ಕರ್ನಾಟಕ ವಿಧಾನಸಭಾ ಚುನಾವಣೆ 2023ರ ಮತದಾನ ಮುಗಿದಿದೆ. ಹಲವಾರು ಚಾನೆಲ್‌ಗಳು ಮತ್ತು ಸಂಸ್ಥೆಗಳು ಮತದಾನೋತ್ತರ ಸಮೀಕ್ಷೆ ನಡೆಸಿದ್ದು, ಅವುಗಳೂ ಹೊರಬಿದ್ದಿವೆ. ಅವುಗಳಲ್ಲಿ ಇಂಡಿಯಾ ಟುಡೇ, ನವ ಭಾರತ್, TimesNow-ETG, India TV-CNX ಮತ್ತು ಝೀ ಮ್ಯಾಟ್ರಿಕ್ ಎಕ್ಸಿಟ್ ಪೋಲ್‌ಗಳು ಕಾಂಗ್ರೆಸ್ ಸ್ಪಷ್ಟ ಬಹುಮತ ಸಾಧಿಸುತ್ತದೆ ಎಂದಿವೆ.
ಎಕ್ಸಿಟ್ ಪೋಲ್ ಪ್ರಕಟವಾದ ಬೆನ್ನಲ್ಲೇ ರಾಜ್ಯದ ರಾಜಕಾರಣಿಗಳು ಪ್ರತಿಕ್ರಿಯೆ ನೀಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಾತನಾಡಿ, “ಚುನಾವಣೋತ್ತರ ಸಮೀಕ್ಷೆಗಳು ಶೇಕಡ 100ರಷ್ಟು ಸರಿಯಾಗಿ ಇರುವುದಿಲ್ಲ. ನೈಜ ಫಲಿತಾಂಶ ಬರುವಾಗ ಪ್ಲಸ್-ಮೈನಸ್ ಆಗುತ್ತವೆ. ರಾಜ್ಯದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಸಂಪೂರ್ಣ ಬಹುಮತ ಬರುತ್ತದೆ. ಎಕ್ಸಿಟ್ ಪೋಲ್ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
“ಎಕ್ಸಿಟ್ ಪೋಲ್ ಒಂದೊಂದು ರೀತಿ ತೋರಿಸುತ್ತಿವೆ. ನಮ್ಮ ಕಂಪ್ಲೀಟ್ ಗ್ರೌಂಡ್ ರಿಪೋರ್ಟ್ ಮೂಲಕ ನಾವು ಸಂಪೂರ್ಣ ಬಹುಮತ ಪಡೆಯುತ್ತೇವೆ. 5 ರಿಂದ 10% ಹೆಚ್ಚು ಕಮ್ಮಿ ಆಗುತ್ತಿರುತ್ತದೆ. ಒಂದೊಂದು ಸಂಸ್ಥೆ ಒಂದೊಂದು ರೀತಿ ತೋರಿಸುತ್ತಿದೆ, ಯಾವುದು ಸ್ಥಿರವಾಗಿಲ್ಲ. ನಮಗೆ ಕಂಪ್ಲೀಟ್ ಗ್ರೌಂಡ್ ರಿಪೋರ್ಟ್ ಇದೆ. ಸಂಪೂರ್ಣ ಬಹುಮತ ಸಿಗುತ್ತದೆ” ಎಂದು ಹೇಳಿದ್ದಾರೆ.
“ಚುನಾವಣೆಯ ನಿಜವಾದ ಫಲಿತಾಂಶಕ್ಕೆ ಮೇ 13ರವರೆಗೆ ಕಾಯೋಣ. ರೆಸಾರ್ಟ್ ರಾಜಕೀಯ ಇಲ್ಲ. ಯಾವುದೇ ರೆಸಾರ್ಟ್ ಆಗುವುದಿಲ್ಲ. ಈ ಬಾರಿ ಆ ಪ್ರಶ್ನೆಯೇ ಇಲ್ಲ. ಬಿಜೆಪಿಗೆ ಸಂಪೂರ್ಣ ಬಹುಮತ ಬರುತ್ತದೆ. ಜೆಡಿಎಸ್ ಕಿಂಗ್ ಮೇಕರ್ ಆಗುವ ಅವಶ್ಯಕತೆಯೇ ಇಲ್ಲ” ಎಂದು ತಿಳಿಸಿದ್ದಾರೆ.
ಮತದಾನೋತ್ತರ ಸಮೀಕ್ಷೆಗಳನ್ನು ತಳ್ಳಿಹಾಕಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು, “ನನಗೆ ಜನರ ನಾಡಿಮಿಡಿತ ತಿಳಿದಿದೆ, ನಾವು ಸಂಪೂರ್ಣ ಬಹುಮತದೊಂದಿಗೆ 115 ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸುತ್ತೇವೆ. ನಾವು ಸರ್ಕಾರವನ್ನು ರಚಿಸುತ್ತೇವೆ. ಅತಂತ್ರ ಸರ್ಕಾರದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ನಾವು ಜೆಡಿಎಸ್‌ನೊಂದಿಗೆ ಕೈಜೋಡಿಸಬೇಕಾದರೂ ಬಿಜೆಪಿಯ ರಾಷ್ಟ್ರೀಯ ನಾಯಕರು ನಿರ್ಧಾರ ಕೈಗೊಳ್ಳುತ್ತಾರೆ” ಎಂದಿದ್ದಾರೆ.
ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಪ್ರತಿಕ್ರಿಯಿಸಿದ್ದು, “ಚುನಾವಣೋತ್ತರದ ಹಲವು ಸಮೀಕ್ಷೆಗಳಲ್ಲಿ ಕಾಂಗ್ರೆಸ್‌ಗೆ ಬಹುಮತ ಸಿಗುವುದು ಬಹುತೇಕ ಪಕ್ಕ. 130 ಸೀಟ್‌ಗಳೊಂದಿಗೆ ನಾವು ಸರ್ಕಾರ ರಚಿಸುತ್ತೇವೆ” ಎಂದು ಭವಿಷ್ಯ ನುಡಿದಿದ್ದಾರೆ.
“ಸರ್ಕಾರದ ವಿರುದ್ಧ ಜನಮತವಿದೆ. ನಾನು ಜನರ ನಾಡಿಮಿಡಿತ ಅರ್ಥಮಾಡಿಕೊಂಡಿರುವುದು ಸರಿಯಿದೆ. ನಾವು ಏನು ಫಲಿತಾಂಶದ ನಿರೀಕ್ಷೆ ಮಾಡಿದ್ದೆವೋ ಅದೇ ಫಲಿತಾಂಶ ಬರಲಿದೆ” ಎಂದು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
ಚುನಾವಣೋತ್ತರ ಸಮೀಕ್ಷೆಗಳ ನಂತರವೂ ಮಾತನಾಡಿರುವ ಅವರು, “ಈ ಬಾರಿ ಕರಾವಳಿ ಭಾಗದಲ್ಲೂ ನಮ್ಮ ಸೀಟು ಹೆಚ್ಚಾಗಲಿದೆ. ಬಜರಂಗದಳ ವಿಚಾರ ಒಂದು ವಿವಾದದ ವಿಚಾರವೇ ಅಲ್ಲ. ನಾವು ನಮ್ಮ ಪ್ರಣಾಳಿಕೆಯಲ್ಲಿ ಬಹಳ ಸ್ಪಷ್ಟವಾಗಿ ಹೇಳಿದ್ದೇವೆ. ಬಿಜೆಪಿಯವರು ಅಪಪ್ರಚಾರ ಮಾಡಿದ್ದಾರೆ. ಲಿಂಗಾಯತ ನಾಯಕರೆಲ್ಲಾ ಭ್ರಷ್ಟಾಚಾರಿಗಳು ಅಂತ ನಾನೆಲ್ಲಿ ಹೇಳಿದ್ದೆ? ನಾನು ಬಸವರಾಜ ಬೊಮ್ಮಾಯಿ ಭ್ರಷ್ಟಾಚಾರಿ ಅಂತ ಹೇಳಿದ್ದೆ. ನನ್ನ ಮಾತನ್ನು ತಿರುಚಿ ಅಪಪ್ರಚಾರ ಮಾಡಿದರು” ಎಂದು ಟೀಕಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದು, “ನಾನು ಈ ಸಂಖ್ಯೆಗಳನ್ನು (ಎಕ್ಸಿಟ್ ಪೋಲ್‌ಗಳು) ನಂಬುವುದಿಲ್ಲ. ನಾವು 146 ಸ್ಥಾನಗಳನ್ನು ದಾಟುತ್ತೇವೆ ಎಂಬ ನನ್ನ ನಿಲುವಿಗೆ ಬದ್ಧನಾಗಿದ್ದೇನೆ. ಕರ್ನಾಟಕದಲ್ಲಿ ಡಬಲ್ ಇಂಜಿನ್ ವಿಫಲವಾಗಿದೆ. ಜನರು ಉನ್ನತ ಶಿಕ್ಷಣ ಪಡೆದಿದ್ದಾರೆ. ದೊಡ್ಡ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಪರಿಸ್ಥಿತಿ ಬರುವುದಿಲ್ಲ” ಎಂದು ಹೇಳಿದ್ದಾರೆ.
