Homeಅಂತರಾಷ್ಟ್ರೀಯಯುದ್ಧವಿರಾಮಕ್ಕೂ ಮೊದಲು ನಡೆದ ಮಾರಣಹೋಮಕ್ಕೆ ಜಗತ್ತು ಸ್ಪಂದಿಸಿದ್ದು ಹೇಗೆ?

ಯುದ್ಧವಿರಾಮಕ್ಕೂ ಮೊದಲು ನಡೆದ ಮಾರಣಹೋಮಕ್ಕೆ ಜಗತ್ತು ಸ್ಪಂದಿಸಿದ್ದು ಹೇಗೆ?

- Advertisement -
- Advertisement -

(ಇದು ನ್ಯಾಯಪಥ ನವೆಂಬರ್ 1-15 ಸಂಚಿಕೆಯಲ್ಲಿ “ನಿಲ್ಲದ ಇಸ್ರೇಲ್ ಆಕ್ರಮಣ; ಮುಂದುವರಿದ ಮಕ್ಕಳ ಮಾರಣಹೋಮ” ಹೆಸರಿನಲ್ಲಿ ಪ್ರಕಟವಾಗಿತ್ತು)

ವಾರಗಳ ಕಾಲ ನಡೆದ ವೈಮಾನಿಕ ಮತ್ತು ಕ್ಷಿಪಣಿ ದಾಳಿಗಳ ಬಳಿಕ ಇಸ್ರೇಲಿ ಭೂಸೇನೆ “ತ್ಸಹಾಲ್ ಅಕ್ಟೋಬರ್ 27, 2023ರಂದು ಗಾಝಾ ಪಟ್ಟಿಯಲ್ಲಿ ಭೂಪ್ರದೇಶದ ಆಕ್ರಮಣವನ್ನು ಆರಂಭಿಸಿತು. ಹಮಾಸ್ ಇಸ್ರೇಲಿನ ಮೇಲೆ ಸಾಂದ್ರೀಕೃತ ದಾಳಿ ನಡೆಸಿ ನೂರಾರು ಇಸ್ರೇಲಿ ನಾಗರಿಕರನ್ನು ಕೊಂದು ನೂರಾರು ಜನರನ್ನು ಒತ್ತೆಸೆರೆ ಪಡೆದ ಅಕ್ಟೋಬರ್ ತಿಂಗಳ ಮೊದಲ ವಾರದಿಂದ ಗಾಝಾ ಪಟ್ಟಿ ಇಸ್ರೇಲಿ ಸೇನಾಪಡೆಗಳ ದಿಗ್ಭಂಧನದಲ್ಲಿದೆ.

ಗಾಝಾದ ದಿಗ್ಭಂಧನವು ತೀರಾ ಹಿಂಸಾತ್ಮಕವಾಗಿದ್ದು ಅದಾಗಲೇ ಸಂಕಷ್ಟದಲ್ಲಿದ್ದ ಗಾಝಾದ ಜನರು ಹೇಳಲಾಗದ ಸಂಕಷ್ಟ ಅನುಭವಿಸುವುದಕ್ಕೆ ಕಾರಣವಾಗಿದೆ. (ಇದನ್ನು ಬರೆಯುವ ಹೊತ್ತಿಗೆ) ಈಗಾಗಲೇ ಹೆಚ್ಚುಕಡಿಮೆ 4,000 ಮಕ್ಕಳೂ ಸೇರಿದಂತೆ 9,000ಕ್ಕೂ ಹೆಚ್ಚು ಮಂದಿ ಪ್ಯಾಲೆಸ್ತೀನಿಯರು ಸಾವಿಗೀಡಾಗಿದ್ದಾರೆ. ಒಂದು ತಿಂಗಳ ಒಳಗಾಗಿಯೇ ಗಾಝಾದ 80 ಜನರಲ್ಲಿ ಒಬ್ಬರು ಸತ್ತಿದ್ದಾರೆ. ಇಸ್ರೇಲ್ ವಾಯುದಾಳಿ ಆರಂಭಿಸುತ್ತಿದ್ದಂತೆ ಉತ್ತರ ಗಾಝಾದ 11 ಲಕ್ಷ ಜನರು ವಾರಗಟ್ಟಲೆ ತಮ್ಮ ಮನೆಗಳನ್ನು ತೆರವು ಮಾಡುವಂತೆ ಆದೇಶ ನೀಡುತ್ತಾ ಬರುತ್ತಿದೆ. ಈಗ ಹೆಚ್ಚುಕಡಿಮೆ 20,000 ತ್ಸಹಾಲ್ ಸೈನಿಕರು ಗಾಝಾವನ್ನು ಪ್ರವೇಶಿಸಿದ್ದಾರೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಎರಡನೇ ಹಂತದ ಯುದ್ಧಕ್ಕೆ ಕರೆಕೊಟ್ಟಿದ್ದಾರೆ.

