ಸೈಯದ್ ಅಲಿ ಶಾ ಗಿಲಾನಿ ಅವರ ಜಮ್ಮು-ಕಾಶ್ಮೀರದ ತೆಹ್ರೀಕ್-ಎ-ಹುರಿಯತ್ (ಟಿಇಹೆಚ್) ಸಂಘಟನೆಯನ್ನು ನಿಷೇಧಿಸಿ ಕೇಂದ್ರ ಗೃಹ ಸಚಿವಾಲಯವು ಇಂದು ಆದೇಶವನ್ನು ಹೊರಡಿಸಿದ್ದು, ಟಿಇಹೆಚ್ ಸಂಘಟನೆಯನ್ನು ಕಾನೂನು ಬಾಹಿರ ಸಂಘಟನೆ ಎಂದು ಘೋಷಿಸಿದೆ.
ಈ ಕುರಿತ ನಿರ್ಧಾರವನ್ನು ಪ್ರಕಟಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಈ ಗುಂಪು ಜಮ್ಮು ಮತ್ತು ಕಾಶ್ಮೀರವನ್ನು ಪ್ರತ್ಯೇಕತೆ ದೃಷ್ಟಿಯಿಂದ ಭಾರತ ವಿರೋಧಿ ಕೃತ್ಯ ಮತ್ತು ಭಯೋತ್ಪಾದಕ ಚಟುವಟಿಕೆಗಳನ್ನು ಮುಂದುವರೆಸುತ್ತಿರುವುದು ಕಂಡುಬಂದಿದೆ. ಭಯೋತ್ಪಾದನೆ ವಿರುದ್ಧ ಪ್ರಧಾನಿ ನರೇಂದ್ರ ಮೋದಿಯವರ ಶೂನ್ಯ ಸಹಿಷ್ಣುತೆಯ ನೀತಿಯ ಅಡಿಯಲ್ಲಿ ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಯಾವುದೇ ವ್ಯಕ್ತಿ ಅಥವಾ ಸಂಘಟನೆ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ತೆಹ್ರೀಕ್-ಇ-ಹುರಿಯತ್ ಜಮ್ಮು-ಕಾಶ್ಮೀರ (ಟಿಹೆಚ್)ನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆಯಡಿಯಲ್ಲಿ ಕಾನೂನುಬಾಹಿರ ಸಂಘಟನೆ ಎಂದು ಘೋಷಿಸಲಾಗಿದೆ. ಈ ಸಂಘಟನೆಯು ಭಾರತದಿಂದ ಜಮ್ಮು-ಕಾಶ್ಮೀರವನ್ನು ಪ್ರತ್ಯೇಕಿಸಲು ಮತ್ತು ಇಸ್ಲಾಮಿಕ್ ಆಡಳಿತವನ್ನು ಸ್ಥಾಪಿಸಲು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ ಎಂದು ಅಮಿತ್ ಶಾ ಹೇಳಿದ್ದಾರೆ.
ತೆಹ್ರೀಕ್-ಇ-ಹುರಿಯತ್ ಸಂಘಟನೆಯನ್ನು ಸೈಯದ್ ಅಲಿ ಶಾ ಗಿಲಾನಿ ಅವರು ಸ್ಥಾಪಿಸಿದ್ದರು. ಗಿಲಾನಿ ಜಮಾತ್-ಎ-ಇಸ್ಲಾಮಿ ಕಾಶ್ಮೀರವನ್ನು ತೊರೆದ ನಂತರ 2004ರ ಆಗಸ್ಟ್ 7ರಂದು ಈ ಸಂಘಟನೆಯನ್ನು ಸ್ಥಾಪಿಸಿದ್ದರು. ಅವರ ನಿಧನದ ಬಳಿಕ ಮಸರತ್ ಆಲಂ ಭಟ್ ಅವರು ಉತ್ತರಾಧಿಕಾರಿಯಾದರು. ಭಟ್ ಪ್ರಸ್ತುತ ಜೈಲಿನಲ್ಲಿದ್ದಾರೆ.
