Homeಮುಖಪುಟಫೋಟೋ ಪ್ರಬಂಧ; ಸಣ್ಣ ನೀಲಿ ಮಿಂಚುಳ್ಳಿಯೊಂದಿಗೆ ನನ್ನ ಮೊದಲ ಭೇಟಿ..

ಫೋಟೋ ಪ್ರಬಂಧ; ಸಣ್ಣ ನೀಲಿ ಮಿಂಚುಳ್ಳಿಯೊಂದಿಗೆ ನನ್ನ ಮೊದಲ ಭೇಟಿ..

- Advertisement -
- Advertisement -

ಮನುಷ್ಯನಿಗೆ ಒಲುಮೆಯಿಂದ ಯಾರನ್ನಾದರೂ ಒಲಿಸಿಕೊಳ್ಳುವುದು ಅವನ ಅಪರಿಮಿತ ಆಸೆಗಳಲ್ಲಿ ಒಂದಲ್ಲವೇ? ಬಾಲ್ಯದಲ್ಲಿ ಆಟಕ್ಕೆ-ಊಟಕ್ಕೆ ಪೋಷಕರನ್ನು ಒಲಿಸಿಕೊಳ್ಳಲು ಯತ್ನಿಸಿದರೆ, ಯೌವ್ವನದಲ್ಲಿ ಪ್ರೇಮಕ್ಕೆ ಪ್ರಣಯಕ್ಕೆ ಸಂಗಾತಿಯನ್ನು ಒಲಿಸಿಕೊಳ್ಳುವ ನಿರಂತರ ಪ್ರಯತ್ನ ಇದ್ದೇ ಇರುತ್ತದೆ. ನಾನೂ ಈ ಎಲ್ಲಾ ಪ್ರಯತ್ನಗಳನ್ನು ದಾಟಿದವನೇ! ಆದರೆ ನಿಜವಾಗಿಯೂ ಒಲಿಸಿಕೊಳ್ಳುವ ಕಷ್ಟ ಗೊತ್ತಾಗಿದ್ದು ಮಾತ್ರ ನಾನು ಹಕ್ಕಿ ಫೋಟೋಗ್ರಫಿ ಶುರು ಮಾಡಿದ ಮೇಲೆ.

2000 ಇಸವಿಯಲ್ಲೇ ನಾನು ಫೋಟೋಗ್ರಫಿ ಕಲಿಯುವ ಪ್ರಯತ್ನ ಮಾಡಿದ್ದರೂ, ಹಕ್ಕಿ ಫೋಟೋಗ್ರಫಿ ಶುರು ಮಾಡಿದ್ದು ಮಾತ್ರ 2010ರಿಂದ. ಫೋಟೋ ತೆಗೆಯುವುದಕ್ಕಿಂತಲೂ ಹಕ್ಕಿಗಳನ್ನು ಪತ್ತೆ ಮಾಡುವ, ಗುರುತಿಸುವ ಅವುಗಳ ಬಗ್ಗೆ ಅರಿಯುವ ಪ್ರಯತ್ನ ಮಾಡಬೇಕು ಅನ್ನುವ ಜ್ಞಾನ ಪುಸ್ತಕಗಳ ಮುಖಾಂತರ ಅದಾಗಲೇ ತಲೆಗೆ ತುಂಬಿತ್ತು. ಅದೊಂದು ಸಂಜೆ ಕ್ಯಾಮರಾ ಹಿಡಿದು ಸುತ್ತಾಡುತ್ತಿದ್ದವನಿಗೆ, ನಾನು ನಡೆಯುತ್ತಿದ್ದ ರಸ್ತೆ ಬದಿಯ ಗದ್ದೆಯಲ್ಲಿ ಒಂದು ನೀಲಿ ಮಿಂಚುಳ್ಳಿ ಹಕ್ಕಿ ಕಾಣ್ತು. ದೂರದಿಂದ ಸಣ್ಣ ಗಾತ್ರಕ್ಕೆ ನೀಲಿ ಬಣ್ಣದಲ್ಲಿ ಕಾಣುವ ಈ ಹಕ್ಕಿ ಎಂತವರನ್ನೂ ಅದರತ್ತ ಸೆಳೆಯದೇ ಇರದು. ನನ್ನ ಬಳಿ ಇದ್ದ ಕ್ಯಾಮರಾದಿಂದ ತುಂಬಾ ದೂರದಲ್ಲಿ ಕುಳಿತ ಹಕ್ಕಿಯ ಚಿತ್ರ ತೆಗೆಯಲು ಕಷ್ಟವಾಗಿದ್ದರಿಂದ ನಾನು ನಿಧಾನವಾಗಿ ರಸ್ತೆಯಿಂದ ಗದ್ದೆಗಿಳಿದವನೇ, ಮೆಲ್ಲಮೆಲ್ಲನೆ ಹಕ್ಕಿ ಕುಳಿತಿದ್ದ ಕಡೆ ನಡೆಯತೊಡಗಿದೆ. ಅಲ್ಲಿಂದಲೇ ಚಿತ್ರೆ ತೆಗೆಯುವ ಮನಸ್ಸಾದರೂ, ಮತ್ತಷ್ಟು ಹತ್ತಿರ ಹೋಗಿ ಇನ್ನೂ ಸ್ಪಷ್ಟವಾಗಿ ತೆಗೆಯೋಣ ಅನ್ನುವ ಆಸೆಯೊಂದಿಗೆ ಮತ್ತಷ್ಟು ಹತ್ತಿರ ಹೋಗುವ ಪ್ರಯತ್ನ ಮಾಡಿದ್ದೇ ತಡ, ನನ್ನನ್ನು ನೋಡಿದ ಹಕ್ಕಿ ಪುರ್ರೆಂದು ಹಾರಿಹೋಯ್ತು. ಛೇ! ಅನ್ನುತ್ತಾ ಬೇಸರ ಅಸಮಾಧಾನದಿಂದ ಹಿಂತಿರುಗಿದವನೇ, ಒಂದು ಹೆಜ್ಜೆ ಎತ್ತಿಡುವ ಮೊದಲೇ ನನ್ನ ಬಲಭಾಗದಲ್ಲಿ ಮತ್ತೊಂದು ಮಿಂಚುಳ್ಳಿ ಕುಳಿತಿದ್ದು ಕಾಣ್ತು! ನೀಲಿ ಬಣ್ಣದ ಹಕ್ಕಿ, ಸಣ್ಣ ನೀಲಿ ಮಿಂಚುಳ್ಳಿ; ನಿಧಾನವಾಗಿ ಬಲಕ್ಕೆ ತಿರುಗಿ ಕ್ಯಾಮರಾ ಹಿಡಿದ ಕೈಯನ್ನು ಮೇಲೆತ್ತಿದ್ದೇ ತಡ, ಹಕ್ಕಿ ಹಾರಿಹೋಯ್ತು! ಛೇ, ಇಷ್ಟು ಹತ್ತಿರದಿಂದ ಹಕ್ಕಿ ಕಂಡರೂ ಅದರ ಚಂದದ ಚಿತ್ರ ತೆಗೆಯಲಾಗಲಿಲ್ಲವಲ್ಲ ಅನ್ನುವ ಕೊರಗಿನಿಂದ ಮನೆಗೆ ಹೋದವನಿಗೆ, ಅಂದು ರಾತ್ರಿ ನಿದ್ರೆಯೇ ಬರಲಿಲ್ಲ. ಹೇಗಾದರೂ ಸರಿ, ಆ ನೀಲಿ ಸುಂದರ ಹಕ್ಕಿಯ ಫೋಟೋ ತೆಗೆಯಲೇಬೇಕು ಅನ್ನುವ ಆಸೆ ಮನಸ್ಸಿನಲ್ಲಿ ಬಲವಾಗಿ ಮೂಡಿತು.

