ನವೆಂಬರ್ 22ರಂದು ನೆದರ್‍ಲ್ಯಾಂಡ್ಸ್‌ನಲ್ಲಿ ಸಮಯಕ್ಕೆ ಮುಂಚಿತವಾಗಿ ಸಾರ್ವತ್ರಿಕ ಚುನಾವಣೆ ನಡೆಯಿತು. ’ಪಾರ್ಟಿ ಫಾರ್ ಫ್ರೀಡಂ’ (ಪಿವಿವಿ- ಡಚ್ ಭಾಷೆಯಲ್ಲಿ ಪಾರ್ಟಿಜ್ ವೂರ್ ವ್ರಿಹೈಡ್) ಅತೀ ದೊಡ್ಡ ಪಕ್ಷವಾಗಿ ಮೂಡಿಬಂತು. ಅದು ತನ್ನ ಸ್ಥಾನಗಳನ್ನು ದ್ವಿಗುಣಗೊಳಿಸಿಕೊಂಡು, ಹತ್ತಿರಹತ್ತಿರ ಸಂಸತ್ತಿನ ಕಾಲುಭಾಗದಷ್ಟು ಸ್ಥಾನಗಳನ್ನು ಹಿಡಿದಿದೆ. ಆದರೆ, ಅದಕ್ಕೆ ಈಗ ಸರಕಾರವನ್ನು ರಚಿಸುವುದು ಮಾತ್ರ ಕಷ್ಟ. ಏಕೆಂದರೆ, ಅದಕ್ಕೆ ಹಾಗೇ ಮಾಡಲು ಕನಿಷ್ಟ ಎರಡು ಪಕ್ಷಗಳ ಬೆಂಬಲವಾದರೂ ಬೇಕು ಮತ್ತು ಅದು ಸದ್ಯಕ್ಕೆ ರಾಜಕೀಯವಾಗಿ ಏಕಾಂಗಿಯಾಗಿದೆ. ಆದುದರಿಂದ ಮುಂದಿನ ಸರ್ಕಾರ ಏನಾಗಿರಲಿದೆ ಎಂಬುದು ಅಸ್ಪಷ್ಟ.
ಪಿವಿವಿ ಒಂದು ಮುಸ್ಲಿಂ ವಿರೋಧಿ ಪಕ್ಷವಾಗಿದೆ. ಅದರ ನಾಯಕ ಗೀರ್ಟ್ ವಿಲ್ಡರ್ಸ್- ಕುರಾನ್ ನಿಷೇಧ, ಮಸೀದಿಗಳ ನಿರ್ಮಾಣಕ್ಕೆ ನಿಷೇಧ ಮತ್ತು ಪಾಶ್ಚಾತ್ಯೇತರ ದೇಶಗಳಿಂದ ವಲಸೆಯ ಮೇಲೆ ಐದು ವರ್ಷಗಳ ನಿಷೇಧಕ್ಕೆ ಕರೆ ನೀಡಿದ್ದಾರೆ.
ಯಾರು ಈ ಗೀರ್ಟ್ ವಿಲ್ಡರ್ಸ್?
