ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಮ್ಮು-ಕಾಶ್ಮೀರ ಸರ್ಕಾರದ ಮಾಜಿ ಕ್ಯಾಬಿನೆಟ್ ಸಚಿವ ಚೌಧರಿ ಲಾಲ್ ಸಿಂಗ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ.
2 ಬಾರಿ ಸಂಸತ್ ಸದಸ್ಯ ಮತ್ತು ಡೋಗ್ರಾ ಸ್ವಾಭಿಮಾನ್ ಸಂಘಟನೆ ಪಕ್ಷದ (ಡಿಎಸ್‌ಎಸ್‌ಪಿ) ಮುಖ್ಯಸ್ಥರಾಗಿರುವ ಸಿಂಗ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಜಮ್ಮುವಿನ ಭ್ರಷ್ಟಾಚಾರ ವಿರೋಧಿ ನ್ಯಾಯಾಲಯ ವಜಾಗೊಳಿಸಿದ ಬೆನ್ನಲ್ಲೇ ಈ ಬಂಧನ ನಡೆದಿದೆ.
ಈ ಪ್ರಕರಣವು ಅವರ ಪತ್ನಿ ಕಾಂತಾ ಅಂಡೋತ್ರಾ ನಡೆಸುತ್ತಿರುವ ಶೈಕ್ಷಣಿಕ ಟ್ರಸ್ಟ್‌ಗೆ ಸಂಬಂಧಿಸಿದೆ. ಆದರೆ ಪ್ರಕರಣದಲ್ಲಿ ಅಂಡೋತ್ರಾ ಮತ್ತು ಸಿಂಗ್ ಅವರ ಪುತ್ರಿ ಕ್ರಾಂತಿಗೆ ನ್ಯಾಯಾಲಯವು ನ.30ರವರೆಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿದೆ.
ಬಂಧನಕ್ಕೂ ಮುನ್ನ ಮಾಜಿ ಸಚಿವರನ್ನು ಇಡಿ ಶನಿವಾರ ಮತ್ತು ಸೋಮವಾರ ವಿಚಾರಣೆಗೆ ಒಳಪಡಿಸಿತ್ತು. ಅಕ್ಟೋಬರ್‌ನಲ್ಲಿ ಟ್ರಸ್ಟ್‌ನ ವಿರುದ್ಧದ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಇಡಿ ಜಮ್ಮುವಿನಲ್ಲಿ ಶೋಧ ನಡೆಸಿತ್ತು.
ಮಾಜಿ ಕಂದಾಯ ಅಧಿಕಾರಿ ರವೀಂದರ್ ಎಸ್ ಅವರ ಆರ್‌ಬಿ ಎಜುಕೇಷನಲ್ ಟ್ರಸ್ಟ್‌ಗೆ ಸಂಬಂಧಿಸಿದ ಜಮ್ಮು, ಕಥುವಾ ಮತ್ತು ಪಂಜಾಬ್ ಪಠಾಣ್‌ಕೋಟ್‌ನ 8 ಸ್ಥಳಗಳ ಮೇಲೆ ಕೂಡ ಇಡಿ ದಾಳಿ ನಡೆಸಿತ್ತು.
2014ರಲ್ಲಿ ಕಾಂಗ್ರೆಸ್‌ನಿಂದ ಲೊಕಸಭೆಗೆ ಟಿಕೆಟ್ ನಿರಾಕರಿಸಿದ ನಂತರ ಸಿಂಗ್ 2014ರಲ್ಲಿ ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ ಬಿಜೆಪಿ ಸೇರಿದ್ದರು. ಅವರು 2014ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದು ಕ್ಯಾಬಿನೆಟ್ ಸಚಿವ ಸ್ಥಾನ ಪಡೆದುಕೊಂಡಿದ್ದರು.
2018ರ ಜನವರಿಯಲ್ಲಿ ಕಥುವಾದಲ್ಲಿ 8 ವರ್ಷದ ಅಲೆಮಾರಿ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳ ಬೆಂಬಲಕ್ಕಾಗಿ ನಡೆದ ರ್ಯಾಲಿಯಲ್ಲಿ ಭಾಗವಹಿಸಿದ್ದಕ್ಕಾಗಿ ಪ್ರತಿಭಟನೆಯ ನಂತರ ಅವರು ಬಿಜೆಪಿಗೆ ರಾಜೀನಾಮೆ ನೀಡಿದ್ದರು. ಆ ಬಳಿಕ ಅವರು ಡಿಎಸ್‌ಎಸ್‌ಪಿಯನ್ನು ಪ್ರಾರಂಭಿಸಿದ್ದರು.
ಇದನ್ನು ಓದಿ: ಮರಾಠರಿಗೆ OBC ವರ್ಗದಡಿ ಮೀಸಲಾತಿ ನೀಡುವುದಕ್ಕೆ ಒಬಿಸಿ ಸಮುದಾಯ ವಿರೋಧ