ಅವತ್ತಿನಿಂದ ಸ್ವಲ್ಪ ಹೆಚ್ಚೇ ಅನ್ನುವಂತೆ ನನ್ನ ಮಿಂಚುಳ್ಳಿಯ ಹುಡುಕಾಟ ನಡೆಯಿತು. ತೇಜಸ್ವಿ, ಕಾರಂತರ ಹಕ್ಕಿಗಳ ಕುರಿತಾದ ಬರಹಗಳ ಜೊತೆಗೆ, ಗೂಗಲ್‌ನಲ್ಲೂ ಹುಡುಕಾಟ ಜೋರು ನಡೆಯಿತು. ಓದುತ್ತಾ ಓದುತ್ತಾ, ಹಕ್ಕಿ ಫೋಟೋಗ್ರಫಿಗೆ ಹಕ್ಕಿಗಳ ವಾಸಸ್ಥಾನದ ಬಗ್ಗೆ, ಅವುಗಳ ನಡವಳಿಕೆಯ ಬಗ್ಗೆ ಅರಿಯುವುದು ಅತ್ಯಂತ ಮುಖ್ಯವಾದ ವಿಷಯ ಅನ್ನುವುದು ಅರಿವಾಯ್ತು. ಹಕ್ಕಿಗಳ ನಾಚಿಕೆ ಸ್ವಭಾವದ ಬಗ್ಗೆ, ಅವುಗಳ ಆಹಾರ ಪದ್ಧತಿಗಳ ಬಗ್ಗೆ, ದೇಹ ರಚನೆಯಲ್ಲಿನ ವೈವಿಧ್ಯತೆಗಳ ಬಗ್ಗೆ ಅರಿಯುತ್ತಿದ್ದಂತೇ, ’ಅಬ್ಬಾ! ಪ್ರಕೃತಿ ಅದೆಂತಾ ಸೋಜಿಗ!’ ಎಂಬ ಅರಿವಾಗುತ್ತಾ ಬಂತು. ಹಕ್ಕಿ ಫೋಟೋಗ್ರಫಿಗೆ ಅವುಗಳನ್ನು ಅಪ್ರೋಚ್ ಮಾಡುವ ವಿಧಾನವೇ ಅತ್ಯಂತ ಪ್ರಮುಖವಾದ ವಿಷಯ ಎಂಬುದು ತಿಳಿಯಿತು.

