Homeಕರ್ನಾಟಕಕರ್ನಾಟಕದ ವಿಪರ್ಯಾಸ ರಾಜಕಾರಣ-2023

ಕರ್ನಾಟಕದ ವಿಪರ್ಯಾಸ ರಾಜಕಾರಣ-2023

- Advertisement -
- Advertisement -

ಕರ್ನಾಟಕ 2023ರಲ್ಲಿ ಕಂಡ ಅತ್ಯಂತ ಪ್ರಮುಖ ಬೆಳವಣಿಗೆ ಎಂದರೆ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋತು ಕಾಂಗ್ರೆಸ್ ಅಧಿಕಾರ ಹಿಡಿದದ್ದು. 2019ರಿಂದ 2023ರವರೆಗಿನ ಬಿಜೆಪಿ ಸರಕಾರ ಕರ್ನಾಟಕ ಕಂಡ ಅತ್ಯಂತ ಕೆಟ್ಟ ಸರಕಾರಗಳ ಪೈಕಿ ಒಂದು ಎಂದು ತಿಳಿದಿದ್ದರೂ, ಕರ್ನಾಟಕದ ಜನ ಇದಕ್ಕಿಂತ ಎಷ್ಟೋ ಪಾಲು ಉತ್ತಮ ಎಂದು ಪರಿಗಣಿಸಲಾದ ಸರಕಾರಗಳಿಗೆ ಕೂಡ ಸತತ ಎರಡನೇ ಅವಕಾಶ ನೀಡಿಲ್ಲ ಎಂದು ತಿಳಿದಿದ್ದರೂ, ಬಿಜೆಪಿ ಏನೋ ಮೋಡಿ ಮಾಡಿ ಗೆದ್ದುಬಿಡಬಹುದು ಎನ್ನುವ ನಿರೀಕ್ಷೆಯೊಂದು ಬಹುತೇಕ ಜನರಿಗೆ ಇತ್ತು. ಬಿಜೆಪಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯ ವರ್ಚಸ್ಸಿತ್ತು, ಮನಸೋ ಇಚ್ಛೆ ಚೆಲ್ಲಬಹುದಾದಷ್ಟು ಹಣವಿತ್ತು, ಇಪ್ಪತ್ತನಾಲ್ಕು ಗಂಟೆಯೂ ಸಕ್ರಿಯವಾಗಿರುವ ತಳಮಟ್ಟದ ಕಾರ್ಯಕರ್ತರ ಪಡೆ, ಡಿಜಿಟಲ್ ಮಟ್ಟದ ಕೀಲಾಲು (ಟ್ರೋಲ್) ಪಡೆ ಇತ್ತು. ಹಾಗಾಗಿ ಮೇಲಿನ ಮೂರೂ ರೀತಿಯ ಅನುಕೂಲಗಳೇನೂ ಇಲ್ಲದ, ಇದ್ದರೂ ಬಿಜೆಪಿಗಿದ್ದಷ್ಟು ಇಲ್ಲದ ಕಾಂಗ್ರೆಸ್ ಬಿಜೆಪಿಯ ದೈತ್ಯ ಶಕ್ತಿಯೆದುರು ಗೆಲ್ಲುವ ಬಗ್ಗೆ, ಗೆದ್ದರೂ ನಿರ್ಣಾಯಕವಾಗಿ ಗೆಲ್ಲುವ ಬಗ್ಗೆ, ಯಾರಿಗೂ ಭರವಸೆ ಇರಲಿಲ್ಲ. ಆದರೆ, ಕಾಂಗ್ರೆಸ್ ಗೆದ್ದಿತು. ಗೆದ್ದದ್ದು ಮಾತ್ರವಲ್ಲ ನಿರ್ಣಾಯಕವಾಗಿ ಗೆದ್ದಿತು. ಬಿಜೆಪಿ ಸೋತಿತು? ಸ್ಥಾನಗಳ ಸಂಖ್ಯೆಯನ್ನು ಪರಿಗಣಿಸಿದರೆ ಬಿಜೆಪಿ ನಿರ್ಣಾಯಕವಾಗಿ ಸೋತಿತು. ಆದರೆ ಅದು ಪಡೆದ ಮತಗಳ ಪ್ರಮಾಣವನ್ನು ಪರಿಗಣಿಸಿದರೆ ಬಿಜೆಪಿ ಸೋಲಲಿಲ್ಲ. ಅರ್ಥಾತ್ 2018ರಲ್ಲಿ ಅದು ಪಡೆದ ಪ್ರತಿಶತ ಮತಗಳನ್ನು, 2023ರಲ್ಲೂ ಉಳಿಸಿಕೊಂಡಿತ್ತು. ಹಾಗಾಗಿ ಕಾಂಗ್ರೆಸ್ಸು ಗೆಲುವಿನ ಸಂಭ್ರಮದಲ್ಲೂ ಚಿಂತೆ ಪಡಬೇಕಿತ್ತು, ಬಿಜೆಪಿಗೆ ಸೋಲಿನ ಚಿಂತೆಯಲ್ಲೂ ನೆಮ್ಮದಿಯ ನಿಟ್ಟುಸಿರು ಬಿಡುವ ಸಂದರ್ಭ ಒದಗಿತು. ಇನ್ನು ಚುನಾವಣೆಯಲ್ಲಿ ಕೇವಲ 19 ಸ್ಥಾನಗಳನ್ನು ಗೆದ್ದು ಹೆಚ್ಚುಕಡಿಮೆ ಅಸ್ತಿತ್ವವನ್ನೇ ಕಳೆದುಕೊಳ್ಳುವ ಹಂತ ತಲುಪಿ ಒಂದು ಕಾಲದ ರಾಜಕೀಯ ಶತ್ರು ಬಿಜೆಪಿಗೆ ತ್ರಿಕರಣಪೂರ್ವಕ ಶರಣಾಗಿರುವ ಜೆಡಿಎಸ್ ಎಂಬ ಮಧ್ಯವರ್ತಿ ಪಕ್ಷದ ವಿಚಾರವಾಗಿ ಹೇಳುವುದಕ್ಕೇನೂ ಉಳಿದಿಲ್ಲ.

