ಕಳೆದ ಲೋಕಸಭೆ ಚುನಾವಣೆಯ ಬಳಿಕ ತೆರೆಯ ಹಿಂದೆ ಸರಿದಿದ್ದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗೆಡೆ ಇದೀಗ ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ಸದಾ ದ್ವೇಷ ಭಾಷಣಕ್ಕೆ ಸುದ್ದಿಯಾಗುತ್ತಿದ್ದ ಅನಂತ್ ಕುಮಾರ್ ಹೆಗಡೆ ವಿರುದ್ಧ ಇದೀಗ ಸಿಎಂ ಸಿದ್ದರಾಮ್ಯಯ್ಯ ಬಗ್ಗೆ ಅವಹೇಳನಾಕಾರಿಯಾಗಿ ಹೇಳಿಕೆ ನೀಡಿರುವ ಹಿನ್ನೆಲೆ ಪ್ರಕರಣವನ್ನು ದಾಖಲಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಏಕವಚನದಿಂದ ನಿಂದಿಸಿ ಅವಹೇಳನಾಕಾರಿ ಹೇಳಿಕೆ ನೀಡಿದ್ದ ಸಂಸದ ಅನಂತಕುಮಾರ ಹೆಗಡೆ ವಿರುದ್ಧ ಮುಂಡಗೋಡ ಪೊಲೀಸ್ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದೆ. ಪಾಳಾದಲ್ಲಿ ಶುಕ್ರವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ್ದ ಅನಂತಕುಮಾರ ಹೆಗಡೆ ಸಿದ್ದರಾಮಯ್ಯ ಅವರನ್ನು ಸಿದ್ರಾಮುಲ್ಲಾ ಖಾನ್ ಎಂದು ಕರೆದಿದ್ದರು. ಅಲ್ಲದೆ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಖಲಿಸ್ತಾನಿಗಳೆಂದು ಹೇಳಿದ್ದರು. ‘ನಮ್ಮ ತೆರಿಗೆ ನಮ್ಮ ಹಕ್ಕು’ ಹೋರಾಟದ ವಿರುದ್ಧ ಹೇಳಿಕೆ ಕೊಡುವಾಗ ಸಂಸದ ಅನಂತ್ ಕುಮಾರ್ ಹೆಗಡೆ, ದೇಶದಲ್ಲಿ 99.9% ಹಿಂದೂಗಳು ತೆರಿಗೆ ಕಟ್ಟುತ್ತಾರೆ. ಆದರೆ ಮುಸ್ಲಿಮರ ಮಸೀದಿಗೆ ಯಾಕೆ ಅನುದಾನ ಕೊಟ್ರಿ? ಸಿದ್ರಾಮುಲ್ಲಾ ಖಾನ್ ಸರ್ಕಾರ ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದೆ. ರಾಜ್ಯದಲ್ಲಿ ಸಿದ್ರಮುಲ್ಲಾ ಖಾನ್ ಸರ್ಕಾರ ಇದೆ ಎಂದು ಹೇಳಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್, ಧಾರ್ಮಿಕವಾಗಿ ಮತ್ತು ಸಾಮಾಜಿಕವಾಗಿ ಅವಮಾನಕಾರಿ ಹೇಳಿಕೆ ನೀಡಿರುವ ಸಂಸದರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಕೆಲವು ದಿನಗಳ ಹಿಂದೆಯಷ್ಟೇ ಕುಮಟಾದಲ್ಲಿ ನಡೆದ ಸಭೆಯಲ್ಲಿ ಅನಂತಕುಮಾರ್ ಹೆಗಡೆ ಪ್ರಚೋದನಕಾರಿ ಮಾತನಾಡಿದ್ದಕ್ಕೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಅಯೋಧ್ಯೆ ರಾಮಮಂದಿರ ವಿಚಾರವಾಗಿ ಮತ್ತು ಸಿಎಂ ಸಿದ್ದರಾಮಯ್ಯ ವಿರುದ್ಧ ಅನಂತ್ ಕುಮಾರ್ ಹೆಗಡೆ ನಾಲಗೆ ಹರಿಯ ಬಿಟ್ಟಿದ್ದರು. ಭಟ್ಕಳ, ಶಿರಸಿ, ಶ್ರೀರಂಗಪಟ್ಟಣದ ಮಸೀದಿಗಳು ಹಿಂದೆ ದೇವಾಲಯಗಳಾಗಿದ್ದವು. ಅವುಗಳನ್ನು ಬಾಬ್ರಿ ಮಸೀದಿ ರೀತಿಯಲ್ಲಿ ಹೊಡೆಯಬೇಕು ಎಂದು ಅನಂತ್ ಕುಮಾರ್ ಹೆಗಡೆ ಹೇಳಿದ್ದರು. ಅನಂತ್ ಕುಮಾರ್ ಹೆಗಡೆ ವಿರುದ್ಧ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಹೇಳಿಕೆ ನೀಡುವ ಜೊತೆಗೆ ಸಾಮಾಜಿಕ ಅಶಾಂತಿಗೆ ಕಾರಣವಾಗುವ ಮಾತುಗಳನ್ನಾಡಿರುವುದರಿಂದ ಸೆಕ್ಷನ್ 153ಎ, 505 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಮುಸಲ್ಮಾನರ ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಕಾರಣಕ್ಕೆ ಕುಖ್ಯಾತಿಯನ್ನೂ ಗಳಿಸಿದ್ದ ಅನಂತಕುಮಾರ್ ಹೆಗಡೆ ತನ್ನ ತಾಯಿಗೆ ಸೂಕ್ತ ಚಿಕಿತ್ಸೆ ನೀಡಲಿಲ್ಲ ಎಂಬ ಕಾರಣದಿಂದ ಆಸ್ಪತ್ರೆಯಲ್ಲಿ ವೈದ್ಯರ ಮೇಲೆ ಹಲ್ಲೆ ನಡೆಸಿದ ವಿಡಿಯೋವೊಂದು ಈ ಹಿಂದೆ ವೈರಲ್ ಆಗಿತ್ತು.
ಇದನ್ನು ಓದಿ: ಉತ್ತರಪ್ರದೇಶದಲ್ಲಿ ಮುಂದುವರಿದ ಭಾರತ್ ಜೋಡೋ ನ್ಯಾಯ ಯಾತ್ರೆ: ಮೋದಿಯಿಂದ ಕೋಟ್ಯಾಧಿಪತಿಗಳ ತೆರಿಗೆ ಮನ್ನಾ; ರಾಹುಲ್ ವಾಗ್ಧಾಳಿ


