ಪಪುವಾ ನ್ಯೂಗಿನಿಯಾದ ಬುಡಕಟ್ಟು ಜನಾಂಗದವರ ನಡುವೆ ನಡೆದ ಸಂಘರ್ಷದಲ್ಲಿ 60ಕ್ಕೂ ಅಧಿಕ ಮಂದಿ ಹತ್ಯೆಯಾಗಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳನ್ನು ಉಲ್ಲೇಖಿಸಿ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ರಾಜಧಾನಿ ಪೋರ್ಟ್ ಮೋರೆಸ್ಬಿಯ ವಾಯುವ್ಯಕ್ಕೆ 600 ಕಿ.ಮೀ ದೂರದ ವಾಬಾಗ್ ಪಟ್ಟಣದ ಬಳಿ ಭಾನುವಾರ ಘಟನೆ ನಡೆದಿದೆ. ಇದು ಸಿಕಿನ್ ಮತ್ತು ಕೇಕಿನ್ ಬುಡಕಟ್ಟು ಜನಾಂಗದವರ ನಡುವಿನ ಸಂಘರ್ಷಕ್ಕೆ ಸಂಬಂಧಿಸಿದೆ ಎಂದು ತಿಳಿದು ಬಂದಿದೆ.
ಅಧಿಕಾರಿಗಳು ಮತ್ತು ಸೇನಾ ಸಿಬ್ಬಂದಿ 53 ಪುರುಷರ ಮೃತದೇಹಗಳನ್ನು ಪತ್ತೆ ಹಚ್ಚಿದ್ದಾರೆ. ನಿಖರವಾದ ಸಾವಿನ ಸಂಖ್ಯೆ ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಭಾರೀ ಗುಂಡಿನ ದಾಳಿ ನಡೆದ ಮಾಹಿತಿಯಿದೆ ಸ್ಥಳೀಯ ಪೊಲೀಸ್ ಆಯುಕ್ತ ಡೇವಿಡ್ ಮ್ಯಾನಿಂಗ್ ಭಾನುವಾರ ಹೇಳಿದ್ದರು. ಆದರೆ, ಇಂದು ಬೆಳಿಗ್ಗೆ ಸಾವಿನ ಸಂಖ್ಯೆ 60 ದಾಟಿದೆ ಎಂದು ವರದಿಯಾಗಿದೆ.
ಅಕ್ರಮ ಶಸ್ತಾಸ್ತ್ರ ಪೂರೈಕೆ ಸಂಘರ್ಷವನ್ನು ಅತ್ಯಂತ ಭೀಕರವಾಗಿಸಿದೆ. ಸಂಘರ್ಷದಲ್ಲಿ ತೊಡಗಿದ್ದವರು ಪರಸ್ಪರ ಎಕೆ 47ನಂತಹ ಸುಧಾರಿತ ಶಸ್ತ್ರಾಸ್ತ್ರಗಳನ್ನು ಬಳಸಿದ್ದರು ಎಂದು ಮಾಧ್ಯಮಗಳು ತಿಳಿಸಿವೆ.
ಪಪುವಾ ನ್ಯೂಗಿನಿಯಾದಲ್ಲಿ ಬುಡಕಟ್ಟು ಜನಾಂಗಗಳ ನಡುವೆ ಆಗಾಗ ಸಂಘರ್ಷಗಳು ನಡೆಯುತ್ತಿರುತ್ತವೆ. ಅವುಗಳಲ್ಲಿ ಈ ಘಟನೆ ಅತ್ಯಂತ ಭೀಕರವಾಗಿದೆ. ಕಳೆದ ಜುಲೈನಲ್ಲಿ ದೇಶದ ಎಂಗಾ ಪ್ರದೇಶದಲ್ಲಿ ಬುಡಕಟ್ಟು ಸಂಘರ್ಷ ನಿಯಂತ್ರಿಸಲು ಸ್ಥಳೀಯ ಆಡಳಿತ ಮೂರು ತಿಂಗಳು ಲಾಕ್‌ಡೌನ್ ರೀತಿ ನಿರ್ಬಂಧ ಜಾರಿಗೊಳಿಸಿತ್ತು.
ಕಳೆದ ವರ್ಷ ಆಗಸ್ಟ್‌ನಲ್ಲಿ ನಡೆದ ಸಂಘರ್ಷದಲ್ಲಿ ಮೂವರು ವ್ಯಕ್ತಿಗಳನ್ನು ಸಾವನ್ನಪ್ಪಿದ ದೃಶ್ಯ ಒಳಗೊಂಡ ಗ್ರಾಫಿಕ್ ತುಣುಕೊಂದನ್ನು ಆನ್‌ಲೈನ್‌ನಲ್ಲಿ ಪ್ರಸಾರ ಮಾಡಲಾಗಿತ್ತು. ಆ ಬಳಿಕ ಹಿಂಸಾಚಾರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿತ್ತು.
ಇದನ್ನೂ ಓದಿ : ಮಣಿಪುರ: ಸರಕಾರಿ ಕಚೇರಿಗಳನ್ನು ಬಲವಂತದಿಂದ ಬಂದ್ ಮಾಡಿಸುತ್ತಿರುವ ಕುಕಿ ಗುಂಪು


