ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳು ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಬಳಿಕ ಮಾತನಾಡಿರುವ ಕುಸ್ತಿಪಟು ಬಜರಂಗ್ ಪುನಿಯಾ, ಅಮಿತ್ ಶಾ ಅವರೊಂದಿಗೆ ಗ್ರಾಪ್ಲರ್‌ಗಳು ಯಾವುದೇ ಹೊಂದಾಣಿಕೆ ಅಥವಾ ಡೀಲ್ ಮಾಡಿಕೊಂಡಿಲ್ಲ ಮತ್ತು ಪ್ರತಿಭಟನೆಗಳು ಮುಂದುವರಿಯುತ್ತವೆ ಎಂದು ಹೇಳಿದ್ದಾರೆ.
ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ, ಪುನಿಯಾ ಅವರು ಗೃಹ ಸಚಿವ ಅಮಿತ್ ಶಾ ಅವರನ್ನು ಶನಿವಾರ ತಡರಾತ್ರಿ ಭೇಟಿಯಾದ ಬಗ್ಗೆ ಮಾತನಾಡದಂತೆ ಪ್ರತಿಭಟನಾ ನಿರತ ಕುಸ್ತಿಪಟುಗಳಿಗೆ ಭಾರತ ಸರ್ಕಾರದಿಂದ ಕೇಳಲಾಗಿದೆ ಎಂದು ಹೇಳಿದ್ದಾರೆ.
ಬ್ರಿಜ್ ಭೂಷಣ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿರುವವರಲ್ಲಿ ಅಪ್ರಾಪ್ತ ವಯಸ್ಕಳು ತನ್ನ ದೂರನ್ನು ಹಿಂಪಡೆದಿದ್ದಾರೆ ಎಂಬ ವರದಿಗಳನ್ನು ಮಾಧ್ಯಮಗಳಲ್ಲಿ ಬಿತ್ತರಿಸಲಾಯಿತು. ಈ ಬಗ್ಗೆ ಮಾತನಾಡಿದ ಪುನಿಯಾ, ”ಪೋಸ್ಕೋ ಕಾಯ್ದೆಯಡಿ ಬ್ರಿಜ್ ಭೂಷಣ್ ವಿರುದ್ದ ಪ್ರಕರಣ ದಾಖಲಿಸಿರುವ ಸಂತ್ರಸ್ತೆಯ ತಂದೆ ಮತ್ತು ಆ ಬಾಲಕಿ, ದೂರನ್ನು ಹಿಂಪಡೆದಿಲ್ಲ, ಆದರೆ ಬ್ರಿಜ್ ಭೂಷಣ್ ವಿರುದ್ಧ ನ್ಯಾಯಾಲಯಕ್ಕೆ ಸಂಬಂಧಿತ ವಿವರಗಳೊಂದಿಗೆ ಹೊಸದಾಗಿ ಸಲ್ಲಿಸಿದ್ದಾಳೆ” ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರತಿಭಟನಾ ನಿರತ ಕುಸ್ತಿಪಟುಗಳಾದ ಬಜರಂಗ್ ಪುನಿಯಾ ಮತ್ತು ಸಾಕ್ಷಿ ಮಲಿಕ್ ಭಾರತೀಯ ರೈಲ್ವೇಯಲ್ಲಿ ತಮ್ಮ OSD ಸೇವೆಗಳನ್ನು ಪುನರಾರಂಭಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ”ನಾವು ಎಲ್ಲವನ್ನೂ ಪಣಕ್ಕಿಟ್ಟಿದ್ದೇವೆ ಮತ್ತು ನಮ್ಮ ಆಂದೋಲನದಲ್ಲಿ ಒಂದು ಅಡಚಣೆಯಾದರೆ ನಮ್ಮ ಸರ್ಕಾರಿ ಉದ್ಯೋಗಗಳನ್ನು ತ್ಯಜಿಸಲು ಸಿದ್ಧರಿದ್ದೇವೆ. ಇದು ದೊಡ್ಡ ವಿಷಯವಲ್ಲ” ಎಂದು ಅವರು ಹೇಳಿದರು.
”ಇದು ಗೌರವ ಮತ್ತು ಘನತೆಗಾಗಿ ಹೋರಾಟವಾಗಿದೆ. ನಾವು ವದಂತಿಗಳಿಗೆ ಹೆದರುವುದಿಲ್ಲ, ಅಥವಾ ರೈಲ್ವೇ ಉದ್ಯೋಗವನ್ನು ಕಳೆದುಕೊಳ್ಳುತ್ತೇವೆ. ಯಾರಾದರೂ ನಮ್ಮ ಮೇಲೆ ಒತ್ತಡ ಹೇರಿದರೆ ನಾವು ಕೆಲಸವನ್ನು ತೊರೆಯುತ್ತೇವೆ” ಎಂದು ಪುನಿಯಾ ಸುದ್ದಿವಾಹಿನಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಬ್ರಿಜ್‌ಭೂಷಣ್ ವಿರುದ್ಧದ ಪೋಕ್ಸೋ ಪ್ರಕರಣ ಹಿಂಪಡೆದಿಲ್ಲ; ಮಾಧ್ಯಮಗಳ ಸುಳ್ಳು ಸುದ್ದಿಗೆ ದೂರುದಾರರ ಸ್ಪಷ್ಟನೆ
”ಬಿಜೆಪಿ ಸಂಸದ ಬ್ರಿಜ್ ಭೂಷಣ್ ವಿರುದ್ಧದ ದೂರಿನ ಬಗ್ಗೆ ಕೇಂದ್ರ ಗೃಹ ಸಚಿವರೊಂದಿಗೆ ಯಾವುದೇ ಡೀಲ್ ಮಾಡಿಕೊಂಡಿಲ್ಲ” ಎಂದು ಪುನಿಯಾ ಎನ್‌ಡಿಟಿವಿಗೆ ತಿಳಿಸಿದ್ದಾರೆ.
