ಉತ್ತರಪ್ರದೇಶದ ಡಿಯೋರಿಯಾದ ಫತೇಪುರ್ ಗ್ರಾಮದ ರುದ್ರಾಪುರ ಪ್ರದೇಶದಲ್ಲಿ ಹಿಂಸಾಚಾರದಲ್ಲಿ ಸೋಮವಾರ ಒಂದೇ ಕುಟುಂಬದ ಐವರು ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಲೆಹ್ಡಾ ಟೋಲಾ ಪ್ರದೇಶದಲ್ಲಿ ಬೆಳಗ್ಗೆ ಈ ಘಟನೆ ನಡೆದಿದ್ದು, ಜಮೀನು ವಿವಾದಕ್ಕೆ ಸಂಬಂಧಿಸಿ ನಡೆದ ಜಗಳ ಹಿಂಸಾಚಾರಕ್ಕೆ ತಿರುಗಿದೆ.
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಪ್ರೇಮ್ ಯಾದವ್ ಅವರ ಮೇಲೆ ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಲಾಗಿತ್ತು. ಇದಕ್ಕೆ ಪ್ರತಿಕಾರವಾಗಿ ಸತ್ಯಪ್ರಕಾಶ್ ದುಬೆ ಮತ್ತು ಅವರ ಕುಟುಂಬದವರ ಕೊಲೆ ನಡೆದಿದೆ ಎಂದು ಡಿಜಿ ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.
ಅಭಯ್‌ಪುರದ ಯಾದವ್ ಬೆಂಬಲಿಗರು ದುಬೆ ಅವರ ಮನೆಯ ಮೇಲೆ ದಾಳಿ ಮಾಡಿದರು ಮತ್ತು ದುಬೆ ಮತ್ತು ಅವರ ಕುಟುಂಬದ ಐವರನ್ನು ಹತ್ಯೆ ಮಾಡಿದ್ದಾರೆ. ಈ ಆಘಾತಕಾರಿ ಘಟನೆಗೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಕುಮಾರ್ ಹೇಳಿದ್ದಾರೆ.
ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಈ ಕುರಿತು ತನಿಖೆಯನ್ನು ನಡೆಸಿ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ಕಮಿಷನರ್ ಮತ್ತು ಇನ್ಸ್ ಪೆಕ್ಟರ್ ಜನರಲ್ ಅವರಿಗೆ ಸೂಚಿಸಿದ್ದಾರೆ. ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಉತ್ತರಪ್ರದೇಶದಲ್ಲಿ ಕೊಲೆ, ಥಳಿತ, ಗುಂಪು ಹತ್ಯೆಯಂತಹ ಘಟನೆಗಳು ಪದೇ ಪದೇ ವರದಿಯಾಗುತ್ತಿದ್ದು, ಕಾನೂನು ಸುವ್ಯವಸ್ಥೆಯ ಬಗ್ಗೆ ಪ್ರಶ್ನೆ ಮೂಡಿದೆ.
ಇದನ್ನು ಓದಿ: ಟ್ರಾಫಿಕ್ ಪೇದೆ ಜೊತೆ ಅನುಚಿತವಾಗಿ ವರ್ತಿಸಿದ ಹಿಂದೂ ರಕ್ಷಾ ದಳದ ಅಧ್ಯಕ್ಷ


