ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಸಶಸ್ತ್ರ ಗುಂಪು ಹಮಾಸ್ ನಡುವೆ ಕದನ ನಡೆಯುತ್ತಿದ್ದು ಕಳೆದ 48 ಗಂಟೆಗಳಲ್ಲಿ ಸುಮಾರು 1,100 ಜನರು ಯದ್ಧದಲ್ಲಿ ಪ್ರಾಣವನ್ನು ಕಳೆದುಕೊಂಡಿದ್ದಾರೆ.
ಶನಿವಾರ ಹಮಾಸ್ ಇಸ್ರೇಲ್ ಮೇಲೆ ಸರಣಿ ರಾಕೆಟ್ ದಾಳಿಯನ್ನು ನಡೆಸಿದೆ. ಭೂ, ವಾಯು, ನೌಕಾ ಮಾರ್ಗದಲ್ಲಿ ಹಮಾಸ್ ಇಸ್ರೇಲ್ ಮೇಲೆ 5,000ಕ್ಕೂ ಅಧಿಕ ರಾಕೆಟ್‌ಗಳ ದಾಳಿಯನ್ನು ನಡೆಸಿತ್ತು.
ಇದರ ಬೆನ್ನಲ್ಲೇ ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ದೀರ್ಘ ಮತ್ತು ಕಠಿಣವಾದ ಯುದ್ಧವನ್ನು ಘೋಷಿಸಿದ್ದಾರೆ. ಇಸ್ರೇಲ್ ಜೆಟ್‌ಗಳು ಗಾಜಾ ಪಟ್ಟಿಯ ಮೇಲೆ ಬಾಂಬ್ ದಾಳಿ ಮಾಡುತ್ತಿವೆ. ಅಮೆರಿಕ ಇಸ್ರೇಲ್‌ಗೆ ಯುದ್ಧನೌಕೆ ಸೇರಿದಂತೆ ನೆರವನ್ನು ನೀಡುತ್ತಿದೆ.
ವರದಿಯ ಪ್ರಕಾರ ಇಸ್ರೇಲ್‌ನಲ್ಲಿ 700 ಮಂದಿಯನ್ನು ಹಮಾಸ್ ಸಶಸ್ತ್ರ ಗುಂಪು ಹತ್ಯೆ ಮಾಡಿದೆ. 400ಮಂದಿ ಪ್ಯಾಲೆಸ್ತೀನಿಯರು ಕೂಡ ಇಸ್ರೇಲ್ ದಾಳಿಗೆ ಬಲಿಯಾಗಿದ್ದಾರೆ ಎಂದು ತಿಳಿಸಿದೆ.
ಹಮಾಸ್ ಎಂದರೆ ಯಾರು?
ಹಮಾಸ್ ಎಂದರೆ ಇಸ್ಲಾಮಿಕ್ ಪ್ರತಿರೋಧ ಚಳುವಳಿ ಮತ್ತು ಅರೇಬಿಕ್ ಭಾಷೆಯಲ್ಲಿ ಹಮಾಸ್ ಎಂದರೆ “ಉತ್ಸಾಹ” ಎಂಬ ಅರ್ಥವನ್ನು ಹೇಳುತ್ತದೆ. ಹಮಾಸ್ (Hamas) ವಿಸ್ತೃತ ರೂಪ ಹರಕತ್ ಅಲ್- ಮುಕವಾಮಹ್ ಅಲ್ ಇಸ್ಲಾಮಿಯ್ಯಾ.
ಹಮಾಸ್ ರಾಜಕೀಯವಾಗಿ ಗಾಜಾ ಪಟ್ಟಿಯನ್ನು ನಿಯಂತ್ರಿಸುತ್ತದೆ. ಗಾಜಾ ಪಟ್ಟಿ ಸುಮಾರು 365 ಚದರ ಕಿಮೀ ಪ್ರದೇಶವನ್ನು ಹೊಂದಿದೆ. ಇದು ಎರಡು ಮಿಲಿಯನ್‌ಗಿಂತಲೂ ಹೆಚ್ಚು ಜನರಿಗೆ ನೆಲೆಯಾಗಿದೆ.