ಚುನಾವಣೆಯೇ ವರ್ಷದ ನಿರ್ಣಾಯಕ ಘಟನೆಯಾಗಿತ್ತು ಎನ್ನುವ ಕಾರಣಕ್ಕೆ ಇಡೀ ವರ್ಷದಲ್ಲಿ ಏನಾಯಿತು ಎನ್ನುವುದನ್ನು ಹೇಳಲು ಚುನಾವಣೆಯ ನಂತರದ ಏಳು ತಿಂಗಳುಗಳಲ್ಲಿ ಆಗಿಹೋದ ಬೆಳವಣಿಗೆಗಳೇ ಪ್ರಮುಖವಾಗುತ್ತವೆ. ಚುನಾವಣೆಗೆ ಹಿಂದಿನ ಐದು ತಿಂಗಳುಗಳು ಕಂಡದ್ದು ಕೇವಲ ಚುನಾವಣಾ ತಯಾರಿಯನ್ನಷ್ಟೇ. ಹಾಗಾಗಿ ಚುನಾವಣಾ ನಂತರದ ಕತೆ ಹೇಳಿದರೆ ಅದು ಇಡೀ ವರ್ಷದ ಕತೆಯೂ ಆಗುತ್ತದೆ ಮತ್ತು ಅದು ವಿಚಿತ್ರವಾದ ವಿಪರ್ಯಾಸಗಳಿಂದ ಕೂಡಿದ ಕತೆಯೂ ಆಗಿದೆ.

ಮೊದಲನೆಯದಾಗಿ ಸೋತ ಬಿಜೆಪಿಗೆ ಸೋಲಿನಲ್ಲೂ ನಗೆ ಬೀರಬಲ್ಲಷ್ಟು ಶೇಕಡಾವಾರು ಮತಗಳು ದೊರೆತಿದ್ದರೂ, ವಿಶೇಷವಾಗಿ ಅಸ್ತಿತ್ವವೇ ಇಲ್ಲದಿದ್ದ ದಕ್ಷಿಣ ಕರ್ನಾಟಕದ ಕೆಲ ಭಾಗಗಳಲ್ಲಿ ಅದು ತನ್ನ ಪರವಾದ ಮತಗಳನ್ನು ಹೆಚ್ಚಿಸಿಕೊಂಡಿದ್ದರೂ, ಚುನಾವಣೆಯ ಫಲಿತಾಂಶ ಬಂದ ನಂತರದ ದಿನಗಳಲ್ಲಿ ಅದು ಚಿತ್ರವಿಚಿತ್ರವಾಗಿ ವರ್ತಿಸಲಾರಂಭಿಸಿತು. ಎಷ್ಟರಮಟ್ಟಿಗೆ ಎಂದರೆ ಸೋತವರ ಮುಖ ಕೂಡಾ ನೋಡಲಾರೆ ಎಂಬಂತೆ ಆ ಪಕ್ಷದ ಹೈಕಮಾಂಡ್ ರಾಜ್ಯದಲ್ಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕನನ್ನು ಆರಿಸುವ ಕನಿಷ್ಠ ಜವಾಬ್ದಾರಿಯನ್ನು ಮುಂದೂಡುತ್ತಾ ಹೋಯಿತು. ವಿಧಾನಸಭೆಯ ಮೊದಲ ಅಧಿವೇಶನ ಮತ್ತು ಬಜೆಟ್ ಅಧಿವೇಶನ ವಿರೋಧ ಪಕ್ಷದ ನಾಯಕನಿಲ್ಲದ ಸ್ಥಿತಿಯಲ್ಲೇ ನಡೆದುಹೋದದ್ದು ಕರ್ನಾಟಕ ಮಾತ್ರವಲ್ಲ ಇಡೀ ದೇಶದಲ್ಲೇ ಮೊದಲಿರಬೇಕು. ಕೊನೆಗೂ ಫಲಿತಾಂಶ ಬಂದು ಆರು ತಿಂಗಳ ನಂತರ ನವೆಂಬರ 17ರಂದು ವಿರೋಧಪಕ್ಷದ ನಾಯಕನ ಆಯ್ಕೆ ಆಯಿತು. ಅದೇ ರೀತಿಯಲ್ಲಿ ಚುನಾವಣೆಗೆ ಮೊದಲೇ ಆಗಬೇಕಿದ್ದ ರಾಜ್ಯ ಬಿಜೆಪಿ ಅಧ್ಯಕ್ಷರ ಆಯ್ಕೆಯೂ, ಚುನಾವಣೆ ನಡೆದು ಆರು ತಿಂಗಳ ನಂತರ ಈಗ ಆಗಿದೆ. ಆ ಪಕ್ಷದೊಳಗಣ ಯಾವ ವಿದ್ಯಮಾನಗಳಿಂದಾಗಿ ಇಂತಹ ಮೂಲಭೂತ ನಿರ್ಣಯಗಳು ಆಗಲು ಅಷ್ಟೊಂದು ತಡವಾಯಿತು ಅಂತ ಈಗಲೂ ಯಾರಿಗೂ ಗೊತ್ತಿಲ್ಲ. ಕರ್ನಾಟಕದಲ್ಲಿ ರಾಜಕೀಯ ಪತ್ರಿಕೋದ್ಯಮ ಎನ್ನುವುದು ಹೆಚ್ಚು ಕಡಿಮೆ ಸತ್ತೇ ಹೋಗಿರುವುದರಿಂದ ಇಂತಹ ಪ್ರಮುಖ ವಿಷಯಗಳ ಬಗ್ಗೆ ಈಗ ಜನರಿಗೆ ವಸ್ತುನಿಷ್ಠ ವಿಚಾರಗಳು ಬಿಡಿ, ಊಹಾತ್ಮಕ ವಿವರಣೆಗಳೂ ಲಭಿಸದ ಸ್ಥಿತಿ ನಿರ್ಮಾಣವಾಗಿದೆ. ಅದೇನೇ ಇರಲಿ, ಮತ್ತೆ ಬಿಜೆಪಿಯ ವಿಷಯಕ್ಕೆ ಬರುವುದಾದರೆ, ವಿರೋಧ ಪಕ್ಷದ ನಾಯಕ ಮತ್ತು ರಾಜ್ಯ ಅಧ್ಯಕ್ಷರ ಆಯ್ಕೆ ಘೋಷಣೆ ಯಾವಾಗ ಆಯಿತೋ ಅಂದಿನಿಂದ ಬಿಜೆಪಿ ಪರವಾಗಿರುವ ಕರ್ನಾಟಕದ ಮಾಧ್ಯಮಗಳೆಲ್ಲ, ಇನ್ನೇನು ಕರ್ನಾಟಕದಲ್ಲಿ ಬಿಜೆಪಿ 2024ರ ಲೋಕಸಭಾ ಚುನಾವಣೆ ಮಾತ್ರವಲ್ಲ ಬಹುದೂರದ 2028ರ ವಿಧಾನಸಭಾ ಚುನಾವಣೆಯನ್ನೂ ಗೆದ್ದಾಯಿತು ಎನ್ನುವ ರೀತಿಯ ಲಹರಿ ವರದಿಗಾರಿಕೆಯಲ್ಲಿ ತೊಡಗಿದರೆ, ಬಿಜೆಪಿಯೊಳಗಿಂದ ಎರಡೂ ಆಯ್ಕೆಗಳ ಬಗ್ಗೆ ಭಿನ್ನ ರಾಗಗಳು ಕೇಳಿ ಬರತೊಡಗಿದವು. ಅದು ಸಣ್ಣಗೆ ತಣ್ಣಗೆ ಎಲ್ಲಾ ಆಯ್ಕೆಗಳ ವಿಚಾರಗಳಲ್ಲೂ ಕೇಳಿಬರುವ ಅಪಶ್ರುತಿಯಲ್ಲ. ಬದಲಿಗೆ ಬೀದಿಬೀದಿಗಳಲ್ಲಿ ನಿಂತು ಕೆಲ ರಾಜ್ಯ ಬಿಜೆಪಿ ನಾಯಕರು ಪ್ರಪಂಚದ ಅತ್ಯಂತ ಬಲಿಷ್ಠ ಪಕ್ಷದ ಅತ್ಯಂತ ಬಲಿಷ್ಠ ಹೈಕಮಾಂಡ್‌ನ ಆಯ್ಕೆಯನ್ನು ಅಕ್ಷರಶಃ ಗೇಲಿ ಮಾಡುವುದಕ್ಕೆ ಆರಂಭಿಸಿದರು. ಮೊದಲಿಗೆ ವಿರೋಧ ಪಕ್ಷದ ನಾಯಕನ ಆಯ್ಕೆ ಇಷ್ಟೊಂದು ವಿಳಂಬವಾದದ್ದೇ ಒಂದು ವಿಚಿತ್ರ ಬೆಳವಣಿಗೆಯಾದರೆ, ಇನ್ನೊಂದೆಡೆ ವಿರೋಧ ಪಕ್ಷದ ನಾಯಕ ಮತ್ತು ರಾಜ್ಯಾಧ್ಯಕ್ಷರ ಹುದ್ದೆಗಳಿಗೆ ನಡೆದ ಆಯ್ಕೆಯ ಬಗ್ಗೆ ಈ ಮಟ್ಟದ ಭಿನ್ನಮತ ಈತನಕ ಯಾವುದೇ ರಾಜ್ಯದ ಯಾವುದೇ ಪಕ್ಷದಲ್ಲೂ ಕೇಳಿದ ನಿದರ್ಶನಗಳು ಕಡಿಮೆ ಅಥವಾ ಇಲ್ಲವೇ ಇಲ್ಲ ಎನ್ನಬಹುದು. ಬಿಜೆಪಿಯಂತಹ ’ಶಿಸ್ತಿನ’ ಪಕ್ಷದಲ್ಲಿ, ಹೈಕಮಾಂಡ್ ಮರ್ಜಿಯಲ್ಲಿರುವ ಪಕ್ಷದಲ್ಲಿ ಹೀಗೆಲ್ಲಾ ಆಗುವುದಕ್ಕೆ ಕರ್ನಾಟಕ 2023ರಲ್ಲಿ ಸಾಕ್ಷಿಯಾಯಿತು ಎನ್ನುವುದು ವಿಚಿತ್ರ ಬೆಳವಣಿಗೆಯೇನೋ ಸರಿ. ಆದರೆ ಈ ಬೆಳವಣಿಗೆಗಳನ್ನು ವಿಪರ್ಯಾಸಕರ ಅಂತ ಮೇಲೆ ಹೇಳಿದ್ದು ಇವಿಷ್ಟೇ ಕಾರಣಗಳಿಗೆ ಅಲ್ಲ. ಅದು ಬೇರೆಯೇ ಇದೆ.

ಚುನಾವಣಾ ಫಲಿತಾಂಶ ಬಂದು ಅರ್ಧ ವರ್ಷದ ತನಕ ವಿರೋಧ ಪಕ್ಷದ ನಾಯಕನಿಲ್ಲದೆ ಇದ್ದದ್ದು, ದಿನಾ ಬೆಳಗಾದರೆ ಪ್ರಮುಖ ವಿರೋಧ ಪಕ್ಷವಾದ ಬಿಜೆಪಿಯಲ್ಲಿ ಯಾರೋ ಒಬ್ಬ ಮುಖಂಡ ಅವರದ್ದೇ ಪಕ್ಷದ ಇತರ ನಾಯಕರ ಮೇಲೆ ಮುಗಿಬೀಳುತ್ತಿದ್ದುದು, ಪಕ್ಷ ಬಿಟ್ಟು ಹೋಗುವುದು ಇತ್ಯಾದಿ ಇತ್ಯಾದಿ ಬೆಳವಣಿಗೆಗಳು ನಡೆಯುತ್ತಲೇ ಇದ್ದರೂ, ಕರ್ನಾಟಕ ರಾಜ್ಯವು ಸಂದ ಆರು ತಿಂಗಳಲ್ಲಿ ಕಂಡದ್ದು ಅತ್ಯಂತ ಬಲಿಷ್ಠವಾದ ವಿರೋಧ ಪಕ್ಷವನ್ನು. ವಿಪರ್ಯಾಸ ಇರುವುದು ಇಲ್ಲಿ. ಒಂದೆಡೆ ಆಂತರಿಕವಾಗಿ ಜರ್ಜರಿತವಾಗಿರುತ್ತಲೇ ಇನ್ನೊಂದೆಡೆ ವಿರೋಧ ಪಕ್ಷವೊಂದು ಆಳುವ ಪಕ್ಷವನ್ನು ಸರಕಾರ ರಚಿಸಿದ ಮೊದಲ ದಿನದಿಂದಲೂ ತುದಿಗಾಲಲ್ಲಿ ನಿಲ್ಲುವಂತೆ ಮಾಡಿದ ಅಪೂರ್ವ ವಿದ್ಯಮಾನಕ್ಕೂ 2023ರ ಕರ್ನಾಟಕ ರಾಜಕೀಯ ಸಾಕ್ಷಿಯಾಯಿತು. ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನ ಖಾಲಿ ಇದ್ದರೂ ಬಿಜೆಪಿಯ ಒಬ್ಬೊಬ್ಬ ಶಾಸಕನೂ ತಾನೇ ವಿರೋಧ ಪಕ್ಷದ ನಾಯಕ ಎಂಬಂತೆ ದಿನದಿನವೂ ಸರಕಾರದ ಮೇಲೆ ಮುಗಿಬೀಳುತಿದ್ದರು. ಇದು ಯಾವ ಹಂತ ತಲುಪಿತ್ತು ಎಂದರೆ, ಹೊಸ ಸರಕಾರ ಇನ್ನೂ ಪ್ರಮಾಣವಚನ ಸ್ವೀಕರಿಸಿದ ಚಪ್ಪರದ ಕಂಬಗಳನ್ನು ಕೀಳುವ ಮೊದಲೇ ಬಿಜೆಪಿಯ ಕೆಲವು ಶಾಸಕರು ಹೊಸ ’ಆಪರೇಷನ್ ಕಮಲ’ ನಡೆಸಿ ಸರಕಾರವನ್ನು ಉರುಳಿಸುವ ಬಗ್ಗೆ ಹೇಳಿಕೆ ನೀಡುತ್ತಿದ್ದರು. ಅದು ಗಂಭೀರ ಎನ್ನುವಂತೆ ಮಾಧ್ಯಮಗಳೂ ಬರೆಯುತ್ತಿದ್ದವು. ಹೆಚ್ಚುಕಡಿಮೆ ಮೂರನೇ ಎರಡರಷ್ಟು ಬಹುಮತ ಹೊಂದಿದ ಒಂದು ಪಕ್ಷದ ಸರಕಾರವನ್ನು ಉರುಳಿಸುವ ಮಾತುಗಳು ಈಗಲೂ ಕೇಳಿಬರುತ್ತಿವೆ. ಜನತಾದಳ ಬಿಜೆಪಿಗೆ ಶರಣಾಗಿ ಮಿತ್ರತ್ವವನ್ನು ಒಪ್ಪಿಕೊಂಡದ್ದು ಸರಕಾರದ ಅನಿಶ್ಚಿತ ಭವಿಷ್ಯದ ಕುರಿತಾದ ಹೇಳಿಕೆಗಳಿಗೆ ಇನ್ನಷ್ಟೂ ಬಲನೀಡಿದೆ.

ಇದನ್ನೂ ಓದಿ: ಕಾರ್ಕಳ: ನಕಲಿ ಪರಶುರಾಮ ಪುತ್ಥಳಿ ಸುತ್ತ “ಅಸಲಿ” ಹಿಂದುತ್ವದ ಧರ್ಮಕಾರಣ! ಗ್ಲಾಸ್ ಫೈಬರ್ ಪರಶುರಾಮನನ್ನು ಶಾಸಕ ಸುನಿಲ್ ಕುಮಾರ್ ಕಂಚಿನದ್ದೆಂದು ವಂಚಿಸಿದ್ದೇಕೆ?!

ಬಿಜೆಪಿಯೊಳಗೆ ಅಷ್ಟೊಂದು ತಳಮಳಗಳಿದ್ದರೂ, ಆ ಪಕ್ಷದ ನಾಯಕರುಗಳು ಆಳುವ ಕಾಂಗ್ರೆಸ್ ಪಕ್ಷದೊಳಗಣ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ದೊಡ್ಡದು ಮಾಡಿ, ಅದರ ಮುಂದೆ ತಮ್ಮ ಪಕ್ಷದ ಭಿನ್ನಮತ ಏನೇನೂ ಅಲ್ಲ ಎಂಬಂತೆ ತೋರಿಸುವಲ್ಲಿ ಯಶಸ್ವಿಯಾಗಿದ್ದರು. ಬಿಜೆಪಿಯ ಸಹಕಾರಕ್ಕೆಂದೇ ಮುಡಿಪಾಗಿರುವ ಕರ್ನಾಟಕದ ಬಹುತೇಕ ಮಾಧ್ಯಮಗಳು ಈ ಕೆಲಸದಲ್ಲಿ ಬಿಜೆಪಿಯ ನಾಯಕರಿಗೆ ಯಥಾಶಕ್ತಿ ನೆರವಾಗುತ್ತಿದ್ದರೆ ಬಿಜೆಪಿಯ ತಟ್ಟೆಯ ಹೆಗ್ಗಣಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ತಟ್ಟೆಯ ನೊಣವೇ ಸಾರ್ವಜನಿಕವಾಗಿ ಪ್ರದರ್ಶನ ಆಗುತಿತ್ತು. ಕಾಂಗ್ರೆಸ್ ಸರಕಾರದ ಬತ್ತಳಿಕೆಯಲ್ಲಿದ್ದ ಏಕೈಕ ಅಸ್ತ್ರವಾಗಿರುವ ಗ್ಯಾರಂಟೀ ಯೋಜನೆಗಳಿಂದಾಗಿ ರಾಜ್ಯ ಬರ್ಬಾದ್ ಆಗಿ ಹೋಯಿತು ಎನ್ನುವ ಕಥನವೊಂದನ್ನು ಕಟ್ಟಿ, ಅದನ್ನು ಸ್ವತಃ ಗ್ಯಾರಂಟೀ ಯೋಜನೆಯ ಫಲಾನುಭವಿಗಳೇ ನಂಬುವಂತೆ ಮಾಡುವಲ್ಲಿ ಕೂಡಾ ಜರ್ಜರಿತ ಬಿಜೆಪಿ ಯಶಸ್ವಿಯಾಯಿತು. ವಿಪರ್ಯಾಸವೆಂದರೆ, ಸ್ವತಃ ಕಾಂಗ್ರೆಸ್ಸಿನ ಶಾಸಕರೇ ತಿಳಿದೋ ತಿಳಿಯದೆಯೋ ಬಿಜೆಪಿಯ ಈ ಮಹಾನ್ ಕಾರ್ಯಕ್ಕೆ ನೆರವಾಗುತ್ತಿದ್ದದ್ದು. ಗ್ಯಾರಂಟೀ ಯೋಜನೆಗಳನ್ನು ಸಮರ್ಥಿಸಿಕೊಳ್ಳಬೇಕಿದ್ದ ಕಾಂಗ್ರೆಸ್ ಶಾಸಕರೇ ಅಲ್ಲಲ್ಲಿ ಯೋಜನೆಗಳ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದು, ನಮ್ಮ ಕ್ಷೇತ್ರಗಳಿಗೆ ಅಭಿವೃದ್ಧಿ ಹಣ ಬರುತ್ತಿಲ್ಲ ಅಂತ ಸಾರ್ವಜನಿಕವಾಗಿ ಹೇಳುತ್ತಿದ್ದದ್ದು ಇವೆಲ್ಲವೂ ಬಿಜೆಪಿಗೆ ಇನ್ನೂ ಕಣ್ಣು ಬಿಡುತ್ತಿರುವ ಹಂತದ ಸರಕಾರದ ಮೇಲೆ ಎರಗಲು ಬೇಕಾದ ಪರಿಕರಗಳನ್ನು ಒದಗಿಸುತ್ತಿದ್ದವು. ಸಾಮಾನ್ಯವಾಗಿ ಹೊಸ ಸರಕಾರವೊಂದು ಅಸ್ತಿತ್ವಕ್ಕೆ ಬಂದ ನಂತರ ಸ್ವಲ್ಪ ಸಮಯ ವಿರೋಧ ಪಕ್ಷಗಳು ಹೆಚ್ಚುಕಡಿಮೆ ಸುಮ್ಮನಿದ್ದು ಎಲ್ಲವನ್ನೂ ಅವಲೋಕಿಸಿ ಒಂದು ಹಂತದ ನಂತರ ಸರಕಾರ ಮೇಲೆ ಮುಗಿಬೀಳುವುದು ಈ ತನಕ ನಡೆದುಕೊಂಡು ಬಂದ ಅಲಿಖಿತ ಸಂಪ್ರದಾಯ. ಇದನ್ನು ಸಂಪೂರ್ಣವಾಗಿ ಮುರಿದು ಶೈಶವಾವಸ್ಥೆಯಲ್ಲಿರುವ ಕಾಂಗ್ರೆಸ್ ಸರಕಾರದ ಮೇಲೆ ವಿರೋಧ ಪಕ್ಷವಾದ ಬಿಜೆಪಿ ಅಭೂತಪೂರ್ವ ಪ್ರಹಾರಕ್ಕಿಳಿದದ್ದು, ಕರ್ನಾಟಕದ ರಾಜಕೀಯದಲ್ಲಿ 2023ರ ಇಸವಿಯ ಪ್ರಮುಖ ಬೆಳವಣಿಗೆ. ಅದು ಕೂಡಾ ಬಿಜೆಪಿಯ ಸ್ಥಿತಿ ಮೂರಾಬಟ್ಟೆಯಾಗಿರುವ ಹೊತ್ತಿನಲ್ಲಿ.