ವಿಲ್ಡರ್ಸ್ ಒಬ್ಬ ಡಚ್ ರಾಜಕಾರಣಿ. ಒಬ್ಬ ಭಾಷಣ ಬರಹಗಾರರಾಗಿ ಅವರು ತನ್ನ ರಾಜಕೀಯ ಜೀವನ ಆರಂಭಿಸಿದರು. ನಂತರ, ಅವರು ಸಂಪ್ರದಾಯವಾದಿ (ಕನ್ಸರ್‌ವೆಟಿವ್) ಪೀಪಲ್ಸ್ ಪಾರ್ಟಿ ಫಾರ್ ಫ್ರೀಡಂ ಎಂಡ್ ಡೆಮಾಕ್ರಸಿ (ವಿವಿಡಿ) ಸೇರಿದರು. ವಿವಿಡಿಯು ವಿಲ್ಡರ್ಸ್‌ಗೆ ಆರಂಭಿಕ ನಿಲುವುಗಳನ್ನು ಬೆಳೆಸಿಕೊಳ್ಳಲು ಕಾರಣವಾಯಿತು. ಆಗ ಅವು ಇಷ್ಟೊಂದು ತೀವ್ರಗಾಮಿಯಾಗಿ ಇರಲಿಲ್ಲ. ಕ್ರಮೇಣ, ಅವರು 2006ರಲ್ಲಿ ವಿಡಿಡಿಯಿಂದ ತಮ್ಮ ಸಂಬಂಧ ಮುರಿದುಕೊಂಡು ಪಿವಿವಿಯನ್ನು ಸ್ಥಾಪಿಸಿದರು. ಪಿವಿವಿಯನ್ನು ಸ್ಥಾಪನೆ ಮಾಡುವಾಗ ವಿಲ್ಡರ್ಸ್, ಸಂಪ್ರದಾಯವಾದಿ ವಿಡಿಡಿಯಲ್ಲಿದ್ದ ಹೆಚ್ಚು ತೀವ್ರಗಾಮಿ ಶಕ್ತಿಗಳನ್ನು ಹೊರಗೊಯ್ದರು. ಪಕ್ಷವು ಹಿಂದೆಯೂ, ಈಗಲೂ ಆತನ ವೈಯಕ್ತಿಕ ವರ್ಚಸ್ಸನ್ನು ಅವಲಂಬಿಸಿದೆ. ವಿಲ್ಡರ್ಸ್ ಎಂದರೆ, ಹಲವು ಪಾಶ್ಚಾತ್ಯ ದೇಶಗಳಿಗೆ ಇಷ್ಟವಿಲ್ಲ. ಏಕೆಂದರೆ, ಇಷ್ಟಿದ್ದೂ ಆತ ಯುದ್ಧವಿರೋಧಿ, ನ್ಯಾಟೋ ಒಕ್ಕೂಟದ ವಿರೋಧಿ ಮತ್ತು ಐರೋಪ್ಯ ಒಕ್ಕೂಟದ (ಇಯು) ವಿರೋಧಿ. ಯುಎಸ್‌ಎ ಸರಕಾರವು ಆತನನ್ನು ಇಷ್ಟಪಡುವುದಿಲ್ಲ ಏಕೆಂದರೆ, ಆತ ಯುಎಸ್‌ಎಯ ಮಿಲಿಟರಿ ಕಾರ್ಯಾಚರಣೆಗಳು ಮತ್ತು ಉಕ್ರೇನಿನ ಯುದ್ಧದಲ್ಲಿ ನೆದರ್‍ಲ್ಯಾಂಡ್ಸ್ ಪಾಲುಗೊಳ್ಳುವುದನ್ನು ವಿರೋಧಿಸುತ್ತಾರೆ. ನೆದರ್‍ಲ್ಯಾಂಡ್ಸ್ ಬೇರೆ ದೇಶಗಳ ಯುದ್ಧಗಳಲ್ಲಿ ಭಾಗವಹಿಸಬಾರದು ಎಂದು ಅವರು ಹೇಳಿದ್ದಾರೆ. ದುರದೃಷ್ಟವಶಾತ್, ಅವರು ಮೈತ್ರಿಯೊಂದನ್ನು ರೂಪಿಸಬೇಕೆಂದಾದರೆ, ಆತನ ರಾಜಕೀಯ ನಿಲುವಿನ ಈ ಭಾಗವಂತೂ ತೆಳುವಾಗುತ್ತದೆ.
