ಜನಾಂಗೀಯ ಹಿಂಸಾಚಾರ ಪೀಡಿತ ಮಣಿಪುರದ ಚಂದೇಲ್ ಜಿಲ್ಲೆಯ ಸೊಕೊಮ್ ಗ್ರಾಮದಿಂದ ಕಳೆದ ವರ್ಷ ಮೇ ತಿಂಗಳಲ್ಲಿ ನಾಪತ್ತೆಯಾಗಿದ್ದ 17 ವರ್ಷದ ಬಾಲಕನ ಕೊಳೆತ ಶವವನ್ನು ಭದ್ರತಾ ಪಡೆಗಳು ಪತ್ತೆಹಚ್ಚಿವೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಮಂಗಳವಾರ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ವೈರಲ್ ಆದ ನಂತರ ಮೂರು ಗಂಟೆಗಳ ಸುದೀರ್ಘ ಹುಡುಕಾಟದ ನಂತರ ಎನ್ಗಾಂಗೊಮ್ ನೆವಿ ಅವರ ಮೃತದೇಹ ಪತ್ತೆಯಾಗಿದೆ ಎಂದು ಜನರು ತಿಳಿಸಿದ್ದಾರೆ. ವ್ಯಕ್ತಿಯ ಶಿರಚ್ಛೇದನ ಮಾಡಿರುವುದು ವೀಡಿಯೊದಲ್ಲಿ ಕಂಡುಬಂದಿದೆ.
“ದೇಹವನ್ನು ವಶಪಡಿಸಿಕೊಂಡ ಪ್ರದೇಶದಲ್ಲಿ ವೀಡಿಯೊ ಮಾಡಲಾಗಿದ್ದು, ಸ್ನಿಫರ್ ಶ್ವಾನ ಪಡೆ ಬಳಸಿಕೊಂಡು ಹುಡುಕಾಟ ನಡೆಸಲಾಯಿತು… ನಂತರ ದೇಹವನ್ನು ವಶಕ್ಕೆ ಪಡೆಯಲಾಗಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನೆವಿ ಅವರ ಕುಟುಂಬದವರು ಆತ ಧರಿಸಿದ್ದ ಬಟ್ಟೆಯ ಆಧಾರದ ಮೇಲೆ ಶವವನ್ನು ಗುರುತಿಸಿದ್ದಾರೆ. ಕಳೆದ ವರ್ಷ ಸುಗ್ನು ಮತ್ತು ಸೆರೋ ಗ್ರಾಮಗಳಲ್ಲಿ ಹಿಂಸಾಚಾರ ನಡೆದಾಗ ನೆವಿ ನಾಪತ್ತೆಯಾಗಿದ್ದರು. ಅವರ ಕುಟುಂಬ ಕಳೆದ ವರ್ಷ ಮೇ 31 ರಂದು ನಾಪತ್ತೆ ದೂರು ದಾಖಲಿಸಿದೆ. ನೆವಿ ಅವರ ಕುಟುಂಬವು ಕಳೆದ ವರ್ಷ ಜುಲೈ 30 ರಂದು ಅವರ ದೇಹದ ಸಾಂಕೇತಿಕ ಪ್ರತಿನಿಧಿಯಾಗಿ ಮರವನ್ನು ಬಳಸಿಕೊಂಡು ಅವರ ಅಂತಿಮ ವಿಧಿಗಳನ್ನು ನೆರವೇರಿಸಿತು.
ಇದಕ್ಕೂ ಮುನ್ನ ಹಲವು ಬಾರಿ ಬಾಲಕನಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗಿತ್ತಾದರೂ ಅಷ್ಟು ಸಮಯದವರೆಗೆ ಮೃತದೇಹ ಪತ್ತೆಯಾಗಿರಲಿಲ್ಲ. ಆತ ಸತ್ತನೆಂದು ಭಾವಿಸಿದ್ದ ಕುಟುಂಬದ ಸದಸ್ಯರು, ಸಾಂಪ್ರದಾಯಿಕ ಆಚರಣೆ ಭಾಗವಾಗಿ ಮೃತದೇಹದ ಸಾಂಕೇತಿಕ ಪ್ರಾತಿನಿಧ್ಯವಾಗಿ “ಪ್ಯಾಂಗಾಂಗ್” ಮರದ ಗಿಡವನ್ನು ಬಳಸಿಕೊಂಡು ಆತನ ಕೊನೆಯ ವಿಧಿವಿಧಾನ ಸಹ ಮುಗಿಸಿದ್ದರು.
ಆದರೆ, ಮಂಗಳವಾರ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಕೊಂದಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ. ಆ ವೈರಲ್ ವಿಡಿಯೋ ನೋಡಿದ ಕುಟುಂಬ ಸದಸ್ಯರು ಮತ್ತೆ ಸುಗ್ನು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ವರದಿಯ ಮೇರೆಗೆ ಬುಧವಾರ ಬೆಳಗ್ಗೆ 11.10 ರಿಂದ ವಿಧಿವಿಜ್ಞಾನ ತಂಡ, ಕೇಂದ್ರ ಪಡೆಗಳು, ಸಂತ್ರಸ್ತನ ಕುಟುಂಬ ಸದಸ್ಯರು ಮತ್ತು ಸ್ಥಳೀಯ ಜನರ ಸಮ್ಮುಖದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಯಿತು.
ವೈರಲ್ ವೀಡಿಯೊವನ್ನು ಆಧರಿಸಿ, ಎಲ್ಲಾ ಶಂಕಿತ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆಯನ್ನು ನಡೆಸಲಾಯಿತು ಮತ್ತು ಅಂತಿಮವಾಗಿ ಚಂದೇಲ್ ಜಿಲ್ಲೆಯ ಸೊಕೊಮ್ ಗ್ರಾಮದಲ್ಲಿ ನೆವಿಯ ಕೊಳೆತ ದೇಹವು ಪತ್ತೆಯಾಗಿದೆ.
ಕಳೆದ ವರ್ಷ ಮೇ ತಿಂಗಳಿನಿಂದ ಮಣಿಪುರದಲ್ಲಿ ಮೈತೇಯಿ ಮತ್ತು ಕುಕಿ-ಜೋ ಸಮುದಾಯಗಳ ನಡುವಿನ ಜನಾಂಗೀಯ ಹಿಂಸಾಚಾರದಲ್ಲಿ ಸುಮಾರು 200 ಜನರು ಸಾವನ್ನಪ್ಪಿದ್ದಾರೆ. ಸುಮಾರು 50,000 ಜನರು ಸ್ಥಳಾಂತರಗೊಂಡಿದ್ದು, ಹಲವಾರು ಜನರು ನಿರಾಶ್ರಿತರಾಗಿದ್ದಾರೆ.
ಇದನ್ನೂ ಓದಿ; ‘ಅಪ್ರಾಮಾಣಿಕತೆ, ಅರಾಜಕತೆಯ ಗೆಲುವು…’; ಚಂಡೀಗಢ ಮೇಯರ್ ಚುನಾವಣೆ ಕುರಿತು ಶಿವಸೇನೆ ಟೀಕೆ


