ಲೈಂಗಿಕ ಕಿರುಕುಳದ ಆರೋಪಿ, ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್‌ನನ್ನು ಬಂಧಿಸುವಂತೆ ಆಗ್ರಹಿಸುತ್ತಿರುವ ಒಲಂಪಿಕ್ ಮತ್ತು ಕಾಮನ್‌ವೆಲ್ತ್ ಕ್ರೀಡಾಕೂಟಗಳ ಪದಕ ವಿಜೇತರು, “ಗಂಗಾ ನದಿಗೆ ನಮ್ಮ ಪದಕಗಳನ್ನು ಅರ್ಪಿಸುತ್ತೇವೆ” ಎಂದಿದ್ದು ಇತಿಹಾಸದಲ್ಲಿ ಉಳಿಯುವ ಘಟನೆ.
ಕುಸ್ತಿಪಟುಗಳಾದ ಸಾಕ್ಷಿ ಮಲಿಕ್, ಬಜರಂಗ್ ಪುನಿಯಾ ಮತ್ತು ವಿನೇಶ್ ಫೋಗಟ್ ಸೇರಿದಂತೆ ಅನೇಕರು ನಡೆಸುತ್ತಿರುವ ಈ ಹೋರಾಟ ದಿನದಿಂದ ದಿನಕ್ಕೆ ತೀವ್ರವಾಗುತ್ತಲೇ ಇದೆ. ಸರ್ಕಾರ ತಾಳಿರುವ ನಿರ್ಲಕ್ಷ್ಯದಿಂದಾಗಿ ಕುಸ್ತಿಪಟುಗಳು ತೀವ್ರವಾಗಿ ನೊಂದಿದ್ದು- ಪದಕಗಳನ್ನು ಗಂಗಾನದಿಗೆ ಬಿಡುವ ಕ್ರಮದ ಕುರಿತು ಚಿಂತಿಸಿದ್ದಾರೆ.
“ನಮ್ಮ ಕುತ್ತಿಗೆಯಲ್ಲಿ ಅಲಂಕರಿಸಲ್ಪಟ್ಟ ಈ ಪದಕಗಳಿಗೆ ಇನ್ನು ಮುಂದೆ ಯಾವುದೇ ಅರ್ಥವಿಲ್ಲ ಎಂದು ತೋರುತ್ತದೆ” ಎಂದು ಕುಸ್ತಿಪಟುಗಳು ಹೇಳಿದ್ದಾರೆ. “ಪೊಲೀಸ್ ಮತ್ತು ವ್ಯವಸ್ಥೆಯು ನಮ್ಮನ್ನು ಅಪರಾಧಿಗಳಂತೆ ಪರಿಗಣಿಸುತ್ತಿದೆ. ಕಿರುಕುಳ ನೀಡಿದಾಗ ಸಾರ್ವಜನಿಕ ಸಭೆಗಳಲ್ಲಿ ನಮ್ಮ ಮೇಲೆ ಬಹಿರಂಗವಾಗಿ ದಾಳಿ ನಡೆಸುತ್ತಿದ್ದಾನೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
‘ಗಂಗಾ ನದಿಗೆ ಪದಕಗಳನ್ನು ಬೀಸಾಡುವ ಯೋಚನೆ’ಯು ಭಾರತದ ಕ್ರೀಡಾ ಇತಿಹಾಸದಲ್ಲಿ ಅಸಾಮಾನ್ಯ ಹೆಜ್ಜೆಯಾಗಿದ್ದರೂ, ಪ್ರಪಂಚದಾದ್ಯಂತದ ಅನೇಕ ಕ್ರೀಡಾಪಟುಗಳು ಸಾಮಾಜಿಕ ಅನಿಷ್ಟಗಳ ವಿರುದ್ಧ ಪ್ರತಿಭಟಿಸಲು ಇಂತಹ ಕಠಿಣ ಕ್ರಮಗಳನ್ನು ಕೈಗೊಂಡಿದ್ದು ಉಂಟು. ಅಂತಹ ಐತಿಹಾಸಿಕ ಘಟನೆಗಳ ಪೈಕಿ- ಪ್ರಖ್ಯಾತ ಅಮೆರಿಕನ್ ಬಾಕ್ಸರ್ ಮುಹಮ್ಮದ್ ಅಲಿ ಅವರ ಪ್ರತಿರೋಧವೂ ಸೇರಿದೆ.
ಜನವರಿ 17, 1942 ರಂದು ಕೆಂಟುಕಿಯ ಲೂಯಿಸ್ವಿಲ್ಲೆಯಲ್ಲಿ ಜನಿಸಿದ ಮುಹಮ್ಮದ್ ಅಲಿ ಬಾಕ್ಸಿಂಗ್ ಜಗತ್ತಿಗೆ ಕಾಲಿಟ್ಟಿದ್ದು 12ನೇ ವಯಸ್ಸಿನಲ್ಲಿ. ಅಲಿ ಅವರ ಬೈಸಿಕಲ್ ಕಳವಾದ ಬಳಿಕ ಬಾಕ್ಸಿಂಗ್ ಕಡೆಗೆ ಆಕರ್ಷಿತರಾಗುತ್ತಾರೆ. ತಮ್ಮ ಬೈಸಿಕಲ್ ಕದ್ದವನಿಗೆ ಥಳಿಸುತ್ತೇನೆ ಎಂದು ಪೊಲೀಸರಲ್ಲಿ ಅಲಿ ಹೇಳಿಕೊಂಡಿದ್ದರು.
