Homeಕರ್ನಾಟಕ’ಕೋಮುವಾದ ತಡೆ’ ಗ್ಯಾರಂಟಿ ಜಾರಿಗೆ ಬರುವುದು ಯಾವಾಗ?

’ಕೋಮುವಾದ ತಡೆ’ ಗ್ಯಾರಂಟಿ ಜಾರಿಗೆ ಬರುವುದು ಯಾವಾಗ?

- Advertisement -
- Advertisement -

2018ರ ಚುನಾವಣೆಯಲ್ಲಿ ಸಿದ್ದರಾಮಯ್ಯನವರು ಅಧಿಕಾರ ಕಳೆದುಕೊಂಡರು; ನಂತರ ಮೈತ್ರಿ ಸರ್ಕಾರವೂ ಪತನವಾದ ಮೇಲೆ ಅವರು ವಿರೋಧ ಪಕ್ಷದ ನಾಯಕರಾಗಿ ಕುಳಿತಿದ್ದರು. ಆಪರೇಷನ್ ಕಮಲದ ಮೂಲಕ ಆಡಳಿತಕ್ಕೆ ಬಂದ ಬಿಜೆಪಿ ಕೋಮುವಾದಿ ಅಜೆಂಡಾವನ್ನು ಬಿರುಸಾಗಿ ಜಾರಿಗೊಳಿಸುತ್ತಿತ್ತು. ನಾಡಿನ ಪ್ರಜ್ಞಾವಂತ ಜನಸಮೂಹ ಆತಂಕಕ್ಕೆ ಒಳಗಾಯಿತು. ಆ ಸಂದರ್ಭದಲ್ಲಿ ಪ್ರಗತಿಪರ ವಲಯ ಹಮ್ಮಿಕೊಂಡಿದ್ದ ಕ್ಲಬ್‌ಹೌಸ್ ಚರ್ಚೆಯೊಂದರಲ್ಲಿ ಪಾಲ್ಗೊಂಡಿದ್ದ ಸಿದ್ದರಾಮಯ್ಯನವರು ಆಡಿದ ಮಾತುಗಳನ್ನು ನೆನೆಯುವುದು ಸೂಕ್ತ. ಚಿಂತಕ ಶ್ರೀನಿವಾಸ ಕಾರ್ಕಳ ಅವರು ಪ್ರಶ್ನೆ ಕೇಳುತ್ತಾ, ’ಕರಾವಳಿಯಲ್ಲಿ ನೈತಿಕ ಪೊಲೀಸ್‌ಗಿರಿ ಹೆಚ್ಚಾಗುತ್ತಿದೆ. ಒಂದು ಹುಡುಗ, ಒಂದು ಹುಡುಗಿ ಒಂದು ಕಡೆ ನಿಂತು ಮಾತನಾಡುತ್ತಿದ್ದರೆ, ಧರ್ಮದ ಹೆಸರಲ್ಲಿ ಗೂಂಡಾಗಿರಿ ಮಾಡುವವರಿಗೆ ಸುದ್ದಿ ಮುಟ್ಟಿಸಿ ಆ ಜೋಡಿಗಳಿಗೆ ತೊಂದರೆ ನೀಡುವ ಜಾಲ ದೊಡ್ಡದಾಗಿ ಬೆಳೆಯುತ್ತಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಇಂತಹ ಪ್ರವೃತ್ತಿಯ ಕಡಿವಾಣಕ್ಕೆ ಕಠಿಣ ಕ್ರಮ ಜರುಗಿಸದಿರುವುದೂ ಇದಕ್ಕೆ ಕಾರಣವೇ?’ ಎಂದಿದ್ದರು. ಇದಕ್ಕೆ ಪ್ರಾಮಾಣಿಕವಾಗಿ ಉತ್ತರಿಸಿದ ಸಿದ್ದರಾಮಯ್ಯನವರು, ’ಕರಾವಳಿ ಭಾಗವು ಕೋಮುವಾದದ ಪ್ರಯೋಗಾಲಯ ಎಂಬುದು ಸತ್ಯ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಕರಾವಳಿಯಲ್ಲಿ ಕೋಮುಗಲಭೆಗಳನ್ನು ತಡೆಯುವಲ್ಲಿ ಹಿನ್ನಡೆಯಾಯಿತು ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಹಾಗೆಂದು ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಕುರಿತು ಭಯವೇನೂ ಇಲ್ಲ ಎಂದು ತಿಳಿಸಿದ್ದರು. ಸಿದ್ದರಾಮಯ್ಯನವರು ಮತ್ತೆ ಅಧಿಕಾರಕ್ಕೆ ಬಂದರೆ ಮೊದಲಿನ ತಪ್ಪುಗಳು ಮರುಕಳಿಸುವುದಿಲ್ಲ ಎಂಬ ಆಶಾಭಾವನೆಯನ್ನು ಅವರ ಪ್ರತಿಕ್ರಿಯೆ ಹುಟ್ಟಿಹಾಕಿತ್ತು. ವಿರೋಧ ಪಕ್ಷದ ನಾಯಕರಾಗಿ ಅವರು ತೋರಿದ ಉತ್ಸಾಹ, ಕೋಮು ಸೌಹಾರ್ದತೆಗಿದ್ದ ಬದ್ಧತೆ ಪ್ರಶ್ನಾತೀತವಾಗಿತ್ತು. ಅವರ ಸೆಕ್ಯುಲರಿಸಂ ಬಗ್ಗೆ ಅನುಮಾನಗಳನ್ನು ಇಟ್ಟುಕೊಳ್ಳದ ನಾಡಿನ ಜನತೆ, ಬಿಜೆಪಿಯ ದುರಾಡಳಿತದಿಂದ ಬೇಸತ್ತು 2023ರಲ್ಲಿ ಪ್ರಚಂಡ ಬಹುಮತವನ್ನು ಕಾಂಗ್ರೆಸ್‌ಗೆ ನೀಡಿದರು. ಸರ್ಕಾರ ರಚನೆಯಾದ ಮೇಲೆ ಜನಪ್ರಿಯ ಹಾಗೂ ಜನಪರ ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಹೆಜ್ಜೆ ಇಟ್ಟು ಒಂದಿಷ್ಟು ನೆಮ್ಮದಿಯನ್ನು ತಂದಿದ್ದು ಸುಳ್ಳಲ್ಲ. ಆದರೆ ನಿಧಾನಕ್ಕೆ ಸರ್ಕಾರ ನಿಷ್ಕ್ರಿಯವಾಗಿ, ಹಿಂದಿನ ಸರ್ಕಾರಕ್ಕೆ ವ್ಯತ್ಯಾಸವೇ ಇಲ್ಲವೇನೋ ಎಂಬಂತೆ ವರ್ತಿಸತೊಡಗಿರುವುದು, ಕಾಂಗ್ರೆಸ್ ಸರ್ಕಾರದ ಮೇಲೆ ಅಪಾರ ನಿರೀಕ್ಷೆಗಳನ್ನು ಇಟ್ಟುಕೊಂಡು ಬದಲಾವಣೆಗೆ ಮತ ನೀಡಿದ ಜನರು ಭ್ರಮನಿರಸನವಾಗುವಂತಾಗಿದೆ.

