ಭಾರತೀಯ ಒಲಿಂಪಿಕ್ ಸಂಸ್ಥೆಯು (ಐಒಎ), ಭಾರತ ಕುಸ್ತಿ ಫೆಡರೇಷನ್ ಚುನಾವಣೆಯನ್ನು ಜುಲೈ 4ರಂದು ನಡೆಸಲು ನಿರ್ಧರಿಸಿದೆ. ಚುನಾವಣಾ ಅಧಿಕಾರಿಯನ್ನಾಗಿ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಮಹೇಶ್ ಮಿತ್ತಲ್ ಕುಮಾರ್ ಅವರನ್ನು ಆಯ್ಕೆ ಮಾಡಿದೆ.
ಲೈಂಗಿಕ ಕಿರುಕುಳದ ಆರೋಪಿ, ಭಾರತೀಯ ಕುಸ್ತಿ ಫೆಡರೇಷನ್‌ನ ನಿರ್ಗಮಿತ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಕುಸ್ತಿಪಟುಗಳು ಹೋರಾಟದಲ್ಲಿ ತೊಡಗಿದ್ದು, ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಜುಲೈ 7ರಂದು ಅವರ ಜೊತೆ ಮಾತುಕತೆ ನಡೆಸಿದ್ದರು. ಈ ವೇಳೆ ಅವರು ನನೆಗುದಿಗೆ ಬಿದ್ದಿರುವ ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ಚುನಾವಣೆಯನ್ನು ಜೂನ್ 30ರೊಳಗೆ ನಡೆಸುವುದಾಗಿ ಹೇಳಿದ್ದರು. ಆದರೆ, ಡಬ್ಲುಎಫ್‌ಐ ವಿಶೇಷ ಮಹಾಸಭೆಯನ್ನು ಕರೆಯಲು 21 ದಿನಗಳ ಮೊದಲು ನೋಟಿಸ್ ನೀಡಬೇಕಾಗಿರುವ ಕಾರಣ ಜುಲೈ 4ರಂದು ಚುನಾವಣೆ ನಡೆಸಲು ನಿರ್ಧರಿಸಲಾಗಿದೆ.
ವಾರ್ಷಿಕ ಮಹಾಸಭೆ ಅಥವಾ ವಿಶೇಷ ಮಹಾಸಭೆ ಕರೆದು ಚುನಾವಣೆ ನಡೆಸಬಹುದಾಗಿದೆ. ಫೆಡರೇಷನ್‌ನ ನಿರ್ಗಮಿತ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಕುಟುಂಬ ಸದಸ್ಯರಿಗೆ ಅಥವಾ ಬೆಂಬಲಿಗರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಸರ್ಕಾರ ಅವಕಾಶ ನೀಡುವುದಿಲ್ಲ ಎಂದು ಸಚಿವರು ಕುಸ್ತಿಪಟುಗಳಿಗೆ ಆಶ್ವಾಸನೆ ನೀಡಿದ್ದರು. ಹಾಗಾಗಿ ಕುಸ್ತಿಪಟುಗಳು ಜೂನ್ 15ರವರೆಗೆ ಹೋರಾಟ ಸ್ಥಗಿತಗೊಳಿಸಲು ನಿರ್ಧಾರ ಮಾಡಿದ್ದಾರೆ.
ಐಒಎ ಸಿಇಒ ಆಗಿರುವ ಕಲ್ಯಾಣ್ ಚೌಬೆ ಅವರು ನ್ಯಾ.ಮಿತ್ತಲ್ ಕುಮಾರ್ ಅವರಿಗೆ ನೇಮಕದ ವಿಷಯವನ್ನು ಪತ್ರಮುಖೇನ ತಿಳಿಸಿದ್ದು, ಹುದ್ದೆ ವಹಿಸಲು ಸಮ್ಮತಿಸುವಂತೆ ಮನವಿ ಮಾಡಿದ್ದಾರೆ. ಆದರೆ ನ್ಯಾ.ಮಿತ್ತಲ್ ಕುಮಾರ್ ಅವರು ವಿಶೇಷ ಮಹಾಸಭೆಯ ದಿನಾಂಕದ ಬಗ್ಗೆ ತಮ್ಮದೇ ನಿರ್ಧಾರ ಕೈಗೊಳ್ಳಬಹುದು. ಜುಲೈ 4ರಂದೇ ಚುನಾವಣೆ ನಡೆಸಬೇಕೇ ಅಥವಾ ಕೆಲದಿನಗಳ ನಂತರ ನಡೆಸಬೇಕೇ ಎಂಬುದು ಅವರ ನಿರ್ಧಾರಕ್ಕೆ ಬಿಟ್ಟಿದ್ದು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಅಜಯ್ ಮಿಶ್ರಾರಂತೆ ಬ್ರಿಜ್ ಭೂಷಣ್‌ರನ್ನು ಬಿಡಲು ಸಾಧ್ಯವಿಲ್ಲ: ರೈತರ ಪ್ರತಿಭಟನೆಯಲ್ಲಿ ಕುಸ್ತಿಪಟು ಬಜರಂಗ್ ಹೇಳಿಕೆ
ಈ ಕುಸ್ತಿ ಫಡರೇಷನ್‌ಗೆ ಕೇಂದ್ರಾಡಳಿತ ಪ್ರದೇಶ ಚಂಡೀಗಢ ಮತ್ತು ದೆಹಲಿ ಸೇರಿದಂತೆ 25 ಸಂಯೋಜಿತ ಘಟಕಗಳಿವೆ. ಪ್ರತಿ ಘಟಕಗಳು ಇಬ್ಬರು ಪ್ರತಿನಿಧಿಗಳನ್ನು ಕಳುಹಿಸಬಹುದು. ಪ್ರತಿಯೊಬ್ಬರೂ ಮತ ಚಲಾಯಿಸಲು ಅವಕಾಶವಿದೆ. ಚುನಾವಣೆಯಲ್ಲಿ ಒಟ್ಟು 50 ಜನ ಮತದಾನ ಮಾಡಲಿದ್ದಾರೆ.
