ಚೀನಾದೊಂದಿಗಿನ ಗಡಿ ಪರಿಸ್ಥಿತಿಯ ಕುರಿತು ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ ಬುಧವಾರ ವಾಗ್ದಾಳಿ ನಡೆಸಿದೆ. ‘ಭಾರತ ಮಾತೆಯನ್ನು’ ರಕ್ಷಿಸುವ ವಿಚಾರದಲ್ಲಿ ಮಾತನಾಡುವುದನ್ನು ಬಿಟ್ಟು ಮೋದಿ ಸರ್ಕಾರ ಮಾಡಿದ್ದೇನು? ಗಡಿಯಲ್ಲಿ ಹಿಂದಿನ ಯಥಾಸ್ಥಿತಿಯನ್ನು ಯಾವಾಗ ಮರುಸ್ಥಾಪಿಸುತ್ತದೆ? ಎಂದು ಕೇಳಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ, ಅವರು ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ, ”ಚೀನಾದೊಂದಿಗೆ 19 ಸುತ್ತಿನ ಮಾತುಕತೆ ವಿಫಲವಾಗಿದೆ, ಕಳೆದ 3 ವರ್ಷಗಳಿಂದ ಪ್ರತಿ ಬಾರಿಯೂ ಮಾತುಕತೆ ವಿಫಲವಾಗಿದೆ” ಎಂದು ಹೇಳಿದ್ದಾರೆ.
ಎರಡು ದಿನಗಳ ಮಿಲಿಟರಿ ಮಾತುಕತೆಯಲ್ಲಿ, ಭಾರತ ಮತ್ತು ಚೀನಾ ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕಾಪಾಡುವುದರ ಜೊತೆಗೆ ಪೂರ್ವ ಲಡಾಖ್‌ನ ವಾಸ್ತವಿಕ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಉಳಿದ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಒಪ್ಪಿಕೊಂಡಿವೆ ಎಂದು ಜಂಟಿ ಹೇಳಿಕೆ ಮಂಗಳವಾರ ಬಿಡುಗಡೆ ಮಾಡಿವೆ.
”2020ರ ಏಪ್ರಿಲ್‌ನಲ್ಲಿ ಇದ್ದ ಯಥಾಸ್ಥಿತಿಯನ್ನು ಮೂರು ವರ್ಷ ಮತ್ತು ಮೂರು ತಿಂಗಳವರೆಗೆ ಪುನಃಸ್ಥಾಪಿಸಲಾಗಿಲ್ಲ” ಎಂದು ಸುರ್ಜೆವಾಲಾ ಅವರು ಹೇಳಿದರು.
”ಭಾರತೀಯ ಪಡೆಗಳು ಆಯಕಟ್ಟಿನ DBO ಏರ್‌ಸ್ಟ್ರಿಪ್ ಬಳಿ ಇರುವ ಡೆಪ್ಸಾಂಗ್ ಬಯಲು ಪ್ರದೇಶದ 65 ಪೆಟ್ರೋಲಿಂಗ್ ಪಾಯಿಂಟ್‌ಗಳಲ್ಲಿ 26 ‘ಪೆಟ್ರೋಲ್’ ಹೊಂದಲು ಸಾಧ್ಯವಾಗಿಲ್ಲ! ನಮ್ಮ ಭೂಪ್ರದೇಶದ ಒಳಗೆ ‘ಬಾಟಲ್‌ನೆಕ್’ ಎಂದು ಕರೆಯಲ್ಪಡುವ Y ಜಂಕ್ಷನ್‌ನಲ್ಲಿ ಚೀನೀಯರು ಭಾರತೀಯ ಸೈನಿಕರನ್ನು ನಿರ್ಬಂಧಿಸುವುದನ್ನು ಮುಂದುವರೆಸಿದ್ದಾರೆ. 10, 11, 11A, 12, 13 ಪೆಟ್ರೋಲಿಂಗ್ ಪಾಯಿಂಟ್‌ಗಳಿಗೆ ಪ್ರವೇಶವನ್ನು ಚೀನಿಯರು ನಿರ್ಬಂಧಿಸಿದ್ದಾರೆ” ಎಂದು ಕಾಂಗ್ರೆಸ್ ನಾಯಕ ಸುರ್ಜೆವಾಲಾ ಟ್ವಿಟರ್‌ನಲ್ಲಿ ಹೇಳಿದ್ದರು.
ಮೋದಿ ಸರ್ಕಾರವನ್ನು ಪ್ರಶ್ನಿಸಿದ ಸುರ್ಜೆವಾಲಾ, ”ಚೀನೀಯರು ನಿರ್ಲಜ್ಜವಾಗಿ ಆಕ್ರಮಿಸಿಕೊಂಡಿರುವ ಭಾರತೀಯ ಪ್ರದೇಶವನ್ನು ಯಾವಾಗ ತೆರವು ಮಾಡಲಾಗುತ್ತದೆ? ಚೀನಾದ ಸೇನೆಯನ್ನು ಯಾವಾಗ ಹಿಂದಕ್ಕೆ ತಳ್ಳಲಾಗುತ್ತದೆ? ಚೀನೀಯರು ಆಕ್ರಮಿಸಿಕೊಂಡಿರುವ ಸುಮಾರು 1,000 ಚದರ ಕಿಲೋಮೀಟರ್ ಭಾರತೀಯ ಪ್ರದೇಶವನ್ನು ಬಿಟ್ಟುಕೊಡಲು ಮೋದಿ ಸರ್ಕಾರವು ರಾಜಿ ಮಾಡಿಕೊಂಡಿದೆಯೇ?” ಎಂದು ಪ್ರಶ್ನೆ ಮಾಡಿದ್ದಾರೆ.
”ಯಾರೂ ಭಾರತೀಯ ಪ್ರದೇಶವನ್ನು ಪ್ರವೇಶಿಸದಿದ್ದರೆ, ಚೀನಿಯರೊಂದಿಗೆ ಏಕೆ ಮಾತುಕತೆ ನಡೆಸಲಾಗುತ್ತಿದೆ? ಎಂದು ಕೇಳಿದ್ದಾರೆ.
”’ಭಾರತ ಮಾತೆಯನ್ನು’ ರಕ್ಷಿಸುವ ವಿಚಾರದಲ್ಲಿ ಮಾತನಾಡುವುದನ್ನು ಬಿಟ್ಟು ಮೋದಿ ಸರ್ಕಾರ ಮಾಡಿದ್ದೇನು?” ಎಂದು ಚೀನಾದೊಂದಿಗಿನ ಗಡಿ ಪರಿಸ್ಥಿತಿಯ ಬಗ್ಗೆ ಕೇಂದ್ರ ಸರ್ಕಾರವನ್ನು ಕಾಂಗ್ರೆಸ್ ಪ್ರಶ್ನಿಸಿದೆ.
ಇದನ್ನೂ ಓದಿ: ನೆಹರೂ ಸ್ಮಾರಕ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯದ ಹೆಸರು ಬದಲಾವಣೆ: ಕಾಂಗ್ರೆಸ್ ಆಕ್ಷೇಪ