ಐದು ಗ್ಯಾರಂಟಿಗಳಂತಹ ರಚನಾತ್ಮಕ ಕಾರ್ಯಕ್ರಮಗಳಿಗೆ ಜನಪರವಾಗಿ ಚಿಂತಿಸುವ ಎಲ್ಲರ ಬೆಂಬಲ ಇದ್ದೇ ಇದೆ. ಆದರೆ ಕಾಂಗ್ರೆಸ್‌ನಿಂದ ನಾಡು ನಿರೀಕ್ಷಿಸಿದ್ದು ಇಷ್ಟೇ ಅಲ್ಲ. ಈ ರಾಜ್ಯದಲ್ಲಿ ಪ್ರಜಾಸತ್ತಾತ್ಮಕವಾದ ಪ್ರತಿಭಟಿಸುವ ಹಕ್ಕು, ವಾಕ್ ಸ್ವಾತಂತ್ರ್ಯದ ಹಕ್ಕು ಬಲವಾಗುತ್ತವೆ ಎಂದು ಹಲವು ವಲಯಗಳ ಸಾಮಾಜಿಕ ಕಾರ್ಯಕರ್ತರು ಭಾವಿಸಿದ್ದರು. ಆ ಮೂಲಕ ಇಡೀ ದೇಶಕ್ಕೆ ಒಂದು ಸಂದೇಶ ಕೊಡುವ ಸಾಧ್ಯತೆಯ ಬಗ್ಗೆ ಅವರೆಲ್ಲರೂ ಆಶಾವಾದದಿಂದಿದ್ದರು. ಕೋಮುದ್ವೇಷ ಬಿತ್ತುವವರನ್ನು ಕಾನೂನಿನ ಕಟಕಟೆಯಲ್ಲಿ ನಿಲ್ಲಿಸಿ, ನಿಜವಾದ ಸೆಕ್ಯುಲರ್ ಸ್ಟೇಟ್ ನಿರ್ಮಾಣವಾಗುತ್ತದೆ ಎಂಬ ಅತಿಯಾದ ಭರವಸೆ ಜನರಿಗಿತ್ತು. ಆದರೆ ಆಗುತ್ತಿರುವುದೇನು?

ಇತ್ತೀಚಿನ ಕೆಲವು ಘಟನೆಗಳು ಮತ್ತು ಅದಕ್ಕೆ ರಾಜ್ಯ ಸರ್ಕಾರದ ಪ್ರತಿಕ್ರಿಯೆಗಳನ್ನು ನೋಡುತ್ತಿದ್ದರೆ, ಹಿಂದುತ್ವದ ಹೆಸರಲ್ಲಿ ನಡೆಯುವ ದಾಂಧಲೆಗಳಿಗೆ ಸರ್ಕಾರ ಬೆದರಿದಂತೆ ಕಾಣುತ್ತಿದೆ. ಪ್ಯಾಲೆಸ್ತೀನ್ ಪರವಾಗಿ ರಾಜ್ಯದಲ್ಲಿ ದನಿ ಎತ್ತಿದರೆ ಕೇಸ್‌ಗಳನ್ನು ಜಡಿಯಲಾಗಿದೆ. ಮೂಲನಿವಾಸಿ ಪ್ಯಾಲೆಸ್ತೀನಿಯರನ್ನು ಒಕ್ಕಲೆಬ್ಬಿಸಿ ರೂಪುಗೊಂಡ ಇಸ್ರೇಲ್‌ನದ್ದು ಕಳಂಕಯುಕ್ತ ರಕ್ತಸಿಕ್ತ ಚರಿತ್ರೆ. ಜರ್ಮನಿಯಲ್ಲಿ ನಾಜಿಗಳಿಂದ ನರಮೇಧಕ್ಕೊಳಗಾದ ಯಹೂದಿಗಳು ಮಾಡಿದ್ದೇನು? ದಶಕಗಳಿಂದಲೂ ಅಲ್ಲಿನ ಪ್ಯಾಲೆಸ್ತೀನಿಯರನ್ನು ದಮನ ಮಾಡುತ್ತಲೇ ಬಂದರು. ಗಾಜಾ ಪಟ್ಟಿ ಎಂಬ ಬಯಲು ಬಂದಿಖಾನೆಗೆ ದೂಡಲ್ಪಟ್ಟ ಪ್ಯಾಲೇಸ್ತೀನಿಯರ ಪರವಾಗಿ ಸಶಸ್ತ್ರ ಸಂಘಟನೆ ಹಮಾಸ್ ಇತ್ತೀಚೆಗೆ ತೋರಿದ ಹಿಂಸಾತ್ಮಕ ಪ್ರತಿರೋಧಕ್ಕೆ ಪ್ರತಿಯಾಗಿ ಇಸ್ರೇಲ್ ಅಮಾಯಕ ಪ್ಯಾಲೆಸ್ತೀನಿಯರ ಜಿನೊಸೈಡ್‌ಗೆ ಕಾರಣವಾಗಿದೆ. ಒಂದು ಕಣ್ಣಿಗೆ ಸಾವಿರ ಕಣ್ಣು ನೀತಿಯನ್ನು ಇಸ್ರೇಲ್ ಅನುಸರಿಸುತ್ತಿದೆ. ವೆಸ್ಟ್ ಬ್ಯಾಂಕ್‌ನಲ್ಲೂ ನೂರಾರು ಪ್ಯಾಲೆಸ್ತೀನಿ ರೈತರನ್ನು ಕೊಂದು ಭೂಮಿ ಕಸಿದುಕೊಳ್ಳಲಾಗುತ್ತಿದೆ. ಜಗತ್ತಿನ ಯಾವುದೇ ಮೂಲೆಯ ಜನರನ್ನು ಚಿಂತೆಗೆ ಈಡು ಮಾಡಬೇಕಾದ ಸಂಗತಿ ಇದು. ಅಂತೆಯೇ ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿಯವರ ಮನಸ್ಸು ಕೂಡ ತಲ್ಲಣಿಸಿತು. ’ದಿ ಹಿಂದೂ’ ಪತ್ರಿಕೆಯಲ್ಲಿ ಲೇಖನವನ್ನೂ ಬರೆದರು. “ಈ ಯುದ್ಧವು ಮಾನವೀಯತೆಯನ್ನೇ ಕಟೆಕಟೆಯಲ್ಲಿ ನಿಲ್ಲಿಸಿದೆ. ನ್ಯಾಯವಿಲ್ಲದೆ ಶಾಂತಿ ಸಾಧ್ಯವಿಲ್ಲ. ಅನ್ನ, ನೀರು ಕೊಡದೆ ಪ್ಯಾಲೆಸ್ತೀನಿಯರನ್ನು ಗಾಜಾದಲ್ಲಿ ನಡೆಸಿಕೊಳ್ಳುತ್ತಿರುವ ರೀತಿ ಅಮಾನವೀಯ” ಎಂದು ಮರುಗಿದರು. ಆದರೆ ಕಾಂಗ್ರೆಸ್ ಅಧಿಕಾರದಲ್ಲಿರುವ ಕರ್ನಾಟಕದಲ್ಲಿ ಆಗುತ್ತಿರುವುದೇನು? ಪ್ಯಾಲೆಸ್ತೀನ್-ಇಸ್ರೇಲ್‌ನಲ್ಲಿ ಶಾಂತಿ ನೆಲೆಸಲಿ ಎಂದು ಶಾಂತಿಯುತ ಸಭೆಗಳನ್ನು ನಡೆಸುವುದು ತಪ್ಪೇ? ಪ್ಯಾಲೆಸ್ತೀನ್ ಪರವಾಗಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದರೆ ಎಫ್‌ಐಆರ್ ಹಾಕಬಹುದೇ?

