Homeದಲಿತ್ ಫೈಲ್ಸ್ಕುದುರೆ ಮೇಲೆ ಮೆರವಣಿಗೆ ಮಾಡಿದ್ದಕ್ಕೆ ದಲಿತ ವರನಿಗೆ ಥಳಿಸಿ ಜಾತಿ ದೌರ್ಜನ್ಯ; ಎಫ್‌ಐಆರ್‌

ಕುದುರೆ ಮೇಲೆ ಮೆರವಣಿಗೆ ಮಾಡಿದ್ದಕ್ಕೆ ದಲಿತ ವರನಿಗೆ ಥಳಿಸಿ ಜಾತಿ ದೌರ್ಜನ್ಯ; ಎಫ್‌ಐಆರ್‌

ಹಲವು ದಲಿತರ ಮೇಲೆ ಹಲ್ಲೆಯಾಗಿದ್ದು, ಮಹಿಳೆಯರಿಗೆ ಜಾತಿವಾದಿಗಳು ಕಿರುಕುಳ ನೀಡಿದ್ದಾರೆಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ

- Advertisement -
- Advertisement -

ಮೇ 4ರ ಸಂಜೆ ಆಗ್ರಾದ ಸೋಹಲ್ಲಾ ಜಾತವ್ ಬಸ್ತಿಯಲ್ಲಿ ಸಾಗುತ್ತಿದ್ದ ವಿವಾಹ ಮೆರವಣಿಗೆಗೆ ಸವರ್ಣೀಯ ಜಾತಿಯ ಪುಂಡರು ಅಡ್ಡಿಪಡಿಸಿ, ಮದುವೆ ಗಂಡು ಮತ್ತು ಇತರರಿಗೆ ಥಳಿಸಿದ್ದು ಎಫ್‌ಐಆರ್‌ ದಾಖಲಾಗಿದೆ.

ದಲಿತ ವಧುವರರು ಕುದುರೆ ಮೇಲೆ ಸಾಗುತ್ತಿದ್ದನ್ನು ಕಂಡು ಕೆಂಡಮಂಡಲವಾದ ಸುಮಾರು 20-25 ಮಂದಿ ಜಾತಿವಾದಿಗಳು, ಬಲವಂತವಾಗಿ ವಧುವರರನ್ನು ಕುದುರೆಯಿಂದ ಕೆಳಗಿಳಿಸಿದ್ದಾರೆ ಮತ್ತು ಹಲ್ಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವರನ ಅತ್ತೆ ಗೀತಾ ಜಾತವ್ ಅವರು ಮೇ 8 ರಂದು ನೀಡಿದ ದೂರಿನ ಆಧಾರದ ಮೇಲೆ ಆಗ್ರಾ ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ 25 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

“ಸೊಹಲ್ಲಾ ಬಸ್ತಿಯಲ್ಲಿ ಮಗಳ ಮದುವೆ ಮೆರವಣಿಗೆ ಸಾಗುತ್ತಿದ್ದಾಗ 20ರಿಂದ 25 ಮಂದಿ ಸವರ್ಣಿಯ ಜಾತಿಯ ಗಂಡಸರು ದೊಣ್ಣೆ, ಕಬ್ಬಿಣದ ಸರಳುಗಳನ್ನು ಹಿಡಿದುಕೊಂಡು ಬಂದು ಅಳಿಯನನ್ನು ಬಲವಂತವಾಗಿ ಕೆಳಗಿಳಿಸಿ ಥಳಿಸಿದ್ದಾರೆ” ಎಂದು ಗೀತಾ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

“ರಾಧಾಕೃಷ್ಣ ಮದುವೆ ಹಾಲ್‌ನಲ್ಲಿ ದಲಿತ ವಧುವರರನ್ನು ರಕ್ಷಿಸಲು ಬಂದಾಗ ಇತರರಿಗೂ ಸವರ್ಣೀಯ ಗಂಡಸರು ಥಳಿಸಿದ್ದಾರೆ. ದಲಿತ ಮಹಿಳೆಯರಿಗೆ ಕಿರುಕುಳ ನೀಡಿದ್ದಾರೆ” ಎಂದು ವಿವರಿಸಿದ್ದಾರೆ.

