Homeಮುಖಪುಟಕ್ಯಾನ್ಸರ್ ಗುಣವಾಗುತ್ತೆಂದು ಗಂಗಾ ನದಿಯಲ್ಲಿ ಮುಳುಗಿಸಿದ ಪೋಷಕರು: 5 ವರ್ಷದ ಬಾಲಕ ಸಾವು

ಕ್ಯಾನ್ಸರ್ ಗುಣವಾಗುತ್ತೆಂದು ಗಂಗಾ ನದಿಯಲ್ಲಿ ಮುಳುಗಿಸಿದ ಪೋಷಕರು: 5 ವರ್ಷದ ಬಾಲಕ ಸಾವು

- Advertisement -
- Advertisement -

ಉತ್ತರಾಖಂಡದ ಹರಿದ್ವಾರದಲ್ಲಿ ಪೋಷಕರ ಮೌಢ್ಯಕ್ಕೆ ಐದು ವರ್ಷದ ಮಗುವೊಂದು ಬಲಿಯಾಗಿದೆ. ರಕ್ತ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮಗುವನ್ನು ಗಂಗಾ ನದಿಯಲ್ಲಿ ಮುಳುಗಿಸಿದರೆ ರೋಗ ಗುಣವಾಗುತ್ತದೆ ಎಂದು ನಂಬಿದ ಪೋಷಕರು ಮಗುವನ್ನು ನದಿಯಲ್ಲಿ ಮುಳುಗಿಸಿದ್ದು, ಮೃತಪಟ್ಟಿದೆ.

ದೆಹಲಿಯ ನಿವಾಸಿಯಾದ ಬಾಲಕನಿಗೆ ಕ್ಯಾನ್ಸರ್‌ ರೋಗ ಉಲ್ಬಣಗೊಂಡಿತ್ತು. ವೈದ್ಯರು ಮಗು ಬದುಕುವ ಸಾಧ್ಯತೆ ಇಲ್ಲ ಎಂದಿದ್ದರು. ಈ ನಡುವೆ ಗಂಗೆಯಲ್ಲಿ ಮುಳುಗಿಸಿದರೆ ರೋಗ ಗುಣವಾಗುತ್ತದೆ ಎಂದು ಯಾರದ್ದೋ ಮೌಢ್ಯದ ಮಾತು ನಂಬಿ ಪೋಷಕರು ಹರಿದ್ವಾರಕ್ಕೆ ತೆರಳಿದ್ದರು. ಅಲ್ಲಿ ಮಗುವನ್ನು ಗಂಗಾ ನದಿಯಲ್ಲಿ ಮುಳುಗಿಸಿ ಹತ್ಯೆಗೈದಿದ್ದಾರೆ. ಮಗುವಿನ ಜೊತೆ ಪೋಷಕರು ಮತ್ತು ಇನ್ನೊಬ್ಬ ಮಹಿಳೆ ಇದ್ದರು. ಆಕೆ ಮಗುವಿನ ಚಿಕ್ಕಮ್ಮ ಎನ್ನಲಾಗಿದೆ.

ಪೋಷಕರು ಮತ್ತು ಚಿಕ್ಕಮ್ಮ ಎನ್ನಲಾದ ಮಹಿಳೆ ಹರಿದ್ವಾರದ ಹರ್ ಕಿ ಪೌರಿ ಘಾಟ್‌ನಲ್ಲಿ ಮಗುವನ್ನು ಗಂಗಾ ನದಿಯಲ್ಲಿ ತುಂಬಾ ಹೊತ್ತು ಮುಳುಗಿಸಿ ಹಿಡಿದಿರುವುದನ್ನು ಕಂಡು ಅಲ್ಲಿದ್ದ ಜನರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಗುವನ್ನು ಮೇಲೆತ್ತುವಂತೆ ಹೇಳಿದ್ದಾರೆ. ಆದರೆ, ಚಿಕ್ಕಮ್ಮ ಎನ್ನಲಾದ ಮಹಿಳೆ ವಿರೋಧ ವ್ಯಕ್ತಪಡಿಸಿದ್ದಾಳೆ. ಕೊನೆಗೆ ವ್ಯಕ್ತಿಯೊಬ್ಬರು ಮಗುವನ್ನು ಮೇಲೆತ್ತಿದ್ದಾರೆ. ಈ ವೇಳೆ ಆ ಮಹಿಳೆ ಅಡ್ಡಿಪಡಿಸಿದ್ದಾಳೆ. ಆದರೂ, ಸುತ್ತಮುತ್ತಲಿದ್ದವರು ಮಗುವನ್ನು ನೀರಿನಿಂದ ಮೇಲೆತ್ತಿದ್ದಾರೆ. ಅಷ್ಟೊತ್ತಿಗೆ ಮಗು ಸಂಪೂರ್ಣ ಬಳಲಿತ್ತು. ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ ಮಗು ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ವರದಿಗಳು ಹೇಳಿವೆ. ಈ ಕುರಿತ ವಿಡಿಯೋ ಲಭ್ಯವಾಗಿದೆ.

ಮತ್ತೊಂದು ವಿಡಿಯೋದಲ್ಲಿ ಮಗುವಿನ ಮೃತದೇಹದ ಮುಂದೆ ಕುಳಿತ ಮಹಿಳೆ ದೇಹಕ್ಕೆ ದೇವರು ಬಂದಂತೆ ಆಡುತ್ತಿರುವುದು ನೋಡಬಹುದು. ಈಕೆ ಇನ್ನೂ ಮಗು ಬದುಕಿ ಬರುತ್ತದೆ ಎಂಬ ಭರವಸೆಯಲ್ಲಿದ್ದಾರೆ ಎಂದು ಎನ್‌ಡಿವಿ ವರದಿ ಮಾಡಿದೆ.

ಕ್ಯಾನ್ಸರ್‌ನಿಂದ ಬಳಲುತ್ತಿದ್ದ ದೆಹಲಿಯ ಬಾಲಕನನ್ನು ರೋಗ ಗುಣವಾಗುತ್ತದೆ ಎಂಬ ನಂಬಿಕೆಯಲ್ಲಿ ಇಲ್ಲಿಗೆ ತಂದು ಗಂಗೆಯಲ್ಲಿ ಮುಳುಗಿಸಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ನಾವು ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದು ಹರಿದ್ವಾರ ನಗರ ಪೊಲೀಸ್ ಠಾಣೆಯ ಮುಖ್ಯಸ್ಥ ಸ್ವತಂತ್ರ ಕುಮಾರ್ ತಿಳಿಸಿದ್ದಾರೆ.

ಬಾಲಕನ ಪೋಷಕರು ಮತ್ತು ಆತನ ಚಿಕ್ಕಮ್ಮನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಕೌಟುಂಬಿಕ ಪ್ರಕರಣ: ಮನುಸ್ಮೃತಿ ಉಲ್ಲೇಖಿಸಿ ತೀರ್ಪು ನೀಡಿದ ಜಾರ್ಖಂಡ್ ಹೈಕೋರ್ಟ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read