ಬೆಂಗಳೂರಿನ ಎಂ.ಜಿ.ರಸ್ತೆಯಲ್ಲಿ ಸಾವಿರಾರು ಶಾಂತಿಪ್ರಿಯ ನಾಗರಿಕರು ಸ್ವಪ್ರೇರಿತರಾಗಿ ಸೇರಿ ಯುದ್ಧ ವಿರಾಮವನ್ನು ಆಗ್ರಹಿಸಿ ಭಿತ್ತಿಪತ್ರ ಪ್ರದರ್ಶನ ಮಾಡಿದರೆ, ಕಾನೂನು ಉಲ್ಲಂಘನೆಯ ಆಪಾದನೆ ಹೊರಿಸಿ 30ಕ್ಕೂ ಹೆಚ್ಚು ಪ್ರತಿಭಟನಾಕಾರರ ಮೇಲೆ ಪ್ರಕರಣ ದಾಖಲಿಸಲಾಯಿತು. ಫ್ರೀಡಂಪಾರ್ಕಿನಲ್ಲಿ ಮಾತ್ರ ಪ್ರತಿಭಟನೆಗೆ ಅವಕಾಶ ಎಂಬ ಸಬೂಬು ನೀಡಲಾಯಿತು. (ಫ್ರೀಡಂಪಾರ್ಕ್‌ನಲ್ಲಿ ಮಾತ್ರ ಪ್ರತಿಭಟಿಸಬೇಕೆಂದು ಹೈಕೋರ್ಟ್ ಆದೇಶವಿಲ್ಲ ಎಂಬುದು ವಾಸ್ತವ. ಅದು ಪೊಲೀಸರೇ ಮಾಡಿಕೊಂಡಿರುವ ನಿಯಮ. ಅಂತಹ ನಿರ್ಬಂಧಗಳನ್ನು ಕೋರ್ಟ್ ಸೂಚಿಸಿದರೂ ಅದು ಪ್ರಶ್ನಾರ್ಹ ಎಂಬುದು ಬೇರೆಯ ಮಾತು.) ಎಸ್‌ಯುಸಿಐ ಸಂಘಟನೆ ಫ್ರೀಡಂಪಾರ್ಕಿನಲ್ಲೇ ಪ್ರತಿಭಟನೆಗೆ ಅವಕಾಶ ನೀಡಿರೆಂದು ಮನವಿ ಕೊಟ್ಟರೆ, ಶಾಂತಿ ಸುವ್ಯವಸ್ಥೆಯ ನೆಪವೊಡ್ಡಿ ಅನುಮತಿ ನಿರಾಕರಿಸಲಾಯಿತು. ಸಿಪಿಐ, ಸಿಪಿಎಂ, ಸಿಪಿಐ-ಎಂಎಲ್ ಸಂಘಟನೆಗಳು ಪ್ರತಿಭಟನೆಗೆ ಅವಕಾಶ ಕೇಳಿದರೆ ಸ್ಥಳಾವಕಾಶದ ಕೊರತೆ ನೆಪ ನೀಡಿ ತಡೆಯಲಾಯಿತು. ಹತ್ತಾರು ವರ್ಷಗಳಿಂದ ಪರಿಸರ ಪರ, ಪ್ರಗತಿಪರ ಚಳವಳಿಯಲ್ಲಿ ಮುಂಚೂಣಿಯಲ್ಲಿರುವ ತುಮಕೂರಿನ ಸಿ.ಯತಿರಾಜು ಹಾಗೂ ಇತರರ ಮೇಲೆ ಕೇಸ್ ಜಡಿಯಲಾಗಿದೆ. ಯುದ್ಧ ನಿಲ್ಲಬೇಕೆಂದು ಶಾಂತಿಯುತ ಪ್ರತಿಭಟನೆ ನಡೆಸಿದರೆ ಎರಡು ಕೋಮುಗಳ ನಡುವೆ ವೈಷಮ್ಯ ಬಿತ್ತುತ್ತಿದ್ದಾರೆಂದು ಪ್ರಕರಣ ದಾಖಲಿಸಿರುವುದು ನಾಚಿಕೆಗೇಡಿನ ಸಂಗತಿ.