ನಿರಾಶ್ರಿತ ಶಿಬಿರದ ಮೇಲೆ ಇಸ್ರೇಲಿ ಬಾಂಬ್ ದಾಳಿ

ಪ್ಯಾಲೆಸ್ತೀನಿಯರು ಮುಖ್ಯವಾಗಿ ಗಾಝಾ ಮತ್ತು ಪಶ್ಚಿಮ ದಂಡೆ ಎಂಬ ಎರಡು ಪ್ರದೇಶಗಳಿಗೆ ಹೆಚ್ಚಾಗಿ ಸೀಮಿತವಾಗಿದ್ದಾರೆ. ಕೆಲವು ಪ್ಯಾಲೆಸ್ತೀನಿಯರು ಇಸ್ರೇಲಿನೊಳಗೆಯೇ ಬದುಕುತ್ತಿದ್ದಾರಾದರೂ ತೀವ್ರವಾದ ಕಣ್ಗಾವಲಿಗೆ ಗುರಿಯಾಗಿದ್ದಾರೆ. ಯುದ್ಧವು ಗಾಝಾಕ್ಕೆ ಸೀಮಿತವಾಗಿದ್ದು ಇಲ್ಲಿ ಹಮಾಸ್ ಪ್ರಬಲ ರಾಜಕೀಯ ಶಕ್ತಿಯಾಗಿದೆ. ಆದರೆ ಹಮಾಸ್ ಪ್ರಾಬಲ್ಯ ಇಲ್ಲದ ಪ್ಯಾಲೆಸ್ತೀನಿ ಪ್ರದೇಶಗಳ ಮೇಲೂ ದಾಳಿಗಳು ನಡೆದಿವೆ. ಹಮಾಸ್ ರಾಜಕೀಯವಾಗಿ ಲಾಭ ಪಡೆದುಕೊಳ್ಳುತ್ತಿದ್ದು, ಹಮಾಸ್ ವಿರುದ್ಧವಾಗಲಿ, ಇಸ್ರೇಲಿನ ವಿರುದ್ಧವಾಗಲೀ ಪ್ರತಿಕ್ರಿಯಿಸಲು ಅಶಕ್ತವಾಗಿರುವ ಜಾತ್ಯತೀತ ಫತಾಹ್ ಪಕ್ಷ ಗಳಿಸಿಕೊಂಡಿದ್ದ ಬೆಂಬಲ ಇಳಿಮುಖವಾಗಿದೆ ಎಂಬುದನ್ನು ಇತ್ತೀಚಿನ ದಾಳಿಗಳು ಒಂದು ಸೂಚಿಸುತ್ತವೆ.

ಅಧಿಕೃತವಾಗಿ ವಾಯುದಾಳಿ ಮತ್ತು ಗಾಝಾದ ಮೇಲಿನ ಆಕ್ರಮಣವು ಹಮಾಸ್ ದಾಳಿಗೆ ನೇರವಾದ ಪ್ರತಿಕ್ರಿಯೆಯಾಗಿದೆ ಎಂದು ಇಸ್ರೇಲ್ ಹೇಳಿಕೊಂಡಿದೆ. ಹಮಾಸ್ ದಾಳಿಯಲ್ಲಿ 1,400 ಇಸ್ರೇಲಿಗಳು ಸಾವಿಗೀಡಾಗಿದ್ದು ನೂರಾರು ಜನರನ್ನು ಒತ್ತೆಸೆರೆ ಇರಿಸಿಕೊಳ್ಳಲಾಗಿದೆ ಎಂದೂ ಇಸ್ರೇಲ್ ಅಧಿಕೃತವಾಗಿ ಹೇಳಿದೆ. ಹೀಗಿದ್ದರೂ ಇಸ್ರೇಲಿ ಪ್ರತಿಕ್ರಿಯೆ ಹೆಚ್ಚು ಕುತಂತ್ರ ಉದ್ದೇಶವನ್ನು ಹೊಂದಿರುವಂತೆ ಕಾಣುತ್ತಿದೆ.

ಬೆಂಜಮಿನ್ ನೇತನ್ಯಾಹು

ಉತ್ತರ ಗಾಝಾದಿಂದ ಪ್ಯಾಲೆಸ್ತೀನಿಯರನ್ನು ಹಿಮ್ಮೆಟ್ಟಿಸುವುದರ ಮೂಲಕ ಆ ಪ್ರದೇಶವನ್ನು ಕಬಳಿಸಲು ಇಸ್ರೇಲ್ ಹೊಂಚುಹಾಕಬಹುದು; ಉತ್ತರದ ಪ್ರದೇಶಗಳ ಮೇಲೆ ಬಾಂಬ್ ದಾಳಿ ಮಾಡುವುದರ ಮೂಲಕ ಪ್ಯಾಲೆಸ್ತೀನಿಯರನ್ನು ದಕ್ಷಿಣದ ಈಜಿಪ್ಟಿನ ಗಡಿಯತ್ತ ತಳ್ಳಲಾಗುತ್ತಿದೆ. ಅವರನ್ನು ಹೊರಕ್ಕೆ ತಳ್ಳಿದರೆ ಇಸ್ರೇಲ್ ಯಾವುದೇ ವಿರೋಧ ಇಲ್ಲದೆ ಅದನ್ನು ತನ್ನದೆಂದು ಮಾಡಿಕೊಳ್ಳಬಹುದು.

ಗಾಝಾ ಜನರು ನಿರಾಶ್ರಿತರಾಗಲೆಂಬ ಆಶಯ

ಈಜಿಪ್ಟ್ ಪ್ಯಾಲೆಸ್ತೀನಿಯರನ್ನು ನಿರಾಶ್ರಿತರನ್ನಾಗಿ ಸ್ವೀಕರಿಸಬಹುದು ಎಂದು ಇಸ್ರೇಲ್ ಆಶಿಸಿತ್ತು. ಪ್ಯಾಲೆಸ್ತೀನಿಯರು ಈಜಿಪ್ಟಿನಲ್ಲಿ ಅಥವಾ ಅರಬ್ ಜಗತ್ತಿನ ಇತರ ಭಾಗಗಳಲ್ಲಿ ಆಶ್ರಯ ಕೇಳಬಹುದು ಎಂದು ಈಜಿಪ್ಟ್ ಚಿಂತಿತವಾಗಿದೆ. ಒಂದು ವೇಳೆ ಪ್ಯಾಲೆಸ್ತೀನಿಯರು ಅರಬ್ ಪ್ರಪಂಚದ ಇತರ ಭಾಗಗಳಲ್ಲಿ ನೆಲೆಗೊಂಡರೆ ಇಸ್ರೇಲ್ ಅವರು ತಮ್ಮ ಮೂಲನಿವಾಸಕ್ಕೆ ಹಿಂದಿರುಗುವುದು ತುಂಬಾ ಕಷ್ಟಕರವಾಗಬಹುದು.

