Homeಮುಖಪುಟದೇವಾಲಯಕ್ಕೆ ಹಿಂದೂಯೇತರರಿಗೆ ಪ್ರವೇಶ ನಿರಾಕರಿಸಿದ ಮದ್ರಾಸ್ ಹೈಕೋರ್ಟ್

ದೇವಾಲಯಕ್ಕೆ ಹಿಂದೂಯೇತರರಿಗೆ ಪ್ರವೇಶ ನಿರಾಕರಿಸಿದ ಮದ್ರಾಸ್ ಹೈಕೋರ್ಟ್

- Advertisement -
- Advertisement -

ದೇವಾಲಯಗಳಲ್ಲಿ ‘ಕೋಡಿಮಾರಂ’ (ಧ್ವಜಸ್ತಂಭ) ಪ್ರದೇಶದಿಂದ ಆಚೆಗೆ ಹಿಂದೂಯೇತರರಿಗೆ ಅನುಮತಿ ಇಲ್ಲ ಎಂಬ ಬೋರ್ಡ್‌ಗಳನ್ನು ಎಲ್ಲಾ ಹಿಂದೂ ದೇವಾಲಯಗಳಲ್ಲಿ ಅಳವಡಿಸುವಂತೆ ಮದ್ರಾಸ್ ಹೈಕೋರ್ಟ್ ತಮಿಳುನಾಡು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಗೆ ನಿರ್ದೇಶನ ನೀಡಿದ್ದು, ಹಿಂದೂಗಳಿಗೆ ಕೂಡ ಧರ್ಮವನ್ನು ಆಚರಿಸುವ ಮೂಲಭೂತ ಹಕ್ಕು ಇದೆ ಎಂದು ಹೇಳಿದೆ.

ಅರುಲ್ಮಿಗು ಪಳನಿ ದಂಡಾಯುತಪಾಣಿ ಸ್ವಾಮಿ ದೇವಸ್ಥಾನ ಮತ್ತು ಅದರ ಉಪ ದೇವಾಲಯಗಳಿಗೆ ಹಿಂದೂಗಳಿಗೆ ಮಾತ್ರ ಅನುಮತಿ ನೀಡುವಂತೆ ಪ್ರತಿವಾದಿಗಳಿಗೆ ನಿರ್ದೇಶನ ನೀಡುವಂತೆ ಕೋರಿ ಡಿ ಸೆಂಥಿಲ್‌ಕುಮಾರ್ ಸಲ್ಲಿಸಿದ್ದ ಮನವಿಯನ್ನು ಆಲಿಸಿದ ಹೈಕೋರ್ಟ್‌ನ ಮಧುರೈ ಪೀಠದ ನ್ಯಾಯಮೂರ್ತಿ ಎಸ್ ಶ್ರೀಮತಿ ಈ ತೀರ್ಪು ನೀಡಿದ್ದಾರೆ. ಅರ್ಜಿದಾರರು ಎಲ್ಲಾ ಪ್ರವೇಶ ದ್ವಾರಗಳಲ್ಲಿ ಆ ನಿಟ್ಟಿನಲ್ಲಿ ಬೋರ್ಡ್‌ಗಳನ್ನು ಅಳವಡಿಸುವಂತೆ ಕೂಡ ಆಗ್ರಹಿಸಿದ್ದರು.

ದಿಂಡಿಗಲ್ ಜಿಲ್ಲೆಯ ಪಳನಿಯಲ್ಲಿ ಮುರುಗನ್ ದೇವಾಲಯವಿದೆ. ತಮಿಳುನಾಡು ಸರ್ಕಾರದ ಪರವಾಗಿ ಪ್ರಧಾನ ಕಾರ್ಯದರ್ಶಿ, ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ಧಾರ್ಮಿಕ ದತ್ತಿ ಇಲಾಖೆ, ಆಯುಕ್ತರು, ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ಮತ್ತು ಪಳನಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಪ್ರತಿವಾದಿಗಳಾಗಿದ್ದರು.

ಈ ಕುರಿತ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯ, ದೇವಸ್ಥಾನಗಳ ಪ್ರವೇಶ ದ್ವಾರ, ಧ್ವಜಸ್ತಂಭದ ಬಳಿ ಮತ್ತು ದೇಗುಲದ ಪ್ರಮುಖ ಸ್ಥಳಗಳಲ್ಲಿ ದೇವಸ್ಥಾನದೊಳಗೆ ಹಿಂದೂಯೇತರರಿಗೆ ಪ್ರವೇಶವಿಲ್ಲ ಎಂಬ ಫಲಕಗಳನ್ನು ಅಳವಡಿಸುವಂತೆ ಪ್ರತಿವಾದಿಗಳಿಗೆ ಸೂಚಿಸಿದೆ.