ವಿಲ್ಡರ್ಸ್‌ನ ಇಸ್ಲಾಮೋಫೋಬಿಯಾ
ಯುರೋಪಿನಲ್ಲಿ ಇಸ್ಲಾಮೋಫೋಬಿಯಾಕ್ಕೆ ದೀರ್ಘವಾದ ಇತಿಹಾಸವಿದೆ. ಹತ್ತೊಂಬತ್ತನೆಯ ಶತಮಾನದ ಆರಂಭದಲ್ಲಿ ಇಸ್ಲಾಮಿನ ಮೇಲಿನ ದಾಳಿಗಳನ್ನು ವಸಾಹತುವಾದದ ಸಮರ್ಥನೆಗಾಗಿ ಬಳಸಿಕೊಳ್ಳಲಾಗುತ್ತಿತ್ತು. ಎರಡನೇ ಮಹಾಯುದ್ಧದ ನಂತರ, ಯುದ್ಧದಿಂದ ನಾಶವಾಗಿದ್ದ ಯುರೋಪಿನ ಪುನರ್ನಿರ್ಮಾಣಕ್ಕಾಗಿ, ಹಲವಾರು ವಲಸೆ ಕಾರ್ಮಿಕರು, ಪಶ್ಚಿಮ ಏಷ್ಯಾ ಮತ್ತು ಉತ್ತರ ಆಫ್ರಿಕಾದಿಂದ ಬಂದರು. ಕಾರ್ಮಿಕ ವರ್ಗಗಳನ್ನು ವಿಭಜಿಸಿ, ನಿಯಂತ್ರಣದಲ್ಲಿ ಇಡಲು ಹಲವಾರು ಮುಸ್ಲಿಂ ವಿರೋಧಿ ಕಟ್ಟುಕತೆಗಳನ್ನು ಬಳಸಲಾಗುತ್ತಿತ್ತು. ಇಪ್ಪತ್ತೊಂದನೇ ಶತಮಾನದಲ್ಲಿ, ಮೂರು ಪ್ರಮುಖ ಸಂಘರ್ಷದ ಘಟನೆಗಳು ಇಸ್ಲಾಮೋಫೋಬಿಯಾಕ್ಕೆ ಪೂರಕವಾಗಿ ನಡೆದಿವೆ.
ಮೊದಲನೆಯದಾಗಿ, 2001ರಿಂದ ಭಯೋತ್ಪಾದನೆಯ ವಿರುದ್ಧ ಯುದ್ಧ ಎಂಬುದು ಮುಸ್ಲಿಂ ವಿರೋಧಿ ಅಪಪ್ರಚಾರದ ಅಬ್ಬರದೊಂದಿಗೆ ಮುಂದೆಬಂತು. ಮುಸ್ಲಿಮರನ್ನು ಸಾಮ್ರಾಜ್ಯಶಾಹಿಗಳು, ತಮ್ಮ ಸಂಸ್ಕೃತಿಯನ್ನು ಹರಡಿ, ಪಾಶ್ಚಾತ್ಯ ನಾಗರಿಕತೆಯನ್ನು ನಾಶ ಮಾಡಲು ಯತ್ನಿಸುವವರು ಎಂಬುದಾಗಿ ಚಿತ್ರಿಸಲಾಯಿತು. ವಿಲ್ಡರ್ಸ್‌ನ ಆರಂಭಿಕ ಬೆಳವಣಿಗೆ ಮತ್ತು ಅಂತಿಮವಾಗಿ ವಿವಿಡಿಯಿಂದ ಆತನ ವಿಭಜನೆಯು ಇದೇ ಕಾಲಘಟ್ಟಕ್ಕೆ ಸರಿಹೊಂದುತ್ತದೆ. ನೆದರ್‍ಲ್ಯಾಂಡ್ಸ್‌ನ ’ಇಸ್ಲಾಮೀಕರಣ’ವನ್ನು ನಿಲ್ಲಿಸಲು ಆತ ಹಲವಾರು ತೀವ್ರಗಾಮಿಯಾದ ರಾಜಕೀಯ ನಿಲುವುಗಳನ್ನು ಘೋಷಿಸಿದರು. ಆಗಿನಿಂದಲೇ ಆತ ನೆದರ್‍ಲ್ಯಾಂಡ್ಸ್‌ನಲ್ಲಿ ಕುರಾನ್ ಮತ್ತು ಮಸೀದಿಗಳ ನಿರ್ಮಾಣಕ್ಕೆ ನಿಷೇಧವನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಮುಸ್ಲಿಮರು ನೆದರ್‍ಲ್ಯಾಂಡ್ಸ್‌ನಲ್ಲಿ ’ಜಿಹಾದ್’ ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ: ಯುದ್ಧವಿರಾಮಕ್ಕೂ ಮೊದಲು ನಡೆದ ಮಾರಣಹೋಮಕ್ಕೆ ಜಗತ್ತು ಸ್ಪಂದಿಸಿದ್ದು ಹೇಗೆ?