ಇಸ್ರೇಲಿ ಪಡೆಗಳು ಗಾಝಾದ ಮಧ್ಯ ಭಾಗವನ್ನು ಆಕ್ರಮಿಸಿಕೊಂಡಿದ್ದು, ಗಾಝಾನಗರವನ್ನು ದೇಶದ ಉಳಿದ ಭಾಗಗಳಿಂದ ಪ್ರತ್ಯೇಕಿಸಲಾಗಿದೆ. ವಾರಗಳ ಕಾಲದ ವಾಯುದಾಳಿ ಮತ್ತು ಎಚ್ಚರಿಕೆಗಳ ಮೂಲಕ ಇಸ್ರೇಲ್‌ನ ತ್ಸಹಾಲ್ ಪಡೆಗಳು ಉತ್ತರ ಗಾಝಾದ ಪ್ರದೇಶಗಳ ಮೇಲೆ ದಾಳಿ ನಡೆಸುತ್ತಿದ್ದು, ಹಮಾಸ್ ನೆಲೆಗಳನ್ನು ಬುಡಮೇಲು ಮಾಡುತ್ತಿರುವುದಾಗಿ ಹೇಳಿಕೊಳ್ಳುತ್ತಿದೆ. ಆದರೆ ಅವರ ದಾಳಿಗಳು ಉತ್ತರ ಭಾಗದಲ್ಲಿ ಯಾರೇ ಉಳಿದುಕೊಂಡಿರಲಿ ಅವರ ವಿರುದ್ಧವಾಗಿದೆ. ಈ ರೀತಿಯಲ್ಲಿ ಇಸ್ರೇಲ್ ಗಾಝಾದಿಂದ ಹಮಾಸನ್ನು ಹೇಗೆ ನಿರ್ಮೂಲನೆ ಮಾಡಲು ಸಾಧ್ಯ ಎಂಬುದು ಇನ್ನೂ ಅಸ್ಪಷ್ಟವಾಗಿದೆ.

ಇರಾನ್ ಜೊತೆ ಸಂಬಂಧ ಹೊಂದಿರುವ ಯೆಮೆನ್‌ನ ಹೌತಿಗಳು ಮತ್ತು ಲೆಬನಾನ್‌ನ ಹೆಜ್ಜೊಲ್ಲಾ ಸೇರಿದಂತೆ ಹಲವು ಸಶಸ್ತ್ರ ಗುಂಪುಗಳು ಪ್ಯಾಲೆಸ್ತೀನಿಯರಿಗೆ ಬೆಂಬಲ ಸೂಚಿಸಿವೆ. ಆದರೆ ಈ ಗುಂಪುಗಳು ನೇರವಾಗಿ ಯೆಮೆನ್ ಅಥವಾ ಲೆಬನಾನ್ ದೇಶಗಳ ಅಧೀನದಲ್ಲಿ ಇಲ್ಲ.

ಅಂತಾರಾಷ್ಟ್ರೀಯ ಪ್ರತಿಕ್ರಿಯೆ

ಅಕ್ಟೋಬರ್ 27, 2023ರಂದು ವಿಶ್ವಸಂಸ್ಥೆಯ ಸಮಾನ್ಯ ಸಾಭೆಯು ಇಎಸ್ (ತುರ್ತು ವಿಶೇಷ)-10/21 ಗೊತ್ತುವಳಿಯನ್ನು ಅಂಗೀಕರಿಸಿತು. ಅದು ಮಾನವೀಯ ನೆಲೆಯಲ್ಲಿ ತಕ್ಷಣದ ಕದನ ವಿರಾಮಕ್ಕೆ ಕರೆ ನೀಡಿತು. ಈ ಗೊತ್ತುವಳಿಯನ್ನು ಜೋರ್ಡಾನ್ ಮಂಡಿಸಿದ್ದು 121 ದೇಶಗಳು ಅದನ್ನು ಬೆಂಬಲಿಸಿದರೆ ಇಸ್ರೇಲ್ ಮತ್ತು ಯುಎಸ್‌ಎ ಸೇರಿದಂತೆ 14 ದೇಶಗಳು ವಿರೋಧಿಸಿದವು. ತಟಸ್ಥವಾಗಿ ಉಳಿದ 44 ದೇಶಗಳಲ್ಲಿ ಭಾರತವೂ ಸೇರಿತ್ತು.

ಪಶ್ಚಿಮ ಏಷ್ಯಾದಲ್ಲಿ ಹಲವು ದೇಶಗಳು ಈ ಘರ್ಷಣೆಯಲ್ಲಿ ಭಾಗಿಯಾಗುತ್ತಿರಬಹುದು; ಇರಾನ್ ಪ್ಯಾಲೆಸ್ತೀನಿಗೆ ಬೆಂಬಲ ನೀಡಿದೆ. ಟರ್ಕಿ ಕೂಡಾ ಪ್ಯಾಲೆಸ್ತೀನಿಗೆ ಬೆಂಬಲ ವ್ಯಕ್ತಪಡಿಸಿದೆ. ಹಲವು ಅರಬ್ ದೇಶಗಳು ಪ್ಯಾಲೆಸ್ತೀನಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಲು ಹಿಂಜರಿಯುತ್ತಿವೆ. ಇದಕ್ಕೆ ಭಾಗಶಃ ಕಾರಣ ಎಂದರೆ, ಅದರಿಂದ ಆ ದೇಶದ ಜನರನ್ನು ತಮ್ಮ ದೇಶದಲ್ಲಿ ನಿರಾಶ್ರಿತರಾಗಿ ಸ್ವೀಕರಿಸಬೇಕಾಗಿಬರಬಹುದಾದ ಪರಿಸ್ಥಿತಿ ಉಂಟಾಗಬಹುದು ಎಂಬ ಆತಂಕವಾದರೆ, ಮತ್ತೊಂದು ಭಾಗಶಃ ಕಾರಣವೆಂದರೆ ಇರಾನ್‌ನಂತಹ ಶಕ್ತಿಗಳು ಮತ್ತು ಪಶ್ಚಿಮ ಏಷ್ಯಾದಲ್ಲಿ ಸಕ್ರಿಯವಾಗಿರುವ ಅದರ ಹಲವಾರು ಪರೋಕ್ಷ ಬೆಂಬಲಿತ ಗುಂಪುಗಳ ಕುರಿತು ಇರುವ ಭಯ.

