Homeಕರ್ನಾಟಕಸಿಬಿಐ ತನಿಖೆಗೆ ಅನುಮತಿ ಪ್ರಶ್ನಿಸಿದ್ದ ಅರ್ಜಿ ವಾಪಸ್ ಪಡೆದ ಡಿಕೆಶಿ

ಸಿಬಿಐ ತನಿಖೆಗೆ ಅನುಮತಿ ಪ್ರಶ್ನಿಸಿದ್ದ ಅರ್ಜಿ ವಾಪಸ್ ಪಡೆದ ಡಿಕೆಶಿ

- Advertisement -
- Advertisement -

ತನ್ನ ವಿರುದ್ದ ಸಿಬಿಐ ತನಿಖೆಗೆ ಅನುಮತಿ ನೀಡಿ ಬಿಜೆಪಿ ಸರ್ಕಾರ ನೀಡಿದ್ದ ಆದೇಶ ಪ್ರಶ್ನಿಸಿದ್ದ ರಿಟ್ ಅರ್ಜಿ ಮತ್ತು ಮೇಲ್ಮನವಿಯನ್ನು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಿಂಪಡೆದಿದ್ದಾರೆ.

ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಸಂಬಂಧ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಡಿ.ಕೆ ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ಅನುಮತಿ ನೀಡಿತ್ತು. ಈ ಪ್ರಕರಣದ ತನಿಖೆ ನಡೆಸಿದ್ದ ಸಿಬಿಐ, ಡಿಕೆಶಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಗೆ ತಯಾರಿ ನಡೆಸಿತ್ತು. ಡಿ.ಕೆ ಶಿವಕುಮಾರ್ ತನ್ನ ವಿರುದ್ದದ ತನಿಖೆಗೆ ತಡೆಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಎಲ್ಲಾ ಬೆಳವಣಿಗೆಗಳ ನಡುವೆ ಡಿಕೆಶಿ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಆದೇಶವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ವಾಪಸ್ ಪಡೆದಿದೆ.

ಡಿಕೆಶಿ ವಿರುದ್ದ ತನಿಖೆಗೆ ಆದೇಶ ನೀಡುವಾಗ ಅಂದಿನ ವಿಧಾನಸಭಾ ಸ್ಪೀಕರ್ ಅವರ ಅನುಮತಿ ಪಡೆದಿರಲಿಲ್ಲ ಎಂಬ ಕಾರಣವನ್ನು ರಾಜ್ಯ ಸರ್ಕಾರ ನೀಡಿದೆ.

ಸಿಬಿಐ ತನಿಖೆಗೆ ಅನುಮತಿ ನೀಡಿದ್ದ ಆದೇಶ ರದ್ದುಕೋರಿ ಡಿ.ಕೆ ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು 2023 ಎಪ್ರಿಲ್ 20 ರಂದು ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ಹೈಕೋರ್ಟ್‌ ಏಕ ಸದಸ್ಯ ಪೀಠ ವಜಾಗೊಳಿಸಿತ್ತು.

ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ಡಿ.ಕೆ ಶಿವಕುಮಾರ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿಬಿ ವರಾಳೆ ಹಾಗೂ ಕೃಷ್ಣ ಎಸ್‌ ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ, ಸಿಬಿಐ ತನಿಖೆಗೆ ಮಧ್ಯಂತರ ತಡೆ ನೀಡಿತ್ತು.

ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು ಸಿಬಿಐ :

ಡಿಕೆಶಿ ವಿರುದ್ಧ ತನಿಖೆಗೆ ವಿಭಾಗೀಯ ಪೀಠ ತಡೆ ನೀಡಿರುವುದನ್ನು ಪ್ರಶ್ನಿಸಿ ಸಿಬಿಐ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಸಿಬಿಐ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌, ತನಿಖೆಗೆ ತಡೆಕೋರಿ ಡಿಕೆಶಿ ಸಲ್ಲಿಸಿರುವ ಮೇಲ್ಮನವಿ ಮತ್ತು ತಡೆ ತೆರವು ಕೋರಿ ಸಿಬಿಐ ಸಲ್ಲಿಸಿರುವ ಅರ್ಜಿಗಳನ್ನು ಎರಡು ವಾರಗಳಲ್ಲಿ ಇತ್ಯರ್ಥ ಮಾಡುವಂತೆ ಹೈಕೋರ್ಟ್‌ ವಿಭಾಗೀಯ ಪೀಠಕ್ಕೆ ಸೂಚಿಸಿತ್ತು. ಈ ಹಿನ್ನೆಲೆ ವಿಭಾಗೀಯ ಪೀಠ ನಿನ್ನೆ (ನ.29) ಅರ್ಜಿ ವಿಚಾರಣೆ ನಡೆಸಿದೆ.

ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಅರ್ಜಿ ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ಹಾಜರಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ ಮತ್ತು ಡಿ.ಕೆ ಶಿವಕುಮಾರ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ಹಿಂಪಡೆದ ಬಗ್ಗೆ ನ್ಯಾಯಾಲಯಕ್ಕೆ ಮೆಮೋ ಸಲ್ಲಿಸಿದರು. ಅಲ್ಲದೆ, ಡಿ.ಕೆ ಶಿವಕುಮಾರ್ ಸಲ್ಲಿಸಿದ್ದ ರಿಟ್ ಅರ್ಜಿ ಮತ್ತು ಮೇಲ್ಮನವಿ ಹಿಂಪಡೆಯುವುದಾಗಿ ಲಿಖಿತ ಮೆಮೋ ಸಲ್ಲಿಸಿದರು.

ಸಿಬಿಐ ಪರ ವಾದ ಮಂಡಿಸಿದ ವಕೀಲ ಪ್ರಸನ್ನ ಕುಮಾರ್, ಮೇಲ್ಮನವಿ ಹಿಂಪಡೆಯುವುದಕ್ಕೆ ಆಕ್ಷೇಪವಿಲ್ಲ. ಆದರೆ, ರಿಟ್ ಅರ್ಜಿ ಹಿಂಪಡೆಯುವುದನ್ನು ವಿರೋಧಿಸುತ್ತೇವೆ ಎಂದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಕಾನೂನು ಪ್ರಕಾರ ಡಿ.ಕೆ ಶಿವಕುಮಾರ್ ಮತ್ತು ರಾಜ್ಯ ಸರ್ಕಾರದ ನಿರ್ಧಾರ ತಡೆಯಲು ಸಾಧ್ಯವಿಲ್ಲ ಎಂದು ಹೇಳಿತು. ಅರ್ಜಿ ಹಿಂಪಡೆಯಲು ಡಿ.ಕೆ ಶಿವಕುಮಾರ್ ಅವರಿಗೆ ಅನುಮತಿ ನೀಡಿತು. ಸಚಿವ ಸಂಪುಟದ ನಿರ್ಧಾರವನ್ನು ಯಾರಾದರು ಪ್ರಶ್ನಿಸಿದ್ದಾರೆಯೇ? ಎಂದು ಕೇಳಿತು. ಯಾರಾದರು ಪ್ರಶ್ನಿಸುವುದಾದರೆ ಅದಕ್ಕೆ ಅವಕಾಶವಿದೆ ಎಂದಿತು. ಇದೇ ವೇಳೆ, ಪ್ರಕರಣದಲ್ಲಿ ನನ್ನ ವಾದ ಆಲಿಸಬೇಕು ಎಂದು ಕೋರಿ ಶಾಸಕ ಬಸನಗೌಡ ಪಾಟೀಲ್ ಸಲ್ಲಿಸಿದ್ದ ಅರ್ಜಿಯ ಕುರಿತು ವಕೀಲ ವೆಂಕಟೇಶ್ ಪಿ. ದಳವಾಯಿ ವಾದ ಮಂಡಿಸಿದರು. ಆದರೆ, ನ್ಯಾಯಾಲಯ ಯತ್ನಾಳ್ ಅವರನ್ನು ಈ ಪ್ರಕರಣದಲ್ಲಿ ಸೇರಿಸುವ ಅಗತ್ಯವಿಲ್ಲ ಎಂದು ಹೇಳಿತು.

ಇದನ್ನೂ ಓದಿ : ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ಅಭ್ಯರ್ಥಿಗಳ ಕ್ರಿಮಿನಲ್ ಹಿನ್ನೆಲೆ ಬಹಿರಂಗಪಡಿಸಬೇಕು: ಹೈಕೋರ್ಟ್ ಆದೇಶ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...