆ ಬಾಗಿದ್ದ ಆ ಮಗು ಮನೆ ತಲುಪಿದೆಯೇ? ಕಾನ್ಪುರದ ಒಂಟಿ ತಾಯಿಯನ್ನು, ಎರಡು ಚಿಕ್ಕ ತಂಗಿಯರನ್ನು ಸೇರಿಕೊಳ್ಳಲಾಗದೇ ಕುಂಟುಗಾಲೊಂದನ್ನು ಎಳೆಯುತ್ತಾ, ಅಳುತ್ತಾ, ತೆವಳುತ್ತಿದ್ದ ಕೋಮಲ ಮನೆ ಸೇರಿದಳೇ? ನಡೆದೇ ಬೀಡುತ್ತೇನೆಂದು ಕಾಲಿಗೆ ಕಟ್ಟಿದ್ದ ಪ್ಲಾಸ್ಟರನ್ನು ಬಿಚ್ಚುತ್ತಿದ್ದ ಆ ಹುಡುಗ ಮನೆ ಸೇರಿದನೇ? ಎರಡೆರಡು ಮಕ್ಕಳನ್ನು ಹೆಗಲ ಮೇಲೆ ಕುರಿಸಿಕೊಂಡು ಸಾಗುತ್ತಿದ್ದ ಆ ತಂದೆ ಮನೆ ಸೇರಿದನೇ? ತಿಂಗಳ ಮಗುವನ್ನು ಎದೆಗವುಚಿಕೊಂಡು ನಡೆಯುತ್ತಿದ್ದ ಆ ತಾಯಿ ಮನೆ ಸೇರಿದಳೆ?

ತಾಯಿಯ ಕಂಕುಳಲ್ಲೇ ಒಂದೂರಿನಿಂದ ಇನ್ನೊಂದೂರಿಗೆ ವಲಸೆ ಹೋಗುತ್ತಾ, ಸ್ಲಂನಂಥ ಜಾಗದಲ್ಲಿ ವಾಸಿಸುತ್ತಾ ಇರುವ ಮಕ್ಕಳು ನೆನಪನ್ನು ಉಳಿಸಿಕೊಂಡಾವೆ? ನಿಯಾನ್ ಬೆಳಕಿನಲ್ಲೋ ಅಥವಾ ಹೊಗೆಯಿಂದಲೋ ಮಬ್ಬಾದ ಆಕಾಶದಲ್ಲಿ ಮಬ್ಬಾಗಿ ಕಾಣುವ ನಕ್ಷತ್ರಗಳಲ್ಲಿ ಒಂದು ರೋಹಿತನೆಂದು ಗುರುತಿಸಿಯಾವೆ?

“ಸಬ್ ಯಾದ್ ರಖ್ಖಾ ಜಾಯೇಗಾ” ಎಂಬ ಕವಿತೆ ಎಲ್ಲೋ ಹುಟ್ಟಿ ಈಗ ಎಲ್ಲಾ ಕಡೆ ಅನುರಣಿಸುತ್ತಿರುವಾಗ ಕನಸು ಹುಟ್ಟಬಹುದೆಂಬ ಭರವಸೆ ಉಳಿದಿದೆ. ಹೇಗೂ ಶಾಹೀನ್ ಬಾಗ್‍ನ ಹೆಣ್ಣು ಮಕ್ಕಳು ಭರವಸೆಯೊಂದನ್ನು ಬಿಟ್ಟು ಹೋಗಿದ್ದಾರಲ್ಲ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಬಿಜೆಪಿ ಮಾತ್ರ 272ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಿದೆ ಎಂಬ ಮೋದಿ...

0
ಮೇ 1, 2024 ರಂದು ಗುಜರಾತ್‌ನ ಬನಸ್ಕಾಂತದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, "ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 272ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಿದ ಏಕೈಕ ಪಕ್ಷ ಬಿಜೆಪಿ"...