Homeಮುಖಪುಟಜೀವನ ಕೊನೆಗೊಳಿಸಲು ಅನುಮತಿ ನೀಡಿ; ಲೈಂಗಿಕ ಕಿರುಕುಳದಿಂದ ನೊಂದು ಸಿಜೆಐಗೆ ಪತ್ರ ಬರೆದ ನ್ಯಾಯಾಧೀಶೆ!

ಜೀವನ ಕೊನೆಗೊಳಿಸಲು ಅನುಮತಿ ನೀಡಿ; ಲೈಂಗಿಕ ಕಿರುಕುಳದಿಂದ ನೊಂದು ಸಿಜೆಐಗೆ ಪತ್ರ ಬರೆದ ನ್ಯಾಯಾಧೀಶೆ!

- Advertisement -
- Advertisement -

‘ಹಿರಿಯ ನ್ಯಾಯಾಧೀಶರು ನನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ’ ಎಂದು ಉತ್ತರ ಪ್ರದೇಶದ ಯುವ ನ್ಯಾಯಾಧೀಶೆಯೊಬ್ಬರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಬಹಿರಂಗ ಪತ್ರ ಬರೆದಿದ್ದು, ‘ಜೀವನವನ್ನು ಕೊನೆಗೊಳಿಸಲು ಬಯಸುತ್ತೇನೆ’ ಎಂದು ಹೇಳಿದ್ದಾರೆ. ಈ ಕುರಿತು ವರದಿ ನೀಡುವಂತೆ ಅಲಹಾಬಾದ್ ಹೈಕೋರ್ಟಿಗೆ ಸುಪ್ರೀಂ ಸೂಚನೆ ನೀಡಿದೆ.

ಆರು ತಿಂಗಳ ಹಿಂದೆ ತಾನಿದ್ದ ಹುದ್ದೆಯಲ್ಲಿ, ಹಿರಿಯ ನ್ಯಾಯಾಧೀಶರಿಂದ ಲೈಂಗಿಕ ಕಿರುಕುಳ ಅನುಭವಿಸಿದ್ದೇನೆ ಎಂದು ಆರೋಪಿಸಿದ್ದಾರೆ. ‘ನ್ಯಾಯ ಸಿಗುವುದು ಬಿಡಿ; ನ್ಯಾಯಯುತ ತನಿಖೆ ನಡೆಯುವ ಭರವಸೆ ಇಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿರುವ ಅವರು, ನನ್ನ ಜೀವನವನ್ನು ಕೊನೆಗೊಳಿಸಲು ಅನುಮತಿ ನೀಡುವಂತೆ ಕೋರಿ ಬಹಿರಂಗ ಪತ್ರ ಬರೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಎರಡು ಪುಟಗಳ ಪತ್ರ ಬರೆದಿರುವ ಅವರು, ‘ಜನ ಸಾಮಾನ್ಯರಿಗೆ ನ್ಯಾಯ ಒದಗಿಸುವ ಉದ್ದೇಶದಿಂದ ಬಹಳ ಉತ್ಸಾಹದಿಂದ ಮತ್ತು ನಂಬಿಕೆಯಿಂದ ನ್ಯಾಯಾಂಗ ಸೇವೆಗೆ ಸೇರಿಕೊಂಡೆ. ನಾನೀಗ ನ್ಯಾಯಕ್ಕಾಗಿ ಎಡತಾಕುವ ಪ್ರತಿಯೊಂದು ಬಾಗಿಲಿನಲ್ಲೂ ಶೀಘ್ರದಲ್ಲೇ ಭಿಕ್ಷುಕಳಾಗುತ್ತೇನೆ ಎಂಬುದು ನನಗೆ ಗೊತ್ತು. ನನ್ನ ಅಲ್ಪಾವಧಿ ಸೇವಾವಧಿಯಲ್ಲಿ, ತೆರೆದ ನ್ಯಾಯಾಲಯದ ವೇದಿಕೆಯ ಮೇಲೆ ನಿಂದನೆಗೆ ಒಳಗಾದ ಅಪರೂಪದ ಗೌರವ ನನಗೆ ಸಿಕ್ಕಿದೆ. ನನ್ನನ್ನು ಸಂಪೂರ್ಣ ಕಸದಂತೆ ನಡೆಸಿಕೊಳ್ಳಲಾಗಿದೆ. ಜನರಿಗೆ ನ್ಯಾಯ ಒದಗಿಸಲು ಬಯಸುವ ನನಗೆ  ನಾನೊಂದು ಅನಾವಶ್ಯಕ ಕೀಟದಂತೆ ಭಾಸವಾಗುತ್ತಿದೆ’ ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.

‘ನನ್ನ ದೂರು ಮತ್ತು ಹೇಳಿಕೆಗಳನ್ನು ‘ಕಾರ್ಡಿನಲ್ ಸತ್ಯ’ವನ್ನಾಗಿ ಪರಿಗಣಿಸುತ್ತಾರೆ ಎಂಬುದನ್ನು ನಾನು ನಿರೀಕ್ಷಿಸಿರಲಿಲ್ಲ. ನ್ಯಾಯಯುತ ವಿಚಾರಣೆ ಮಾತ್ರ ನಾನು ಬಯಸಿದ್ದು. ರಾತ್ರಿ ಹೊತ್ತು ಹಿರಿಯ ನ್ಯಾಯಾಧೀಶರನ್ನು ಭೇಟಿಯಾಗುವಂತೆ ಹೇಳಲಾಗಿತ್ತು. ಇದರಿಂದ ನೊಂದು ನಾನು ಆತ್ಮಹತ್ಯೆಗೆ ಪ್ರಯತ್ನಿಸಿದ್ದೆ. ಆದರೆ, ನನ್ನ ಪ್ರಯತ್ನ ಯಶಸ್ವಿಯಾಗಲಿಲ್ಲ’ ಎಂದು ಹೇಳಿದ್ದಾರೆ.