ಎಸ್‌ಡಿಪಿಐ ಹಾಗೂ ಕೆಲವು ಸಂಘಟನೆಗಳು ಶಾಂತಿಗಾಗಿ ಧರಣಿ ಮಾಡಲು ಅವಕಾಶ ಕೋರಿದರೆ ವಿಜಯಪುರದ ಪೊಲೀಸ್ ಅಧಿಕಾರಿಗಳು ಕೊಟ್ಟ ಕಾರಣ ಆತಂಕ ಹುಟ್ಟಿಸುತ್ತದೆ: “ಕೇಂದ್ರ ಸರ್ಕಾರದ ಅಧಿಕೃತ ನಿಲುವಿಗೆ ಈ ಧರಣಿ ವಿರುದ್ಧವಿದೆ” ಎಂದರು. ಬೆಂಗಳೂರಿನ ಫ್ರೇಜರ್‌ಟೌನ್‌ನಲ್ಲಿ ಹಮ್ಮಿಕೊಂಡಿದ್ದ ಯುದ್ಧ ವಿರೋಧಿ ಕಲಾ ಪ್ರದರ್ಶನ, ಭಾಷಣಕ್ಕೆ ತಡೆ ನೀಡಿದ್ದು, ಕರ್ನಾಟಕ ಸಾಲಿಡಾರಿಟಿ ಯೂಥ್ ಮೂವ್ಮೆಂಟ್ ಸಂಘಟನೆ ತನ್ನ ಕಚೇರಿಯಲ್ಲಿ ತನ್ನ ಸದಸ್ಯರೊಂದಿಗೆ ಪ್ಯಾಲೆಸ್ತೀನ್ ಬಿಕ್ಕಟ್ಟಿನ ಕುರಿತು ಚರ್ಚಿಸಲು ಮುಂದಾದಾಗ ತಡೆ ನೀಡಿ ಕಾರ್ಯಕ್ರಮವನ್ನು ಮುಂದೂಡಿಸಿದ್ದುಒಂದೇ ಎರಡೇ?

ಪ್ಯಾಲೆಸ್ತೀನ್ ವಿಚಾರವಾಗಿ ರಾಜ್ಯ ಸರ್ಕಾರ ನಡೆದುಕೊಂಡಿರುವ ರೀತಿಯನ್ನು ನೋಡುತ್ತಿದ್ದರೆ, ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದೆಯೋ, ಕಾಂಗ್ರೆಸ್ ಅಧಿಕಾರದಲ್ಲಿದೆಯೋ ಎಂಬ ಅನುಮಾನ ಮೂಡುತ್ತದೆ. ಹಿರಿಯ ಪತ್ರಕರ್ತ ಪಿ.ಸಾಯಿನಾಥ್ ಒಮ್ಮೆ ಹೇಳಿದ್ದು: “BJP is Congress + Cow”. ದುರಾದೃಷ್ಟವಶಾತ್ ’ಕೌ’ ರಕ್ಷಕರ ಅಟ್ಟಹಾಸಕ್ಕೆ ಕಡಿವಾಣ ಇಲ್ಲವಾಗಿ, ಕಾಂಗ್ರೆಸ್ ಸಿದ್ಧಾಂತದೊಳಗೆ ಕೌ ರಾಜಕಾರಣ ಕೂಡ ನುಸುಳುತ್ತಿದೆ.