ರಾಜ್ಯ ಘಟಕಗಳು ಕಾರ್ಯಕಾರಿ ಸಮಿತಿಯಲ್ಲಿರುವವರನ್ನು ಮಾತ್ರ ಪ್ರತಿನಿಧಿಗಳನ್ನಾಗಿ ನಾಮನಿರ್ದೇಶನ ಮಾಡಬೇಕಾಗುತ್ತದೆ ಎಂದು ಕುಸ್ತಿ ಫೆಡರೇಷನ್ ನಿಯಮಾವಳಿ ಹೇಳುತ್ತದೆ. ಹಾಗಾಗಿ ಬ್ರಿಜ್ ಭೂಷಣ್ ಸಿಂಗ್ ಅವರ ಬೆಂಬಲಿಗರು ಅರ್ಹ ಅಭ್ಯರ್ಥಿಗಳಾಗಿದ್ದು ಚುನಾವಣೆಗೆ ನಾಮಪತ್ರ ಸಲ್ಲಿಸಿದರೆ ಏನಾಗಬಹುದು ಎನ್ನುವ ಕುತೂಹಲವೂ ಮೂಡಿದೆ.
ಆರೋಪಿ ಬ್ರಿಜ್‌ಭೂಷಣ್ ಸಿಂಗ್ ಅವರ ಪುತ್ರ ಕರಣ್ ಈ ಹಿಂದಿನ ಡಬ್ಲ್ಯುಎಫ್‌ಐ ಆಡಳಿತವರ್ಗದಲ್ಲಿ ಉಪಾಧ್ಯಕ್ಷ ಸ್ಥಾನದಲ್ಲಿದ್ದರು. ಅವರು ಉತ್ತರ ಪ್ರದೇಶ ಕುಸ್ತಿ ಸಂಸ್ಥೆಯಲ್ಲಿ ಸಕ್ರಿಯರಾಗಿದ್ದಾರೆ. ಸಿಂಗ್ ಅವರ ಅಳಿಯ ವಿಶಾಲ್ ಸಿಂಗ್ ಅವರು ಬಿಹಾರ ಕುಸ್ತಿ ಸಂಸ್ಥೆ ಅಧ್ಯಕ್ಷರಾಗಿದ್ದಾರೆ. ಇವರೆನ್ನೆಲ್ಲ ಇದೀಗ ಕೈಬಿಡುವ ಸಾಧ್ಯತೆ ಹೆಚ್ಚಾಗಿದೆ.
ಜುಲೈ 7ರಂದು ಅನುರಾಗ್ ಠಾಕೂರ್ ಅವರನ್ನು ಕುಸ್ತಿಪಟುಗಳು ಭೇಟಿಯಾದರು. ಈ ವೇಳೆ, ಭಾರತ ಕುಸ್ತಿ ಒಕ್ಕೂಟಕ್ಕೆ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ಹಾಗೂ ಮಹಿಳಾ ಮುಖ್ಯಸ್ಥರ ನೇಮಕ ಸೇರಿದಂತೆ ಐದು ಬೇಡಿಕೆಗಳನ್ನು ಕುಸ್ತಿಪಟುಗಳು ಸಚಿವರಿಗೆ ಸಲ್ಲಿಸಿದರು. ಬ್ರಿಜ್ ಭೂಷಣ್ ಸಿಂಗ್ ಅಥವಾ ಅವರ ಕುಟುಂಬ ಸದಸ್ಯರು ಡಬ್ಲ್ಯುಎಫ್‌ಐ ಭಾಗವಾಗಿರಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದರು.
ಕುಸ್ತಿಪಟುಗಳು ಕಳೆದ ತಿಂಗಳು ಭಾರತದ ಹೊಸ ಸಂಸತ್ತಿನ ಕಟ್ಟಡವನ್ನು ಉದ್ಘಾಟಿಸಿದ ದಿನದಂದು ತಮ್ಮ ಪ್ರತಿಭಟನೆಯ ಬಗ್ಗೆ ತಮ್ಮ ವಿರುದ್ಧ ಪೋಲೀಸ್ ಪ್ರಕರಣವನ್ನು ದಾಖಲಿಸಿದ್ದಾರೆ. ಅವೆಲ್ಲ ಪ್ರಕರಣಗಳನ್ನು ತಗೆಯಬೇಕು. ಬ್ರಿಜ್ ಭೂಷಣ್ ಸಿಂಗ್ ಬಂಧನಕ್ಕೆ ಅವರು ತಮ್ಮ ಬೇಡಿಕೆಯನ್ನು ಪುನರುಚ್ಚರಿಸಿದ್ದರು.



its just for upcoming election gimmick, other wise they like to save their own on any cost