ಯುವ ನ್ಯಾಯಾಧೀಶೆ ಬರೆದಿರುವ ಬಹಿರಂಗ ಪತ್ರ

‘ನನಗಿನ್ನು ಬದುಕುವ ಇಚ್ಛೆ ಇಲ್ಲ. ಕಳೆದ ಒಂದೂವರೆ ವರ್ಷದಲ್ಲಿ ನನ್ನನ್ನು ನಡೆದಾಡುವ ಶವದಂತೆ ಮಾಡಲಾಗಿದೆ. ಈ ಆತ್ಮವಿಲ್ಲದ ಮತ್ತು ನಿರ್ಜೀವ ದೇಹವನ್ನು ಮುಂದೆ ಸಾಗಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಬದುಕಲು ನನ್ನ ಜೀವನದಲ್ಲಿ ಯಾವುದೇ ಉದ್ದೇಶಗಳು ಉಳಿದಿಲ್ಲ. ನನ್ನ ಜೀವನವನ್ನು ಗೌರವಯುತವಾಗಿ ಕೊನೆಗೊಳಿಸಲು ದಯವಿಟ್ಟು ನನಗೆ ಅನುಮತಿ ನೀಡಿ’ ಎಂದು ಅವರು ಸಿಜೆಐಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.

‘ಭಾರತದಲ್ಲಿ ಕೆಲಸ ಮಾಡುವ ಮಹಿಳೆಯರು ವ್ಯವಸ್ಥೆ ವಿರುದ್ಧ ಹೋರಾಡುವ ಪ್ರಯತ್ನಗಳನ್ನು ಮಾಡಬೇಡಿ. ವ್ಯವಸ್ಥೆಯ ವಿರುದ್ಧ ಹೋರಾಡುತ್ತಿರುವ ಮಹಿಳೆಯರಿಗೆ ನಾನು ಕಿವಿಮಾತು ಹೇಳುತ್ತೇನೆ, ನಾನು ನ್ಯಾಯಾಧೀಶೆಯಾಗಿ ನನ್ನಿಂದಲೇ ಸಾಧ್ಯವಾಗಲಿಲ್ಲ. ನ್ಯಾಯಯುತವಾದ ವಿಚಾರಣೆಯನ್ನೂ ಮಾಡಿಕೊಳ್ಳಲಾಗಲಿಲ್ಲ. ನ್ಯಾಯವನ್ನು ಬಿಡಿ; ಆಟಿಕೆ ಅಥವಾ ನಿರ್ಜೀವ ವಸ್ತುವಾಗಿರುವುದನ್ನು ಕಲಿಯಲು ನಾನು ಎಲ್ಲ ಮಹಿಳೆಯರಿಗೆ ಸಲಹೆ ನೀಡುತ್ತೇನೆ’ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರ ಸೂಚನೆಯ ಮೇರೆಗೆ ಅಲಹಾಬಾದ್ ಹೈಕೋರ್ಟಿನಿಂದ ಮಹಿಳಾ ನ್ಯಾಯಾಂಗ ಅಧಿಕಾರಿ ಸಲ್ಲಿಸಿದ ದೂರಿನ ಕುರಿತು ರಿಜಿಸ್ಟ್ರಾರ್ ವರದಿ ಕೇಳಿದ್ದಾರೆ. ಗುರುವಾರ ಸಂಜೆ ವಿವರ ಕೇಳಿ ಪತ್ರ ಬರೆಯಲಾಗಿದ್ದು, ಶುಕ್ರವಾರದ ವೇಳೆಗೆ ವರದಿಯನ್ನು ನಿರೀಕ್ಷಿಸುತ್ತಿದೆ ತಿಳಿದುಬಂದಿದೆ.

ಅಲಹಾಬಾದ್ ಹೈಕೋರ್ಟಿನ ಆಂತರಿಕ ದೂರುಗಳ ಸಮಿತಿಯು ಈಗಾಗಲೇ ವಿಷಯದ ಕುರಿತು ವಿಚಾರಣೆ ನಡೆಸಿದೆ. ಸಿವಿಲ್ ನ್ಯಾಯಾಧೀಶರಾಗಿರುವ ದೂರುದಾರರು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯ ಅನುಮೋದನೆಗೆ ನಿರ್ಣಯ ಅಂಗೀಕರಿಸಿದ್ದಾರೆ ಎಂಬುದನ್ನು ಗಮನಿಸಿದ ಸುಪ್ರೀಂ ಕೋರ್ಟ್, ಡಿಸೆಂಬರ್ 13 ರಂದು ಮಹಿಳಾ ನ್ಯಾಯಾಧೀಶರ ಮನವಿಯನ್ನು ತಿರಸ್ಕರಿಸಿತು. ಆ ನಂತರ ಬಂದಾ ಜಿಲ್ಲೆಯ ನ್ಯಾಯಾಧೀಶರು ತಮ್ಮ ಜೀವನವನ್ನು ಅಂತ್ಯಗೊಳಿಸಲು ಅನುಮತಿ ಕೋರಿ ಸಿಜೆಐಗೆ ಬಹಿರಂಗ ಪತ್ರ ಬರೆದಿದ್ದಾರೆ.

ಇದನ್ನೂ ಓದಿ; ಸಂಸತ್ ಸದಸ್ಯತ್ವದಿಂದ ಉಚ್ಛಾಟನೆ: ಇಂದು ಸುಪ್ರೀಂನಲ್ಲಿ ಮಹುವಾ ಅರ್ಜಿ ವಿಚಾರಣೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...