ಕರ್ನಾಟಕದಲ್ಲಿ ಹಿಂದುತ್ವದ ಹೆಸರಲ್ಲಿ ಕಿತಾಪತಿಗಳನ್ನು ಮಾಡುತ್ತಿರುವವರು ಆರಾಮವಾಗಿ ಇರುವುದನ್ನು ನೋಡಿದರೆ ಕಾಂಗ್ರೆಸ್ ಸರ್ಕಾರದ ನಡೆಗಳು ಮತ್ತಷ್ಟು ಬೇಸರ ತರಿಸುತ್ತದೆ. ಅಧಿಕೃತ ದಾಖಲೆಗಳೊಂದಿಗೆ ದನಗಳನ್ನು ಸಾಗಿಸುತ್ತಿದ್ದ ಇದ್ರೀಸ್ ಪಾಷಾ ಎಂಬವರನ್ನು, ಅಡ್ಡಗಟ್ಟಿ ಚಿತ್ರಹಿಂಸೆ ನೀಡಿ ಕೊಲೆ ಮಾಡಿರುವ ಆರೋಪ ಹೊತ್ತಿರುವ ರಾಷ್ಟ್ರ ರಕ್ಷಣಾ ಪಡೆಯ ಮುಖಂಡ, ಹಿಂದುತ್ವದ ಫ್ರಿಂಜ್ ಎಲಿಮೆಂಟ್ ಪುನೀತ್ ಕೆರೆಹಳ್ಳಿ ಮೇಲೆ ಗೂಂಡಾ ಕಾಯ್ದೆ ಹಾಕಲಾಗಿತ್ತು. ಆದರೆ ಪ್ರಕರಣವನ್ನು ಸರಿಯಾಗಿ ನಿರ್ವಹಿಸಲಾಗದೆ ಗೂಂಡಾ ಕಾಯ್ದೆಯನ್ನು ತೆರವು ಮಾಡಲಾಯಿತು. ಹೊರಗೆ ಬಂದ ಪುನೀತ್ ಕೆರೆಹಳ್ಳಿ ಗಾಂಧಿವಾದಿಯಂತೆ ಪೋಸ್ ನೀಡಿ ಉಪವಾಸ ಸತ್ಯಾಗ್ರಹಕ್ಕೆ ಕುಳಿತದ್ದು ಈ ಶತಮಾನದ ವ್ಯಂಗ್ಯಗಳಲ್ಲೊಂದು. ನಿತ್ಯವೂ ಗೋಡ್ಸೆ ಜಪ ಮಾಡುವ ವ್ಯಕ್ತಿಯ ಈ ಅವತಾರಕ್ಕೆ ಬಿಜೆಪಿ ನಾಯಕರ ಬೆಂಬಲವೂ ದೊರಕಿತು. ಹೊಸ ಲುಕ್‌ನಲ್ಲಿ ಕಾಣಿಸಿಕೊಂಡ ಪುನೀತ್ ಕೆರೆಹಳ್ಳಿ ಸಾಮಾಜಿಕ ಮಾಧ್ಯಮಗಳಲ್ಲಿ ಅಶ್ಲೀಲವಾಗಿ ಪೋಸ್ಟ್‌ಗಳನ್ನು ಹಾಕುವುದನ್ನೇನೂ ನಿಲ್ಲಿಸಲಿಲ್ಲ. ಪ್ಯಾಲೆಸ್ತೀನ್ ಪರ ಹಾಕಿದ್ದ ಪ್ಲೆಕ್ಸ್‌ವೊಂದರ ವಿಡಿಯೊ ಮಾಡುತ್ತಾ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಬಾಯಿಗೆಬಂದಂತೆ ಮಾತನಾಡಿದ್ದರು. ಆತನ ಫೇಸ್‌ಬುಕ್ ಖಾತೆಯ ಪೋಸ್ಟ್‌ಗಳನ್ನು ನೋಡಿದರೆ ಮಿತಿಮೀರಿದ ಮುಸ್ಲಿಂ ದ್ವೇಷದ ಪೋಸ್ಟ್‌ಗಳು ಕಾಣಸಿಗುತ್ತವೆ. ಬಸ್ಸಿಗೆ ಬೆಂಕಿ ಹಚ್ಚುತ್ತೇನೆ, ವಿಧಾನಸೌಧಕ್ಕೆ ಕಲ್ಲು ಹೊಡೆಯುತ್ತೇನೆಂದ ಆತನ ವಿರುದ್ಧ ಪ್ರಕರಣ ದಾಖಲಾಗಿದ್ದರೂ ಬಂಧನಕ್ಕೆ ಒಳಗಾಗಿರಲಿಲ್ಲ. ಇತ್ತೀಚೆಗೆ ಆತನ ಹಳೆಯದೊಂದು ಪ್ರಕರಣದ ಕುರಿತು ’ಈದಿನ.ಕಾಂ’ ಸರಣಿ ವರದಿ ಪ್ರಕಟಿಸಿತ್ತು. 2013ರ ಮಾರ್ಚ್‌ನಲ್ಲಿ (ಅಂದರೆ ಬಿಜೆಪಿ ಅಧಿಕಾರದಲ್ಲಿದ್ದ ಅವಧಿಯಲ್ಲಿ) ವೇಶ್ಯಾವಾಟಿಕೆ ದಂಧೆಯಲ್ಲಿ ಆರೋಪಿತನಾಗಿದ್ದ ಪುನೀತ್ ಕೆರೆಹಳ್ಳಿ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಂಡು ಆರೋಪಮುಕ್ತನಾಗಿದ್ದು ಹೇಗೆಂದು ವರದಿ ಬಯಲು ಮಾಡಿತ್ತು. ಪೊಲೀಸರು ತೋರಿದ ನಿರ್ಲಕ್ಷ್ಯ ಮೇಲ್ನೋಟಕ್ಕೇ ಎದ್ದುಕಾಣುತ್ತಿತ್ತು. ಬಿಜೆಪಿ ಅಧಿಕಾರಾವಧಿಯಲ್ಲಿ ಆತನ ವಿರುದ್ಧ ಕೇಸ್ ಖುಲಾಸೆಯಾಗಿದೆ ಎಂಬುದನ್ನು ವರದಿಗಳು ಎತ್ತಿ ಹಿಡಿದಿದ್ದವು. ’ಈದಿನ’ದಲ್ಲಿ ಬಂದ ವರದಿಯನ್ನು ಹಂಚಿಕೊಂಡ ಕಾರಣಕ್ಕೆ ಕನ್ನಡಪರ ಹೋರಾಟಗಾರ, ದಲಿತ ಮುಖಂಡ ಹರೀಶ್ ಭೈರಪ್ಪನವರ ಮೇಲೆ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡ ಸೂರ್ಯ ಮುಕುಂದರಾಜ್ ಅವರ ಕುರಿತು ತೀರಾ ಅಶ್ಲೀಲ ಪದಗಳಿಂದ ಕೂಡಿದ ಪೋಸ್ಟ್‌ಗಳನ್ನು ಪುನೀತ್ ಹಾಕಿದ್ದರು. ವೈಯಕ್ತಿಕ ತೇಜೋವಧೆ ಮಾಡಿದ್ದರು. ಇಬ್ಬರೂ ಕೂಡ ಪ್ರಕರಣ ದಾಖಲಿಸಿದರು. ಹರೀಶ್ ಭೈರಪ್ಪನವರು ನೀಡಿದ ಸುದೀರ್ಘ ದೂರಿನ ಅನ್ವಯ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಜಾತಿನಿಂದನೆ ಪ್ರಕರಣ ದಾಖಲಾಯಿತು. ಇಷ್ಟು ಕೆಲಸವಾಗಲು ಭೈರಪ್ಪನವರು ಪೊಲೀಸ್ ಠಾಣೆಗೆ ಅಲೆಯಬೇಕಾಯಿತು. ಆನಂತರ ಎಷ್ಟೋ ದಿನದ ನಂತರ ಆತನ ಬಂಧನವಾಗಿದ್ದು.

