ಭಾರತೀಯ ಸಂವಿಧಾನದ ಮೂಲ ರಚನೆಯ ಸಿದ್ದಾಂತವನ್ನು ರೂಪಿಸಿದ ಐತಿಹಾಸಿಕ ಕೇಶವಾನಂದ ಭಾರತಿ ಪ್ರಕರಣದ ತೀರ್ಪು ಸುಪ್ರೀಂ ಕೋರ್ಟ್‌ನ ವೆಬ್‌ಸೈಟ್‌ನಲ್ಲಿ 10 ಭಾಷೆಗಳಲ್ಲಿ ಲಭ್ಯವಿದೆ ಎಂದು ಮುಖ್ಯ ನ್ಯಾಯಮೂರ್ತಿ(ಸಿಜೆಐ) ಡಿವೈ ಚಂದ್ರಚೂಡ್ ಅವರು ತಿಳಿಸಿದ್ದಾರೆ. ಈ ಪ್ರಕರಣದ ತೀರ್ಪಿಗೆ 50 ವರ್ಷ ತುಂಬಿರುವ ಹಿನ್ನೆಲೆ ವಿವಿಧ ಭಾಷೆಗಳಲ್ಲಿ ಪ್ರಕಟಿಸಲಾಗಿದೆ ಸಿಜೆಐ ಹೇಳಿದ್ದಾರೆ.
ಕೇಶವಾನಂದ ಭಾರತಿ ಪ್ರಕರಣದ ಪ್ರಕರಣದ ಹಿನ್ನೆಲೆ, ಒಳಗೊಂಡಿರುವ ಪ್ರಮುಖ ಕಾನೂನು ಸಮಸ್ಯೆಗಳು, ಪೀಠದ ಅಧ್ಯಕ್ಷತೆ ವಹಿಸಿದ್ದ ನ್ಯಾಯಾಧೀಶರು, ಪ್ರಕರಣದಲ್ಲಿ ಹಾಜರಾದ ವಕೀಲರು, ಮಾಡಿದ ವಾದಗಳು ಮತ್ತು ತೀರ್ಮಾನಗಳ ವಿವರಗಳನ್ನು ಹತ್ತು ಭಾಷೆಗಳಲ್ಲಿ ನೀಡಲಾಗಿದೆ.
ಇಂಗ್ಲಿಷ್, ಹಿಂದಿ, ತೆಲುಗು, ತಮಿಳು, ಒಡಿಯಾ, ಮಲಯಾಳಂ, ಗುಜರಾತಿ, ಕನ್ನಡ, ಬೆಂಗಾಲಿ, ಅಸ್ಸಾಮಿ ಮತ್ತು ಮರಾಠಿಯಲ್ಲಿ ತೀರ್ಪನ್ನು ಅನುವಾದಿಸಲಾಗಿದೆ. ಈ ಉಪಕ್ರಮವು ಸುಪ್ರೀಂ ಕೋರ್ಟ್‌ನ ತೀರ್ಪುಗಳನ್ನು ವಿವಿಧ ಭಾರತೀಯ ಭಾಷೆಗಳಿಗೆ ಭಾಷಾಂತರಿಸಲು ನಡೆಯುತ್ತಿರುವ ಪ್ರಯತ್ನದ ಭಾಗ ಎಂದು ಸಿಜೆಐ ಹೇಳಿದ್ದಾರೆ. 20,000 ತೀರ್ಪುಗಳನ್ನು ಈಗಾಗಲೇ ಸುಪ್ರೀಂ ಕೋರ್ಟ್ ವರದಿಗಳ (eSCR) ಎಲೆಕ್ಟ್ರಾನಿಕ್ ಆವೃತ್ತಿಯಲ್ಲಿ ಅಪ್‌ಲೋಡ್ ಮಾಡಲಾಗಿದೆ.
“ಜನರಿಗೆ ಕೇಶವಾನಂದ ಭಾರತಿ ತೀರ್ಪಿನ ಬಗ್ಗೆ ತಿಳಿದಿದೆ. ಆದರೆ, ಅದರ ಹಿಂದಿನ ಮಹತ್ವದ ಬಗ್ಗೆ ಗೊತ್ತಿಲ್ಲ. ವಿವಿಧ ಭಾಷೆಗಳಲ್ಲಿ ತೀರ್ಪನ್ನು ಅನುವಾದ ಮಾಡಿರುವುದು ಜನರಲ್ಲಿ ಜಾಗೃತಿ ಮೂಡಿಸಲು ನೆರವಾಗಲಿದೆ ಎಂದು” ಸಾಲಿಸಿಟರ್ ಜನರಲ್ (ಎಸ್ಜಿ) ತುಷಾರ್ ಮೆಹ್ತಾ ಹೇಳಿದ್ದಾರೆ.
ಏನಿದು ಕೇಶವಾನಂದ ಭಾರತಿ ಪ್ರಕರಣದ ತೀರ್ಪು?