ಇದನ್ನೂ ಓದಿ: ಅಧಿಕಾರಕ್ಕೆ ಬಂದ್ರೆ ಅದಾನಿ ಗ್ರೂಪ್ ವಿರುದ್ಧ ತನಿಖೆ ನಡೆಸುತ್ತೇವೆ: ರಾಹುಲ್ ಗಾಂಧಿ

ಸಾಮಾನ್ಯವಾಗಿ ಗದ್ದೆಯ ಬಳಿ ಹರಿಯುವ ತೊರೆಗಳ ಸಮೀಪ, ಅಥವಾ ನೀರಿನ ಸೆಲೆಯಿರುವ ಕಡೆಗಳಲ್ಲಿ, ಕೆರೆಯ ಬದಿಗಳಲ್ಲಿ ಸಣ್ಣ ನೀಲಿ ಮಿಂಚುಳ್ಳಿ ಕಾಣಸಿಗುವುದಾಗಿಯೂ ಮತ್ತು ಅವುಗಳ ಬದಿಯ ಗೋಡೆಗಳಲ್ಲಿ ಮಣ್ಣನ್ನು ಕೊರೆದು ಗೂಡು ಮಾಡುವುದಾಗಿ ಮಾಹಿತಿ ದೊರೆಯಿತು. ಇನ್ನೇನು ಬೇಕು? ನಾನು ದಿನಾ ಫೋಟೋ ತೆಗೆಯಲು ಹೋಗುತ್ತಿದ್ದ ಒಂದು ಕಡೆಯಲ್ಲಿ ಸಣ್ಣದಾಗಿ ತೊರೆ ಹರಿಯುತ್ತಿತ್ತು; ಅಲ್ಲಿಗೆ ಹೋಗಿ ನೋಡುವ ಎಂದು ಮಾರನೆ ದಿನ ಬೆಳಿಗ್ಗೆಯೇ ತೊರೆಯ ಬಳಿ ಹೊರಟೆ. ತೊರೆಯ ಬಳಿ ತಲುಪಿ ಒಂದರ್ಧ ಗಂಟೆ ಕಾಯುತ್ತಿದ್ದಂತೇ ನಾನು ಕಾಯುತ್ತಿದ್ದ ಸಂಗಾತಿ ಎಲ್ಲಿಂದಲೋ ಹಾರಿ ಬಂದು ತೊರೆಯ ಬದುವಿನ ಮೇಲಿನ ಸಣ್ಣ ಗಿಡದ ಟೊಂಗೆಯ ಮೇಲೆ ಕುಳಿತು ನೀರಿನೆಡೆಗೆ ನೋಡುತ್ತಾ ಧ್ಯಾನಸ್ಥವಾಯ್ತು. ಕಳೆದ ಸಲ ಮಾಡಿದ ತಪ್ಪನ್ನು ಈ ಸಲವೂ ಮಾಡಬಾರದು ಅಂದುಕೊಳ್ಳುತ್ತಾ, ಮೆಲ್ಲನೆ ತೊರೆಯ ಬಳಿಗೆ ಇಳಿದವನಿಗೆ, ತಕ್ಷಣವೇ ನಿರಾಸೆಯಾಯ್ತು. ನಾನು ರಸ್ತೆಯ ಮೇಲಿಂದ ಕೆಳಗಿಳಿದ ಕೂಡಲೇ ಹಕ್ಕಿ ಹಾರಿಹೋಯ್ತು. ಛೇ! ಏನಿದು ಕರ್ಮ, ನಾನೇನು ತಪ್ ಮಾಡ್ದೆ? ಅಂದುಕೊಳ್ಳುತ್ತಾ ಅಲ್ಲಿಯೇ ತೊರೆಯ ಬಳಿಯಲ್ಲಿ ಕುಳಿತವನಿಗೇ ಅನತಿದೂರದಲ್ಲಿ ಮತ್ತೊಂದು ಹಕ್ಕಿ ಕುಳಿತಿರುವುದು ಕಂಡಿತು. ಹೋ! ಇಲ್ಲಿ ನೀಲಿ ಮಿಂಚುಳ್ಳಿಗಳ ಓಡಾಟ ಇರುವುದು ಕನ್ಫರ್ಮ್ ಅಂದುಕೊಂಡವನೇ, ತೊರೆಯ ಬಳಿಯ ಬದುವಿನಿಂದ ನಿಧಾನವಾಗಿ ನಡೆಯುತ್ತಾ ಮತ್ತೊಂದು ಹಕ್ಕಿ ಕುಳಿತಿದ್ದ ಕಡೆಗೆ ಹೊರಟೆ. ಇನ್ನೇನು ಹಕ್ಕಿಗೂ ನನಗೂ ಕೆಲವೇ ಮೀಟರ್‌ಗಳ ಅಂತರ! ಕ್ಯಾಮರಾ ನಿಧಾನವಾಗಿ ಮೇಲೆತ್ತುತ್ತಿದ್ದಂತೇ ಹಕ್ಕಿ ಹಾರಿತು. ಮತ್ತೆ ನಿರಾಸೆ. ನಂತರ ಒಂದು ಗಂಟೆ ಕಾದರೂ ಹಕ್ಕಿ ಪುನಃ ಬರಲಿಲ್ಲ. ಬೇಸರದಿಂದ ಮನೆಗೆ ಹೊರಟೆ.