ಲ್ಯಾಟಿನ್ ಅಮೆರಿಕದಲ್ಲಿ ಚಿಲಿ, ಕೊಲಂಬಿಯಾ ಮುಂತಾದ ಹಲವು ಎಡಪಂಥೀಯ ಸರಕಾರಗಳು ಪ್ಯಾಲೆಸ್ತೀನಿಗೆ ಬೆಂಬಲ ವ್ಯಕ್ತಪಡಿಸಿವೆ. ಅವರು ಪ್ಯಾಲೆಸ್ತೀನಿಯರನ್ನು ವಸಾಹತೀಕರಣದ ಬಲಿಪಶುಗಳೆಂದು ಕಾಣುತ್ತಿದ್ದಾರೆ.

ಐತಿಹಾಸಿಕವಾಗಿ ಭಾರತ ಮತ್ತು ಐರ್‌ಲ್ಯಾಂಡ್ ಎರಡೂ ವಸಾಹತುಶಾಹಿ ಮತ್ತು ದೇಶವಿಭಜನೆಯ ಬಲಿಪಶುಗಳಾಗಿರುವುದರಿಂದ ಪ್ಯಾಲೆಸ್ತೀನ್ ಪರ ವಾದವನ್ನು ಬೆಂಬಲಿಸುತ್ತಾ ಬಂದಿದ್ದವು. ಐರ್‌ಲ್ಯಾಂಡ್ ಇನ್ನು ಕೂಡಾ ಪ್ಯಾಲೆಸ್ತೀನನ್ನು ಬೆಂಬಲಿಸುತ್ತಿದ್ದು ಐರೋಪ್ಯ ಒಕ್ಕೂಟದ ಇಸ್ರೇಲ್ ಪರ ನಿಲುವನ್ನು ವಿರೋಧಿಸುವಲ್ಲಿ ಪ್ರಮುಖ ಸಂಗತಿಯಾಗಿದೆ. ಇಲ್ಲಿ ಯುಕೆ ಮತ್ತು ಭಾರತದ ನಿಲುವುಗಳು ಅಂತಾರಾಷ್ಟ್ರೀಯವಾಗಿ ವಿಚಿತ್ರ ರೀತಿಯಲ್ಲಿ ಎದ್ದು ಕಾಣುತ್ತದೆ. ಅಧಿಕೃತವಾಗಿ ಎರಡೂ ದೇಶಗಳು ತಟಸ್ಥವಾಗಿ ಉಳಿದಿವೆ. ಆದರೆ ಪ್ರಧಾನಿಗಳಾದ ಸುನುಕ್ ಮತ್ತು ಮೋದಿ ಬಹಿರಂಗವಾಗಿ ಭಯೋತ್ಪಾದನೆ ವಿರುದ್ಧ ಇಸ್ರೇಲಿನ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ.

ಸಂಘರ್ಷದ ಜೊತೆ ಭಾರತದ ಸಂಬಂಧ

ಐತಿಹಾಸಿಕವಾಗಿ ಭಾರತವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ಯಾಲೆಸ್ತೀನ್ ಲಿಬರೇಷನ್ ಆರ್ಗನೈಸೇಷನ್ (ಪಿಎಲ್‌ಬಿ) ಪ್ಯಾಲೆಸ್ತೀನಿ ಜನರ ನ್ಯಾಯಬದ್ಧ ಪ್ರತಿನಿಧಿ ಎಂದು ಮಾನ್ಯ ಮಾಡಿದ ಮೊದಲ ಅರಬೇತರ ದೇಶ. ಹೀಗಿದ್ದರೂ ಇತ್ತೀಚಿನ ವರ್ಷಗಳಲ್ಲಿ ಭಾರತ-ಇಸ್ರೇಲ್ ಸಂಬಂಧ ತುಂಬಾ ಗಟ್ಟಿಗೊಳ್ಳುತ್ತಾ ಬಂದಿದೆ. ಇದು ಯಾಕೆ ಮತ್ತು ಹೇಗೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಇಸ್ರೇಲಿನ ಶಸ್ತ್ರಾಸ್ತ್ರ ಉದ್ದಿಮೆಯ ಇತಿಹಾಸವನ್ನು ನೋಡುವುದು ತುಂಬಾ ಅಗತ್ಯ.

