ಬೆಳಗಾವಿಯಲ್ಲಿ ನಿನ್ನೆ (ಡಿ.4) ನಡೆದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಆಪ್ತ, ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಪೃಥ್ವಿ ಸಿಂಗ್ ಮೇಲಿನ ಚಾಕು ಇರಿತ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದ್ದು, ಬಿಜೆಪಿ-ಕಾಂಗ್ರೆಸ್ ನಡುವೆ ಕಿತ್ತಾಟಕ್ಕೆ ಕಾರಣವಾಗಿದೆ.
ನಿನ್ನೆ ಸಂಜೆ 4 ಗಂಟೆಯ ಹೊತ್ತಿಗೆ ಬೆಳಗಾವಿಯ ಜಯನಗರದ ನಿವಾಸದ ಬಳಿ ಪೃಥ್ವಿ ಸಿಂಗ್ ಮೇಲೆ ದಾಳಿ ನಡೆದಿದೆ. ಘಟನೆಯಲ್ಲಿ ಪೃಥ್ವಿ ಸಿಂಗ್ ಅವರ ಕೈ ಹಾಗೂ ಬೆನ್ನಿನ ಭಾಗಕ್ಕೆ ತೀವ್ರವಾಗಿ ಗಾಯಗಳಾಗಿವೆ. ಕೂಡಲೇ ಅವರನ್ನು ಕೆಎಲ್‌ಇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಸಹೋದರ, ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಅವರ ಗನ್‌ಮ್ಯಾನ್ ಮತ್ತು ಆಪ್ತರು ಪೃಥ್ವಿ ಸಿಂಗ್ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಇದಕ್ಕೆ ಪುಷ್ಠಿ ನೀಡುವಂತೆ ಚನ್ನರಾಜ್ ಆಪ್ತರು ಪೃಥ್ವಿ ಸಿಂಗ್ ಜೊತೆ ಮಾತನಾಡುತ್ತಿರುವ ಸಿಸಿಟಿವಿ ದೃಶ್ಯಗಳು ಲಭ್ಯವಾಗಿದ್ದು, ಸೂಕ್ತ ತನಿಖೆಗೆ ಬಿಜೆಪಿ ಮುಖಂಡರು ಆಗ್ರಹಿಸಿದ್ದಾರೆ.
ಪೃಥ್ವಿ ಸಿಂಗ್ ಬೋಗಸ್ ಎಂದ ಲಕ್ಷ್ಮೀ ಹೆಬ್ಬಾಳ್ಕರ್
ತನ್ನ ತಮ್ಮನ ಆಪ್ತರು ಹಲ್ಲೆ ನಡೆಸಿದ ಆರೋಪ ಕೇಳಿ ಬರುತ್ತಿದ್ದಂತೆ ಸಚಿವೆ ಹೆಬ್ಬಾಳ್ಕರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಪೃಥ್ವಿ ಸಿಂಗ್ ಮೋಸ್ಟ್ ಬೋಗಸ್. ಆತನ ಹೆಸರು ಬರೆದಿಟ್ಟು ಹುಡುಗರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣದಲ್ಲಿ ನಮ್ಮ ಹೆಸರು ಕೇಳಿ ಬಂದಿರುವುದರಿಂದ ಸೂಕ್ತ ತನಿಖೆಯಾಗಲಿ. ಪೃಥ್ವಿ ಸಿಂಗ್‌ನನ್ನೂ ವಿಚಾರಣೆ ಮಾಡಬೇಕು, 24 ಗಂಟೆಯೊಳಗೆ ಘಟನೆಯ ಸತ್ಯಾಸತ್ಯತೆ ಗೊತ್ತಾಗಬೇಕು ಎಂದಿದ್ದಾರೆ. ಈ ಘಟನೆಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಚನ್ನರಾಜ್ ಹಟ್ಟಿಹೊಳಿ ಹೇಳಿದ್ದೇನು?
ಎಂಎಲ್‌ಸಿ ಚನ್ನರಾಜ್ ಹಟ್ಟಿಹೊಳಿ ಅವರ ಆಪ್ತರು ಪೃಥ್ವಿ ಸಿಂಗ್ ಮೇಲೆ ದಾಳಿ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತು ಇಂದು(ಡಿ.5) ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಚನ್ನರಾಜ್, ಪೃಥ್ವಿ ಸಿಂಗ್ ಮೇಲೆ ಹಲ್ಲೆ ನಡೆದಾಗ ನಾನು ಅಲ್ಲೇ ಕಾರಿನಲ್ಲಿ ಇದ್ದೇ ಎಂದು ಹೇಳಲಾಗ್ತಿದೆ. ನಾನು ಕಾರಿನಲ್ಲಿ ಇರಲಿಲ್ಲ. ಪೃಥ್ವಿ ಸಿಂಗ್ ಮನೆಯ ದಾರಿಯಾಗಿ ನನ್ನ ಕಾರು ಬಂದಿರುವುದು ದೊಡ್ಡ ವಿಷವೇನಲ್ಲ. ನನ್ನ ಮನೆಗೆ ಬರುವ ದಾರಿಯಲ್ಲಿ ಪೃಥ್ವಿ ಸಿಂಗ್ ಮನೆಯಿದೆ. ನಾನೂ ಕೂಡ ಪ್ರಕರಣ ಸೂಕ್ತ ತನಿಖೆಗೆ ಆಗ್ರಹಿಸುತ್ತೇನೆ ಎಂದಿದ್ದಾರೆ.