ಕೇಶವಾನಂದ ಭಾರತಿ ಪ್ರಕರಣದ ತೀರ್ಪು ಸುಪ್ರೀಂ ಕೋರ್ಟ್ ನೀಡಿದ ಒಂದು ಐತಿಹಾಸಿಕ ತೀರ್ಪು ಆಗಿದೆ. ಇದು ಭಾರತೀಯ ಸಂವಿಧಾನದ ಮೂಲ ಸ್ವರೂಪವನ್ನು ನಿರ್ಧರಿಸಿದ ತೀರ್ಪು. ಈ ಪ್ರಕರಣವನ್ನು ದೇಶದ ಅತ್ಯಂತ ಪ್ರಸಿದ್ಧ ಸಾಂವಿಧಾನಿಕ ಪ್ರಕರಣಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.
ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಸ್.ಎಂ.ಸಿಕ್ರಿ ನ್ಯಾಯಧೀಶರಾದ ಎ.ಎನ್ ರೇ, ಎಸ್.ಎಂ. ಶೆಲತ್, ಕೆ.ಎಸ್. ಹೆಗಡೆ, ಎ.ಕೆ. ಮುಖರ್ಜಿ, ಜೆ.ಎಂ.ಶೆಲತ್, ಎ.ಎನ್. ಗ್ರೋವರ್, ಪಿ.ಜಗನ್ಮೋಹನ್ ರೆಡ್ಡಿ, ಹೆಚ್.ಆರ್.ಖನ್ನಾ, ಎಸ್.ಎನ್. ದ್ವಿವೇದಿ, ಎಂ.ಹೆಚ್. ಬೇಗ್, ವೈ.ವಿ. ಚಂದ್ರಚೂಡ್, ಮತ್ತು ಪಿ.ಎನ್. ಭಗವತಿ ಸೇರಿದಂತೆ 13 ನ್ಯಾಯಾಧೀಶರ ಅತಿದೊಡ್ಡ ಪೀಠವು ಈ ಪ್ರಕರಣ ವಿಚಾರಣೆ ನಡೆಸಿತ್ತು. 1972 ರ ಅಕ್ಟೋಬರ್ 31 ರಿಂದ 16 ಮಾರ್ಚ್ 1973 ರವರೆಗೆ 66 ದಿನಗಳ ಕಾಲ ಪ್ರಕರಣದ ವಿಚಾರನಣೆ ನಡೆದಿತ್ತು. ಅಂತಿಮ ತೀರ್ಪು 23 ಮಾರ್ಚ್ 1973 ರಂದು ಪ್ರಕಟಿಸಲಾಗಿತ್ತು.
ಕೇಶವಾನಂದ ಭಾರತಿ ಕೇಸ್ ದಾಖಲಿಸಿದವರು ಯಾರು?
ಧಾರ್ಮಿಕ ಸ್ವಾಮ್ಯದ ಆಸ್ತಿಯನ್ನು ಸರ್ಕಾರದ ಹಸ್ತಕ್ಷೇಪವಿಲ್ಲದೆ ನಿರ್ವಹಿಸುವ ಹಕ್ಕನ್ನು ನಾಗರಿಕರಿಗೆ ನೀಡುವ ಸಂವಿಧಾನದ ವಿಧಿ 26ರ ಅಡಿಯಲ್ಲಿ ಮಠದ ಭೂಮಿಯನ್ನು ಕೇರಳ ಸರ್ಕಾರ ಸ್ವಾಧೀನಪಡಿಸಿಕೊಳ್ಳುವ ಪ್ರಯತ್ನವನ್ನು ಪ್ರಶ್ನಿಸಿ ಹಿಂದೂ ಮಠದ ಮುಖ್ಯಸ್ಥ ಕೇಶವಾನಂದ ಭಾರತಿ ಅವರು ಪ್ರಕರಣ ದಾಖಲಿಸಿದ್ದರು. ಪ್ರಕರಣದ ವ್ಯಾಪ್ತಿ ದೊಡ್ಡದಾಗಿದ್ದ ಕಾರಣ ಮತ್ತು ಸಂವಿಧಾನವನ್ನು ತಿದ್ದುಪಡಿ ಮಾಡುವ ಸಂಸತ್ತಿನ ಅಧಿಕಾರವನ್ನು ಈ ಪ್ರಕರಣ ಪ್ರಶ್ನಿಸಿದ್ದರಿಂದ ಇದು ಸಾಂವಿಧಾನಿಕ ವಿಷಯವಾಗಿ ಬದಲಾಗಿತ್ತು.