ಇದನ್ನೂ ಓದಿ: ಇಸ್ರೇಲ್‌ ಜೊತೆ ಯುದ್ಧ ಒಪ್ಪಂದಕ್ಕೆ ಮುಂದಾದ ಹಮಾಸ್‌

ಆರಂಭಿಕ ವರ್ಷಗಳಲ್ಲಿ ಇಸ್ರೇಲ್ ಬಲವಾದ ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಹೊಂದಿತ್ತು. ಸುತ್ತಲೂ ಶತ್ರು ದೇಶಗಳಿಂದ ಆವರಿಸಲ್ಪಟ್ಟಿರುವುದರಿಂದಾಗಿ ಇಸ್ರೇಲ್ ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆಯನ್ನು ಸಾಧಿಸುವ ಗುರಿ ಹೊಂದಿತ್ತು. 1980ರ ದಶಕದ ನವ ಉದಾರವಾದಿ ಸುಧಾರಣೆಗಳ ಕಾರಣದಿಂದ ಇಸ್ರೇಲ್ ಬಲವಾದ ಖಾಸಗಿ ರಂಗವನ್ನು ಅಭಿವೃದ್ಧಿಪಡಿಸಿತು ಮತ್ತು ಅಲ್ಲಿ ರಕ್ಷಣಾ ಕ್ಷೇತ್ರವು ಒಂದು ಅತ್ಯಂತ ವೇಗವಾಗಿ ಬೆಳೆಯುವ ಉದ್ದಿಮೆಯಾಯಿತು. ಅವುಗಳ ತಂತ್ರಜ್ಞಾನ ನೆಲೆಗಟ್ಟನ್ನು ಅಭಿವೃದ್ಧಿಪಡಿಸಲು ಯುಎಸ್‌ಎಯ ಕಂಪನಿಗಳು ಇಸ್ರೇಲಿ ಕಂಪೆನಿಗಳ ಜೊತೆಗೆ ಕೆಲಸ ಮಾಡಿದವು. ಆ ಹೊತ್ತಿಗೆ ಮೂರನೇ ಜಗತ್ತಿನ ಹಲವಾರು ದೇಶಗಳು ಆಗಷ್ಟೇ ಸ್ವಾತಂತ್ರ್ಯ ಪಡೆಯುತ್ತಿದ್ದವು ಮತ್ತು ತಮ್ಮ ರಕ್ಷಣೆಯನ್ನು ಬಲಪಡಿಸಿಕೊಳ್ಳಲು ಬಯಸುತ್ತಿದ್ದವು. ಇಸ್ರೇಲಿ ಕಂಪೆನಿಗಳಿಗೆ ಸಿದ್ಧ ಮಾರುಕಟ್ಟೆ ದೊರೆತು, ಅವು ಮೂರನೇ ಜಗತ್ತಿನ ಉದ್ದಗಲಕ್ಕೂ ಶಸ್ತ್ರಾಸ್ತ್ರ ಪೂರೈಕೆ ಮಾಡಿದವು. 1990ರ ವರ್ಷಗಳಲ್ಲಿ ಅವು ಪಾಶ್ಚಾತ್ಯ ದೇಶಗಳಿಗೇ ಶಸ್ತ್ರಾಸ್ತ್ರ ಪೂರೈಕೆಯನ್ನು ಆರಂಭಿಸಿದವು.

ಇಸ್ರೇಲಿನತ್ತ ಪಲ್ಲಟ; ಹಣ ಮತ್ತು ಶಸ್ತ್ರಾಸ್ತ್ರ

ಭಾರತವು 1992ರಲ್ಲಿ ಟೆಲ್‌ಅವೀವ್‌ನಲ್ಲಿ ದೂತಾವಾಸ ಆರಂಭಿಸುವ ತನಕ ಇಸ್ರೇಲ್ ದೇಶವನ್ನು ಅಧಿಕೃತವಾಗಿ ಮಾನ್ಯ ಮಾಡಿರಲಿಲ್ಲ. ಭಾರತವು ಅಧಿಕೃತವಾಗಿ ಪ್ಯಾಲೆಸ್ತೀನಿ ಜನರ ಪರವಾಗಿ ಇರುವಾಗಲೇ ಇಸ್ರೇಲಿನಿಂದ ಶಸ್ತ್ರಾಸ್ತ್ರ ಆಮದು ಆರಂಭಿಸಿತ್ತು. ಅವು ಕಾರ್ಗಿಲ್ ಯುದ್ಧದಲ್ಲಿ ಮುಖ್ಯವಾಗಿದ್ದವು. ಅಂದಿನಿಂದ ಭಾರತವು ಇಸ್ರೇಲಿ ಕಂಪೆನಿಗಳಿಂದ ಶಸ್ತ್ರಾಸ್ತ್ರ, ಕಣ್ಗಾವಲು ಮತ್ತು ಇತರ ಮಿಲಿಟರಿ ಸಾಧನಗಳನ್ನು ಖರೀದಿಸಲು ಆರಂಭಿಸಿತು. ಮಿಲಿಟರಿ ಸಾಧನಗಳ ಆಮದಿನಲ್ಲಿ ಭಾರತವೇ ಇಸ್ರೇಲಿನ ದೊಡ್ಡ ಗಿರಾಕಿ ಮತ್ತು ರಶ್ಯಾ ಬಿಟ್ಟರೆ ಇಸ್ರೇಲ್ ಭಾರತದ ಅತ್ಯಂತ ದೊಡ್ಡ ಪೂರೈಕೆದಾರ.

