‘ನಲ್ಲಮಲ’ ಒಂದು ಕಾಡಿನ ಹೆಸರು. ತೆಲಂಗಾಣ ಮತ್ತು ಆಂಧ್ರಪ್ರದೇಶಕ್ಕೆ ಉಸಿರಿನಂತಿರುವ ಹಸಿರ ಹೊದಿಕೆಯ ದಟ್ಟಾರಣ್ಯ ಇದು. ಇಲ್ಲಿ ವಿವಿಧ ಬುಡಕಟ್ಟು ಜನಾಂಗಗಳು ಈಗಲೂ ಸಹ ತಮ್ಮ ಜೀವನವನ್ನ ಸಾಗಿಸುತ್ತಾ ಬಂದಿದ್ದಾರೆ. ಚೆಂಚು ಎಂಬ ಬುಡಕಟ್ಟು ಜನಾಂಗ ಇಲ್ಲಿ ತಲೆ ತಲೆಮಾರುಗಳಿಂದ ಜೀವಿಸುತ್ತಾ ಬಂದಿದ್ದಾರೆ. ಸದಾ ಹಚ್ಚ ಹಸಿರಿನಿಂದ ಕೂಡಿರುವ ಈ ಕಾಡು ಎರಡು ರಾಜ್ಯಗಳ ಮಳೆ, ಬೆಳೆ ಮತ್ತು ವಾತಾವರಣ ಸಮತೋಲನಕ್ಕೆ ಪ್ರಮುಖ ಪಾತ್ರವಹಿಸುತ್ತದೆ.
ನಲ್ಲಮಲ ಕಾಡು ಜೀವಜಂತುಗಳ ವೈವಿಧ್ಯತೆಯಿಂದ ಕೂಡಿದ್ದು ಇಲ್ಲಿ 600ಕ್ಕೂ ವಿವಿಧ ಜಾತಿಯ ಮರಗಳು, 300 ರೀತಿಯ ಪಕ್ಷಿಗಳು, ವಿಶೇಷವಾಗಿ ವಿನಾಶದ ಅಂಚಿನಲ್ಲಿರುವ ಹುಲಿಗಳು, ಚಿರತೆ, ಆನೆ, ಕೃಷ್ಣಮೃಗ, ಮುಂತಾದ 70ಕ್ಕೂ ಅಧಿಕ ಜಾತಿಯ ಪ್ರಾಣಿಗಳು ಇಲ್ಲಿವೆ. ಇಂತಹ ಜೀವ ವೈವಿಧ್ಯತೆಯ ತಾಣಕ್ಕೆ ಈಗ ಗಂಡಾಂತರ ಬಂದೊದಗಿದೆ. ಅದೇನೆಂದರೆ ನಲ್ಲಮಲ ಕಾಡಿನಲ್ಲಿ ಯುರೇನಿಯಂ ಇದೆಯೆಂದು ಕೆಲವು ಸಂಶೋಧನೆಗಳಿಂದ ತಿಳಿದು ಬಂದಿದ್ದು, ಇಲ್ಲಿ ಕೇಂದ್ರ ಸರ್ಕಾರ ರಾಜ್ಯಸರ್ಕಾರದ ಸಹಕಾರದೊಂದಿಗೆ ಯುರೇನಿಯಂ ಗಣಿಗಾರಿಕೆಯನ್ನು ಪ್ರಾರಂಭಿಸಲು ಸಿದ್ಧತೆ ನಡೆಸಿದೆ.