ಹಿಂದೂ ಧರ್ಮದಲ್ಲಿ ನಂಬಿಕೆಯಿಲ್ಲದ ಹಿಂದೂಯೇತರರಿಗೆ ಅವಕಾಶ ನೀಡದಂತೆ ಪ್ರತಿವಾದಿಗಳಿಗೆ ನಿರ್ದೇಶಿಸಲಾಗಿದೆ. ಯಾವುದೇ ಹಿಂದೂ ಅಲ್ಲದವರು ದೇವಸ್ಥಾನಕ್ಕೆ ಭೇಟಿ ಮಾಡುವುದಾಗಿ ಹೇಳಿಕೊಂಡರೆ, ಅಂತಹ ವ್ಯಕ್ತಿಯಿಂದ ನನಗೆ ಹಿಂದೂ ಧರ್ಮದ ಪದ್ಧತಿ ಹಾಗೂ ಸಂಪ್ರದಾಯಗಳ ಬಗ್ಗೆ ನಂಬಿಕೆ ಇದೆ ಹಾಗೂ ಅದಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ಮುಚ್ಚಳಿಕೆ ಬರೆಸಬೇಕು ಎಂದೂ ನ್ಯಾಯಾಲಯವು ಸೂಚಿಸಿದೆ. ಅಂತಹ ವ್ಯಕ್ತಿಯನ್ನು ಅನುಮತಿಸಿದಾಗ ಅದನ್ನು ದೇವಸ್ಥಾನವು ನಿರ್ವಹಿಸುವ ರಿಜಿಸ್ಟರ್‌ನಲ್ಲಿ ನಮೂದಿಸಬೇಕು ಎಂದು ಕೋರ್ಟ್‌ ಹೇಳಿದೆ.

ಪ್ರತಿವಾದಿಗಳು ಸಲ್ಲಿಸಿದ ರಿಟ್ ಅರ್ಜಿಯನ್ನು ಪಳನಿ ದೇವಸ್ಥಾನಕ್ಕೆ ಮಾತ್ರ ಸಲ್ಲಿಸಲಾಗಿದೆ ಮತ್ತು ಆದೇಶವನ್ನು ಅದಕ್ಕೆ ಸೀಮಿತಗೊಳಿಸಬೇಕು, ಆದರೆ ಎತ್ತಿರುವ ವಿಷಯವು ದೊಡ್ಡ ವಿಷಯವಾಗಿದೆ ಮತ್ತು ಅದೇ ಎಲ್ಲಾ ಹಿಂದೂ ದೇವಾಲಯಗಳಿಗೆ ಅನ್ವಯಿಸಬೇಕು, ಸೂಚಿಸಲಾಗಿರುವ ಈ ನಿರ್ಬಂಧಗಳು ಸಮಾಜದಲ್ಲಿನ ವಿವಿಧ ಧರ್ಮಗಳ ನಡುವಿನ ಕೋಮು ಸೌಹಾರ್ದತೆ ಹಾಗೂ ಶಾಂತಿ ಉಳಿಯುವುದನ್ನು ಖಾತರಿ ಪಡಿಸಲಿವೆ. ಹೀಗಾಗಿ ರಾಜ್ಯ ಸರ್ಕಾರ, ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ, ಪ್ರತಿವಾದಿಗಳು ಹಾಗೂ ದೇವಾಲಯಗಳ ಆಡಳಿತದಲ್ಲಿ ಭಾಗಿಯಾಗಿರುವ ಎಲ್ಲರೂ ಈ ನಿರ್ದೇಶನವನ್ನು ಎಲ್ಲ ಹಿಂದೂ ದೇವಾಲಯಗಳಲ್ಲಿ ಪಾಲಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ಇತರ ಧರ್ಮಿಯರಿಗೆ ಸೇರಿದ ಜನರು ಅವರ ಧರ್ಮವನ್ನು ಆಚರಿಸಲು ಹಕ್ಕನ್ನು ಹೊಂದಿದ್ದಾರೆ.  ಅವರ ಧರ್ಮದ ಸಂಪ್ರದಾಯಗಳು ಮತ್ತು ಆಚರಣೆಗಳು ಮಧ್ಯಪ್ರವೇಶಿಸುವಂತಿಲ್ಲ ಮತ್ತು ಯಾವುದೇ ಹಸ್ತಕ್ಷೇಪವನ್ನು ಮಾಡುವಂತಿಲ್ಲ. ದೇವಾಲಯವು ವಿಹಾರ ಸ್ಥಳ ಅಥವಾ ಪ್ರವಾಸಿ ತಾಣವಲ್ಲ. ತಂಜಾವೂರಿನ ಅರುಲ್ಮಿಘು ಬ್ರಹದೀಶ್ವರ ದೇವಸ್ಥಾನಕ್ಕೆ ಇತರ ಧರ್ಮದ ಜನರು ದೇವಾಲಯದ ವಾಸ್ತುಶಿಲ್ಪಗಳನ್ನು ವೀಕ್ಷಿಸಲು ಬರುತ್ತಾರೆ. ವಾಸ್ತುಶಿಲ್ಪದ ಸ್ಮಾರಕಗಳನ್ನು ವೀಕ್ಷಿಸಲು ಬರುವ ಜನರು ಆವರಣವನ್ನು ವಿಹಾರ ಸ್ಥಳ ಅಥವಾ ಪ್ರವಾಸಿ ತಾಣವಾಗಿ ಬಳಸುವಂತಿಲ್ಲ ಮತ್ತು ದೇವಾಲಯಗಳ ಆವರಣವನ್ನು ಗೌರವದಿಂದ ಕಾಣಬೇಕು ಎಂದು ಹೇಳಿದೆ.

