ಕಾಂಗ್ರೆಸ್‌ನ ಭಾರತ್ ಜೋಡೋ ನ್ಯಾಯ ಯಾತ್ರೆ ಇಂದು ಮತ್ತೆ ಪ.ಬಂಗಾಳವನ್ನು ಪ್ರವೇಶಿಸಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂಚರಿಸುತ್ತಿದ್ದ ಕಾರಿನ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿರುವ ಘಟನೆ ಪ.ಬಂಗಾಳಲ್ಲಿ ನಡೆದಿದೆ.
ರಾಹುಲ್ ಗಾಂಧಿ ಬುಧವಾರ ಬಿಹಾರದ ಕತಿಹಾರ್ ಜಿಲ್ಲೆಯಲ್ಲಿ ರೋಡ್ ಶೋ ಮೂಲಕ ಭಾರತ್ ಜೋಡೋ ನ್ಯಾಯ್ ಯಾತ್ರೆಯನ್ನು ಪುನರಾರಂಭಿಸಿದರು. ಮಾಲ್ಡಾ ಜಿಲ್ಲೆಯ ದೇಬಿಪುರ, ರತುವಾ ಮೂಲಕ ಯಾತ್ರೆ ಮತ್ತೆ ಬಂಗಾಳವನ್ನು ಪ್ರವೇಶಿಸಿತ್ತು. ಬಂಗಾಳದಲ್ಲಿ ಮೊದಲ ಹಂತದ ಯಾತ್ರೆ ಸೋಮವಾರ ಮುಕ್ತಾಯಗೊಂಡಿತ್ತು.
ಪ.ಬಂಗಾಳ ಕಾಂಗ್ರೆಸ್ ಘಟಕದ ಮುಖ್ಯಸ್ಥ ಅಧೀರ್ ರಂಜನ್ ಚೌಧುರಿ ಪ್ರಕಾರ, ಯಾತ್ರೆ ಬಿಹಾರದಿಂದ ಪಶ್ಚಿಮ ಬಂಗಾಳಕ್ಕೆ ಮರು ಪ್ರವೇಶಿಸುತ್ತಿದ್ದಂತೆ ಮಾಲ್ಡಾದ ಹರಿಶ್ಚಂದ್ರಪುರ ಪ್ರದೇಶದಲ್ಲಿ ದಾಳಿ ನಡೆದಿದೆ. ರಾಹುಲ್ ಗಾಂಧಿ ಸಂಚರಿಸುತ್ತಿದ್ದ ಕಾರಿನ ಮೇಲೆ ಕಲ್ಲುಗಳನ್ನು ಎಸೆಯಲಾಗಿದೆ. ದಾಳಿಯಿಂದ ವಾಹನದ ಹಿಂಬದಿಯ ಗಾಜು ಪುಡಿಪುಡಿಯಾಗಿದೆ. ರಾಹುಲ್ ಗಾಂಧಿಗೆ ಯಾವುದೇ ಗಾಯಗಳಾಗಿಲ್ಲ, ಆದರೆ ಇದು ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಘಟನೆ ಬಳಿಕ ಕಾರಿನಿಂದ ಇಳಿದು ಹಾನಿಗೊಳಗಾದ ವಿಂಡ್‌ಸ್ಕ್ರೀನ್‌ನ್ನು ವೀಕ್ಷಿಸುತ್ತಿರುವ ದೃಶ್ಯದ ವಿಡಿಯೋ ವೈರಲ್ ಆಗಿದೆ. ರಾಹುಲ್ ಗಾಂಧಿ ಕಾರಿನಲ್ಲಿ ಕುಳಿತಿದ್ದು, ರಸ್ತೆಯುದ್ದಕ್ಕೂ ನೆರೆದಿದ್ದ ಉತ್ಸಾಹಿ ಜನಸಮೂಹದತ್ತ ಕೈಬೀಸುತ್ತ ನಿಧಾನವಾಗಿ ಕಾರು ಚಲಿಸುತ್ತಿತ್ತು. ಈ ವೇಳೆ ಘಟನೆ ನಡೆದಿದೆ ಎನ್ನಲಾಗಿದೆ.
ನಮ್ಮ ಕಾರಿನ ವಿಂಡ್ ಶೀಲ್ಡ್ ಮುರಿದುಹೋಗಿದೆ ಆದರೆ ನಮ್ಮ ಯಾತ್ರೆಗೆ ಅಡ್ಡಿಯಾಗುವುದಿಲ್ಲ. INDIA ಮೈತ್ರಿಯು ಎಂದಿಗೂ ತಲೆಬಾಗುವುದಿಲ್ಲ. INDIA ಬಣವನ್ನು ಬಲಪಡಿಸುವುದು ನಮ್ಮ ಗುರಿ ಎಂದು ಬಂಗಾಳದ ಮುಖ್ಯಮಂತ್ರಿ ಹೇಳಿರುವುದನ್ನು ನಾನು ನೆನಪಿಸುತ್ತೇನೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ.