ಇದನ್ನೂ ಓದಿ: ಜಾತಿ ನಿಂದನೆ ಪ್ರಕರಣ: ಹಿಂದುತ್ವವಾದಿ ಪುನೀತ್ ಕೆರೆಹಳ್ಳಿ ಬಂಧನ

ಸರ್ಕಾರದ ನಿರ್ಲಕ್ಷ್ಯ ಕುರಿತು ’ನ್ಯಾಯಪಥ’ದೊಂದಿಗೆ ಮಾತನಾಡಿದ ಹರೀಶ್ ಅವರು, “ನಾವೊಂದು ಪ್ರಕರಣ ದಾಖಲಿಸಲು ಹೆಣಗಾಡಬೇಕಾಯಿತು. ಬಿಜೆಪಿ ಸರ್ಕಾರದಲ್ಲಾದರೂ ಇನ್ನೂ ಬೇಗ ಕ್ರಮ ತೆಗೆದುಕೊಳ್ಳುತ್ತಿದ್ದರೇನೋ ಅನಿಸತೊಡಗಿತು. ನಾವು ಬಿಜೆಪಿ ಅಧಿಕಾರದಿಂದ ತೊಲಗಬೇಕೆಂದು ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದವರು. ಆದರೆ ಗಂಭೀರವಾದ ದೂರು ಕೊಟ್ಟರೂ ಎಫ್‌ಐಆರ್ ಹಾಕಲು ಪೊಲೀಸರು ಹಿಂದೆ ಮುಂದೆ ನೋಡಿದರು” ಎಂದು ಬೇಸರ ವ್ಯಕ್ತಪಡಿಸಿದರು.

ಪುನೀತ್ ಕೆರೆಹಳ್ಳಿ

“ಪುನೀತ್ ಕೆರೆಹಳ್ಳಿಯಂಥವರನ್ನು ಸರ್ಕಾರ ಯಾವತ್ತೋ ಮಟ್ಟಹಾಕಬಹುದಿತ್ತು. ಮರ್ಡರ್, ಹಾಫ್ ಮರ್ಡರ್ ಕೇಸ್‌ನಲ್ಲಿ ಆರೋಪಿತ ವ್ಯಕ್ತಿ ಆತ. ಎರಡನೇ ಅಟ್ರಾಸಿಟಿ ಪ್ರಕರಣ ಈಗ ದಾಖಲಾಗಿದೆ. ಇಷ್ಟಾದರೂ ಆತ ರೌಡಿಶೀಟರ್‌ಗೆ ಸೇರಲಿಲ್ಲ. ಆರಗ ಜ್ಞಾನೇಂದ್ರ ಅವರು ಹೋಮ್ ಮಿನಿಸ್ಟರ್ ಆಗಿದ್ದಾಗ ಹೇಗೋ ತಪ್ಪಿಸಿಕೊಂಡ ಎನ್ನಬಹುದು. ಆದರೆ ಈಗಲಾದರೂ ಕಾಂಗ್ರೆಸ್ ಸರ್ಕಾರ ತಪ್ಪನ್ನು ಸರಿಪಡಿಸಬೇಕಾಗಿತ್ತು. ಅದಾಗಲಿಲ್ಲ. ಗೃಹ ಇಲಾಖೆ ಸಂಪೂರ್ಣ ವಿಫಲವಾಗಿದೆ. ಸರ್ಕಾರ ಬಂದಾಗಿನಿಂದ ಒಂದೇ ಒಂದು ರೌಡಿಗಳ ಪರೇಡ್ ನೋಡಲಿಲ್ಲ” ಎಂದು ಆರೋಪಿಸಿದರು.

“ಸೋಷಿಯಲ್ ಮೀಡಿಯಾಗಳಲ್ಲಿ ಸುಳ್ಳುಗಳನ್ನು ಹಬ್ಬಿಸುವವರ ವಿರುದ್ಧ ಕ್ರಮ ಜರುಗಿಸಲು ಪ್ರತ್ಯೇಕವಾದ ಘಟಕವನ್ನೇ ತೆರೆಯುತ್ತೇವೆ, ಫೇಕ್ ಐಡಿಗಳನ್ನು ಬಗ್ಗುಬಡಿಯುವ ಕೆಲಸ ಮಾಡುತ್ತೇವೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದರು. ನಯಾಪೈಸೆಯ ಕೆಲಸವಾಗಲಿಲ್ಲ. ನಮ್ಮಂಥವರ ಮೇಲೆ ಆಗುವ ವೈಯಕ್ತಿಕ ದಾಳಿಯನ್ನು ಬಿಡಿ, ಸರ್ಕಾರದ ಜನಪರ ಯೋಜನೆಗಳ ಕುರಿತು, ಸಿಎಂ, ಸಚಿವರ ಕುರಿತು ಅವಹೇಳನಕಾರಿಯಾಗಿ ಬರೆಯುತ್ತಾರೆ. ಆದರೂ ಏನನ್ನೂ ಮಾಡುತ್ತಿಲ್ಲ” ಎಂದು ಟೀಕಿಸಿದರು.

“ಸೋನಿಯಾ ಗಾಂಧಿಯವರೇ ಪ್ಯಾಲೆಸ್ತೀನ್ ಪರವಾಗಿ ನಿಂತಿದ್ದರೂ ಯುದ್ಧ ವಿರೋಧಿ ಜಾಗೃತಿಯ ಕಾರ್ಯಕ್ರಮಗಳಿಗೆ ಕಾಂಗ್ರೆಸ್ ಸರ್ಕಾರ ಅನುಮತಿ ನೀಡಲಿಲ್ಲ. ಪ್ಯಾಲೆಸ್ತೀನ್ ಪರ ದನಿ ಎತ್ತಿದ ತಕ್ಷಣ ಯಾರೂ ದೇಶದ್ರೋಹಿಗಳಾಗಲ್ಲ. ಅದು ಜೀವಪರ ನಿಲುವಾಗುತ್ತದೆ. ಹೇಳುವುದು ಆಚಾರ, ಮಾಡುವುದು ಅನಾಚಾರ ಎನ್ನುವಂತಾಗಿದೆ” ಎಂದರು.