ಡಿಸೆಂಬರ್ 27 ರಂದು ಭಾರತ ಸರಕಾರ ಜಮ್ಮು ಕಾಶ್ಮೀರದ ಮುಸ್ಲಿಂ ಲೀಗ್ ಸಂಘಟನೆಯನ್ನು ನಿಷೇಧಿತ ಸಂಘಟನೆ ಎಂದು ಘೋಷಿಸಿತ್ತು. ಜಮ್ಮು ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಮಸರತ್ ಆಲಂ ಭಟ್ ನೇತೃತ್ವದ ಮುಸ್ಲಿಂ ಲೀಗ್ ಸಂಘಟನೆಯನ್ನು ಕೇಂದ್ರ ಸರ್ಕಾರ ದೇಶ ವಿರೋಧಿ ಸಂಘಟನೆ ಎಂದು ಘೋಷಿಸಿ 5 ವರ್ಷಗಳವರೆಗೆ ನಿಷೇಧಿಸಿ ಆದೇಶಿಸಿತ್ತು.
ಜಮ್ಮು ಮತ್ತು ಕಾಶ್ಮೀರದಲ್ಲಿ ದೇಶವಿರೋಧಿ ಮತ್ತು ಪ್ರತ್ಯೇಕತಾವಾದಿ ಚಟುವಟಿಕೆಗಳಲ್ಲಿ ಸಂಘಟನೆಯ ಪಾಲ್ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಂಘಟನೆಯನ್ನು ನಿಷೇಧಿಸಲಾಗಿದೆ ಕೇಂದ್ರ ಗೃಹ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿತ್ತು. ಸೈಯದ್ ಅಲಿ ಶಾ ಗಿಲಾನಿಯವರ ಮರಣದ ನಂತರ ಮಸರತ್ ಆಲಂ ಭಟ್ ಮುಸ್ಲಿಂ ಲೀಗ್ ಜಮ್ಮು ಕಾಶ್ಮೀರ ಮತ್ತು ತೆಹ್ರೀಕ್-ಎ-ಹುರಿಯತ್ ಸಂಘಟನೆಯ ಮುಂದಾಳತ್ವ ವಹಿಸಿದ್ದರು. ಕಾಶ್ಮೀರ ಕಣಿವೆಯಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಗಳಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಭಟ್ 2010ರಿಂದ ಜೈಲಿನಲ್ಲಿದ್ದಾರೆ. 2010ರಲ್ಲಿ ಕಾಶ್ಮೀರದಲ್ಲಿ 100ಕ್ಕೂ ಹೆಚ್ಚು ಯುವಕರ ಸಾವಿಗೆ ಕಾರಣವಾದ ಹಿಂಸಾತ್ಮಕ ಪ್ರತಿಭಟನೆಗಳನ್ನು ಸಂಘಟಿಸುವಲ್ಲಿ ಭಟ್ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಆರೋಪಿಸಲಾಗಿದೆ.
2015ರಲ್ಲಿ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯೀದ್ ಅವರು ಪ್ರಮಾಣವಚನ ಸ್ವೀಕರಿಸಿದ ತಕ್ಷಣ ಅವರನ್ನು ಬಿಡುಗಡೆ ಮಾಡಿದ್ದರು. ಇದು ಪಿಡಿಪಿ-ಬಿಜೆಪಿ ಮೈತ್ರಿಯಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು. ಬಿಜೆಪಿಯ ಒತ್ತಡದ ಮೇರೆಗೆ, ಅಂದಿನ ರಾಜ್ಯ ಸರ್ಕಾರವು ರ್ಯಾಲಿಯಲ್ಲಿ ಪಾಕಿಸ್ತಾನದ ಪರ ಘೋಷಣೆಗಳನ್ನು ಕೂಗಿದ ಆರೋಪದಲ್ಲಿ ದೇಶದ್ರೋಹದ ಮತ್ತು ರಾಜ್ಯದ ವಿರುದ್ಧ ಯುದ್ಧಕ್ಕೆ ಪ್ರೇರಣೆ ಆರೋಪದ ಮೇಲೆ ಅವರನ್ನು ಪುನಃಬಂಧಿಸಿತ್ತು.
ಇದನ್ನು ಓದಿ: ಗಾಝಾ- ಈಜಿಪ್ಟ್ ಗಡಿಯಲ್ಲಿ ನಿಯಂತ್ರಣ ಸಾಧಿಸುವುದು ಇಸ್ರೇಲ್ ಗುರಿ!


