Homeಮುಖಪುಟಹಿಂದಿ ಹೇರಿಕೆ ವಿರುದ್ಧದ ಹೋರಾಟಕ್ಕೆ ಜಯ: ಮೊಸರಿಗೆ ದಹಿ ಪದ ಬಳಸಬೇಕೆಂಬ ಆದೇಶ ವಾಪಸ್

ಹಿಂದಿ ಹೇರಿಕೆ ವಿರುದ್ಧದ ಹೋರಾಟಕ್ಕೆ ಜಯ: ಮೊಸರಿಗೆ ದಹಿ ಪದ ಬಳಸಬೇಕೆಂಬ ಆದೇಶ ವಾಪಸ್

- Advertisement -
- Advertisement -

ಮೊಸರು ಬದಲಿಗೆ ಹಿಂದಿ ಪದ ದಹಿ ಎಂದು ಬಳಸಬೇಕೆಂದು ಕರ್ನಾಟಕ ಮತ್ತು ತಮಿಳುನಾಡು ಹಾಲು ಒಕ್ಕೂಟಗಳಿಗೆ ನೀಡಿದ್ದ ನಿರ್ದೇಶನವನ್ನು ಕೇಂದ್ರ ಸರ್ಕಾರದ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಇಂದು ವಾಪಸ್ ಪಡೆದಿದೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಪ್ರಾಧಿಕಾರ, “Curd ಪದ ಬದಲಿಗೆ ಮೊಸರು, ಥಾಯಿರ್, ಪೆರುಗು ಇತ್ಯಾದಿ ಪ್ರಾದೇಶಿಕ ಪದಗಳನ್ನು ಬಳಸಬಹುದೆಂದು” ತಿಳಿಸಿದೆ.

ಜಯವಾಗಿದೆ.. ಜೈ ಕನ್ನಡಿಗ ದಹಿ ಹಿಂದಿ ಪದ ಬಳಕೆ ಕಡ್ಡಾಯ ಆದೇಶ ವಾಪಸ್ ಪಡೆದ fssai. ನಾವು ಸುಮ್ಮನಿರದೆ ಧ್ವನಿ ಎತ್ತಿದರೆ ಎಲ್ಲವೂ ಸಾಧ್ಯ.. ಹಿಂದಿಹೇರಿಕೆ ನಿಲ್ಲಲಿ.. ಇದಕ್ಕೆ ಧ್ವನಿಯಾದ ಎಲ್ಲ ಕನ್ನಡಿಗರಿಗೂ ಧನ್ಯವಾದಗಳು… ನಮ್ಮ ನಂದಿನಿ ನಮ್ಮ ಹೆಮ್ಮೆ ಎಂದು ಕನ್ನಡ ಹೋರಾಟಗಾರ ರೂಪೇಶ್ ರಾಜಣ್ಣ ಟ್ವೀಟ್ ಮಾಡಿದ್ದಾರೆ.

ಈ ಮೊದಲು ಫುಡ್‌ ಸೇಫ್ಟಿ ಅಂಡ್ ಸ್ಟ್ಯಾಂಡರ್ಡ್ ಅಥಾರಿಟಿ ಆಫ್ ಇಂಡಿಯಾ ವಿರುದ್ಧ ತಮಿಳು ನಾಡು ಸಿಎಂ ಎಂ.ಕೆ ಸ್ಟಾಲಿನ್, ಕರ್ನಾಟಕ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಕಿಡಿಕಾರಿದ್ದರು.

ಹಿಂದಿ ಹೇರಿಕೆಗೆ ಕನ್ನಡಿಗರ ವಿರೋಧವಿದೆ ಎಂದು ಗೊತ್ತಿದ್ದರೂ ನಂದಿನಿ ಪ್ರೋ ಬಯೊಟಿಕ್ ಮೊಸರು ಪಾಕೆಟ್ ಮೇಲೆ ಹಿಂದಿಯ ‘ದಹಿ’ ಎಂದು ಮುದ್ರಿಸಿರುವುದು,ಅದನ್ನು ಕಡ್ಡಾಯವಾಗಿ ಮುದ್ರಿಸುವಂತೆ ಭಾರತೀಯ ಆಹಾರ ಸುರಕ್ಷತೆ, ಗುಣಮಟ್ಟ ಪ್ರಾಧಿಕಾರವು ಕೆಎಂಎಫ್ ಗೆ ಆದೇಶ ನೀಡಿರುವುದು ತಪ್ಪು. ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

ನಂದಿನಿ ಕನ್ನಡಿಗರ ಆಸ್ತಿ, ಕನ್ನಡಿಗರ ಅಸ್ಮಿತೆ ಹಾಗೂ ಕನ್ನಡಿಗರ ಜೀವನಾಡಿ. ಇದು ಗೊತ್ತಿದ್ದರೂ ಹಿಂದಿ ಹೇರಿಕೆಯ ಅಹಂ ತೋರಲಾಗಿದೆ. ಈ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್‌ ಶಾರವರು ಮಂಡ್ಯದ ಸಭೆಯೊಂದರಲ್ಲಿ, ಗುಜರಾತಿನ ಅಮುಲ್ ಜತೆ ನಂದಿನಿಯನ್ನು ವಿಲೀನ ಮಾಡುವುದಾಗಿ ಹೇಳಿದ್ದರು. ಹಿಂದಿ ಪದ ಮುದ್ರಣ ನಂದಿನಿ ಹೈಜಾಕಿನ ಅರಂಭವಾ? ಕನ್ನಡಕ್ಕೆ ಕೊಕ್ಕೆ ಹಾಕಿ ಹಿಂದಿಯನ್ನು ಮೆಲ್ಲಗೆ ಹೇರಿ ಇಡೀ ನಂದಿನಿ ಪದಾರ್ಥಗಳನ್ನು ಹಳ್ಳ ಹಿಡಿಸುವುದು ಇದರ ಹಿಂದಿರುವ ಘೋರ ಷಡ್ಯಂತ್ರ. ಆಮೇಲೆ, ನಂದಿನಿ ಉತ್ಪನ್ನಗಳು ಮಾರಾಟವಾಗುತ್ತಿಲ್ಲ ಎಂದು ಕಥೆ ಕಟ್ಟಿ, ಅದನ್ನು ಉಳಿಸುವ ನಾಟಕವಾಡಿ ನಂದಿನಿಯನ್ನು ಸಲೀಸಾಗಿ ಅಮುಲ್ ಜತೆಗೆ ವಿಲೀನ ಮಾಡುವ ಹುನ್ನಾರವಷ್ಟೇ ಇದು ಎಂದು ಕಿಡಿಕಾರಿದ್ದಾರೆ.