ಎರಡನೆಯದು 2008ರ ಯುಎಸ್‌ಎಯ ಹಣಕಾಸು ಬಿಕ್ಕಟ್ಟು. ಈ ಬಿಕ್ಕಟ್ಟಿನ ಪರಿಣಾಮಗಳು ಯುರೋಪಿನಾದ್ಯಂತ ವ್ಯಾಪಕವಾಗಿದ್ದವು. ಐರೋಪ್ಯ ಒಕ್ಕೂಟದ ನಿಯಮ, ನಿಯಂತ್ರಣಗಳು ತಮ್ಮ ಆರ್ಥಿಕತೆಯನ್ನು ನಿಭಾಯಿಸುವುದಕ್ಕೆ ಐರೋಪ್ಯ ರಾಷ್ಟ್ರಗಳಿಗೆ ಕಷ್ಟಮಾಡಿಬಿಟ್ಟವು. ತೀವ್ರ ರಾಷ್ಟ್ರೀಯವಾದಿ ಸಿದ್ಧಾಂತ ಐರೋಪ್ಯ ಒಕ್ಕೂಟದ ಪರಿಕಲ್ಪನೆಯ ವಿರುದ್ಧವೇ ಹೋರಾಟ ಆರಂಭಿಸಿತು. ಐರೋಪ್ಯ ಒಕ್ಕೂಟದ ಕುರಿತ ಅಸಮಾಧಾನವನ್ನೇ ಐರೋಪ್ಯ ಬಲಪಂಥವು ಒಂದು ಸಾಂಸ್ಕೃತಿಕ ಹೋರಾಟವನ್ನಾಗಿ ಪರಿವರ್ತಿಸಲು ಯತ್ನಿಸಿತು. ಐರೋಪ್ಯ ಒಕ್ಕೂಟದ ಬಹುಸಂಸ್ಕೃತಿಯ ಪರಿಕಲ್ಪನೆಯು ತಮ್ಮ ರಾಷ್ಟ್ರೀಯ ಅಸ್ಮಿತೆ-ಗುರುತಿಗೆ ಬೆದರಿಕೆ ಎಂದು ಅವರು ವಾದಿಸಿದರು.
ಮೂರನೆಯದು ಸಿರಿಯಾದ ಅಂತರ್ಯುದ್ಧ ಮತ್ತು ನಿರಾಶ್ರಿತ ವಲಸಿಗರ ಸಮಸ್ಯೆ. ಹಿಂದೆಯೇ ಆರಂಭಗೊಂಡಿದ್ದ ಅಪಪ್ರಚಾರ ಯಂತ್ರವು- ಮುಸ್ಲಿಮರು ದೇಶವನ್ನು ಆಕ್ರಮಿಸಲು ಬರುತ್ತಿದ್ದಾರೆ ಎಂಬ ಸಂದೇಶಗಳನ್ನು ಜನರಿಗೆ ಉಣಬಡಿಸಲು ಆರಂಭಿಸಿತು. ನಿರಾಶ್ರಿತರ ಜೊತೆಯಲ್ಲಿ ಭಯೋತ್ಪಾದಕರೂ ಬರಬಹುದು ಎಂಬ ಭಯವನ್ನು ನೆದರ್‍ಲ್ಯಾಂಡ್ಸ್‌ನ ಹಲವಾರು ಜನರ ಮನಸ್ಸಿನಲ್ಲಿ ಬಿತ್ತಲಾಯಿತು. ಸಾಂಸ್ಕೃತಿಕವಾಗಿ ಮುಸ್ಲಿಮರು ವಿಸ್ತರಣಾವಾದಿ ಜನರು ಎಂದೂ ಅವರಿಗೆ ಹೇಳಲಾಯಿತು. ಅವರು ಶರಿಯ ಕಾನೂನಿನ ಅನುಸಾರ ಬದುಕಲು ಬಯಸುತ್ತಾರೆ ಮತ್ತು ದೇಶವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಾರೆ ಎಂದೂ ಹೇಳಲಾಯಿತು. ಈ ಹೊತ್ತಿನಲ್ಲಿ ವಿಲ್ಡರ್ಸ್ ತನ್ನ ಭಾಷಣಗಳಲ್ಲಿ ತೀರಾ ಆಕ್ರಮಣಕಾರಿಯಾದರು. 2016ರಲ್ಲಿ ಆತ ಮೊರೊಕ್ಕೋದ ವಲಸಿಗರ ವಿರುದ್ಧ ತಾರತಮ್ಯವನ್ನು ಪ್ರೋತ್ಸಾಹಿಸಿದ್ದಕ್ಕಾಗಿ ತಪ್ಪಿತಸ್ಥ ಎಂದು ಘೋಷಿಸಲಾಯಿತಾದರೂ, ತೀರ್ಪನ್ನು ನಂತರ ಬುಡಮೇಲು ಮಾಡಲಾಯಿತು. ಆತನ ವಿರುದ್ಧ ನ್ಯಾಯಾಲಯಗಳಲ್ಲಿ ಹಲವು ಮೊಕದ್ದಮೆಗಳಿವೆ.