ಜಗತ್ತನ್ನೆ ನಾಶ ಮಾಡಲು ಶಕ್ತಿಯುಳ್ಳ ಅಣು ಬಾಂಬ್ ತಯಾರಿಕೆಯಲ್ಲಿ ಬಳಸುವ ‘ಯುರೇನಿಯಂ’ ನಲ್ಲಮಲ ಕಾಡಿನಲ್ಲಿ ಸಿಗಲಿದೆ ಎಂದಿದ್ದೆ ತಡ ಹಿಂದೆ ಮುಂದೆ ನೋಡದೆ ಕೇಂದ್ರ ಮತ್ತು ತೆಲಂಗಾಣ ರಾಜ್ಯ ಸರ್ಕಾರ ಕಾಡನ್ನು ಬಗೆಯಲು ವಿವೇಚನ ರಹಿತವಾಗಿ ಹೊರಟಿವೆ. ಇದನ್ನು ಸ್ಥಳೀಯ ಜನಪರ ಹೋರಾಟಗಾರರು ಮತ್ತು ಪ್ರಜ್ಞಾವಂತರು ತೀವ್ರವಾಗಿ ಖಂಡಿಸುತ್ತಿದ್ದಾರೆ. ರಾಜ್ಯ ಸರ್ಕಾರ ಸ್ವಲ್ಫ ಹಿಂದೇಟು ಹಾಕುತ್ತಿದ್ದರು ಸಹ ಕೇಂದ್ರ ಸರ್ಕಾರ ಸ್ಥಳೀಯ ಗ್ರಾಮಪಂಚಾಯಿತಿಯ ಅನುಮತಿ ಪಡೆಯದೆ ‘ಯುರೇನಿಯಂ ಕಾರ್ಪೋರೇಷನ್’ (ಯು.ಸಿ.ಎಲ್) ಗೆ ಅನುಮತಿ ನೀಡಿ ಗಣಿಗಾರಿಕೆ ಶುರು ಮಾಡುವ ಆತುರದಲ್ಲಿದೆ. ಮೇಲ್ನೋಟಕ್ಕೆ ಇದನ್ನು ವಿರೋಧಿಸುವಂತೆ ಮಾತನಾಡುವ ತೆಲಂಗಾಣದ ಮುಖ್ಯಮಂತ್ರಿ ಕೆ.ಸಿ.ಆರ್ ಸರ್ಕಾರ, ಕೇಂದ್ರ ಸರ್ಕಾರ ಮಾಡುತ್ತಿರುವ ಕೆಲಸಕ್ಕೆ ಯಾವುದೇ ವಿರೋಧ ವ್ಯಕ್ತಪಡಿಸುತ್ತಿಲ್ಲ.
ಯುರೇನಿಯಂನ್ನು ಇತ್ತಿಚಿಗೆ ಅಣು ವಿದ್ಯುತ್ ಉತ್ಪಾದನೆಗೂ ಬಳಸುತ್ತಾರೆ. ಇದು ಬಹಳ ಅಪಾಯಕಾರಿಯಾದ ಖನಿಜವಾಗಿದೆ. ಇದನ್ನು ಸರಿಯಾಗಿ ನಿವರ್ಹಣೆ ಮಾಡದೆ ಹೋದರೆ ಈ ಗಣಿಗಾರಿಕೆ ನಡೆಯುವ ಸುತ್ತಲಿನ ಪ್ರದೇಶ ವಿಷಮಯವಾಗುವ ಎಲ್ಲಾ ಸಾಧ್ಯತೆ ಇದೆ. ಯುರೇನಿಯಂನ್ನು ಇಂಧನವಾಗಿ ಬಳಸುವ ಅಣು ವಿದ್ಯುತ್ ಕೇಂದ್ರಗಳು ಅವಘಡಗಳಾಗಿ ಸ್ಫೋಟಗಳ್ಳದೆ ಇರುವ ಸಮಯದಲ್ಲೂ ಸಹ ಅಣು ವಿದ್ಯುತ್ ಕೇಂದ್ರದ ಮೂಲಕ ಅಲ್ಫಾ, ಬೀಟಾ, ಗಾಮಾ ವಿಕಿರಣಗಳು ಹೋರಸೂಸುತ್ತಲೇ ಇರುತ್ತವೆ. ಕ್ಯಾನ್ಸರ್ ಮತ್ತು ತಲೆಮಾರುಗಳವರೆಗೂ ವಿವಿಧ ಅಂಗ ವೈಕಲ್ಯ ಸೃಷ್ಟಿಸುವ ಅಪಾಯ ಇದರಿಂದಾಗುತ್ತದೆ.
ಇಪ್ಪತ್ತು ಮೂವತ್ತು ವರ್ಷ ಮಾತ್ರ ಇರುವ ಯುರೇನಿಯಂ ಅನ್ನು ಬಳಸಬಹುದು ನಂತರ ಅವು ಕೆಲಸಕ್ಕೆ ಬರೆದೆ ಹೋಗುತ್ತವೆ. ತದ ನಂತರವು ಅವು ಹೊರ ಸೂಸುವ ಕಿರಣಗಳಿಂದ ಅತ್ಯಂತ ಘೋರವಾದ ಪರಿಸರ ಮತ್ತು ಜೀವ ನಾಶವಾಗಲಿದೆ. ಇದೇ ಭಾಗದಲ್ಲಿ ಕೃಷ್ಣಾನದಿ, ಶ್ರೀ ಶೈಲಂ, ನಾಗಾರ್ಜುನ ಸಾಗರ ಜಲಾಶಯಗಳು ಇವೆ. ಇಲ್ಲಿಂದ ಕುಡಿಯಲು ಮತ್ತು ಬೆಳೆಯಲು ಈ ನೀರನ್ನು ಬಳಸುವುದರಿಂದ ಸ್ವಲ್ಫ ಹೆಚ್ಚುಕಮ್ಮಿ ಆದರೂ ಸಹ ವಿಕಿರಣಗಳು ಈ ನೀರಿನಲ್ಲಿ ಸೇರಿದರೆ ಜನಸಾಮಾನ್ಯರು ಮತ್ತು ಜೀವ ಸಂಕುಲಕ್ಕೆ ಕುತ್ತು ಬರಲಿದೆ.
ಈಗ ಸರ್ಕಾರದ ಮುಂದೆ ಇರುವ ಪ್ರಶ್ನೆ ಅಪಾಯಕಾರಿ ಖನಿಜವನ್ನು ಬಳಸಿ ವಿದ್ಯುತ್ ಉತ್ಫಾದನೆ ಮಾಡುವ ಅವಶ್ಯಕತೆಯಾದರೂ ಎನಿದೆ? ಈಗಾಗಲೆ ನಮ್ಮಲ್ಲಿ ಸೌರ ಮತ್ತು ಪವನ ವಿದ್ಯುತ್ ಅತ್ಯಂತ ಯಶಸ್ವಿಯಾಗಿ ಉತ್ಫಾದನೆ ಮಾಡಲಾಗುತ್ತಿದೆ. ಇಂತಹ ಮರುಬಳಕೆಯ ಸಂಪನ್ಮೂಲವನ್ನು ಬಳಸಿ ವಿದ್ಯುತ್ ಉತ್ಫಾದನೆ ಮಾಡುವುದನ್ನು ಬಿಟ್ಟು ಯುರೇನಿಯಂನ್ನು ಬಳಸಿ ಅಣು ವಿದ್ಯುತ್ ಅನ್ನೇ ಉತ್ಫಾದಿಸುತ್ತೆವೆ ಎಂಬ ಸರ್ಕಾರದ ಹುನ್ನಾರವೇನು? ಇದು ಬರಿ ಅಣು ವಿದ್ಯುತ್‌ಗೆ ನಿಲ್ಲದೇ ಅಣುಬಾಂಬ್ ತಯಾರಿಕೆಯವರೆಗೂ ವಿಸ್ತರಿಸುವ ಸಾಧ್ಯತೆ ಹೆಚ್ಚಿದೆ. ಈ ರೀತಿಯ ನಡೆಗಳು ಮುಂದುವರೆದ ದೇಶಗಳೆನಿಸಿಕೊಂಡ ಅಮೆರಿಕಾ, ಕೆನಡಾ, ಇಂಗ್ಲೆಂಡ್, ಫ್ರಾನ್ಸ್ ಮುಂತಾದ ದೇಶಗಳ ಪ್ರಯತ್ನಗಳ ವಿರುದ್ಧ ಅಲ್ಲಿನ ಜನಸಾಮಾನ್ಯರು ಬೃಹತ್‍ಮಟ್ಟದ ಹೋರಾಟಗಳನ್ನು ಮಾಡಿ ಬೀದಿಯಲ್ಲಿ ಪ್ರತಿಭಟಿಸಿದ್ದಾರೆ.