ಪತ್ರಕರ್ತ ನವೀನ್ ಸೂರಿಂಜೆ ಅವರು ಮಾತನಾಡಿ, “ಭಜರಂಗದಳದಂತಹ ಸಂವಿಧಾನ ವಿರೋಧಿ ಸಂಘಟನೆಗಳನ್ನು ನಿಷೇಧ ಮಾಡುವುದಾಗಿ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿತ್ತು. ನಿಷೇಧ ಮಾಡುವುದು ಬದಿಗಿರಲಿ, ಕನಿಷ್ಠ ನಿಯಂತ್ರಣವನ್ನೂ ಸರ್ಕಾರ ಮಾಡುತ್ತಿಲ್ಲ. ಶ್ರೀರಾಮ ಸೇನೆಯ ಸ್ಥಾಪಕರು ಗಣೇಶೋತ್ಸವದಲ್ಲಿ ನೇರ ಗಲಭೆಗೆ ಕರೆ ಕೊಟ್ಟ ನಂತರ ಕೋಮುಗಲಭೆ ನಡೆಯುತ್ತದೆ. ರಾಷ್ಟ್ರರಕ್ಷಣಾಪಡೆಯ ಸ್ಥಾಪಕ ಕೊಲೆ, ಗಲಭೆ, ಮಹಿಳಾ ದೌರ್ಜನ್ಯ, ದಲಿತ ದೌರ್ಜನ್ಯ ಪ್ರಕರಣಗಳಲ್ಲಿ ಆರೋಪಿತ. ಇಂತಹ ಸಣ್ಣಪುಟ್ಟ ಭಯೋತ್ಪಾದಕ ಸಂಘಟನೆಗಳನ್ನು ಬ್ಯಾನ್ ಮಾಡೋಕೆ ಸರ್ಕಾರಕ್ಕೆ ಅಡ್ಡಿ ಏನು? ಗ್ಯಾರಂಟಿಗಳಷ್ಟೇ ಕಾಂಗ್ರೆಸ್‌ಅನ್ನು ಗೆಲ್ಲಿಸಿರುವುದಲ್ಲ. ಪ್ರಣಾಳಿಕೆಯಲ್ಲಿ ಶಾಂತಿ, ಸೌಹಾರ್ದತೆ ಬಗ್ಗೆ ಕೊಟ್ಟಿರುವ ಭರವಸೆಗಳೂ ಕಾಂಗ್ರೆಸ್ ಗೆಲುವಿಗೆ ಕಾರಣ ಎನ್ನುವುದನ್ನು ಕಾಂಗ್ರೆಸ್ ಪಕ್ಷ ಮರೆಯಬಾರದು” ಎಂದು ಎಚ್ಚರಿಸಿದರು.

ಡಿವೈಎಫ್‌ಐ ರಾಜ್ಯಾಧ್ಯಕ್ಷರಾದ ಮುನೀರ್ ಕಾಟಿಪಳ್ಳ ಅವರು ಮಾತನಾಡಿ, ಕರಾವಳಿ ಭಾಗದಲ್ಲಿ ಆಗುತ್ತಿರುವ ಕೋಮು ಸಂಬಂಧಿತ ಬೆಳವಣಿಗೆಗಳ ಕುರಿತು ಆತಂಕ ವ್ಯಕ್ತಪಡಿಸಿದರು. “ಕೋಮುವಾದ ತಡೆಯಬಹುದೆಂಬ ಭರವಸೆ ಕಾಂಗ್ರೆಸ್ ಮೇಲಿತ್ತು. ಬಿಜೆಪಿ ಅವಧಿಯಲ್ಲಿ ಅಟ್ಟಹಾಸ ಹೆಚ್ಚಾಗಿತ್ತು. ಸಣ್ಣಪುಟ್ಟ ಕ್ರಿಮಿನಲ್‌ಗಳು ದೊಡ್ಡದಾಗಿ ಮೆರೆಯುತ್ತಿದ್ದರು. ಉಸಿರಾಡಲು ಕಷ್ಟವಾಗುವಂತೆ ಇತ್ತು. ಅಧಿಕಾರಕ್ಕೆ ಬಂದ ಕಾಂಗ್ರೆಸ್‌ನವರು ದಿಟ್ಟ ನಿರ್ಧಾರ ಕೈಗೊಳ್ಳುತ್ತಾರೆಂದು ಭಾವಿಸಿದ್ದೆವು. ನಮ್ಮ ನಿರೀಕ್ಷೆಯ ಹತ್ತಿರಕ್ಕೂ ಅವರು ಬರುತ್ತಿಲ್ಲ. ಇದು ಖೇದಕರ. ಕರಾವಳಿಯಲ್ಲಂತೂ ಬಿಜೆಪಿ ಮತ್ತು ಆರ್‌ಎಸ್‌ಎಸ್ ಕೈಗೆ ಅಧಿಕಾರ ಬಿಟ್ಟಂತೆ ಕಾಣುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೆಚ್ಚಿನ ಗಮನ ಹರಿಸಬೇಕಿದೆ” ಎಂದು ಒತ್ತಾಯಿಸಿದರು.

ನವೀನ್ ಸೂರಿಂಜೆ

“ಮಂಗಳೂರು ವಿವಿಯಲ್ಲಿ ಗಣೇಶೋತ್ಸವ ಆಚರಿಸಬೇಕೆಂದು ಆರ್‌ಎಸ್‌ಎಸ್ ನಿರ್ಧರಿಸಿತು. ಕಲ್ಲಡ್ಕ ಪ್ರಭಾಕರ ಭಟ್ಟರು ಸರ್ಕಾರಕ್ಕೆ ಸವಾಲು ಎಸೆದರು. ಅವರು ಹೇಳಿದಂತೆಯೇ ನಡೆಯಿತು. ನವರಾತ್ರಿ ಸಂದರ್ಭದಲ್ಲಿ ಮಂಗಳಾದೇವಿ ದೇವಸ್ಥಾನದ ಬಳಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ಹೇರಬೇಕೆಂದು ಶರಣ್ ಪಂಪ್‌ವೆಲ್ ತಂಡ ಹೊರಟಿತು. ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವಲ್ಲಿ ಸರ್ಕಾರದ ವೈಫಲ್ಯ ಎದ್ದು ಕಾಣುತ್ತದೆ. ಪರಶುರಾಮ ಥೀಮ್ ಪಾರ್ಕ್ ಹಗರಣದ ತನಿಖೆಗೆ ಮುಂದಾಗಲಿಲ್ಲ. ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣದ ವಿಚಾರವಾಗಿ ಕ್ರಮ ಕೈಗೊಳ್ಳಲಿಲ್ಲ. ಮತ್ತೊಂದೆಡೆ ಗೃಹ ಸಚಿವರ ಮೇಲೆ ಆರ್‌ಎಸ್‌ಎಸ್ ಕೂಟದ ನಾಯಕರ ಒಲವಿದೆ. ನೀವೇ ಮುಖ್ಯಮಂತ್ರಿ ಆಗಬೇಕು ಎನ್ನುತ್ತಿದ್ದಾರೆ. ಹಿಂದಿನಷ್ಟು ಬಹಿರಂಗ ಅಬ್ಬರ ಇಲ್ಲದೆ ಇರಬಹುದು ಆದರೆ ಆಂತರಿಕವಾಗಿ ಏನು ಆಗಬೇಕೋ ಅದು ಆಗುತ್ತಲೇ ಇದೆ” ಎಂದು ಆತಂಕ ವ್ಯಕ್ತಪಡಿಸಿದರು.