ಫೆಲೆಸ್ತೀನ್ ಅಥಾರಿಟಿ ಮತ್ತು ಪ್ಯಾಲೆಸ್ತೀನ್ ಲಿಬರೇಶನ್ ಆರ್ಗನೈಸೇಶನ್ (PLO) ಮುಖ್ಯಸ್ಥರಾದ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರಿಗೆ ನಿಷ್ಠರಾಗಿರುವ ಫತಾಹ್ ಪಡೆಗಳ ವಿರುದ್ಧ ಸಂಕ್ಷಿಪ್ತ ಯುದ್ಧದ ನಂತರ 2007ರಿಂದ ಹಮಾಸ್ ಗಾಜಾ ಪಟ್ಟಿಯಲ್ಲಿ ಅಧಿಕಾರದಲ್ಲಿದೆ.
ಹಮಾಸ್ ಸಶಸ್ತ್ರ ಗುಂಪು ಒಂದು ಕಡೆಯಾದರೆ ಇನ್ನೊಂದು ಕಡೆ ಪ್ಯಾಲೆಸ್ತೀನ್ ರಾಜಕಾರಣದಲ್ಲಿ ಯಾಸಿರ್ ಅರಾಫತ್ ಸ್ಥಾಪಿಸಿ ಮುನ್ನಡೆಸಿದ ಫತಾಹ್ ಗುಂಪು ಇದೆ. 1990ರಲ್ಲಿ ಅರೆ ಸೇನಾ ಸಂಘಟನೆಯಾಗಿ ಸ್ಥಾಪನೆಯಾದ ಫತಾಹ್, ಬಳಿಕ ತನ್ನ ಸಶಸ್ತ್ರ ಹೋರಾಟವನ್ನು ಕೈಬಿಟ್ಟಿತು. ಇಸ್ರೇಲ್ ದೇಶದೊಂದಿಗಿನ 1967ರ ಗಡಿ ಒಪ್ಪಂದಕ್ಕೆ ಅನುಗುಣವಾಗಿ ಪ್ಯಾಲೆಸ್ತೀನ್ ದೇಶವನ್ನು ನಿರ್ಮಿಸುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನಿರ್ಣಯಕ್ಕೆ ಬೆಂಬಲ ಸೂಚಿಸಿತ್ತು.
2007ರಲ್ಲಿ ಸಂಘಟನೆಯು ಫತಾಹ್ ಮತ್ತು ಹಮಾಸ್ ಜೊತೆಗೆ ಕದನದ ಬಳಿಕ ಗಾಜಾ ಪಟ್ಟಿಯನ್ನು ಹಮಾಸ್ ನಿಯಂತ್ರಣಕ್ಕೆ ಪಡೆದುಕೊಂಡಿದೆ. ಫತಾಹ್ ವೆಸ್ಟ್ ಬ್ಯಾಂಕ್‌ನ್ನು ತನ್ನ ಸುಪರ್ದಿಯಲ್ಲಿ ಇರಿಸಿಕೊಂಡಿತ್ತು.
ಹಮಾಸ್ ಸ್ಥಾಪನೆಯಾಗಿದ್ದು ಯಾವಾಗ?
ಹಮಾಸ್ ಚಳುವಳಿಯನ್ನು 1987ರಲ್ಲಿ ಇಮಾಮ್ ಶೇಖ್ ಅಹ್ಮದ್ ಯಾಸಿನ್ ಮತ್ತು ಅವರ ಸಹಾಯಕ ಅಬ್ದುಲ್ ಅಜೀಜ್ ಅಲ್-ರಾಂಟಿಸ್ಸಿ ಅವರು ಪ್ಯಾಲೇಸ್ತೀನ್ ಪ್ರದೇಶಗಳನ್ನು ಆಕ್ರಮಣ ಮಾಡಿದ ಇಸ್ರೇಲ್ ವಿರುದ್ಧದ ಮೊದಲ ದಂಗೆಯ ವೇಳೆ ಗಾಜಾದಲ್ಲಿ ಸ್ಥಾಪಿಸಿದ್ದಾರೆ.