ಮತ್ತೊಂದು ನಿದ್ರೆ ಇಲ್ಲದ ರಾತ್ರಿ ಕಳೆಯುವಂತಾಯ್ತು. ಆದರೆ ನಾನು ಆಸೆ ಬಿಡಲಿಲ್ಲ. ಮಾರನೇ ದಿನ ಬೆಳಿಗ್ಗೆ ಮಾಮೂಲಿ ಹೋಗುವುದಕ್ಕಿಂತ ಅರ್ದ ಗಂಟೆ ಬೇಗನೇ, ಅಂದರೆ 6.30ಕ್ಕೆಲ್ಲಾ ತೊರೆಯ ಬಳಿ ಹೋಗಿ, ಹಿಂದಿನ ದಿನ ಮಿಂಚುಳ್ಳಿ ಕುಳಿತ ಸ್ಥಳದಿಂದ ಸ್ವಲ್ಪ ದೂರದಲ್ಲಿ ಕುಳಿತೆ. ಒಂದು ಗಂಟೆ ಕಾದ ನಂತರ ಸಣ್ಣದಾಗಿ ಟ್ಚೀಟ್ಚೀ॒… ಎನ್ನುವ ಸದ್ದಿನೊಂದಿಗೆ ಹಾರುತ್ತಾ ಬಂದ ನೀಲಿ ಮಿಂಚುಳ್ಳಿ ನಾನು ಕುಳಿತ ಸ್ಥಳದಿಂದ 3 ಮೀಟರ್ ಅಂತರದಲ್ಲಿ ಕುಳಿತು ನೀರಿನೆಡೆಗೆ ನೋಡತೊಡಗಿತು. ಆಹಾ ಅದೇನು ಚಂದ! ನೀಲಿ ಬಣ್ಣದ ರೆಕ್ಕೆ, ಗಾಢ ಹೊಂಬಣ್ಣದ ಹೊಟ್ಟೆಯ ಭಾಗ, ಉದ್ದಕ್ಕೆ ಚೂಪಾದ ಕೊಕ್ಕು, ನೀಲಿ ಬಣ್ಣದ ತಲೆ, ಹೊಳೆಯುವ ಕಪ್ಪು ಕಣ್ಣು, ಅಬ್ಬಬ್ಬಾ ಅದೇನು ಚಂದ ಈ ಸಣ್ಣ ಮಿಂಚುಳ್ಳಿ ಎಂದು ಅಚ್ಚರಿಗೊಳಗಾದೆ! ಕುಳಿತ ಜಾಗದಲ್ಲಿಯೇ ಕೊಕ್ಕನ್ನು ಬಾಗಿಸಿ, ನೀರಿನೆಡೆಗೆ ದೃಷ್ಟಿ ನೆಟ್ಟು ಮೀನಿಗೋಸ್ಕರ ಕಾಯುತ್ತಾ ಕುಳಿತಿತು ಮಿಂಚುಳ್ಳಿ. ಆಗಿಂದಾಗ್ಗೆ ತಲೆಯನ್ನು ಬಾಲವನ್ನೂ ಮೇಲೆ ಕೆಳಗೆ ಆಡಿಸುತ್ತಾ ನೀರಿನೆಡೆಗೆ ನೋಡುತ್ತಾ ಕುಳಿತಿತ್ತು ಸುಂದರಿ ಹಕ್ಕಿ. ಇನ್ನೇನು ಫೋಟೋ ತೆಗೆಯಲು ಕ್ಯಾಮರಾ ತೆಗೆದು ಸೆಟ್ಟಿಂಗ್ಸ್ ಸರಿ ಮಾಡಿ, ಝೂಮ್ ಮಾಡಿ, ಫೋಕಸ್ ಮಾಡುತ್ತಿದ್ದಂತೇ, ಕುಳಿತಲ್ಲಿಂದ ಚಂಗನೆ ನೀರಿಗೆ ನೆಗೆದ ಮಿಂಚುಳ್ಳಿ ಸಣ್ಣ ಗಾತ್ರದ ಮೀನನ್ನು ಹಿಡಿದು ಮತ್ತೆ ಮೇಲೆ ಬಂದು ಕುಳಿತುಕೊಳ್ತು. ಅಬ್ಬಾ! ಅದೇನು ವೇಗ! ನಾನು ದಂಗಾದೆ. ಅಷ್ಟರಲ್ಲಿ ಹಿಡಿದ ಬೇಟೆಯ ಸಮೇತ ನನ್ನ ಕಡೆ ನೋಡಿಯೇಬಿಟ್ಟಿತು ಮಿಂಚುಳ್ಳಿ! ಪುರ್ರನೇ ಹಾರಿ ದೂರದಲ್ಲಿನ ಮತ್ತೊಂದು ಟೊಂಗೆಯ ಮೇಲೆ ಕುಳಿತು, ಹಿಡಿದ ಮೀನನ್ನು ಕೊಕ್ಕಿನ ಸಹಾಯದಿಂದ, ಕುಳಿತ ಟೊಂಗೆಯ ಮೇಲೆ ಅಪ್ಪಳಿಸಿ, ಅಪ್ಪಳಿಸಿ ಮೀನನ್ನು ಕೊಂದು ಮೀನಿನ ತಲೆಯ ಭಾಗವನ್ನು ಬಾಯಿಯ ಕಡೆಗೆ ತಿರುಗಿಸಿಕೊಂಡು, ಕೊಕ್ಕಿನಿಂದ ಮೀನನ್ನು ಮೇಲೆ ಟಾಸ್ ಮಾಡಿ ಬಾಯಿ ಅಗಲಿಸಿ ಮೀನನ್ನು ನೇರ ಬಾಯಿಗೇ ಇಳಿಸಿಕೊಂಡು ನುಂಗಿಬಿಡ್ತು. ನಾನು ಈ ಬಾರಿ ನಿರಾಶನಾಗಲಿಲ್ಲ, ಬದಲಾಗಿ ಖುಷಿಯಾದೆ. ಈ ಮಿಂಚುಳ್ಳಿಯನ್ನು ನಾನು ಒಲಿಸಿಕೊಳ್ಳುವುದು ಕಷ್ಟವೇನಲ್ಲ ಅಂದುಕೊಳ್ಳುತ್ತಾ, ಹತ್ತಿರದಿಂದ ಮಿಂಚುಳ್ಳಿಯ ಸೊಬಗನ್ನು ಅದರ ಬೇಟೆಯ ವೈಖರಿಯನ್ನು ನೋಡಿದ ಖುಷಿಯಲ್ಲಿ ಮನೆಗೆ ತೆರಳಿದೆ. ಮಾರನೆಯ ದಿನ ಮತ್ತೆ ಬೆಳಿಗ್ಗೆಯೇ ಬೇಗ ತೊರೆಯ ದಡದ ಮೇಲೆ ಹೋಗಿ ಮಿಂಚುಳ್ಳಿ ಕೂರುವ ಸ್ಥಳದ ಪಕ್ಕದಲ್ಲಿಯೇ 3 ಮೀಟರ್ ದೂರದಲ್ಲಿ ಒಂದು ಸಣ್ಣ ಮರದ ಬುಡದಲ್ಲಿ ಇದ್ದ ಪೊದೆಯಂಥ ಗಿಡದ ನಡುವೆ ಹಸಿರು ಬಣ್ಣದ ಬಟ್ಟೆ ಧರಿಸಿ ಕ್ಯಾಮರಾವನ್ನು ಚಿತ್ರ ತೆಗೆಯುವ ಪೊಸಿಷನ್‌ಗೆ ರೆಡಿ ಮಾಡಿಕೊಂಡು ಕಾಯುತ್ತಾ ಕುಳಿತೆ. ಈ ಬಾರಿ ಹೆಚ್ಚು ಕಾಯಿಸದೇ ಟ್ಚೀಟ್ಚೀ॒… ಎನ್ನುವ ಸದ್ದಿನೊಂದಿಗೆ ಹಾರುತ್ತಾ ಬಂದ ಮಿಂಚುಳ್ಳಿ ನಾನಿದ್ದ ನೇರಕ್ಕೆ ಎದುರಿಗಿದ್ದ ಸಣ್ಣ ಗಿಡದ ಮೇಲೆ ಕುಳಿತುಕೊಳ್ತು. ನಾನು ಕ್ಯಾಮರಾ ರೆಡಿ ಮಾಡಿಕೊಂಡೆ, ಅದಕ್ಕೆ ನನ್ನ ಇರುವಿಕೆ ಅರಿವಾಯ್ತು, ಪುರ್ರನೇ ಹಾರಿಹೋಯ್ತು. ಮತ್ತೆ ಬರಲೇ ಇಲ್ಲ. ಅವತ್ತು ಮಾತ್ರ ಗಂಟೆಗಟ್ಟಲೆ ಕಾದು ಕುಳಿತರೂ ಹಕ್ಕಿ ಮತ್ತೆ ಬರಲಿಲ್ಲ. ನಾನು ಮನೆಗೆ ಹೋದವನೇ, ಹೆಂಡತಿಯ ಬಳಿ ಇದೆಲ್ಲಾ ಕಥೆ ವಿವರಿಸಿ ಹೇಳಿದೆ. ಮಾರನೆಯ ದಿನ ಖಂಡಿತಾ ಚಂದದ ಚಿತ್ರ ತೆಗೆಯುವದಾಗಿ ಹೇಳಿದೆ. ಆಗ ಆಕೆ, ಪಾಪ ಆ ಹಕ್ಕಿ, ನಿಮ್ಮಿಂದ ಅದಕ್ಕೆ ಡಿಸ್ಟರ್ಬ್ ಆಗಿರುತ್ತೆ, ಸೋ ಎರಡ್ ದಿನ ಬಿಟ್ಟು ಹೋಗೆಂದು ಸಲಹೆಯಿತ್ತಳು. ನಾನು ಹಾಗೆಯೇ ತೀರ್ಮಾನಿಸಿ, ಎರಡು ದಿನ ಬಿಟ್ಟು ಅದೇ ಜಾಗಕ್ಕೆ ಹೋಗಿ ಕುಳಿತೆ. ಈ ಬಾರಿಯೂ ಮಿಂಚುಳ್ಳಿ ಬಂದು ನೇರವಾಗಿ ಅದೇ ಗಿಡದ ಮೇಲೆ ಕುಳಿತುಕೊಂಡು ಸುತ್ತಾಮುತ್ತಾ ಒಮ್ಮೆ ನೋಡಿತು ಮತ್ತು ನನ್ನನ್ನು ಕಂಡಿತು ಕೂಡಾ! ಮೊದಲನೇ ಬಾರಿ ನಾನು ಹಾಗೂ ಮಿಂಚುಳ್ಳಿ ಪರಸ್ಪರ ಕಣ್ಣು ಮಿಲಾಯಿಸಿಕೊಂಡೆವು. ನಾನು ಚೂರೂ ಅಲುಗಾಡದೇ ಕುಳಿತೆ. ಹಕ್ಕಿ ಮಾತ್ರ ಕೆಲವು ಗಳಿಗೆಗಳ ಕಾಲ ನನ್ನನ್ನೇ ದುರುಗುಟ್ಟಿ ನೋಡುತ್ತಾ ಕುಳಿತು, ನಂತರ ಅದರ ಪಾಡಿಗೆ ಅದು ನೀರಿನೆಡೆಗೆ ದೃಷ್ಟಿ ನೆಟ್ಟು ಬೇಟೆಗೆ ಕಾಯತೊಡಗಿತು.