”ಪ್ರತಿಭಟನಾ ಚಳವಳಿಯು ಸತ್ತು ಹೋಗಿಲ್ಲ, ಅದು ಮುಂದುವರಿಯುತ್ತದೆ. ಅದನ್ನು ಹೇಗೆ ಮುಂದಕ್ಕೆ ಕೊಂಡೊಯ್ಯಬೇಕು ಎಂಬುದರ ಕುರಿತು ನಾವು ಕಾರ್ಯತಂತ್ರ ರೂಪಿಸುತ್ತಿದ್ದೇವೆ” ಎಂದು ಪುನಿಯಾ ಹೇಳಿದರು.
”ಪ್ರತಿಭಟನಾ ನಿರತ ಕುಸ್ತಿಪಟುಗಳು ಸರ್ಕಾರದೊಂದಿಗೆ ‘ಡೀಲ್’ ಮಾಡಿಕೊಂಡಿದ್ದಾರೆ ಎಂದು ಈ ಹಿಂದೆ ವರದಿಗಳು ಬಂದಿದ್ದವು. ಆದರೆ ನಾವು ಸಭೆಯಲ್ಲಿನ ಚಚೆಯ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡದಂತೆ ಸರ್ಕಾರ ಕೇಳಿಕೊಂಡಿತ್ತು. ಹಾಗಾಗಿ ನಾವುಗಳು ಮಾತನಾಡಿರಲಿಲ್ಲ. ಆದರೆ, ಆನಂತರ ಸರ್ಕಾರದೊಳಗಿನವರೇ ಚರ್ಚೆಯ ವಿಚಾರವನ್ನು ಸೋರಿಕೆ ಮಾಡಿದ್ದಾರೆ” ಎಂದು ಪುನಿಯಾ ಹೇಳಿದರು.
ಪ್ರತಿಭಟನಾ ನಿರತ ಕುಸ್ತಿಪಟುಗಳು ಸರ್ಕಾರದ ಪ್ರತಿಕ್ರಿಯೆಯಿಂದ ತೃಪ್ತರಾಗಿಲ್ಲ, ಅವರ ಬೇಡಿಕೆಗಳಿಗೆ ಸರ್ಕಾರವು ಮನ್ನಣೆ ನೀಡುತ್ತಿಲ್ಲ ಎಂದು ಪುನಿಯಾ ಅಸಮಧಾನ ಹೊರಹಾಕಿದರು.
ಪ್ರತಿಭಟನಾ ನಿರತ ಕುಸ್ತಿಪಟುಗಳಾದ ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್, ಸಂಗೀತಾ ಫೋಗಟ್ ಮತ್ತು ಸತ್ಯವರ್ತ್ ಕಡಿಯಾನ್ ಸೋಮವಾರ ರಾತ್ರಿ 11 ಗಂಟೆಗೆ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದರು. ಸಭೆ ಒಂದು ಗಂಟೆಗೂ ಹೆಚ್ಚು ಕಾಲ ನಡೆಯಿತು ಎಂದು ವರದಿಯಾಗಿದೆ.
ಕಾನೂನು ಎಲ್ಲರಿಗೂ ಒಂದೇ ಆಗಿರುತ್ತದೆ ಎಂದು ಅಮಿತ್ ಶಾ ಕುಸ್ತಿಪಟುಗಳಿಗೆ ಭರವಸೆ ನೀಡಿದರು. ”ಕಾನೂನು ತನ್ನದೇ ಆದ ಕ್ರಮವನ್ನು ತೆಗೆದುಕೊಳ್ಳಲಿ” ಎಂದು ಅವರು ಕುಸ್ತಿಪಟುಗಳಿಗೆ ಹೇಳಿದರು. ಅವರು (ಶಾ) ಕ್ರಮ ತಗೆದುಕೊಳ್ಳುವ ಬಗ್ಗೆ ಚರ್ಚಿಸುತ್ತಿದ್ದಾರೆ. ಹಾಗಂತ ಅವರು ಖಂಡಿತವಾಗಿಯೂ ಕ್ರಮ ತೆಗೆದುಕೊಳ್ಳುತ್ತಾರೆ ಎನ್ನುವ ಭರವಸೆಗಳ ಆಧಾರದ ಮೇಲೆ ಹಿಂತೆಗೆದುಕೊಳ್ಳುವುದಿಲ್ಲ” ಎಂದು ಹೇಳಿದರು.
”ಸರ್ಕಾರದ ಭರವಸೆಗಳ ಆಧಾರದ ಮೇಲೆ ನಾವು ಜನವರಿಯಲ್ಲಿ ಹಿಂತಿರುಗಿದ್ದೇವೆ, ಆದರೆ ನಂತರ ಸುಳ್ಳುಗಾರರು ಎಂದು ಘೋಷಿಸಲಾಯಿತು” ಎಂದು ಪುನಿಯಾ ಹೇಳಿದರು.