ಆಂದೋಲನವು ಈಜಿಪ್ಟ್‌ನಲ್ಲಿನ ಮುಸ್ಲಿಂ ಬ್ರದರ್‌ಹುಡ್‌ನ ಅಂಗಸಂಸ್ಥೆಯಾಗಿ ಪ್ರಾರಂಭವಾಗಿತ್ತು. ಐತಿಹಾಸಿಕ ಪ್ಯಾಲೆಸ್ತೀನ್‌ನ್ನು ವಿಮೋಚನೆ ಮಾಡುವ ಉದ್ದೇಶದಿಂದ ಇಸ್ರೇಲ್ ವಿರುದ್ಧ ಸಶಸ್ತ್ರ ಹೋರಾಟವನ್ನು ನಡೆಸಲು ಇಜ್ ಅಲ್-ದಿನ್ ಅಲ್-ಕಸ್ಸಾಮ್ ಬ್ರಿಗೇಡ್ಸ್ ಎಂಬ ಮಿಲಿಟರಿ ವಿಭಾಗವನ್ನು ರಚಿಸಿತ್ತು.
ಒತ್ತಡಗಳು ಏನೇ ಇರಲಿ ಮತ್ತು ಎಷ್ಟು ಸಮಯವಾದರೂ ನಾವು ಪ್ಯಾಲೇಸ್ತೀನ್ ಮಣ್ಣಿನ ಒಂದು ಇಂಚಿನನ್ನೂ ಬಿಟ್ಟುಕೊಡುವುದಿಲ್ಲಎಂದು ಪ್ಯಾಲೆಸ್ತೀನ್ ನಾಯಕ ಖಲೀದ್ ಮೆಶಾಲ್ 2017ರಲ್ಲಿ ಹೇಳಿದ್ದರು.
1990ರ ದಶಕದ ಮಧ್ಯಭಾಗದಲ್ಲಿ ಇಸ್ರೇಲ್ ಮತ್ತು ಪ್ಯಾಲೇಸ್ತೀನ್‌ನ PLO ಮಾತುಕತೆ ನಡೆಸಿದ ಓಸ್ಲೋ ಶಾಂತಿ ಒಪ್ಪಂದಗಳನ್ನು ಹಮಾಸ್ ವಿರೋಧಿಸುತ್ತದೆ. ಇಸ್ರೇಲ್ ಆಕ್ರಮಿತ ಪ್ಯಾಲೇಸ್ತೀನ್‌ನಲ್ಲಿನ ಇಸ್ರೇಲ್ ಸೈನಿಕರು, ವಸಾಹತುಗಾರರು ಮತ್ತು ನಾಗರಿಕರ ಮೇಲೆ ಹಮಾಸ್ ದಾಳಿ ನಡೆಸಿದೆ.
ಹಮಾಸ್‌ನ್ನು ಇಸ್ರೇಲ್, ಅಮೆರಿಕ, ಯುರೋಪಿಯನ್ ಯೂನಿಯನ್, ಕೆನಡಾ, ಈಜಿಪ್ಟ್ ಮತ್ತು ಜಪಾನ್ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದೆ. ಹಮಾಸ್ ಪ್ರಾದೇಶಿಕ ಮೈತ್ರಿಯನ್ನು ಹೊಂದಿದ್ದು ಇರಾನ್, ಸಿರಿಯಾ ಮತ್ತು ಲೆಬನಾನ್‌ನಲ್ಲಿರುವ ಹಿಜ್ಬೊಲ್ಲಾ ಒಳಗೊಂಡ ಒಕ್ಕೂಟದ ಭಾಗವಾಗಿದೆ. ಇದು ಅಮೆರಿಕದ ನೀತಿಗಳನ್ನು ವಿರೋಧಿಸುತ್ತದೆ.
ಇಸ್ರೇಲ್ ಮೇಲೆ ಶನಿವಾರದ ದಾಳಿಗೆ ಪ್ರೇರೇಪಣೆ ಏನು?
