ಇಬ್ಬರು ಮುಸ್ಲಿಂ ಪ್ರಯಾಣಿಕರಿಗೆ ನಮಾಝ್ ಮಾಡಲು ಬಸ್‌ನ್ನು ನಿಲ್ಲಿಸಿ ಅಮಾನಾತಾಗಿದ್ದ ಬಸ್ ಕಂಡೆಕ್ಟರ್ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಮೈನ್‌ಪುರಿ ಬಳಿ ತನ್ನ ನಿವಾಸದ ಪಕ್ಕದಲ್ಲಿ ರೈಲ್ವೇ ಟ್ರಾಕ್‌ನಲ್ಲಿ ಕಂಡೆಕ್ಟರ್ ಮೋಹಿತ್ ಯಾದವ್ ಅವರ ಮೃತದೇಹ ಪತ್ತೆಯಾಗಿದೆ. ಬಸ್ ಕಂಡಕ್ಟರ್ ಸಾವನ್ನು ಖಂಡಿಸಿ ಬರೇಲಿಯಲ್ಲಿ ಗುತ್ತಿಗೆ ಕಾರ್ಮಿಕರು ಪ್ರತಿಭಟನೆ ನಡೆಸಿದ್ದಾರೆ.
ಮೋಹಿತ್ ಯಾದವ್ (32) ಕೌಶಂಬಿಯಿಂದ ದೆಹಲಿಗೆ ತೆರಳುತ್ತಿದ್ದ UPSRTC ಬಸ್‌ನ ಕಂಡಕ್ಟರ್ ಆಗಿದ್ದರು. ದೆಹಲಿಯಿಂದ ಕೌಶಂಬಿಗೆ ತೆರಳುವಾಗ ರಾಂಪುರ ಬಳಿ ಕಂಡಕ್ಟರ್ ಮೋಹಿತ್ ಯಾದವ್ ಅವರು ಚಾಲಕ ಕೆಪಿ ಸಿಂಗ್ ಅವರಿಗೆ ಎರಡು ನಿಮಿಷಗಳ ಕಾಲ ಬಸ್ ನಿಲ್ಲಿಸುವಂತೆ ಹೇಳಿದ್ದಾರೆ ಮತ್ತು ಇಬ್ಬರು ಪ್ರಯಾಣಿಕರಿಗೆ ನಮಾಜ್ ಮಾಡಲು ಅವಕಾಶ ನೀಡಿದ್ದರು.
ಇದಕ್ಕೆ ಬಸ್ಸಿನ ಇತರ ಪ್ರಯಾಣಿಕರು ಕಂಡಕ್ಟರ್ ಮತ್ತು ಬಸ್ ಚಾಲಕನ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಘಟನೆಯು ಜೂನ್ 3, 2023ರಂದು ಸಂಭವಿಸಿದೆ. ಘಟನೆಯ ನಂತರ ಕಂಡಕ್ಟರ್ ಮತ್ತು ಬಸ್ ಚಾಲಕನನ್ನು ಅಮಾನತುಗೊಳಿಸಲಾಗಿತ್ತು.
ಇಬ್ಬರು ಮುಸ್ಲಿಂ ಪ್ರಯಾಣಿಕರಿಗೆ ನಮಾಜ್ ಮಾಡಲು ಅವಕಾಶ ನೀಡಿದ ಕಾರಣಕ್ಕಾಗಿ ಅಮಾನತುಗೊಂಡ ನಂತರ ಕಂಡಕ್ಟರ್ ಮೋಹಿತ್ ಯಾದವ್ ಒತ್ತಡಕ್ಕೆ ಒಳಗಾಗಿದ್ದರು. ಮೋಹಿತ್ ಭಾನುವಾರ (ಆಗಸ್ಟ್ 27) ರಾತ್ರಿ ನಾಪತ್ತೆಯಾಗಿದ್ದರು. ಅವರ ಮೃತದೇಹ ಆಗಸ್ಟ್ 28 ರಂದು ಅವರ ಮನೆ ಸಮೀಪದ ರೈಲ್ವೆ ಹಳಿಯಲ್ಲಿ ಪತ್ತೆಯಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ವೀಡಿಯೊ ಆಧಾರದ ಮೇಲೆ ಮೋಹಿತ್ ಯಾದವ್ ಅವರನ್ನು ಅಮಾನತುಗೊಳಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ವಿಚಾರಣೆ ನಡೆಸಿಲ್ಲ. ಅಲ್ಲದೆ ಮೋಹಿತ್ ಯಾದವ್ ಮತ್ತು ಚಾಲಕ ಕೆ ಪಿ ಸಿಂಗ್ ತಮ್ಮ ಅಮಾನತು ವಿರುದ್ಧ ಮೇಲ್ಮನವಿ ಸಲ್ಲಿಸಲಿಲ್ಲ.
ಮೋಹಿತ್ ಯಾದವ್ ಮತ್ತು ಕೆ ಪಿ ಸಿಂಗ್ ವಿರುದ್ಧ ಅಧಿಕಾರಿಗಳು ತೆಗೆದುಕೊಂಡ ಕ್ರಮ ಸಮರ್ಥನೀಯವಲ್ಲ ಎಂದು ಯುಪಿಎಸ್‌ಆರ್‌ಟಿಸಿ ನೌಕರರ ಸಂಘ ಹೇಳಿದೆ. ಈ ವಿಷಯದ ಬಗ್ಗೆ ಕುಟುಂಬದವರು ದೂರು ನೀಡಿದರೆ ಅವರನ್ನು ಬೆಂಬಲಿಸುವುದಾಗಿ ಅವರು ಭರವಸೆ ನೀಡಿದ್ದರು. ಮೋಹಿತ್ ಯಾದವ್ ಅವರನ್ನು ಅಮಾನತುಗೊಳಿಸಿದ ನಂತರ ಹಣಕಾಸಿನ ಸಮಸ್ಯೆಯಿಂದ ಒತ್ತಡಕ್ಕೆ ಒಳಗಾಗಿದ್ದರು ಎನ್ನಲಾಗಿದೆ.
ಇದನ್ನು ಓದಿ: ಜಾತಿಗಣತಿಗೆ ಕೇಂದ್ರ ಸರಕಾರಕ್ಕೆ ಮಾತ್ರ ಅಧಿಕಾರವಿದೆ: ಸುಪ್ರೀಂಕೋರ್ಟ್‌ಗೆ ಅಫಿಡವಿಟ್ ಸಲ್ಲಿಕೆ