ಅಲಿ ಬಾಕ್ಸಿಂಗ್ ಜಗತ್ತಿನಲ್ಲಿ ಸಾಧನೆಗೈದರು. ‘ದಿ ಗ್ರೇಟೆಸ್ಟ್’ ಎಂಬ ಖ್ಯಾತಿಯನ್ನೂ ಪಡೆದರು. ಕೇವಲ ಆರು ವರ್ಷಗಳಲ್ಲಿ, ಅಂದರೆ 1960ರಲ್ಲಿ ಒಲಂಪಿಕ್ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡರು. ಆದರೆ 48 ಗಂಟೆಗಳ ಕಾಲ ಪದಕವನ್ನು ಸ್ವೀಕರಿಸಿರಲಿಲ್ಲ. ಯಾಕೆಂದರೆ ಈ ಪ್ರಚಂಡ ಯಶಸ್ಸಿನ ನಂತರವೂ ಅಲಿ ವರ್ಣಭೇದ ನೀತಿಯನ್ನು ಎದುರಿಸುತ್ತಲೇ ಇದ್ದರು.
ಅಲಿ ಅವರಿಗೆ ಸಂಬಂಧಿಸಿದ ಮತ್ತೊಂದು ಘಟನೆ ಪ್ರಸಿದ್ಧವಾಗಿದೆ. ಅವರು ತಮ್ಮ ಒಲಿಂಪಿಕ್ ಚಿನ್ನದ ಪದಕದೊಂದಿಗೆ ಹಿಂದಿರುಗಿದಾಗ, ಬಿಳಿ ಜನರಿಗೆ ಮಾತ್ರ ಸೇವೆ ಸಲ್ಲಿಸುವ ರೆಸ್ಟೋರೆಂಟ್‌ನಲ್ಲಿ ಇವರಿಗೆ ಪ್ರವೇಶ ನಿರಾಕರಿಸಲಾಯಿತು. ಬಿಳಿಕ ಮೋಟಾರ್‌ಸೈಕಲ್ ಗ್ಯಾಂಗ್‌ನೊಂದಿಗೆ ಅವರು ಜಗಳವಾಡಿದ್ದರು.
ಸಮಯದಲ್ಲಿ ಕಪ್ಪು ಜನರಿಗೆ ಊಟ ಮಾಡಲು ಅವಕಾಶವಿರಲಿಲ್ಲ. ಆಗ ತನ್ನ ಪದಕವನ್ನು ಧರಿಸಿದ ಅಲಿ, ಊಟವನ್ನು ಕೇಳಿದರು. ಆದರೂ ಅನುಮತಿ ನೀಡಲಾಗಲಿಲ್ಲ.
ಇದನ್ನೂ ಓದಿರಿ: ಆರೋಪಿ ಬ್ರಿಜ್‌ಭೂಷಣ್ ಸಿಂಗ್ ವಿರುದ್ಧ ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿದ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ
ತನ್ನ ಆತ್ಮಚರಿತ್ರೆಯಾದ “ದಿ ಗ್ರೇಟೆಸ್ಟ್”ನಲ್ಲಿ ಈ ಘಟನೆಯ ಕುರಿತು ಅಲಿ ಬರೆದುಕೊಂಡಿದ್ದಾರೆ. ಆ ಅವಮಾನದ ಬಳಿಕ ಅಲಿ ಅವರು ತಮ್ಮ ಪದಕವನ್ನು ಓಹಿಯೋ ನದಿಗೆ ಎಸೆದರು ಎಂದು ದಾಖಲಾಗಿದೆ.
ಆದಾಗ್ಯೂ, ಈ ಆವೃತ್ತಿಯ ಬಗ್ಗೆ ಅನೇಕರು ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಅಲಿಯವರು ಪದಕವನ್ನು ಕಳೆದುಕೊಂಡಿರಬಹುದು ಎಂದು ಕೆಲವು ನಿಕಟವರ್ತಿಗಳು ಹೇಳಿಕೊಂಡಿದ್ದಾರೆ.
ನ್ಯೂಯಾರ್ಕ್ ಟೈಮ್ಸ್‌ನ 2016ರ ವರದಿಯು ವಿಭಿನ್ನ ಆಯಾಮಗಳನ್ನು ನೀಡಿತ್ತು. ಮೌಖಿಕ ಇತಿಹಾಸದ ಲೇಖಕ ಥಾಮಸ್ ಹೌಸರ್, “ಬಾಕ್ಸರ್ ಮೊಹಮ್ಮದ್ ಅಲಿಯವರು ತಮ್ಮ ಪದಕವನ್ನು ಕಳೆದುಕೊಂಡಿದ್ದರು” ಎಂದು ತಿಳಿಸಿದ್ದಾರೆ. ಅವರಿಗೆ (ಅಲಿಯವರಿಗೆ) ಅಂತಿಮವಾಗಿ 1996 ಅಟ್ಲಾಂಟಾ ಒಲಿಂಪಿಕ್ಸ್‌ನಲ್ಲಿ ಪದಕದ ಪ್ರತಿರೂಪವನ್ನು ನೀಡಲಾಗಿತ್ತು.