ಪ್ಯಾಲೆಸ್ತೀನ್, ಕೋಮುವಾದದ ವಿಚಾರವಾಗಿ ಪಕ್ಷದ ನಿಲುವು ಒಂದು ರೀತಿ ಇದೆ, ಸರ್ಕಾರದ ನಿಲುವು ಬೇರೆ ಇದೆ. ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕರನ್ನು ಹೊರತುಪಡಿಸಿ ಸ್ಥಳೀಯ ನಾಯಕರ್‍ಯಾರೂ ಈ ವಿಚಾರವಾಗಿ ಮಾತನಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಭರವಸೆ ಮೂಡಿಸಿದ್ದ ಶಿವಮೊಗ್ಗ ಘಟನೆ

ಎಷ್ಟೆಲ್ಲಾ ಟೀಕೆಗಳಿದ್ದರೂ ಸರ್ಕಾರದಲ್ಲಿ ದಕ್ಷವಾಗಿ ಕೆಲಸ ಮಾಡಬಲ್ಲ ಪೊಲೀಸ್ ಅಧಿಕಾರಿಗಳಿದ್ದಾರೆ, ಕೋಮುವಾದವನ್ನು ಮಟ್ಟಹಾಕಬಲ್ಲ ಛಾತಿ ಅವರಿಗಿದೆ. ಅದಕ್ಕೆ ಸೂಕ್ತ ನಿದರ್ಶನವೆಂದರೆ ಶಿವಮೊಗ್ಗ ಎಸ್‌ಪಿ ಜಿ.ಕೆ.ಮಿಥುನ್ ಕುಮಾರ್ ಕಾರ್ಯ ವೈಖರಿ. ಶಿವಮೊಗ್ಗ ನಗರ ಹೊರವಲಯದ ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆಯ ಸಂದರ್ಭದಲ್ಲಿ ಕೆಲವು ಕಿಡಿಗೇಡಿಗಳು ಗಲಭೆ ಸೃಷ್ಟಿಸಲು ಯತ್ನಿಸಿದ್ದರು. ಕೆಲಕಾಲ ಉಂಟಾಗಿದ್ದ ಪ್ರಕ್ಷುಬ್ಧತೆಯಲ್ಲಿ ಒಂದಿಷ್ಟು ಮನೆಗಳ ಮೇಲೆ ಕಲ್ಲು ತೂರಾಟ ನಡೆದಿತ್ತು. ಎಸ್‌ಪಿ ತಕ್ಷಣ ಜಾಗೃತರಾಗಿ ಸೆಕ್ಷನ್ 144 ಜಾರಿ ಮಾಡಿ ಕೆಲವೇ ಗಂಟೆಗಳಲ್ಲಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಮಾಧ್ಯಮಗಳು ಕಪೋಲಕಲ್ಪಿತ ವರದಿಗಳನ್ನು ಮಾಡಿ ಬೆಂಕಿ ಹಚ್ಚಲು ಯತ್ನಿಸಿದ್ದರಿಂದ ಸೆಕ್ಷನ್ 144 ಒಂದಿಷ್ಟು ದಿನ ಮುಂದುವರಿಯಬೇಕಾಯಿತು. ಕಲ್ಲು ತೂರಿದ್ದು ಭಜರಂಗದಳದ ಕಾರ್ಯಕರ್ತ ರೋಹನ್ ಅಲಿಯಾಸ್ ರೋಯಾ ಎಂಬುದಾಗಿ ವರದಿಯಾಗಿತ್ತು. ಉಭಯ ಕೋಮಿನ ಹಲವರನ್ನು ಬಂಧಿಸಿ ಪೊಲೀಸರು ಪರಿಸ್ಥಿತಿಯನ್ನು ನಿಭಾಯಿಸಿದರು. ಕರ್ತವ್ಯಲೋಪ ಎಸಗಿದ ಪೊಲೀಸರನ್ನು ಅಮಾನತು ಮಾಡಲಾಯಿತು. ದಕ್ಷ ಅಧಿಕಾರಿಗಳಿದ್ದರೆ ಕಿಡಿಗೇಡಿಗಳ ಕೃತ್ಯವನ್ನು ತಡೆಯುವುದೇನೂ ಕಷ್ಟವಲ್ಲ. ಆದರೆ ಅದಕ್ಕೆ ಮುಖ್ಯಮಂತ್ರಿ, ಸಚಿವರಾದಿಯಾಗಿ ಎಲ್ಲರ ಬೆಂಬಲ ಅಗತ್ಯವಿರುತ್ತದೆ. ಮೇಲೆ ಕುಳಿತವರೇ ನಿಷ್ಕ್ರಿಯರಾದಾಗ ಅಧಿಕಾರಿಗಳು ಜಡರಾಗುತ್ತಾರೆಂಬ ಎಚ್ಚರ ಸರ್ಕಾರಕ್ಕಿರಲಿ. ಈಗಲಾದರೂ ಎಚ್ಚೆತ್ತುಕೊಂಡು ತಾವು ಕೊಟ್ಟ ಕೋಮು ಸೌದಾರ್ದತೆಯ ಭರವಸೆಯನ್ನು, ಕೋಮುವಾದ ಮಟ್ಟ ಹಾಕುವ ಗ್ಯಾರಂಟಿಯನ್ನು ಜಾರಿಗೆ ತರಲಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...