ಆಗ ನಾನು ನಿಧಾನವಾಗಿ ಕ್ಯಾಮರಾ ರೆಡಿ ಮಾಡಿಕೊಂಡು, ಝೂಮ್ ಮಾಡಿ, ಫೋಕಸ್ ಮಾಡಿ ಕ್ಲಿಕ್ಕಿಸಿದೆ. ಡಿಸ್‌ಪ್ಲೇನಲ್ಲಿ ನೋಡಿದೆ. ಆಹಾ ಎಂಥ ಚಂದ! ಶಾರ್ಪ್ ಇದೆ ಅನ್ನಿಸ್ತು. ಮತ್ತೆರಡು ಕ್ಲಿಕ್ಕಿಸಿದೆ, ಬೇರೆ ಬೇರೆ ಸೆಟ್ಟಿಂಗ್ಸ್‌ನಲ್ಲಿ ತೆಗೆದೆ. ಹಕ್ಕಿ ಮಾತ್ರ ಯಾವುದೇ ಆತಂಕಕ್ಕೊಳಗಾಗದೇ ಆರಾಮಾಗಿ ಕುಳಿತು ಬೇಟೆಗೆ ಕಾಯತೊಡಗಿತು. ನಾನು ಕುಳಿತಲ್ಲಿಂದಲೇ ಮೆಲ್ಲನೆ ಎರಡು ಹೆಜ್ಜೆ ಮುಂದೆ ಇಟ್ಟು ಮತ್ತಷ್ಟು ಹತ್ತಿರ ಹೋದೆ. ಮತ್ತೊಮ್ಮೆ ಕಣ್ಣು ಮಿಲಾಯಿಸಿ ಮತ್ತೆರಡು ಚಿತ್ರ ತೆಗೆದೆ. ಅಷ್ಟರಲ್ಲಿ ನೀರಿನಲ್ಲಿ ಬೇಟೆ ಕಂಡ ಮಿಂಚುಳ್ಳಿ ಚಂಗನೆ ನೀರಿಗೆ ನೆಗೆದು ಮೀನನ್ನು ಹಿಡಿದು ಕೊಕ್ಕಿನಲ್ಲಿ ಕಚ್ಚಿಕೊಂಡು ಪುರ್ರನೇ ಹಾರಿ ಮತ್ತೊಂದು ಕಡೆ ಹೋಗಿ ಕುಳಿತು ಮೀನನ್ನು ಕೊಕ್ಕಿನಿಂದ ಅಪ್ಪಳಿಸಲು ಶುರು ಮಾಡಿತು. ನಾನು ಮಾತ್ರ ಏನೋ ಸಾಧನೆ ಮಾಡಿದವನಂತೆ, ಸ್ಪರ್ಧೆಯಲ್ಲಿ ಮೊದಲನೇ ಬಹುಮಾನ ಪಡೆದವನಂತೆ ಖುಷಿಯಲ್ಲಿ ಮನೆ ಕಡೆ ಹೊರಟೆ. ತೊರೆಯ ಬದಿಯಲ್ಲಿ ನಡೆಯುತ್ತಿದ್ದವನಿಗೆ, ಮಿಂಚುಳ್ಳಿ ಮೀನನ್ನು ಅಪ್ಪಳಿಸುವ ಸದ್ದು ಅಸ್ಪಷ್ಟವಾಗಿ ಕೇಳುತ್ತಿತ್ತು.