“ಸವರ್ಣೀಯ ಠಾಕೂರರು ಈ ಕೃತ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದರು. ನಮ್ಮ ಹಳ್ಳಿಯಲ್ಲಿ ಮದುವೆ ಗಂಡು ಕುದುರೆ ಸವಾರಿ ಮಾಡುವುದಿಲ್ಲ, ನಿಮಗೆ ಎಷ್ಟು ಧೈರ್ಯ? ಎಂದು ಪ್ರಶ್ನಿಸಿದರು. ಮೂರು-ನಾಲ್ಕು ಬಾರಿ ವಿದ್ಯುತ್ ಸರಬರಾಜನ್ನು ಕಡಿತಗೊಳಿಸಿದರು. ಸ್ಥಳದಲ್ಲಿದ್ದ ಮಹಿಳೆಯರಿಗೆ ಕಿರುಕುಳ ನೀಡಿದರು, ಜಾತಿ ನಿಂದನೆ ಮಾಡಿದರು” ಎಂದು ಗೀತಾ ಅವರು ಹೇಳಿರುವುದಾಗಿ ಎಫ್‌ಐಆರ್‌ನಲ್ಲಿ ದಾಖಲಾಗಿದೆ.

ವಧುವಿನ ಸಹೋದರ ಮನೀಶ್ ಕುಮಾರ್ ಪ್ರತಿಕ್ರಿಯಿಸಿ, “ನಮ್ಮ ಹಳ್ಳಿಯಲ್ಲಿ ದಲಿತ ಅಳಿಯಂದಿರು ಕುದುರೆ ಸವಾರಿ ಮಾಡುವುದಿಲ್ಲ, ನಿಮಗೆ ಎಷ್ಟು ಧೈರ್ಯ? ಎಂದು ಅವರು ಪ್ರಶ್ನಿಸಿದರು. ನಾವು ದಾಳಿಕೋರರನ್ನು ತಡೆಯಲು ಪ್ರಯತ್ನಿಸಿದಾಗ, ದೊಣ್ಣೆಗಳಿಂದ ಥಳಿಸಲು ಪ್ರಾರಂಭಿಸಿದರು. ಕೆಲವು ಅತಿಥಿಗಳು ಗಂಭೀರವಾಗಿ ಗಾಯಗೊಂಡರು, ತುರ್ತು ಸಹಾಯವಾಣಿ ಸಂಖ್ಯೆ 112ಕ್ಕೆ ಯಾರೋ ಕರೆ ಮಾಡಿದ್ದರು. ಮಾಹಿತಿ ತಿಳಿದ ತಕ್ಷಣ ಸುಮಾರು 10-12 ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ” ಎಂದಿದ್ದಾರೆ.

ದೂರಿನ ಆಧಾರದ ಮೇಲೆ ಯೋಗೇಶ್ ಠಾಕೂರ್, ರಾಹುಲ್ ಕುಮಾರ್, ಸೋನು ಠಾಕೂರ್, ಕುನಾಲ್, ಶಿಶುಪಾಲ್ ಮತ್ತು ಇತರ 20 ಅಪರಿಚಿತರ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ), ಎಸ್‌ಸಿ-ಎಸ್‌ಟಿ ಮೇಲಿನ ದೌರ್ಜನ್ಯ ತಡೆ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿರಿ: ರಾಜಸ್ಥಾನ: ಕಾಣೆಯಾಗಿದ್ದ ಇಬ್ಬರು ಅಪ್ರಾಪ್ತ ದಲಿತ ಬಾಲಕಿಯರು ಶವವಾಗಿ ಪತ್ತೆ

ಮೇ 4ರಂದು ರಾತ್ರಿ ಘಟನೆ ನಡೆದಿದ್ದರೂ, ವರನ ಅತ್ತೆ ಗೀತಾದೇವಿ ನೀಡಿದ ದೂರಿನ ಮೇರೆಗೆ ಮೇ 9ರಂದು ಎಫ್‌ಐಆರ್ ದಾಖಲಿಸಲಾಗಿದೆ.