ಇದೇ ಹೊತ್ತಿಗೆ ಇಸ್ರೇಲ್-ಪ್ಯಾಲೆಸ್ತೀನ್ ಪರಿಸ್ಥಿತಿಯ ಬಗ್ಗೆ ಭಾರತದ ನಿಲುವು ಪಲ್ಲಟವಾಯಿತು. ಇದಕ್ಕೆ ಭಾರತೀಯ ರಾಜಕೀಯ ಚಿತ್ರಣದಲ್ಲಿ ಆದ ಹಲವಾರು ಬದಲಾವಣೆಗಳು ಉತ್ತೇಜನ ನೀಡಿದವು. ಮುಸ್ಲಿಮರ ವಿರುದ್ಧ ಹೆಚ್ಚುತ್ತಿರುವ ದ್ವೇಷಭಾವನೆ, ಭಯೋತ್ಪಾದನೆಯ ವಿರುದ್ಧ ಹೆಚ್ಚು ಕಠಿಣವಾದ ನಿಲುವು, ಪ್ಯಾಲೆಸ್ತೀನಿನಲ್ಲಿ ಹಮಾಸ್‌ನ ಪ್ರಾಬಲ್ಯದ ಹೆಚ್ಚಳ, ಮಿಲಿಟರಿ ಮತ್ತು ಕೈಗಾರಿಕೆ ಪಾಲುದಾರಿಕೆಯ ವಿಜೃಂಭಣೆ ಇವೆಲ್ಲವೂ ಭಾರತದ ನಿಲುವಿನ ಪಲ್ಲಟದಲ್ಲಿ ಪ್ರಮುಖ ಪಾತ್ರ ವಹಿಸಿದವು. ಈ ಹೊತ್ತಿನಲ್ಲಿ ಅಂತಾರಾಷ್ಟ್ರೀಯ ವಿವಾದಗಳ ವಿಷಯದಲ್ಲಿ ತಟಸ್ಥವಾಗಿ ಉಳಿಯುವುದೇ ಭಾರತದ ವಿದೇಶಾಂಗ ನೀತಿಯಾಗಿದೆ.

ಈಗ ಪಣಕ್ಕಿರುವುದು ಏನು?

ಕಾನೂನುಪ್ರಕಾರವಾಗಿ ತಾನು ತಕ್ಷಣದಲ್ಲಿ ಮತ್ತು ನೇರವಾದ ದಾಳಿಗೆ ಒಳಗಾಗದೇ ಇದ್ದಲ್ಲಿ ಒಂದು ದೇಶವು ಯುದ್ಧವನ್ನು ಘೋಷಿಸುವಂತಿಲ್ಲ; ಇಲ್ಲಿ ಇಸ್ರೇಲ್ ಒಂದು ಸಂಘಟನೆಯ ಜೊತೆ ಯುದ್ಧವನ್ನು ಘೋಷಿಸಿರುವುದು ಮತ್ತು ನಾಗರಿಕರ ಮೇಲೆ ದಾಳಿ ಮಾಡುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಎರಡನೇ ಮಹಾಯುದ್ಧದ ನಂತರ ಇದನ್ನು ತಡೆಗಟ್ಟಲು ಜಾಗತಿಕ ಕಾನೂನಿನ ಪರಿಕಲ್ಪನೆಯನ್ನು ರೂಪಿಸಲಾಯಿತು. ತಾವು ಭಯೋತ್ಪಾದನೆಗೆ ಪ್ರತಿಕ್ರಿಯಿಸುತ್ತಿದ್ದಲ್ಲಿ ಮಾನವ ಹಕ್ಕುಗಳನ್ನು ಬದಿಗೆ ಸರಿಸಬಹುದು. ರಾಷ್ಟ್ರ-ಪ್ರಭುತ್ವಗಳು 2001ರಿಂದ ಇದನ್ನು ಹೇಳಿಕೊಳ್ಳುತ್ತಾ ಬಂದಿವೆ. ಹಲವು ದೇಶಗಳು ಭಯೋತ್ಪಾದನೆಯನ್ನು ತಡೆಯುವುದನ್ನೇ ನಿಲ್ಲಿಸಿವೆ. ಈಗ ದೇಶಗಳು ಕೇವಲ ಮಿಲಿಟರಿ ಪ್ರತಿಕ್ರಿಯೆಯನ್ನೇ ಅನುಸರಿಸುತ್ತಿವೆ.

ಇವೆಲ್ಲವೂ ನಾವು ಭಾರತೀಯರು ಯಾವುದನ್ನು ಬೆಂಬಲಿಸಬೇಕು ಎಂಬ ಪ್ರಶ್ನೆಯೊಂದಿಗೆ ತಳುಕುಹಾಕಿಕೊಂಡಿದೆ.

ಮೊದಲಿಗೆ ತಕ್ಷಣದ ಕದನ ವಿರಾಮಕ್ಕೆ ಕರೆ ನೀಡುವ ವಿಶ್ವಸಂಸ್ಥೆಯ ಗೊತ್ತುವಳಿ ಇಎಸ್ 10-21 ಒಂದು ಉತ್ತಮ ಆರಂಭವಾಗಿದೆ. ಗಾಝಾದಲ್ಲಿ ಗುಂಡಿನ ಕಾಳಗ ಮಾನವೀಯ ಬಿಕ್ಕಟ್ಟಿಗೆ ತಕ್ಷಣದ ಕಾರಣವಾಗಿದೆ. ಭಾರತವು ಮತ ಚಲಾಯಿಸುವುದರಿಂದ ದೂರ ಉಳಿದಿದ್ದರೂ, ಅದು ಇನ್ನು ಕೂಡಾ ಅಂತಾರಾಷ್ಟ್ರೀಯವಾಗಿ ಈ ಗೊತ್ತುವಳಿಯ ಅನುಷ್ಠಾನವನ್ನು ಬೆಂಬಲಿಸಬಹುದು. ಭಯೋತ್ಪಾದನೆಯ ವಿರುದ್ಧ ಕಾದಾಡುವುದಕ್ಕಾಗಿ ಸಾಮೂಹಿಕವಾಗಿ ಮಾನವ ಹಕ್ಕುಗಳನ್ನು ಉಲ್ಲಂಘಿಸುವುದು ನೈತಿಕವಾಗಿ ತಪ್ಪು; ಅಂತಾರಾಷ್ಟ್ರೀಯ ಕಾನೂನಿನ ಮಾನದಂಡಗಳ ಪ್ರಕಾರ ಕಾನೂನುಬಾಹಿರ ಮತ್ತು ಭಯೋತ್ಪಾದನೆಯನ್ನು ತಡೆಯುವುದರಲ್ಲಿ ತದ್ವಿರುದ್ಧದ ಫಲಿತಾಂಶನ್ನು ಉಂಟುಮಾಡುವಂತದ್ದು. ಇಸ್ರೇಲ್ ಪ್ರಸ್ತುತ ಪರಿಸ್ಥಿತಿಯನ್ನು ಕಾನೂನು ಸುವ್ಯವಸ್ಥೆಯ ಪರಿಸ್ಥಿತಿ ಎಂದು ಪರಿಗಣಿಸುತ್ತಲೂ ಇಲ್ಲ; ಪ್ಯಾಲೆಸ್ತೀನ್ ಒಂದು ಪ್ರತ್ಯೇಕ ರಾಷ್ಟ್ರ ಎಂದು ಮಾನ್ಯ ಮಾಡುತ್ತಲೂ ಇಲ್ಲ. ಅದು ಎರಡೂ ವಿಷಯಗಳಲ್ಲಿ ಅತ್ಯಂತ ಹಿಂಸಾತ್ಮಕವಾದ ನಿಲುವನ್ನು ತಳೆದಿದೆ.