ಇನ್ನೊಂದೆಡೆ ಚುನಾವಣಾನಂತರದ ಇಡೀ ವರ್ಷ ಕಾಂಗ್ರೆಸ್ ನಡೆದುಕೊಂಡ ರೀತಿಯೂ ವಿಚಿತ್ರವಾಗಿಯೂ ವಿಪರ್ಯಾಸಕರವಾಗಿಯೂ ಇತ್ತು. ಕಾಂಗ್ರೆಸ್ಸಿನ ಚುನಾವಣಾ ಯಶಸ್ಸಿಗೆ ಕಾರಣವಾಗಿದ್ದು ಮುಖ್ಯವಾಗಿ ಎರಡು ರೀತಿಯ ಮತಗಳ ಕ್ರೋಢೀಕರಣ. ಮೊದಲನೆಯದ್ದು ಕೇಂದ್ರದ ಬಿಜೆಪಿ ಸರಕಾರದ ಮತ್ತು ಕರ್ನಾಟಕದ ಹಿಂದಿನ ಬಿಜೆಪಿ ಸರಕಾರದ ಆಡಳಿತದಲ್ಲಿ ಜನರ ಆರ್ಥಿಕ ಸ್ಥಿತಿಗತಿಗಳು ತೀರಾ ಹದಗೆಟ್ಟು ಚುನಾವಣೆಯ ಹೊತ್ತಿಗೆ ರಾಜ್ಯದ ಬಡ ಮತ್ತು ಕೆಳಮಧ್ಯಮ ವರ್ಗದ ಮತದಾರರು, ಅದರಲ್ಲೂ ಮುಖ್ಯವಾಗಿ ದಲಿತ ಮತ್ತು ತೀರಾ ಹಿಂದುಳಿದ ವರ್ಗಗಳಿಗೆ ಸೇರಿದ ಮತದಾರರು (ಬಡತನ ಈ ವರ್ಗಗಳ ನಡುವೆ ಹೆಚ್ಚಿದೆ ಎನ್ನುವ ಕಾರಣಕ್ಕೆ), ತಮ್ಮ ದೈನಂದಿನ ಬದುಕನ್ನು ನಿಭಾಯಿಸಲಾಗದೆ ರೋಸಿಹೋಗಿದ್ದರು. ಹಾಗಾಗಿ ಎಲ್ಲ ಸಮುದಾಯಗಳ ಬಡ ಮತ್ತು ಕೆಳಮಧ್ಯಮವರ್ಗದ ಮತದಾರರು ಬಿಜೆಪಿಯ ಕೋಮುವಾದೀ ಪ್ರಚಾರವನ್ನು ಕಡೆಗಣಿಸಿ ಕಾಂಗ್ರೆಸ್ಸಿಗೆ ಮತ ಹಾಕಿದರು. ಕಾಂಗ್ರೆಸ್ ಬಡವರ ಪರ ಮಾತನಾಡಿದ್ದು ಮತ್ತು ಗ್ಯಾರಂಟಿಗಳನ್ನು ಘೋಷಿಸಿದ್ದು ಕಾಂಗ್ರೆಸ್ ತಮ್ಮ ಪರವಾಗಿದೆ ಎನ್ನುವ ಭಾವನೆ ಮೂಡಿಸಿತ್ತು. ಹಾಗಾಗಿ, ಚುನಾವಣೆಯ ನಂತರ ಕಾಂಗ್ರೆಸ್ಸಿಗರು ಒಟ್ಟಾಗಿ ಗ್ಯಾರಂಟಿಗಳ ಪರವಾಗಿ ಮಾತನಾಡಬೇಕಿತ್ತು. ಗ್ಯಾರಂಟೀ ಯೋಜನೆಗಳ ಬಗ್ಗೆ ಯಾವುದೇ ರೀತಿಯ ಅಪಪ್ರಚಾರಕ್ಕೆ ಎಡೆ ಮಾಡಿಕೊಡಬಹುದಾದ ಹೇಳಿಕೆಗಳಿಂದ ದೂರ ಇರಬೇಕಿತ್ತು. ಜತೆಗೆ ಸರಕಾರ ಕೂಡಾ ಗ್ಯಾರಂಟಿಗಳು ಏನಿದ್ದರೂ ತತ್‌ಕ್ಷಣ ಬಡವರ ನೆರವಿಗೆಂದು ಘೋಷಿಸಿದ ಯೋಜನೆಗಳು, ದೂರಗಾಮಿಯಾಗಿ ಕರ್ನಾಟಕಕ್ಕೆ ತಮ್ಮ ಕನಸುಗಳು ಬೇರೆಯೇ ಇವೆ ಎನ್ನುವ ರೀತಿಯಲ್ಲಿ ಭರವಸೆಯ ರಾಜಕೀಯ ಮಾಡುವ ಅಗತ್ಯವಿತ್ತು. ಆದರೆ ಕಾಂಗ್ರೆಸ್‌ನ ಒಳಗಿಂದಲೇ ಗ್ಯಾರಂಟಿಗಳ ಬಗ್ಗೆ ಪ್ರತ್ಯಕ್ಷ ಮತ್ತು ಪರೋಕ್ಷವಾದ ಅಪಸ್ವರಗಳು ಎದ್ದದ್ದು ಕಾಂಗ್ರೆಸ್ಸಿಗರಿಗೆ ತಾವು ಯಾವ ಕಾರಣಕ್ಕೆ ಗೆದ್ದದ್ದು ಎನ್ನುವ ಪ್ರಾಥಮಿಕಪಾಠವೂ ಗೆಲ್ಲುತ್ತಲೇ ಮರೆತುಹೋಯಿತು ಎನ್ನುವುದನ್ನು ತೋರಿಸುತ್ತದೆ. ಕಾಂಗ್ರೆಸ್ ಗೆಲ್ಲಲು ಇನ್ನೊಂದು ಕಾರಣ ರಾಜ್ಯದಲ್ಲಿ ಮುಸ್ಲಿಂ ಮತದಾರರು ಒಟ್ಟಾಗಿ ಬಿಜೆಪಿಯ ವಿರುದ್ಧ ಮತ ಹಾಕಿದ್ದು. ಹಿಂದಿನ ಬಿಜೆಪಿ ಸರಕಾರ ಅನುಸರಿಸಿದ್ದ ವಿವಿಧ ರೀತಿಯ ಭಯಾನಕ ಧ್ರುವೀಕರಣ ನೀತಿಗಳಿಂದಾಗಿ ಮುಸ್ಲಿಂ ಮತದಾರರು ಇನ್ನಿಲ್ಲ ಎಂಬಂತೆ ಕಂಗೆಟ್ಟುಹೋಗಿದ್ದರಿಂದಾಗಿ ಅವರೆಲ್ಲಾ ಈ ಬಾರಿ ಹಿಂದಿಗಿಂತ ಹೆಚ್ಚು ಒಟ್ಟಾಗಿದ್ದರು. ಆದಕಾರಣ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಲೇ ಅದರ ನಡೆ ನುಡಿ ರಾಜ್ಯದ ಅಲ್ಪಸಂಖ್ಯಾತ ಮತದಾರರಲ್ಲಿ ಭರವಸೆ ಹುಟ್ಟಿಸುವ ರೀತಿಯಲ್ಲಿ ಇರಬೇಕಿತ್ತು. ಆದರೆ ವರ್ಷ ಕೊನೆಯಾಗುವವರೆಗೂ ಕಾಂಗ್ರೆಸ್ ಈ ಕುರಿತಂತೆ ಖಡಾಖಂಡಿತ ಎಂಬಂತೆ ಏನನ್ನೂ ಹೇಳಿದ್ದೂ ಇಲ್ಲ, ಮಾಡಿದ್ದೂ ಇಲ್ಲ. ಕರಾವಳಿ ಕರ್ನಾಟಕದಲ್ಲಿ ಎಂದಿನಂತೆ ಅನೈತಿಕ ಪೊಲೀಸ್‌ಗಿರಿ ಮುಂದುವರಿದಿದೆ. ಅದರ ವಿರುದ್ಧ ಕ್ರಮ ಕೈಗೊಳ್ಳಲು ಒಂದು ವಿಶೇಷ ಪೊಲೀಸ್ ಪಡೆ ನೇಮಿಸಿದ್ದೇನೋ ಆಯಿತು. ಈಗ ಅದರ ಸುದ್ದಿಯೇ ಇಲ್ಲ. ಏನಿದ್ದರೂ, ಕರಾವಳಿ ಕರ್ನಾಟಕದಲ್ಲಿ ವ್ಯಾಪಿಸಿರುವುದು ಪೊಲೀಸರು ಮಾತ್ರ ಪರಿಹರಿಸಬಲ್ಲ ಪಿಡುಗಲ ಎನ್ನುವ ಕನಿಷ್ಠ ಅರಿವಾದರೂ ಸರಕಾರಕ್ಕೆ ಇದೆ ಅಂತ ಇನ್ನೂ ಅನ್ನಿಸುತ್ತಿಲ್ಲ. ಹಮಾಸ್ ನಿರ್ನಾಮದ ಹೆಸರಿನಲ್ಲಿ ಇಸ್ರೇಲ್ ಪಾಲೆಸ್ತೀನ್ ದೇಶದ ನಾಗರಿಕರ ಮೇಲೆ ಕ್ರೂರ ಯುದ್ಧ ಹೂಡಿರುವ ಸಂದರ್ಭದಲ್ಲಿ ಪ್ಯಾಲೆಸ್ತೀನ್ ನಾಗರಿಕರ ಪರವಾಗಿ ಕರ್ನಾಟಕದಲ್ಲಿ ಶಾಂತಿಯುತವಾದ ಸದ್ಭಾವನಾ ಸಭೆಗಳನ್ನು ಮಾಡಲು ಕೂಡಾ ಆರಂಭದಲ್ಲಿ ಅನುಮತಿ ನಿರಾಕರಿಸುವ ಮೂಲಕ ಕಾಂಗ್ರೆಸ್ ಸರಕಾರ ಎಡಬಿಡಂಗಿ ನೀತಿ ಪ್ರದರ್ಶಿಸಿತು. ಒಟ್ಟಿನಲ್ಲಿ, 2023ರ ಕರ್ನಾಟಕದ ರಾಜಕೀಯವನ್ನು ಅವಲೋಕಿಸಿದರೆ ಸ್ಪಷ್ಟವಾಗುವುದು ಇಷ್ಟು: ಬಿಜೆಪಿ ಸೋತ ನಂತರವೂ ವರ್ಷದುದ್ದಕ್ಕೂ ತನಗೆ ಮತ ಹಾಕಿದವರು ಯಾರು ಎನ್ನುವುದನ್ನು ಗಮನದಲ್ಲಿಟ್ಟುಕೊಂಡೇ ರಾಜಕೀಯ ಮಾಡುತ್ತಿದೆ. ಕಾಂಗ್ರೆಸ್ ಗೆದ್ದ ನಂತರ ತನ್ನನ್ನು ಗೆಲ್ಲಿಸಿದವರು ಯಾರು ಮತ್ತು ಯಾಕೆ ಎನ್ನುವುದನ್ನು ಮರೆತು ಆಡಳಿತ ಮಾಡುತ್ತಿದೆ.

ಎ ನಾರಾಯಣ

ಎ ನಾರಾಯಣ
ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...