ಇಲ್ಲಿ ಹಿಂಬಾಗಿಲಿನಿಂದ ಅಲ್ಲ, ನೇರವಾಗಿಯೇ ಹಿಂದಿ ಹೇರಿಕೆ ಆಗಿದೆ. ಅದನ್ನು ಡಬಲ್ ಎಂಜಿನ್ ಬಿಜೆಪಿ ಸರಕಾರ ಹಾಗೂ ಅದರ ಕೀಲುಗೊಂಬೆ ಕೆಎಂಎಫ್ ಸದ್ದಿಲ್ಲದೆ ಒಪ್ಪಿಕೊಂಡಿವೆ. ಇದು ಕನ್ನಡ ವಿರೋಧಿ ಕೆಲಸ. ತಕ್ಷಣವೇ ದಹಿ ಪದ ಮುದ್ರಿಸುವುದನ್ನು ನಿಲ್ಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಕರ್ನಾಟಕದಲ್ಲಿ ಮಾರಾಟವಾಗುವ ನಂದಿನಿ ಮೊಸರಿಗೆ ಹಿಂದಿಯಲ್ಲಿ ಕಡ್ಡಾಯವಾಗಿ ‘ದಹಿ’ ಎಂದು ಹಾಕಬೇಕೆಂಬ ಕೇಂದ್ರ ಸರ್ಕಾರದ ಆದೇಶ ಮೂರ್ಖತನದ ಪರಮಾವಧಿ. ನಿಧಾನವಾಗಿ ನಂದಿನಿಯನ್ನು ಅಮುಲ್ ಜೊತೆ ವಿಲೀನಗೊಳಿಸುವ ಹುನ್ನಾರ. ಈ ರೀತಿಯ ಹಿಂದಿ ಹೇರಿಕೆ ಸಲ್ಲ. ಇದನ್ನು ನಾವು ವಿರೋಧಿಸುತ್ತೇವೆ. ಈ ಆದೇಶವನ್ನು ಕೇಂದ್ರ ಸರ್ಕಾರ ಈ ಕೂಡಲೇ ಹಿಂಪಡೆಯಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.

ಇನ್ನೊಂದೆಡೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಸಹ ಹಿಂದಿ ಹೇರಿಕೆಯನ್ನು ವಿರೋಧಿಸಿದ್ದಾರೆ. “ನಮ್ಮದೇ ರಾಜ್ಯಗಳಲ್ಲಿ ತಮಿಳು ಮತ್ತು ಕನ್ನಡವನ್ನು ಹಿಮ್ಮೆಟ್ಟಿಸುವ, ಮೊಸರು ಪೊಟ್ಟಣಕ್ಕೂ ಹಿಂದಿಯಲ್ಲಿ ಬರೆಯುವಂತೆ ನಿರ್ದೇಶಿಸುವ ಮಟ್ಟಕ್ಕೆ ನಾಚಿಕೆಯಿಲ್ಲದೆ ಹಿಂದಿ ಹೇರಿಕೆ ಬಂದು ನಿಂತಿದೆ. ನಮ್ಮ ಮಾತೃಭಾಷೆಯನ್ನು ನಿರ್ಲಕ್ಷಿಸುವ ಇಂತಹ ನಿರ್ಲಜ್ಜ ಹೊಣೆಗಾರರನ್ನು ದಕ್ಷಿಣದಿಂದ ಶಾಶ್ವತವಾಗಿ ಬಹಿಷ್ಕರಿಸುವುದನ್ನು ಈ ಆದೇಶ ಖಚಿತಪಡಿಸುತ್ತದೆ” ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಗೌರಿಶಂಕರ್‌ ಆಯ್ಕೆ ಅಸಿಂಧು ಆದೇಶವನ್ನ ಒಂದು ತಿಂಗಳು ಅಮಾನತಿನಲ್ಲಿರಿಸಿದ ಹೈಕೋರ್ಟ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರೋಹಿತ್ ವೇಮುಲಾ ಪ್ರಕರಣ: ಪೊಲೀಸರ ವರದಿ ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿದೆ; ಪ್ರತಿಕ್ರಿಯಿಸಿದ ಕುಟುಂಬ

0
ಹೈದರಾಬಾದ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ರೋಹಿತ್ ವೇಮುಲಾ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತೆಲಂಗಾಣ ಪೊಲೀಸರು ಮುಕ್ತಾಯದ ವರದಿಯನ್ನು ಸಲ್ಲಿಸಿದ್ದಾರೆ. ಇದಲ್ಲದೆ ವರದಿಯಲ್ಲಿ ರೋಹಿತ್‌ ವೇಮುಲಾ 'ದಲಿತ ಅಲ್ಲ', ತನ್ನ “ನಿಜವಾದ ಜಾತಿಯ ಗುರುತು”...