ಕಳೆದ ವಾರ ಕೂಚ್ ಬೆಹಾರ್ ಪಟ್ಟಣದಲ್ಲಿ ರಾಹುಲ್ ಗಾಂಧಿಯನ್ನು ಸ್ವಾಗತಿಸುವ ಪೋಸ್ಟರ್‌ಗಳು ಮತ್ತು ಬ್ಯಾನರ್‌ಗಳನ್ನು ಹರಿದು ಹಾಕಲಾಗಿತ್ತು. ರಾಜ್ಯ ಅತಿಥಿ ಗೃಹದಲ್ಲಿ ರಾಹುಲ್ ಗಾಂಧಿ ಅವರಿಗೆ ಆತಿಥ್ಯ ನೀಡಲು ರಾಜ್ಯ ಕಾಂಗ್ರೆಸ್‌ಗೆ ರಾಜ್ಯ ಸರ್ಕಾರ ಅನುಮತಿ ನಿರಾಕರಿಸಿದೆ ಎಂದು ಆರೋಪಿಸಲಾಗಿತ್ತು.
ಭಾರತ್ ಜೋಡೋ ನ್ಯಾಯ ಯಾತ್ರೆಯು ಇದುವರೆಗೆ ಪಶ್ಚಿಮ ಬಂಗಾಳದ 6 ಜಿಲ್ಲೆಗಳಲ್ಲಿ 523ಕಿ.ಮೀ ಕ್ರಮಿಸಿದ್ದು, ಯಾತ್ರೆಯು ಡಾರ್ಜಿಲಿಂಗ್, ಜಲ್ಪೈಗುರಿ, ಅಲಿಪುರ್ದೌರ್ ಮತ್ತು ಉತ್ತರ ದಿನಾಜ್‌ಪುರದಲ್ಲಿ ಕ್ರಮಿಸಿದೆ. ಮಾಲ್ಡಾ ಮತ್ತು ಮುರ್ಷಿದಾಬಾದ್‌ನೊಂದಿಗೆ ಎರಡನೇ ಹಂತದಲ್ಲಿ ಯಾತ್ರೆಯನ್ನು ನಡೆಸಲಾಗುವುದು ಎಂದು ಪಕ್ಷದ ಮುಖಂಡರು ತಿಳಿಸಿದ್ದರು.
ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಉತ್ತರ ಬಂಗಾಳದ ಮೂಲಕ ಯಾತ್ರೆಯು ಸಾಗಿದೆ. ರಾಹುಲ್ ಗಾಂಧಿ ಯಾತ್ರೆಯ ಮಾರ್ಗದುದ್ದಕ್ಕೂ ಸ್ಥಳೀಯರೊಂದಿಗೆ ಸಂವಾದ ನಡೆಸಿದ್ದಾರೆ.
ಅಸ್ಸಾಂ ಮತ್ತು ಮಣಿಪುರದಂತಹ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಕಾಂಗ್ರೆಸ್ ಎದುರಿಸಿದ ಅಡೆತಡೆಗಳನ್ನು ಟಿಎಂಸಿ ಆಡಳಿತವಿರುವ ಬಂಗಾಳದ ಜಲ್ಪೈಗುರಿ, ಮಾಲ್ಡಾ ಮತ್ತು ಮುರ್ಷಿದಾಬಾದ್ ಜಿಲ್ಲೆಗಳಲ್ಲಿ ಸಾರ್ವಜನಿಕ ಸಭೆಗಳು ಮತ್ತು ವಸತಿ ವ್ಯವಸ್ಥೆಗಳಿಗೆ ಅನುಮತಿ ಪಡೆಯುವಾಗ ಎದುರಿಸಿದೆ.
ಜನವರಿ 14ರಂದು ಮಣಿಪುರದಲ್ಲಿ ಪ್ರಾರಂಭವಾದ ‘ಭಾರತ್ ಜೋಡೋ ನ್ಯಾಯ ಯಾತ್ರೆ’ 67 ದಿನಗಳಲ್ಲಿ 6,713ಕಿ.ಮೀ ಕ್ರಮಿಸಲಿದ್ದು, 15 ರಾಜ್ಯಗಳ 110 ಜಿಲ್ಲೆಗಳ ಮೂಲಕ ಹಾದುಹೋಗಿ ಮಾ.20ರಂದು ಮುಂಬೈನಲ್ಲಿ ಮುಕ್ತಾಯಗೊಳ್ಳಲಿದೆ.
ಇದನ್ನು ಓದಿ: ದೇವಾಲಯಕ್ಕೆ ಹಿಂದೂಯೇತರರಿಗೆ ಪ್ರವೇಶ ನಿರಾಕರಿಸಿದ ಮದ್ರಾಸ್ ಹೈಕೋರ್ಟ್


