ಸಚಿವ ಸ್ಥಾನ ಸಿಗದಿದ್ದುದಕ್ಕೆ ತೀವ್ರ ಬೇಸರಗೊಂಡಿರುವ ಗೂಳಿಹಟ್ಟಿ ಶೇಖರ್ ಗಳಗಳನೇ ಅತ್ತುಬಿಟ್ಟಿದ್ದಾರೆ. ಬಿಜೆಪಿ ಸೇರಿ ದೊಡ್ಡ ತಪ್ಪು ಮಾಡಿದ್ದೇನೆ, ಪಕ್ಷೇತರನಾಗಿಯೇ ಇರಬೇಕಿತ್ತು ಎಂದು ಅವಲತ್ತುಕೊಂಡಿರುವ ಅವರು ಬಹಿರಂಗವಾಗಿ ಆಕ್ರೋಶ ಹೊರಹಾಕಿದ್ದಾರೆ.
ಬಿಜೆಪಿಗೆ ಸೇರಿದಾಗಿನಿಂದಲೂ ಪ್ರತಿ ದಿನ ಶೋಷಣೆ ನಡೆಯುತ್ತಿದೆ. ತೀವ್ರ ಅನ್ಯಾಯವಾಗಿದೆ. ಈಗ ಅದಕ್ಕೆಲ್ಲಾ ನ್ಯಾಯ ಒದಗಿಸುವ ಸಂದರ್ಭ ಬಂದಿತ್ತು. ಆದರೆ ಈ ಬಾರಿಯೂ ಸಚಿವ ಸ್ಥಾನ ನೀಡದೇ ವಂಚಿಸಿದ್ದಾರೆ ಎಂದು ದೂರಿದ್ದಾರೆ.
2008ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ನಾವೆಲ್ಲಾ ಕಷ್ಟಪಟ್ಟಿದ್ದೇವೆ. ಆದರೆ ಅವರಿಗೆ ಕೃತಜ್ಞತೆ ಇಲ್ಲವೇ? ಸಚಿವ ಸ್ಥಾನ ಕೊಡಿ ಎಂದರೆ ನಿಮಗೆ ಟಿಕೇಟ್ ಕೊಟ್ಟಿದ್ದೇ ಹೆಚ್ಚು ಮಂತ್ರಿ ಸೀಟ್ ಬೇರೆ ಬೇಕಾ ಎಂದು ಕುಹಕವಾಡುತ್ತಾರೆ ಎಂದು ಗೂಳಿಹಟ್ಟಿ ಶೇಖರ್ ಆರೋಪಿಸಿದ್ದಾರೆ.
ಇನ್ನು ಗೂಳಿಹಟ್ಟಿ ಶೇಖರ್ ರವರಿಗೆ ಸಚಿವ ಸ್ಥಾನ ಸಿಗದುದ್ದರಿಂದ ಅವರ ಅಭಿಮಾನಿಗಳು ಹೊಸದುರ್ಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ರಸ್ತೆ ತಡೆ ನಡೆಸಿ, ಟೈರ್ ಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.


