ಮಧ್ಯಪ್ರದೇಶದ ಬಿಜೆಪಿ ನಾಯಕನೊಬ್ಬ ಆದಿವಾಸಿ ಬುಡಕಟ್ಟು ಸಮುದಾಯದ ಯುವಕನ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಅಮಾನುಷ ಘಟನೆಯನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಖಂಡಿಸಿದ್ದಾರೆ.
ಬಿಜೆಪಿ ಆಡಳಿತದಲ್ಲಿ ಆದಿವಾಸಿ ಸಹೋದರ ಸಹೋದರಿಯರ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಮಧ್ಯಪ್ರದೇಶದ ಬಿಜೆಪಿ ನಾಯಕನ ಅಮಾನವೀಯ ಅಪರಾಧದಿಂದ ಇಡೀ ಮಾನವೀಯತೆ ತಲೆತಗ್ಗಿಸುವಂತೆ ಮಾಡಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಇದು ಆದಿವಾಸಿಗಳು ಮತ್ತು ದಲಿತರ ಮೇಲಿನ ಬಿಜೆಪಿಯ ದ್ವೇಷದ ಅಸಹ್ಯಕರ ಮುಖ ಮತ್ತು ನೈಜ ಸ್ವರೂಪ ಎಂದು ಅವರು ಹೇಳಿದ್ದಾರೆ.
भाजपा राज में आदिवासी भाइयों और बहनों पर अत्याचार बढ़ते ही जा रहे हैं।
मध्यप्रदेश में एक भाजपा नेता के अमानवीय अपराध से सारी इंसानियत शर्मसार हुई है।
यह भाजपा का आदिवासियों और दलितों के प्रति नफ़रत का घिनौना चेहरा और असली चरित्र है!
— Rahul Gandhi (@RahulGandhi) July 5, 2023
ಮಧ್ಯಪ್ರದೇಶದ ಸಿಧಿ ಬಿಜೆಪಿ ಶಾಸಕ ಕೇದಾರ್ ನಾಥ್ ಶುಕ್ಲಾರವರ ಬೆಂಬಲಿಗ ಎನ್ನಲಾದ ಪ್ರವೇಶ್ ಶುಕ್ಲಾ ಎಂಬಾತ ಆದಿವಾಸಿ ಬುಡಕಟ್ಟು ಸಮುದಾಯದ ಯುವಕನ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಅಮಾನುಷ ಘಟನೆ ಸಿಧಿ ಜಿಲ್ಲೆಯಲ್ಲಿ ವರದಿಯಾಗಿತ್ತು. ಮನುಷ್ಯರೆಲ್ಲರೂ ತಲೆತಗ್ಗಿಸಬೇಕಾದ ಅಮಾನವೀಯ ಘಟನೆಯ ವಿಡಿಯೋ ವೈರಲ್ ಆದ ಬೆನ್ನಲ್ಲೇ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಆತನ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಆರೋಪಿ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿರುವ ಪೊಲೀಸರು, NSA ಜೊತೆಗೆ, ಐಪಿಸಿ ಸೆಕ್ಷನ್ 294 (ಅಶ್ಲೀಲ ಕೃತ್ಯಗಳು ಮತ್ತು ಹಾಡುಗಳು), 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಮತ್ತು SC/ST (ದೌರ್ಜನ್ಯ ತಡೆ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.
ಬಿಎಸ್‌ಪಿ ವರಿಷ್ಠೆ ಮಾಯಾವತಿಯವರು ಟ್ವೀಟ್ ಮಾಡಿ, ”ಮಧ್ಯಪ್ರದೇಶದ ಬಿಜೆಪಿ ಸರ್ಕಾರವು ಆ ಕ್ರಿಮಿನಲ್ ವಿರುದ್ಧ ಎನ್‌ಎಸ್‌ಎ ಮಾತ್ರವಲ್ಲದೆ ಆತನ ಆಸ್ತಿಯನ್ನು ಮುಟ್ಟುಗೋಲು ಹಾಕುವ ಕ್ರಮ ತೆಗೆದುಕೊಳ್ಳಬೇಕು ಮತ್ತು ಅವರು ತಮ್ಮ ಪಕ್ಷಕ್ಕೆ ಸೇರಿದವರು ಎಂದು ಏಕೆ ಹೇಳುತ್ತಿಲ್ಲ. ಇಂತಹ ಘಟನೆಗಳು ಎಲ್ಲರಿಗೂ ನಾಚಿಕೆ ತರುತ್ತವೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ; ಆದಿವಾಸಿ ಯುವಕನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಬಿಜೆಪಿ ಮುಖಂಡನ ಮೇಲೆ NSA ಪ್ರಕರಣ ದಾಖಲು