ವಿಲ್ಡರ್ಸ್ ಪ್ರತಿಪಾದಿಸಿರುವ ಹಲವು ನಿಲುವುಗಳು ತುಂಬಾ ಹಿಂಸಾತ್ಮಕವಾಗಿವೆ. ಆತ ಇಸ್ರೇಲಿನ ಆರಾಧಕನಾಗಿದ್ದು, ನೆದರ್‍ಲ್ಯಾಂಡ್ಸ್‌ನಲ್ಲಿ ಇಸ್ರೇಲಿ ಮಾದರಿಯ ಬಂಧನ ಶಿಬಿರಗಳನ್ನು ಸ್ಥಾಪಿಸಿ, ಶಂಕಿತ ಭಯೋತ್ಪಾದಕರನ್ನೆಲ್ಲಾ ವಿಚಾರಣೆಯಿಲ್ಲದೆ ಅಲ್ಲಿ ಬಂಧಿಸಿಡುವುದನ್ನು ಬೆಂಬಲಿಸಿದ್ದಾರೆ. ಕಾನೂನಿನಪ್ರಕಾರ ಎಲ್ಲರಿಗೂ ಸಮಾನೆಯ ಖಾತರಿ ನೀಡುವ ಡಚ್ ಸಂವಿಧಾನದ ವಿಧಿ 1ನ್ನು ಬದಲಿಸಿ, ಅದರ ಜಾಗದಲ್ಲಿ ಜುದಾಯಿ-ಕ್ರೈಸ್ತ (Judeo-Christian) ಮತ್ತು ಮಾನವತಾವಾದಿ ಸಂಪ್ರದಾಯಗಳಿಗೆ ಆದ್ಯತೆ ನೀಡಬೇಕೆನ್ನುವ ವಿಧಿಯನ್ನು ತರಬೇಕು ಎಂಬುದನ್ನು ಅವರು ಬೆಂಬಲಿಸಿದ್ದಾರೆ.
ಸರಕಾರ ರಚನೆಯ ಸಮಸ್ಯೆ
ಸರಕಾರ ರಚಿಸಲು ವಿಪಿಪಿ ಸಮರ್ಥವಾಗುವುದೇ ಅಥವಾ ಇಂತದ್ದೇ ಬೇರೆ ಪಕ್ಷಗಳು ಜೊತೆಗೆ ಬರುವವೇ ಎಂಬುದು ಇನ್ನೂ ಅಸ್ಪಷ್ಟವಾಗಿದೆ. ಪಿವಿವಿಯು ಮೈತ್ರಿ ಸರಕಾರ ರಚಿಸಿದರೆ ನೆದರ್‍ಲ್ಯಾಂಡ್ಸ್ ಹೆಚ್ಚು ಪ್ರತ್ಯೇಕವಾಗುವುದು ಮಾತ್ರವಲ್ಲದೆ, ಅಲ್ಲಿನ ವಲಸಿಗ ಕುಟುಂಬಗಳಿಗೆ ಕೆಟ್ಟದಾಗಲಿದೆ. ಪಿವಿವಿಯು ಮುಂದೆ ಯುರೋಪಿನಲ್ಲಿ ಬೆಳೆಯುತ್ತಿರುವ ಐರೋಪ್ಯ ಒಕ್ಕೂಟ ವಿರೋಧಿ ನಾಯಕತ್ವದ ಅಲೆಯನ್ನು ಬೆಂಬಲಿಸಲಿದೆ ಮತ್ತು ಐರೋಪ್ಯ ಒಕ್ಕೂಟದಿಂದ ದೂರ ಸರಿಯಲಿದೆ.