ವಿನೋದ್ ಕುಮಾರ್ ವಿ ಕೆ

ವಿನೋದ್ ಕುಮಾರ್ ವಿ ಕೆ
ವಿನೋದ್ ಹುಟ್ಟಿದ್ದು ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ. 2011ರಿಂದ ಛಾಯಾಗ್ರಹಣದಲ್ಲಿ ಆಸಕ್ತಿ. ಹಕ್ಕಿ, ಚಿಟ್ಟೆ, ಕೀಟಗಳಿಂದ ಪ್ರಾರಂಭವಾಗಿ ಟ್ರೆಕ್ಕಿಂಗ್ ಹವ್ಯಾಸವಾಗಿ ಬೆಳೆದಿದೆ. ಅರಣ್ಯ ಇಲಾಖೆಯಲ್ಲಿ ಕಚೇರಿ ಸಹಾಯಕನಾಗಿ ವೃತ್ತಿ. ಸದ್ಯಕ್ಕೆ ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ವಾಸವಾಗಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕಾಂಗ್ರೆಸ್ ನಿಂದ ಏಪ್ರಿಲ್ 12ರಂದು ‘ರನ್ ಫಾರ್ ಅಂಬೇಡ್ಕರ್, ರನ್ ಫಾರ್ ಕಾನ್ಸ್ಟಿಟ್ಯೂಷನ್’ ಮ್ಯಾರಥಾನ್ ಆಯೋಜನೆ

ನವದೆಹಲಿ: ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ಅಂಗವಾಗಿ ಕಾಂಗ್ರೆಸ್ ಭಾನುವಾರ 'ಅಂಬೇಡ್ಕರ್‌ಗಾಗಿ ಓಟ, ಸಂವಿಧಾನಕ್ಕಾಗಿ ಓಟ' ಮ್ಯಾರಥಾನ್ ಆಯೋಜಿಸಿದೆ. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಇಲ್ಲಿನ ಮಂಡಿ ಹೌಸ್‌ನಿಂದ ಮ್ಯಾರಥಾನ್‌ಗೆ...

ಮುಖ್ಯವಾಹಿನಿಗೆ ಬಂದ 42 ಕೇಡರ್‌ಗಳು; ರಾಜ್ಯದಲ್ಲಿ’ಮಾವೋವಾದಿ ಕಾರ್ಯಾಚರಣೆ’ ಅಂತ್ಯವಾಗಿದೆ ಎಂದ ತೆಲಂಗಾಣ ಪೊಲೀಸರು

ರಾಜ್ಯದಲ್ಲಿ ಸಿಪಿಐ (ಮಾವೋವಾದಿ) ಸಂಘಟನೆಯ ಕಾರ್ಯಚರಣೆ ಅಂತಿಮವಾಗಿದೆ ಎಂದು ತೆಲಂಗಾಣ ಪೊಲೀಸರು ಘೋಷಣೆ ಮಾಡಿದ್ದಾರೆ. ಬೆಟಾಲಿಯನ್ ಕಮಾಂಡರ್ ಮತ್ತು ಎರಡು ಪ್ರಮುಖ ಗುಂಪುಗಳ ಹಿರಿಯ ನಾಯಕತ್ವ ಸೇರಿದಂತೆ ನಿಷೇಧಿತ ಸಂಘಟನೆಯ 42 ಕೇಡರ್‌ಗಳು...

‘ಹಿಂದಿ ನಿರ್ಮೂಲನೆ ಮಾಡುತ್ತೇವೆ’ ಎಂದು ಸಚಿವರು ಹೇಳಿಲ್ಲ; ಹಿಂದಿ ಪರ ಅರ್ಜಿ ವಜಾ; ₹1 ಲಕ್ಷ ದಂಡ ವಿಧಿಸಿದ ಹೈಕೋರ್ಟ್‌

ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷಾ ವಿಷಯಗಳ ಮೌಲ್ಯಮಾಪನ ಸಂಬಂಧ ರಾಜ್ಯ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ನೀಡಿದ ಹೇಳಿಕೆಯ ವಿರುದ್ಧ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (ಪಿಐಎಲ್) ಕರ್ನಾಟಕ...

ದೆಹಲಿ| ಮುಸ್ಲಿಮರ ಮೇಲಿನ ದ್ವೇಷಕ್ಕೆ ಜೀವಂತ ಹಂದಿಗಳನ್ನು ಪೂಜಿಸುತ್ತಿರುವ ಹಿಂದೂಗಳು

ಹಳೆಯ ದೆಹಲಿಯ ಹಿಂದೂ-ಮುಸ್ಲಿಂ ಜನರು ವಾಸಿಸುವ ತ್ರನಗರದ ನೆರೆಹೊರೆಯಲ್ಲಿ ಹಿಂದೂ ಕುಟುಂಬಗಳು ಜೀವಂತ ಹಂದಿಗಳನ್ನು ಪೂಜಿಸುತ್ತಿದ್ದಾರೆ. ಮುಸ್ಲಿಮರ ಮೇಲಿನ ದ್ವೇಷಕ್ಕೆ ಮನೆಯ ಮುಂಭಾಗ ಅಲಂಕೃತ ಹಂದಿ (ವರಹಾಸ್ವಾಮಿ) ಚಿತ್ರಗಳನ್ನು ಅಳವಡಿಸಿದ್ದಾರೆ ಎಂದು 'ದಿ...