ಇದನ್ನೂ ಓದಿರಿ: 2018ರಲ್ಲಿ ನಿಜವಾಗಿದ್ದ ಎಕ್ಸಿಟ್ ಪೋಲ್; 8 ಸಮೀಕ್ಷೆಗಳು ಏನು ಹೇಳಿದ್ದವು?
“ಕರ್ನಾಟಕದ ಜನರು ಹೊಸತನವನ್ನು ಬಯಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ. ಡಬಲ್ ಇಂಜಿನ್ ಸರ್ಕಾರ ಫೇಲ್ ಆಗಿದೆ. ಭ್ರಷ್ಟ ಬಿಜೆಪಿ ಸರ್ಕಾರದಿಂದ ಕರ್ನಾಟಕಕ್ಕೆ ಕಳಂಕ ಬಂದಿತ್ತು. ಈಗ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು, ಹೊಸ ಕರ್ನಾಟಕಕ್ಕೆ ಹೊಸ ಸರ್ಕಾರ ಬರಲಿದೆ” ಎಂದಿದ್ದಾರೆ.
ಎಕ್ಸಿಟ್ ಪೋಲ್ ಹೊರಬೀಳುವ ಮುನ್ನವೇ ಪ್ರತಿಕ್ರಿಯಿಸಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು, “ಈ ಚುನಾವಣೆಯಲ್ಲಿ ಬಿಜೆಪಿ–ಕಾಂಗ್ರೆಸ್ ಹಣದ ಹೊಳೆಯನ್ನೇ ಹರಿಸಿದ್ದು, ನಾವು ನಮ್ಮ ಅಭ್ಯರ್ಥಿಗಳಿಗೆ ಹಣದ ಸಹಾಯ ಮಾಡಲು ಆಗದ್ದಕ್ಕೆ ನೋವಿದೆ. ಆದರೆ ಜೆಡಿಎಸ್ ಪಕ್ಷವು ರಾಜ್ಯದಲ್ಲಿ ಬಹುಮತ ಪಡೆಯಲಿದೆ” ಎಂದು ತಿಳಿಸಿದ್ದಾರೆ.
“ಉತ್ತರ ಕರ್ನಾಟಕದ ಹಲವು ಕಡೆಗಳಲ್ಲೂ ನಮ್ಮ ಅಭ್ಯರ್ಥಿಗಳು ಗೆಲ್ಲುತ್ತಿದ್ದರು. ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಗೌರಿಬಿದನೂರು, ಅಫ್ಜಲ್‌ಪುರ, ಸೇಡಂ, ನವಲಗುಂದ, ರಾಯಭಾಗ, ಕುಡಚಿ, ರಾಯಚೂರು ಗ್ರಾಮೀಣ, ಕೊಪ್ಪಳ, ಸಿಂದಗಿ ಸೇರಿದಂತೆ ಕನಿಷ್ಠ 25 ಕ್ಷೇತ್ರಗಳಲ್ಲಿ ಹಣದ ಕೊರತೆಯಿಂದಾಗಿ ನಮಗೆ ಹಿನ್ನಡೆ ಆಗಿದೆ. ಇದರಿಂದಾಗಿ ಗೆಲ್ಲುವ ಕ್ಷೇತ್ರಗಳಲ್ಲಿಯೂ ಪೆಟ್ಟು ತಿಂದಿದ್ದೇವೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.



Money power.
But voters are matured enough.