ದೂರಗಾಮಿಯಾಗಿ ಅಂತಾರಾಷ್ಟ್ರೀಯ ಸಮುದಾಯವು ಮತ್ತು ಮುಖ್ಯವಾಗಿ ಭಾರತವು ಪ್ಯಾಸ್ತೀನಿಯರಿಗೆ ಮಾನವ ಹಕ್ಕುಗಳನ್ನು ಮರಳಿಸುವಂತಹ ಪರಿಹಾರವೊಂದನ್ನು ಬೆಂಬಲಿಸಬೇಕು; ಇದರಲ್ಲಿ ಗಾಝಾ ಮತ್ತು ಪಶ್ಚಿಮ ದಂಡೆಯ ಜನವಸತಿಗಳ ಮೇಲಿನ ಎಲ್ಲಾ ದಾಳಿಗಳನ್ನು ನಿಲ್ಲಿಸುವುದು ಮತ್ತು ಈ ಪ್ರದೇಶಗಳಲ್ಲಿ ಅಂತಾರಾಷ್ಟ್ರೀಯ ಸಮುದಾಯದ ಕಣ್ಗಾವಲಿನಲ್ಲಿ ಚುನಾವಣೆಗಳು ಮತ್ತೆ ನಡೆಯುವಂತೆ ಖಾತರಿಪಡಿಸುವುದು ಸೇರಿವೆ. ದ್ವಿರಾಷ್ಟ್ರ (Binational) ಪ್ರಭುತ್ವ, ಎರಡು ಪ್ರತ್ಯೇಕ ಪ್ರಭುತ್ವಗಳ ಪರಿಹಾರ ಸೇರಿದಂತೆ ಹಲವಾರು ಪ್ರಸ್ತಾಪಗಳು ಇವೆ. ಆದರೆ ಇವುಗಳು ಪ್ಯಾಲೆಸ್ತೀನಿಯರ ಹಕ್ಕುಗಳನ್ನು ಎತ್ತಿ ಹಿಡಿಯುವುದನ್ನು ಖಾತರಿಪಡಿಸಬೇಕು. ಅವರಿಗೆ ತಮ್ಮ ಸ್ವದೇಶಕ್ಕೆ ಮರಳುವುದಕ್ಕಾಗಿ, ತ್ಸಹಾಲ್ ಪಡೆಗಳ ಆಡಳಿತದಿಂದ ಸ್ವಾತಂತ್ರ್ಯ ಮತ್ತು ತಮ್ಮ ಭವಿಷ್ಯಕ್ಕೆ ಸಂಬಂಧಿಸಿದಂತೆ ಹಿಂಸಾಚಾರ ಇಲ್ಲದೆ ಅಭಿವ್ಯಕ್ತಿಸುವ ಅವಕಾಶವಿರಬೇಕು.

ಇನ್ನೂ ಉನ್ನತಮಟ್ಟದಲ್ಲಿ ಈ ಸಂಘರ್ಷವು ಯುದ್ಧ ಮತ್ತು ಮಿಲಿಟರಿಯನ್ನು ನಿಯಂತ್ರಿಸುವುದಕ್ಕೆ ಸಂಬಂಧಿಸಿ ಅಂತಾರಾಷ್ಟ್ರೀಯ ಸಮುದಾಯದಲ್ಲಿ ಹೆಚ್ಚುತ್ತಿರುವ ಸಮಸ್ಯೆಯ ಮೇಲೆ ಬೆಳಕು ಚೆಲ್ಲುತ್ತದೆ. ಎರಡನೇ ಮಹಾಯುದ್ಧಕ್ಕೆ ಕಾರಣವಾದಂತಹ ಭಯಾನಕ ಕತೆಗಳನ್ನು ತಡೆಯಲೆಂದೇ ವಿಶ್ವಸಂಸ್ಥೆಯನ್ನು ಸ್ಥಾಪಿಸಲಾಯಿತು. ಭಯೋತ್ಪಾದನೆಯ ವಿರುದ್ಧ ಯುದ್ಧ ಎಂಬುದು ರಾಷ್ಟ್ರ-ಪ್ರಭುತ್ವಗಳಿಗೆ ಕಾದಾಟದ ಎಲ್ಲಾ ನಿಯಮಗಳನ್ನು ಉಲ್ಲಂಘಿಸಲು ಮತ್ತು ನಿಶ್ಯಸ್ತ್ರ ನಾಗರಿಕರಿಗೆ ನೀಡಲಾಗಿರುವ ಎಲ್ಲಾ ರಕ್ಷಣೆಯನ್ನು ಕಡೆಗಣಿಸಲು ಸ್ವಾತಂತ್ರ್ಯ ನೀಡಿದೆ. ಜನಾಂಗೀಯ ನಿರ್ಮೂಲನೆ ಮತ್ತು ವರ್ಣಭೇದ ನೀತಿಯ ಭಯವನ್ನು ಮರಳಿ ತರುತ್ತಿರುವುದರಿಂದ ಇಸ್ರೇಲ್ ವಿಶೇಷವಾಗಿ ತಳಮಳ ಹುಟ್ಟಿಸುತ್ತಿದೆ. ಇವೆಲ್ಲವೂ ಸ್ವತಃ ಇಸ್ರೇಲಿನ ಹುಟ್ಟಿಗೆ ಕಾರಣವಾದಂತಹ ದುಷ್ಟತೆಗಳು ಮತ್ತು ಮಾನವೀಯತೆಯ ವಿರುದ್ಧದ ಅಪರಾಧ ಕೃತ್ಯಗಳು. ಯಾವುದೇ ಅಡೆತಡೆಯಿಲ್ಲದೆ ಆ ದುಷ್ಟತೆಗಳು ಇನ್ನೊಂದು ಹೊಸ ಪ್ರದೇಶಕ್ಕೆ ದಾಟಿ ಬಂದಿದೆ.