ಪ. ಬಂಗಾಳ: ಮಹಿಳೆಯರಿಗೆ ₹3,000 ರಿಂದ 6 ತಿಂಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಸೇರಿದಂತೆ ಹಲವು ಭರವಸೆ ನೀಡಿದ ಬಿಜೆಪಿ 

ಕೋಲ್ಕತ್ತಾ : ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಪ್ರಚಾರ ಆರಂಭವಾಗಿದ್ದು, ಮೊದಲ ಹಂತದ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ, ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಪಶ್ಚಿಮ ಬಂಗಾಳದ ಬಿಜೆಪಿ...

ಹಾಸನ| ರೈತ ಮುಖಂಡ ವಾಸುದೇವ ಕಲ್ಕೆರೆ ಮೇಲೆ ಹಲ್ಲೆ; ದುಷ್ಕರ್ಮಿಗಳ ಬಂಧನಕ್ಕೆ ಕೆಪಿಆರ್‌ಎಸ್‌ ಆಗ್ರಹ

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಕರ್ನಾಟಕ ಪ್ರಾಂತ ರೈತ ಸಂಘದ (ಕೆಪಿಆರ್‌ಎಸ್‌) ಕಾರ್ಯದರ್ಶಿ ಹಾಗೂ ಕಲ್ಕೆರೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ, ಡಿವೈಎಫ್‌ಐ ಜಿಲ್ಲಾಧ್ಯಕ್ಷ ವಾಸುದೇವ ಕಲ್ಕೆರೆ ಮೇಲೆ ಹಲ್ಲೆ-ದೌರ್ಜನ್ಯ ನಡೆಸಿರುವ ಗೂಂಡಾಗಳನ್ನು...

ಉತ್ತರ ಪ್ರದೇಶ| ಡಿಜಿಟಲ್ ಬಂಧನದಿಂದ ಪೋಷಕರನ್ನು ರಕ್ಷಿಸಿದ 8ನೇ ತರಗತಿ ವಿದ್ಯಾರ್ಥಿ

ಸುಮಾರು 10 ಗಂಟೆಗಳ ಕಾಲ ವೀಡಿಯೊ ಕರೆ ಮೂಲಕ ಡಿಜಿಟಲ್ ಬಂಧನಕ್ಕೆ ಒಳಗಾಗಿದ್ದ ತನ್ನ ಹೆತ್ತವರು ಹಣ ಕಳೆದುಕೊಳ್ಳದಂತೆ 8ನೇ ತರಗತಿಯ ಬಾಲಕನೊಬ್ಬ ರಕ್ಷಿಸಿರುವ ಘಟನೆ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಬರೇಲಿಯಲ್ಲಿ...

ಅಸ್ಸಾಂ: ಪವನ್ ಖೇರಾ ವಿರುದ್ಧದ ಪ್ರಕರಣದಲ್ಲಿ ಒಂದು ವಾರದ ನಿರೀಕ್ಷಣ ಜಾಮೀನು ನೀಡಿದ ತೆಲಂಗಾಣ ಹೈಕೋರ್ಟ್

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ಅವರು ಸಲ್ಲಿಸಿದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ತೆಲಂಗಾಣ ಹೈಕೋರ್ಟ್ ಶುಕ್ರವಾರ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರಿಗೆ ಒಂದು ವಾರದ...

ನಿವಾಸದಲ್ಲಿ ನಗದು ಪತ್ತೆ ಪ್ರಕರಣದಲ್ಲಿ ಸಿಲುಕಿದ್ದ ನ್ಯಾಯಮೂರ್ತಿ ಯಶವಂತ್ ವರ್ಮಾ ರಾಜೀನಾಮೆ

ತಮ್ಮ ನಿವಾಸದಲ್ಲಿ ನಗದು ಪತ್ತೆ ಆರೋಪದ ಕೇಂದ್ರಬಿಂದುವಾಗಿದ್ದ ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಕಳೆದ ವರ್ಷ ಏಪ್ರಿಲ್ 5...

ಆಂಧ್ರಪ್ರದೇಶ: ಬೇಸಿಗೆ ವಿಹಾರಕ್ಕೆಂದು ತೆರಳಿದ್ದ ಮೂವರು ಅಪ್ರಾಪ್ತ ಬಾಲಕಿಯರು ಅನಂತಗಿರಿ ಜಲಪಾತದಲ್ಲಿ ಮುಳುಗಿ ಸಾವು 

ಅನಂತಗಿರಿ: ಬೇಸಿಗೆ ವಿಹಾಕ್ಕೆಂದು ತೆರಳಿದ್ದ ಮೂವರು ಅಪ್ರಾಪ್ತ ಬಾಲಕಿಯರು ಅನಂತಗಿರಿ ಜಲಪಾತದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಜಲಪಾತಕ್ಕೆ ಇಳಿದು ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲೂರಿ ಸೀತಾರಾಮರಾಜು ಮೂಲಗುಮ್ಮಿ ಗ್ರಾಮದಲ್ಲಿ ನಾಲ್ವರು...