ಎಸ್‌ಎಚ್‌ಒ ನೀರಜ್ ಶರ್ಮಾ ಪ್ರತಿಕ್ರಿಯಿಸಿ, “ನಾಲ್ವರು ಆರೋಪಿಗಳಾದ ಯೋಗೇಶ್ ಠಾಕೂರ್, ರಾಹುಲ್ ಕುಮಾರ್, ಸೋನು ಠಾಕೂರ್, ಕುನಾಲ್ ಠಾಕೂರ್ ಮತ್ತು ಹಲವಾರು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ. ಅಟ್ರಾಸಿಟಿ ಕಾಯ್ದೆ ಮತ್ತು ಐಪಿಸಿ ಸೆಕ್ಷನ್ 354 (ದಾಳಿ ಅಥವಾ ಕ್ರಿಮಿನಲ್ ಬಲ ಪ್ರಯೋಗದ ಮೂಲಕ ಮಹಿಳೆಯರಿಗೆ ಕಿರುಕುಳ), 147 (ಗಲಭೆಗೆ ಶಿಕ್ಷೆ), 148 (ಗಲಭೆ, ಮಾರಣಾಂತಿಕ ಆಯುಧಗಳಿಂದ ಶಸ್ತ್ರಸಜ್ಜಿತ), 452 (ಗಾಯ, ಆಕ್ರಮಣ ಅಥವಾ ಮನೆ-ಅತಿಕ್ರಮಣ), 352 (ಹಲ್ಲೆಗೆ ಶಿಕ್ಷೆ), 323 (ಸ್ವಯಂಪ್ರೇರಿತವಾಗಿ ನೋವುಂಟು ಮಾಡುವುದು), 505 (ಶಾಂತಿಯ ಉಲ್ಲಂಘನೆಯನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಅಡಿಯಲ್ಲಿ ಎಫ್‌ಐಆರ್‌ ಆಗಿದೆ” ಎಂದು ಮಾಹಿತಿ ನೀಡಿದ್ದಾರೆ.

ಸರ್ಕಲ್ ಆಫೀಸರ್ (ಸದರ್) ಅರ್ಚನಾ ಸಿಂಗ್, “ಆರೋಪಿಗಳಲ್ಲಿ ಒಬ್ಬರಾದ ರಾಹುಲ್ ಅವರನ್ನು ಬಂಧಿಸಲಾಗಿದೆ. ಇತರರನ್ನು ಹಿಡಿಯಲು ನಾವು ರೈಡ್‌ ಮಾಡುತ್ತಿದ್ದೇವೆ. ಹೆಚ್ಚಿನ ತನಿಖೆ ನಡೆಯುತ್ತಿದೆ” ಎಂದು ಪ್ರತಿಕ್ರಿಯಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ‘ರೋಹಿತ್ ವೇಮುಲಾ ಕಾಯ್ದೆ’ ಜಾರಿ: ಕೆ.ಸಿ ವೇಣುಗೋಪಾಲ್

0
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಶಿಕ್ಷಣ ಸಂಸ್ಥೆಗಳಲ್ಲಿನ ಜಾತಿ ಮತ್ತು ಕೋಮು ದೌರ್ಜನ್ಯ ತಡೆಯಲು 'ರೋಹಿತ್ ವೇಮುಲಾ ಕಾಯ್ದೆ ಜಾರಿಗೊಳಿಸಲಾಗುವುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಭರವಸೆ ನೀಡಿದ್ದಾರೆ. ಸಾಮಾಜಿಕ ಮತ್ತು...