ಪಿವಿವಿಯು ಇತರ ಬಲ ಮತ್ತು ಬಲ-ಮಧ್ಯ ಪಂಥೀಯ ಪಕ್ಷಗಳ ಜೊತೆಗೆ ಸೇರಿ ಮೈತ್ರಿಕೂಟ ರಚಿಸುವ ಸಾಧ್ಯತೆ ಇರುವಂತೆ ಕಾಣುತ್ತಿದೆ. ಇದು ಹಿಂದಿನ ಸರಕಾರದ ಮುಂದುವರಿಕೆಯೇ ಆಗಲಿದೆಯಾದರೂ, ಪಿವಿವಿಗೆ ಹೆಚ್ಚಿನ ಪ್ರಭಾವ ದೊರಕಿಸಿಕೊಡಲಿದೆ. ನೆದರ್‍ಲ್ಯಾಂಡ್ಸ್ ರಾಜಕೀಯವಾಗಿ ಹೆಚ್ಚು ಏಕಾಂಗಿಯಾಗಬಹುದಾದರೂ, ಮಾರುಕಟ್ಟೆ ಪರ ಧೋರಣೆಗಳ ಅನುಸರಣೆಯನ್ನು ಮುಂದುವರಿಸಲಿದೆ. ಇದು ಪರಿಸ್ಥಿತಿಯ ಕಂದರವನ್ನು ಇನ್ನಷ್ಟು ಕಡಿದಾಗಿಸಲಿದೆ. ಇದು ನೆದರ್‍ಲ್ಯಾಂಡ್ಸ್‌ನ ವಲಸಿಗ ಜನತೆಗೆ ಏನು ಮಾಡಬಹುದು ಎಂಬ ಯೋಚನೆಯೇ ತಳಮಳ ಉಂಟುಮಾಡುವಂತದ್ದು. ಬಲಪಂಥದ ಕಡೆಗೆ ರಾಜಕೀಯ ಪಲ್ಲಟದ ಪರಿಣಾಮವನ್ನು ವಲಸಿಗರು ಇಂದು ಯುರೋಪಿನಾದ್ಯಂತ ಎದುರಿಸುತ್ತಿದ್ದಾರೆ.
ಅಂತಾರಾಷ್ಟ್ರೀಯವಾಗಿ ಈ ಪಕ್ಷಗಳೆಲ್ಲವೂ ಐರೋಪ್ಯ ರಾಜಕೀಯ ಒಗ್ಗೂಡುವುದನ್ನು ನಿಲ್ಲಿಸಲು ಕರೆ ನೀಡಿವೆ. ಆದರೆ, ಅವು ಅಷ್ಟೊಂದು ಬಲವಾಗಿ ಇಲ್ಲ. ಅವು ವ್ಯವಹಾರವನ್ನು ಪ್ರೋತ್ಸಾಹಿಸುವ ಬಂಡವಾಳಶಾಹಿ ಕಾರ್ಯಕ್ರಮವನ್ನೂ ಬೆಂಬಲಿಸುತ್ತವೆ. ಅವು ಇತರ ದೇಶಗಳಲ್ಲಿ ಮಿಲಿಟರಿ ಕಾರ್ಯಾಚರಣೆಗಳನ್ನು ವಿರೋಧಿಸುತ್ತಿರುವ ಹೊತ್ತಿನಲ್ಲೇ, ಮಿಲಿಟರಿ ವ್ಯವಸ್ಥೆಗಳ ಬೆಳವಣಿಗೆಯನ್ನು ಬೆಂಬಲಿಸುತ್ತಿವೆ ಮತ್ತು ಆ ವ್ಯವಸ್ಥೆಗಳನ್ನು ವಲಸಿಗರ ವಿರುದ್ಧ ಪೊಲೀಸ್‌ಗಿರಿ ವ್ಯವಸ್ಥೆಗಳಾಗಿ ಬಳಸಲು ಬಯಸುತ್ತಿವೆ.
ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಕಿಶೋರ್ ಗೋವಿಂದ
ಬೆಂಗಳೂರಿನಲ್ಲಿ ನೆಲೆಸಿರುವ ಕಿಶೋರ್ ಅವರು ಗಣಿತಶಾಸ್ತ್ರಜ್ಞರು. ಜಾಗತಿಕ ರಾಜಕೀಯ ಆಗುಹೋಗುಗಳನ್ನು ನಿಕಟವಾಗಿ ಗಮನಿಸುವ ಅವರು ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ.