ಹಿಂದೂಯೇತರರು ದೇವಾಲಯಗಳಿಗೆ ಪ್ರವೇಶಿಸುತ್ತಿದ್ದಾರೆ ಎಂದು ಹೇಳಲಾದ ಘಟನೆಯೊಂದನ್ನು ಹೈಕೋರ್ಟ್ ಉಲ್ಲೇಖಿಸಿದೆ. ಅರುಲ್ಮಿಘು ಬ್ರಹದೀಶ್ವರ ದೇವಸ್ಥಾನದಲ್ಲಿ ಅನ್ಯ ಧರ್ಮದ ವ್ಯಕ್ತಿಗಳ ಗುಂಪೊಂದು ದೇವಸ್ಥಾನದ ಆವರಣವನ್ನು ಪಿಕ್ನಿಕ್ ಸ್ಪಾಟ್ ಎಂದು ಪರಿಗಣಿಸಿದೆ ಮತ್ತು ದೇವಾಲಯದ ಆವರಣದಲ್ಲಿ ಮಾಂಸಾಹಾರವನ್ನು ಸೇವಿಸಿದೆ ಎಂದು ಇತ್ತೀಚೆಗೆ ಪತ್ರಿಕೆಯೊಂದು ವರದಿ ಮಾಡಿದೆ. ಈ ಘಟನೆಗಳು ಸಂವಿಧಾನದ ಅಡಿಯಲ್ಲಿ ಹಿಂದೂಗಳಿಗೆ ಖಾತರಿಪಡಿಸಿದ ಮೂಲಭೂತ ಹಕ್ಕುಗಳಿಗೆ ಸಂಪೂರ್ಣವಾಗಿ ಅಡ್ಡಿಪಡಿಸುತ್ತಿವೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.

ಇದನ್ನು ಓದಿ: ಹಸಿವನ್ನು ‘ಯುದ್ಧ ಅಸ್ತ್ರ’ವನ್ನಾಗಿಸಿದ ಇಸ್ರೇಲ್‌: ಗಾಝಾದಲ್ಲಿ ಪರಿಸ್ಥಿತಿ ‘ನರಕಸದೃಶ’

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಂಡ್ಯ | ಹೆಣ್ಣು ಭ್ರೂಣ ಹತ್ಯೆ ಪ್ರಕರಣ : ಮತ್ತೆ ಮೂವರ ಬಂಧನ

0
ಮಂಡ್ಯ ಜಿಲ್ಲೆಯ ಪಾಂಡವಪುರ, ಬೆಳ್ಳೂರು, ಮೇಲುಕೋಟೆ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಭ್ರೂಣ ಪತ್ತೆ ಮತ್ತು ಹೆಣ್ಣು ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ರಾಮಕೃಷ್ಣ ಅಲಿಯಾಸ್...