ಆಸ್ಪತ್ರೆಗೆ ಭೇಟಿ ನೀಡಿದ ವಿಜಯೇಂದ್ರ :
ಪೃಥ್ವಿ ಸಿಂಗ್ ಮೇಲೆ ಚಾಕು ಇರಿದ ವಿಷಯ ತಿಳಿದ ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನಿನ್ನೆ ರಾತ್ರಿ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ವಿಧಾನಮಂಡಲದ ಚಳಿಗಾಲದ ಅಧಿವೇಶನ ಪ್ರಯುಕ್ತ ವಿಜಯೇಂದ್ರ ಬೆಳಗಾವಿಯಲ್ಲೇ ಇದ್ದಾರೆ.
ಬಿಜೆಪಿ ಕಾರ್ಯಕರ್ತರ ಮೇಲಿನ ಕಾಂಗ್ರೆಸ್ ಗೂಂಡಾಗಿರಿ ವಿಪರೀತಕ್ಕೆ ಹೋಗುತ್ತಿದ್ದು,
ಬೆಳಗಾವಿಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಸಹೋದರ ಎಂಎಲ್‌ಸಿ ಚನ್ನರಾಜ್ ಹಟ್ಟಿಹೊಳಿ, ಅವರ ಗನ್‌ಮ್ಯಾನ್ ಮತ್ತು ಇತರ ಸಹಚರರಿಂದ ಗಂಭೀರ ಹಲ್ಲೆಗೊಳಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಿಜೆಪಿ ಎಸ್‌ಸಿ ಮೋರ್ಚಾ ಮುಖಂಡ ಪೃಥ್ವಿ… pic.twitter.com/0m4c1tCmLO— Vijayendra Yediyurappa (@BYVijayendra) December 4, 2023
ಆಸ್ಪತ್ರೆ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ವಿಜಯೇಂದ್ರ, ಸೋಮವಾರ ಸಂಜೆ 4 ಗಂಟೆಯ ಸುಮಾರಿಗೆ ಚನ್ನರಾಜ್ ಹಟ್ಟಿಹೊಳಿ ಅವರ ಬಲಗೈ ಬಂಟ ಸುದೀಪ್ ಜಾಧವ್, ಆಪ್ತ ಕಾರ್ಯದರ್ಶಿ ಸದ್ದಾಂ ಮತ್ತು ಗನ್‌ಮ್ಯಾನ್ ಪೃಥ್ವಿ ಸಿಂಗ್ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ಹಟ್ಟಿಹೊಳಿ ಪ್ರಭಾವಿ ವ್ಯಕ್ತಿಯಾಗಿದ್ದು, ಹೀಗಾಗಿ ಹಗಲು ಹೊತ್ತಿನಲ್ಲೇ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
#WATCH | BJP worker attacked allegedly by Congress MLC in Belagavi, Karnataka BJP chief BY Vijayendra says, " It's clearly vindictive politics. Prithvi Singh is a Dalit leader from the BJP. The personal assistant and two gunmen of a present Congress MLC, who is also the brother… pic.twitter.com/1PH0dEK6VC
— ANI (@ANI) December 5, 2023
ಬೆಳಗಾವಿಯಲ್ಲಿ ವಿಧಾನಮಂಡಲದ ಚಳಿಗಾಲದ ಅಧಿವೇಶನ ನಡೆಯುತ್ತಿರುವ ಹೊತ್ತಿನಲ್ಲೇ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ ನಡೆದಿರುವುದು ದುರಾದೃಷ್ಟಕರ ಸಂಗತಿ. ಪೃಥ್ವಿ ಸಿಂಗ್ ಮೇಲಿನ ಹಲ್ಲೆಗೆ ಕಾರಣರಾದವರನ್ನು ಪೊಲೀಸರು ಕೂಡಲೇ ಬಂಧಿಸಬೇಕು. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಈ ವಿಷಯದ ಬಗ್ಗೆ ಹೇಳಿಕೆಗಳನ್ನು ನೀಡುವ ಬದಲು, ಜವಾಬ್ದಾರಿಯುತ ಸ್ಥಾನದಲ್ಲಿ ನಿಂತು ತಮ್ಮ ಸಹೋದರನನ್ನು ತಕ್ಷಣವೇ ಬಂಧಿಸುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ನಾಪತ್ತೆಯಾಗಿದ್ದ ಎಂಎಲ್‌ಸಿ ಸಿಪಿ ಯೋಗೇಶ್ವರ್ ಬಾವ ಶವವಾಗಿ ಪತ್ತೆ