ಹಮಾಸ್ ವಕ್ತಾರ ಖಲೀದ್ ಕಡೋಮಿ ಅಲ್ ಜಜೀರಾ ಜೊತೆ ಮಾತನಾಡಿ, ದಶಕಗಳಿಂದ ಪ್ಯಾಲೆಸ್ತೀನಿಯರು ಎದುರಿಸುತ್ತಿರುವ ದೌರ್ಜನ್ಯಗಳಿಗೆ ಪ್ರತಿಕ್ರಿಯೆಯಾಗಿ ಹಮಾಸ್ ಸಶಸ್ತ್ರ ಗುಂಪು ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ನಡೆಸಿದೆ ಎಂದು ಹೇಳಿದ್ದಾರೆ.
ಗಾಜಾದಲ್ಲಿ ಮತ್ತು ನಮ್ಮ ಪವಿತ್ರ ಸ್ಥಳ ಅಲ್-ಅಕ್ಸಾ ಮಸೀದಿಯಲ್ಲಿ ಪ್ಯಾಲೇಸ್ತೀನ್ ಜನರ ಮೇಲೆ ದೌರ್ಜನ್ಯಗಳನ್ನು ನಡೆಸುವುದನ್ನು ನಿಲ್ಲಿಸಬೇಕೆಂದು ನಾವು ಬಯಸುತ್ತೇವೆ. ಈ ಎಲ್ಲಾ ಸಂಗತಿಗಳು ಈ ಯುದ್ಧವನ್ನು ಪ್ರಾರಂಭಿಸಲು ಕಾರಣವಾಗಿವೆ ಎಂದು ಖಲೀದ್ ಕಡೋಮಿ ಹೇಳಿದ್ದಾರೆ.
ಹಮಾಸ್ ಇತರ ಗುಂಪುಗಳಿಗೆ ಹೋರಾಟದಲ್ಲಿ ಸೇರಲು ಕರೆ ನೀಡಿದೆ. ಶನಿವಾರದ ದಾಳಿಗಳು ಕೇವಲ ಪ್ರಾರಂಭವಾಗಿದೆ ಎಂದು ಹೇಳಿದೆ.
ಹಮಾಸ್‌ನ ಹಿರಿಯ ವಕ್ತಾರ ಒಸಾಮಾ ಹಮ್ದಾನ್ ಅಲ್ ಜಜೀರಾ ಜೊತೆ ಮಾತನಾಡಿದ್ದು, ಶನಿವಾರದ ಹೋರಾಟದ ಸಮಯದಲ್ಲಿ ವಿಡಿಯೊಗಳು ವಯಸ್ಸಾದ ಇಸ್ರೇಲಿಗಳನ್ನು ಒತ್ತೆಯಾಳಾಗಿ ತೆಗೆದುಕೊಂಡಿರುವುದನ್ನು ತೋರಿಸಿದ್ದರೂ ಕೂಡ ಹಮಾಸ್ ನಾಗರಿಕರ ಮೇಲೆ ದಾಳಿ ಮಾಡುತ್ತಿಲ್ಲ ಎಂದು ಹೇಳಿದ್ದಾರೆ.
ನಾವು ಉದ್ದೇಶಪೂರ್ವಕವಾಗಿ ನಾಗರಿಕರನ್ನು ಗುರಿಯಾಗಿಸಿಕೊಂಡಿಲ್ಲ. ನಾವು ವಸಾಹತುಗಾರರನ್ನು ಆಕ್ರಮಣದ ಭಾಗವೆಂದು ಘೋಷಿಸಿದ್ದೇವೆ ಅವರು ಇಸ್ರೇಲ್‌ನ ಸಶಸ್ತ್ರ ಪಡೆಯ ಭಾಗವಾಗಿದ್ದಾರೆ ಅವರು ನಾಗರಿಕರಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನು ಓದಿ: ಇಸ್ರೇಲ್-ಪ್ಯಾಲೆಸ್ತೀನ್ ಯುದ್ಧದಲ್ಲಿ ಮೃತರ ಸಂಖ್ಯೆ ಗಣನೀಯ ಹೆಚ್ಚಳ: ಇಸ್ರೇಲ್‌ಗೆ ಯುದ್ಧ ನೌಕೆ ಕಳುಹಿಸಿದ ಅಮೆರಿಕ



You people always stand with jihadi so don’t beg from someone…