ಮಹಾಯುದ್ಧೋತ್ತರದ ಸಹಮತಕ್ಕೆ ಇನ್ನೀಗ ಯಾವುದೇ ಅರ್ಥ ಉಳಿದಿರುವಂತೆ ಕಾಣುವುದಿಲ್ಲ. ಇಡೀ ಜಗತ್ತಿಗೆ ಒಂದು ಹೊಸ ಯುದ್ಧ ವಿರೋಧಿ ಚಳವಳಿಯ ಅಗತ್ಯವಿದೆ. ಹೊಸ ಯುಗದಲ್ಲಿ ಅದು ಬೆಳೆಯುತ್ತಿರುವ ಖಾಸಗಿ ರಕ್ಷಣಾ ಕ್ಷೇತ್ರವನ್ನು ಮತ್ತು ದೇಶಗಳು ಭಯೋತ್ಪಾದನೆಗೆ ಹೇಗೆ ಪ್ರತಿಕ್ರಿಯಿಸಬೇಕು ಎಂಬುದಕ್ಕೆ ಸಂಬಂಧಿಸಿದ ಕಾನೂನನ್ನು ಎದುರುಗೊಳ್ಳಬೇಕು; ಜಗತ್ತಿನಲ್ಲಿ ಹಲವಾರು ಶೀತಲ ಸಮರಗಳು ನಡೆಯುತ್ತಿವೆ. ಗಾಝಾದಲ್ಲಿನ ಪ್ರಸಕ್ತ ದಾಳಿಯಿಂದ ಈ ಶೀತಲ ಸಮರಗಳಲ್ಲಿ ಕೆಲವು ಬಿಸಿಯೇರಿವೆ.

ಸಿರಿಯಾ, ಲಿಬಿಯಾ, ಉಕ್ರೇನ್, ಡೆಮಾಕ್ರಾಟಿಕ್ ರಿಪಬ್ಲಿಕ್ ಆಫ್ ಕಾಂಗೋ, ಸುಡಾನ್, ಇಥಿಯೋಪಿಯ ನಂತರ ಇನ್ನಾವುದೇ ಸಶಸ್ತ್ರ ಸಂಘರ್ಷಗಳು ಪ್ರತಿದಿನ ಎಂಬಂತೆ ಸ್ಫೋಟಿಸುತ್ತಿರುವಾಗ ನಾವು ನಮ್ಮನ್ನೇ ಕೇಳಿಕೊಳ್ಳಬೇಕು: ಮಾನವ ಇತಿಹಾಸದಲ್ಲೇ ಅತ್ಯಂತ ಆಧುನಿಕವಾದ ಮತ್ತು ಶಿಕ್ಷಿತವಾದ ಕಾಲಘಟ್ಟದಲ್ಲಿ ನಾವು ಶಾಂತಿಯನ್ನು ಹೇಗೆ ಸಾಧಿಸಬಹುದು?

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಕಿಶೋರ್ ಗೋವಿಂದ

ಕಿಶೋರ್ ಗೋವಿಂದ
ಬೆಂಗಳೂರಿನಲ್ಲಿ ನೆಲೆಸಿರುವ ಕಿಶೋರ್ ಅವರು ಗಣಿತಶಾಸ್ತ್ರಜ್ಞರು. ಜಾಗತಿಕ ರಾಜಕೀಯ ಆಗುಹೋಗುಗಳನ್ನು ನಿಕಟವಾಗಿ ಗಮನಿಸುವ ಅವರು ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ವಿಜಯಪುರ: ಗೋ ಸಾಗಾಟಗಾರನ ಮೇಲೆ ಬಜರಂಗದಳದಿಂದ ಥಳಿತ

0
ರಾಜ್ಯದಲ್ಲಿ ಮತ್ತೆ ಗೂಂಡಾಗಿರಿ ವರದಿಯಾಗಿದ್ದು, ದನ-ಕರುಗಳನ್ನು ಸಾಗಾಟ ಮಾಡುವಾಗ ವಾಹನ ತಡೆದು ಯುವಕನಿಗೆ ಬಜರಂಗದಳ ಕಾರ್ಯಕರ್ತರು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ವಿಜಯಪುರ ಜಿಲ್ಲೆ ಬಬಲೇಶ್ವರ ತಾಲ್ಲೂಕಿನ ಸಾರವಾಡ ಬ್ರಿಡ್ಜ್ ಬಳಿ ನಡೆದಿದೆ. ಬಂದೇನವಾಝ್‌...