ಇಪ್ಪತ್ತು ಸಾವಿರ ಟನ್ನುನಷ್ಟು ಯುರೇನಿಯಂ ಇರಬಹುದೆಂದು ಅಂದಾಜು ಮಾಡಲಾಗಿದೆ. ಇದನ್ನು ತೆಗೆಯಲು ಅನುಕೂಲವಾಗುವಂತೆ ಸುಮಾರು ನಾಲ್ಕು ಸಾವಿರ ಬೋರ್‍ವೆಲ್‍ಗಳನ್ನು ಕೊರೆಯಬೇಕಾಗುತ್ತದೆ ಎನ್ನಲಾಗುತ್ತಿದೆ. 2030ರ ಹೊತ್ತಿಗೆ 40ಸಾವಿರ ಮೆಗಾವ್ಯಾಟ್‌ಗಳ ಅಣುವಿದ್ಯುತ್ ಉತ್ಫಾದನೆ ಮಾಡಬೇಕೆಂಬ ಗುರಿ ಇಟ್ಟುಕೊಳ್ಳಲಾಗಿದ್ದು, ಸರ್ಕಾರ ಮಾಡುತ್ತಿರುವ ಆತುರಕ್ಕೆ ಬಹುರಾಷ್ಟ್ರಿಯ ಕಂಪನಿಗೆಳ ಒತ್ತಡ ಕಾರಣವಾಗಿದೆ ಎಂದು ಕೆಲವು ಜನಪರ ಚಿಂತಕರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಮಧ್ಯೆ ರಾಜ್ಯ ಸಚಿವ ಕೆಟಿಆರ್ ಸಂಪುಟದಲ್ಲಿ ‘ನಲ್ಲಮಲ’ ಯರೇನಿಯಂ ಗಣಿ ಯೋಜನೆಗೆ ವಿರುದ್ಧವಾಗಿ ಬಿಲ್ ಮಂಡಿಸಿದ್ದಾರೆ. ಮತ್ತು ಸಿನೆಮಾ ನಿರ್ದೇಶಕ ಪೂರಿ ಜಗನ್ನಾತ್, ನಟ ಪವನ್ ಕಲ್ಯಾಣ್, ವಿಜಯ್ ದೇವರಕೊಂಡ, ನಟಿ ಸಮಂತ ಮತ್ತಿತರರು ಕೂಡ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಯೋಜನೆಯನ್ನು ವಿರೋಧಿಸಿ ಆಕ್ರೋಶ ವ್ಯಕ್ತಪಡಿಸಿದ್ಧಾರೆ. ಈ ಟ್ವಿಟ್ಟರ್ ಅಭಿಯಾನವನ್ನು ಡಿವೈಎಫ್‍ಐ ಸಂಘಟನೆ ಫ್ರಾರಂಬಿಸಿದ್ದು ಟ್ರೆಂಡ್ ಆಗಿತ್ತು.
ಬೆಲ್ಲ ಇದ್ದ ಕಡೆ ಇರುವೆಯ ಜಾಡು ಮೂಡುವ ಹಾಗೆ ಬಹುರಾಷ್ಟ್ರೀಯ ಕಂಪನಿಗಳು ಸದಾ ನೈಸರ್ಗಿಕ ಸಂಪನ್ಮೂಲಗಳಿರುವ ಕಡೆ ಕಣ್ಣು ಹಾಕಿರುತ್ತಾರೆ. ಅವರಿಗೆ ಪೂರಕವಾದ ಸರ್ಕಾರಗಳಿದ್ದರಂತು ಮುಗಿದೆ ಹೋಯಿತು. ಕಡಿಮೆ ಸಮಯದಲ್ಲಿ ಹೆಚ್ಚು ತಿಂದು ತೇಗಲು ಬೇಕಾದ ವಾತಾವರಣ ರೂಪಿಸಿಕೊಂಡು ಕಾರ್ಯಕ್ಕಿಳಿಯುತ್ತವೆ. ಇತ್ತಿಚಿಗೆ ಅಮೇಜಾನ್ ಕಾಡು ಮನುಷ್ಯನ ದುರಂಹಾಕರಕ್ಕೆ ಹೊತ್ತಿ ಉರಿದ ಹಾಗೆ ನಲ್ಲಮಲ ಕಾಡು ಮನುಷ್ಯನ ದುರಾಸೆಗೆ ಬಲಿಯಾಗದೆ ಇರಲಿ. ಅಲ್ಲಿನ ಮೂಲ ನಿವಾಸಿಗಳಾದ ‘ಚೆಂಚು’, ’ಕೋಯಾ’ ಬುಡಕಟ್ಟು ಜನಾಂಗಗಳು ಇದುವರೆಗೂ ಆ ಕಾಡನ್ನು ನಾಶವಾಗದೆ ಕಾಪಾಡಿಕೊಂಡು ಬಂದಿದ್ಧಾರೆ. ಸರ್ಕಾರದ ಈ ಆತುರದ ತೀರ್ಮಾನಗಳಿಂದ ಈ ಜನಾಂಗ ನಾಶವಾಗದಂತೆ ಕಪಾಡಿಕೊಳ್ಳಬೇಕಾಗಿದೆ.
ಅದಕ್ಕಾಗಿ ನಲ್ಲಮಲ್ಲ ಕಾಡು ಉಳಿಸಲು ನಡೆಸುತ್ತಿರುವ ಹೋರಾಟ ಮತ್ತಷ್ಟು ದೃಢಗೊಳ್ಳಬೇಕಿದೆ. ಬೀದಿಯಲ್ಲಿ ನಡೆಯುವ ಹೋರಾಟಕ್ಕೆ ಸಿನಿಮಾ ತಾರೆಯರು ಜೊತೆಗೂಡಬೇಕಿದೆ ಮತ್ತು ನಾವೆಲ್ಲರೂ ಬೆಂಬಲಿಸಬೇಕಿದೆ.