ಕೇಶವಾನಂದ ಭಾರತಿ ಹಿನ್ನೆಲೆ
ಕೇಶವಾನಂದ ಭಾರತಿ ಕೇರಳದ ಕಾಸರಗೋಡು ಜಿಲ್ಲೆಯ ಹಿಂದೂ ಮಠದ ಮುಖ್ಯಸ್ಥರಾಗಿದ್ದರು. ಮಠದಲ್ಲಿ ಜಮೀನು ಹೊಂದಿದ್ದರು. 1969 ರಲ್ಲಿ ಕೇರಳ ಸರ್ಕಾರವು ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯನ್ನು ಅಂಗೀಕರಿಸಿತ್ತು. ಈ ಕಾಯ್ದೆಯಡಿ ಮಠಕ್ಕೆ ಸೇರಿದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಹಕ್ಕನ್ನು ಸರ್ಕಾರ ಹೊಂದಿದೆ ಎಂದು ಹೇಳಿತ್ತು.
ಮಾರ್ಚ್ 1970 ರಲ್ಲಿ ಭಾರತಿ ಸ್ವಾಮಿಜಿ ಸಂವಿಧಾನದ ವಿಧಿ 14 ರ ಅಡಿಯಲ್ಲಿ ಹೊಂದಿರುವ ಮೂಲಭೂತ ಹಕ್ಕುಗಳು, ವಿಧಿ 19 (1) (ಎಫ್) ರ ಸಮಾನತೆಯ ಹಕ್ಕು, ವಿಧಿ 25ರ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳುವ ಸ್ವಾತಂತ್ರ್ಯ, ವಿಧಿ 26ರ ಧರ್ಮವನ್ನು ಆಚರಿಸುವ ಮತ್ತು ಪ್ರಚಾರ ಮಾಡುವ ವಿಧಿ 31 ಧಾರ್ಮಿಕ ವ್ಯವಹಾರಗಳನ್ನು ನಿರ್ವಹಿಸುವ ಹಕ್ಕುಗಳಡಿ ಸುಪ್ರೀಂ ಕೋರ್ಟ್‌ನಲ್ಲಿ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿದ್ದರು.
ಸುಪ್ರೀಂ ಕೋರ್ಟ್ ತೀರ್ಪು ಏನು?
24ನೇ ಏಪ್ರಿಲ್ 1973 ರಂದು ಸುಪ್ರೀಂ ಕೋರ್ಟ್ ಪ್ರಕರಣದ ಅಂತಿಮ ತೀರ್ಪನ್ನು 7:6 ರ ಬಹುಮತದಿಂದ ಪ್ರಕಟಿಸಿತು. ತೀರ್ಪಿನಲ್ಲಿ ಸಂವಿಧಾನದ “ಮೂಲ ರಚನೆ” ಅಥವಾ ಚೌಕಟ್ಟಿಗೆ ಧಕ್ಕೆಯಾಗದಂತೆ ಯಾವುದೇ ತಿದ್ದಪಡಿ ಮಾಡಲು ಸಂಸತ್ತಿಗೆ ಅಧಿಕಾರವಿದೆ. ಆದರೆ, ಸಂವಿಧಾನದ ಶ್ರೇಷ್ಠತೆ, ಕಾನೂನು-ರಚನಾ ಸಂಸ್ಥೆಗಳು, ಅಧಿಕಾರಗಳ ಪ್ರತ್ಯೇಕತೆ ಮತ್ತು ನ್ಯಾಯಾಂಗದ ಸ್ವಾತಂತ್ರ್ಯ ಸೇರಿದಂತೆ ಸಂವಿಧಾನದ ಕೆಲವು ಮೂಲಭೂತ ಅಂಶಗಳು ಸಂವಿಧಾನದ ಮೂಲ ಸ್ವರೂಪದ ಭಾಗವಾಗಿದ್ದು, ಅದನ್ನು ಸಂಸತ್ತಿನಿಂದ ತಿದ್ದುಪಡಿ ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.
ಸಂವಿಧಾನದ ಮೂಲ ರಚನೆಯ ಸಿದ್ಧಾಂತದ ಪ್ರಕಾರ, ಸಂವಿಧಾನದಲ್ಲಿ ತಿದ್ದುಪಡಿಗಳನ್ನು ಮಾಡಲು ಸಂಸತ್ತು ಅನಿಯಮಿತ ಅಧಿಕಾರವನ್ನು ಹೊಂದಿದೆ. ಆದರೆ, ಅಂತಹ ತಿದ್ದುಪಡಿಗಳು ಸಂವಿಧಾನದ ಮೂಲಭೂತ ರಚನೆಯಲ್ಲಿ ಹಸ್ತಕ್ಷೇಪ ಮಾಡಬಾರದು. ಸಂಸತ್ತು ಸಂವಿಧಾನದ ಪ್ರತಿಯೊಂದು ತಿದ್ದುಪಡಿಯು ಸಂವಿಧಾನದ ಮೂಲ ರಚನೆಯನ್ನು ಬದಲಾಯಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಬೇಕು.
ಇದನ್ನೂ ಓದಿ : ವಿವೋ-ಇಂಡಿಯಾ ಸೇರಿ ಇತರ ಕಂಪೆನಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ


