ಮುಂಬೈ ಪೊಲೀಸರು ವಿವಾದಿತ ಮಹಾದೇವ್ ಬೆಟ್ಟಿಂಗ್ ಆಪ್‌ನ ಅಂಗಸಂಸ್ಥೆಯಾದ ಖಿಲಾಡಿ ಆಪ್‌ನ ಸಂಸ್ಥಾಪಕ ಸೌರಭ್ ಚಂದ್ರಕರ್ ಸೇರಿದಂತೆ 32 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಕುರ್ಲಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನಿರ್ದೇಶನದ ಮೇರೆಗೆ ಮಾಟುಂಗಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಮಾಟುಂಗಾದ ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ಬಣಕಾರ್ ಅವರು ದೂರು ನೀಡಿದ್ದು, 2019ರಿಂದ ಇಲ್ಲಿಯವರೆಗೆ ಆನ್‌ಲೈನ್ ಬೆಟ್ಟಿಂಗ್ ಅಪ್ಲಿಕೇಶನ್‌ಗಳ ಮೂಲಕ ಸುಮಾರು 15,000 ಕೋಟಿ ರೂಪಾಯಿಗಳ ವಂಚನೆ ಮಾಡಲಾಗಿದೆ. ಇದಕ್ಕೆ ದೊಡ್ಡ ಸೆಲೆಬ್ರಿಟಿಗಳು ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸೌರಭ್ ಚಂದ್ರಾಕರ್ ಛತ್ತೀಸ್‌ಗಢದ ಭಿಲಾಯಿ ಮೂಲದವರು. ಜಾರಿ ನಿರ್ದೇಶನಾಲಯ ಸೇರಿದಂತೆ ಹಲವು ಏಜೆನ್ಸಿಗಳು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಬಾಲಿವುಡ್ ಸೆಲೆಬ್ರಿಟಿಗಳನ್ನು ವಿಚಾರಣೆಗೆ ಕರೆಸಿದ್ದಾರೆ.
ದೂರುದಾರರು, ನಾಗರಿಕರಿಗೆ ಮೋಸ ಮಾಡಲಾಗಿದೆ. ಕ್ರಿಕೆಟ್, ಟೆನಿಸ್, ಟೀನ್ ಪ್ಯಾಟಿ, ಫುಟ್‌ಬಾಲ್ ಮುಂತಾದ ವಿವಿಧ ಆಟಗಳ ಮೂಲಕ ಬೆಟ್ಟಿಂಗ್‌ಗೆ ಮಾಡಲು ಪ್ರೋತ್ಸಾಹಿಸಲಾಗಿದೆ. ಈ ಲಾಭಗಳನ್ನು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಹವಾಲಾ ವ್ಯವಹಾರದಲ್ಲಿ ಕಾನೂನುಬಾಹಿರ ಉದ್ದೇಶಗಳಿಗಾಗಿ ಬಳಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಎಫ್‌ಐಆರ್‌ನಲ್ಲಿ ಒಟ್ಟು 32 ಜನರನ್ನು ಆರೋಪಿಗಳೆಂದು ಉಲ್ಲೇಖಿಸಲಾಗಿದೆ ಎಂದು ಮಾಟುಂಗಾ ಪೊಲೀಸ್ ಠಾಣೆಯ ಅಧಿಕಾರಿಗಳು ಹೇಳಿದ್ದಾರೆ. ಪಂಜಾಬ್‌ನ ರೋಹಿತ್‌ಕುಮಾರ್ ಮುರ್ಗೈ, ದುಬೈನ ಕುಮಾರ್ ರಾಠಿ, ಛತ್ತೀಸ್‌ಗಢದ ಶುಭಂ ಸೋನಿ, ಛತ್ತೀಸ್‌ಗಢದ ಅತುಲ್ ಅಗರ್ವಾಲ, ಪಶ್ಚಿಮ ಬಂಗಾಳದ ವಿಕಾಸ್ ಚಪಾರಿಯಾ, ಮುಂಬೈನ ಅಮಿತ್, ದುಬೈನ ಲಾಲಾ ರಾಠಿ, ಛತ್ತೀಸ್‌ಗಢದ ಅಭಿಷೇಕ್ ರಾಠಿ, ಮುಂಬೈನ ಖಂಜಾಮ್ ಠಕ್ಕರ್, ಮುಂಬೈನ ಅಮಿತ್ ಜಿಂದಾಲ್ ಸೇರಿ 32 ಜನರ ಹೆಸರನ್ನು ಕೂಡ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ವರದಿಯ ಪ್ರಕಾರ ಮುಂಬೈ, ರಾಯ್‌ಪುರ ಮತ್ತು ಕೋಲ್ಕತ್ತಾ ಸೇರಿದಂತೆ ಹಲವು ರಾಜ್ಯಗಳಲ್ಲಿ 39 ಸ್ಥಳಗಳಲ್ಲಿ ಇಡಿ ಶೋಧನೆ ನಡೆಸಿದ್ದು 417 ಕೋಟಿ ರೂ.ಗಳನ್ನು ಜಫ್ತಿ ಮಾಡಿದೆ.
ಆರೋಪಿಗಳ ವಿರುದ್ಧ ಮಹಾರಾಷ್ಟ್ರದ ಜೂಜು ತಡೆ ಕಾಯಿದೆ ಸೆಕ್ಷನ್ 12(ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದಲ್ಲದೆ ವಂಚನೆ, ಭಾರತೀಯ ದಂಡ ಸಂಹಿತೆಯ ಕ್ರಿಮಿನಲ್ ಪಿತೂರಿ ಮತ್ತು ಐಟಿ ಕಾಯ್ದೆಯ ಸೆಕ್ಷನ್ 66 ಸಿ ಮತ್ತು 66 (ಎಫ್) ಸೆಕ್ಸನ್‌ಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮಾಟುಂಗಾದಲ್ಲಿ ದಾಖಲಾದ ಪ್ರಕರಣವನ್ನು ಶೀಘ್ರದಲ್ಲೇ ಆರ್ಥಿಕ ಅಪರಾಧ ವಿಭಾಗಕ್ಕೆ ವರ್ಗಾಯಿಸಲಾಗುವುದು. ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿ: ಸೌಜನ್ಯ ಪ್ರಕರಣ: ಸಂತೋಷ್ ರಾವ್ ಖುಲಾಸೆ ಪ್ರಶ್ನಿಸಿ ಸಿಬಿಐ ಮೇಲ್ಮನವಿ


