ದೆಹಲಿಯ ಅಬಕಾರಿ ನೀತಿ ವಿಷಯಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತನಿಖಾ ಸಂಸ್ಥೆ ಜಾರಿ ನಿರ್ದೇಶನಾಲಯ (ಇಡಿ) ನೀಡಿದ್ದ ಏಳನೇ ಸಮನ್ಸ್ ಅನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು ಮತ್ತೊಮ್ಮೆ ತಿರಸ್ಕರಿಸಿದ್ದಾರೆ.
‘ಕೇಜ್ರಿವಾಲ್‌ಗೆ ಪದೇ ಪದೇ ಸಮನ್ಸ್‌ಗಳನ್ನು ನೀಡುವ ಬದಲು ಕಾನೂನು ಪ್ರಕ್ರಿಯೆಯನ್ನು ಗೌರವಿಸಬೇಕು ಮತ್ತು ನ್ಯಾಯಾಲಯದ ನಿರ್ಧಾರಕ್ಕಾಗಿ ಕಾಯಬೇಕು’ ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಇಡಿಯನ್ನು ಒತ್ತಾಯಿಸಿದೆ. ‘ಮುಖ್ಯಮಂತ್ರಿಗಳಿಗೆ ಹಲವು ಬಾರಿ ಸಮನ್ಸ್ ನೀಡಿರುವುದು ಅನಗತ್ಯ’ ಎಂದು ಪಕ್ಷ ವಾದಿಸಿದೆ.
‘ಈ ವಿಷಯವು ಪ್ರಸ್ತುತ ನ್ಯಾಯಾಲಯದಲ್ಲಿದೆ, ಮುಂದಿನ ವಿಚಾರಣೆಯನ್ನು ಮಾರ್ಚ್ 16ಕ್ಕೆ ನಿಗದಿಪಡಿಸಲಾಗಿದೆ. ದೈನಂದಿನ ಸಮನ್ಸ್ ಕಳುಹಿಸುವ ಬದಲು, ಜಾರಿ ನಿರ್ದೇಶನಾಲಯವು (ಇಡಿ) ತಾಳ್ಮೆಯಿಂದಿರಬೇಕು ಮತ್ತು ನ್ಯಾಯಾಲಯದ ನಿರ್ಧಾರಕ್ಕಾಗಿ ಕಾಯಬೇಕು’ ಎಂದು ಆಪ್ ಹೇಳಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ಸಂಸ್ಥೆಯು ಕೇಜ್ರಿವಾಲ್ ಅವರಿಗೆ ಸಮನ್ಸ್ ನೀಡಿದ್ದು ಇದು ಏಳನೇ ಬಾರಿ. ಈ ತಿಂಗಳ ಆರಂಭದಲ್ಲಿ, ಕೇಜ್ರಿವಾಲ್ ಅವರು ತನಿಖೆಗೆ ಸಂಬಂಧಿಸಿದ ಹಲವಾರು ಸಮನ್ಸ್‌ಗಳನ್ನು ನಿರ್ಲಕ್ಷಿಸಿದ ನಂತರ ಸಂಸ್ಥೆಯು ದೆಹಲಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದೆ.
ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಇಡಿ 2021-22 ರ ದೆಹಲಿ ಸರ್ಕಾರದ ಅಬಕಾರಿ ನೀತಿಯ ಬಗ್ಗೆ ತನಿಖೆ ನಡೆಸುತ್ತಿವೆ. ಇದು ಕೆಲವು ಮದ್ಯ ಮಾರಾಟಗಾರರಿಗೆ ಲಾಭದಾಯಕವಾಗಿದೆ ಎಂದು ಆರೋಪಿಸಲಾಗಿದೆ. ಆದರೆ, ಎಎಪಿ ಆರೋಪಗಳನ್ನು ಬಲವಾಗಿ ನಿರಾಕರಿಸಿದೆ. ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಯಿಂದ ವರದಿ ಪಡೆದ ನಂತರ ನೀತಿಯಲ್ಲಿನ ಅಕ್ರಮಗಳ ಕುರಿತು ಸಿಬಿಐ ತನಿಖೆಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಶಿಫಾರಸು ಮಾಡಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಏಪ್ರಿಲ್‌ನಲ್ಲಿ ಕೇಜ್ರಿವಾಲ್ ಅವರನ್ನು ಸಿಬಿಐ ಒಂಬತ್ತು ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು. ಎಎಪಿ ನಾಯಕ ಹಾಗೂ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಈ ವರ್ಷದ ಫೆಬ್ರವರಿಯಲ್ಲಿ ಸಿಬಿಐ ಮತ್ತು ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಅವರನ್ನು ಇಡಿ ಇತ್ತೀಚೆಗೆ ಬಂಧಿಸಿತ್ತು.
ಇದನ್ನೂ ಓದಿ; ಕೋಮುವಾದ, ಫ್ಯಾಸಿಸಂ ವಿರುದ್ಧ ಸಾಂಸ್ಕೃತಿಕ ವಲಯದ ಮಧ್ಯಸ್ಥಿಕೆ ಅತ್ಯಗತ್ಯ; ಪಿಣರಾಯಿ ವಿಜಯನ್


