“ಅಯೋಧ್ಯೆ ರಾಮ ಮಂದಿರದ ಉದ್ಘಾಟನೆಯ ಬಳಿಕ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆಯ ಮಟ್ಟ ಗಗನಕ್ಕೇರಿದೆ. ಅದನ್ನು ಸಂಪೂರ್ಣವಾಗಿ ಕುಗ್ಗಿಸುವುದು ರೈತ ಹೋರಾಟ ಅಥವಾ ದೆಹಲಿ ಚಲೋ ಹೋರಾಟದ ಉದ್ದೇಶ” ಎಂದು ರೈತ ಮುಖಂಡ ಜಗಜೀತ್ ಸಿಂಗ್ ದಲ್ಲೆವಾಲ್ ಹೇಳಿಕೆ ನೀಡಿದ್ದಾರೆ ಎಂಬ ವಿಡಿಯೋವೊಂದು ವೈರಲ್ ಆಗಿದೆ.
ಬಿಜೆಪಿ ನಾಯಕರು, ಬಲಪಂಥೀಯ ಸಾಮಾಜಿಕ ಮಾಧ್ಯಮ ಪ್ರಭಾವಿಗಳು ಮತ್ತು ಹಿಂದಿ, ಇಂಗ್ಲಿಷ್ ಭಾಷೆಗಳ ಮುಖ್ಯವಾಹಿನಿ ಮಾಧ್ಯಮಗಳು ಈ ವಿಡಿಯೋವನ್ನು ಹಂಚಿಕೊಂಡಿದ್ದು, ‘ರೈತರ ಚಳವಳಿಯ ಏಕೈಕ ಉದ್ದೇಶ ಮೋದಿ ಸರ್ಕಾರದ ವರ್ಚಸ್ಸನ್ನು ಕುಂದಿಸುವುದು’ ಎಂದಿದ್ದಾರೆ.
ನ್ಯೂಸ್ 18 ಹಿಂದಿ ಚಾನೆಲ್‌ನಲ್ಲಿ ದಲ್ಲೆವಾಲ್ ಅವರ ಹೇಳಿಕೆಯ ವಿಡಿಯೋವನ್ನು ಬ್ರೇಕಿಂಗ್ ನ್ಯೂಸ್ ಆಗಿ ಪ್ರಸಾರ ಮಾಡಲಾಗಿದ್ದು, “ರೈತರ ಚಳವಳಿಯ ಹಿಂದಿನ ಉದ್ದೇಶ ‘ರಾಜಕೀಯ’ ಎಂದು ಸುದ್ದಿ ನಿರೂಪಕಿ ರುಬಿಕಾ ಲಿಯಾಖತ್ ಹೇಳಿದ್ದಾರೆ.
जगजीत सिंह डल्लेवाल का विवादास्पद बयान
"मोदी का ग्राफ़ मंदिर की वजह से बहुत ऊंचा हो गया है"
"मोदी के ग्राफ़ को नीचे कैसे लाया जा सकता है"
"क्या हम थोड़े दिनों में इसका ग्राफ़ नीचे कर लेंगे?#DelhiChalo #KisanAndolan #FarmersProtests #MSP #BhanuPratapSingh @RubikaLiyaquat pic.twitter.com/GfMqTYWEWS— News18 India (@News18India) February 15, 2024
ವೈರಲ್ ಕ್ಲಿಪ್ ಅನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವ ನ್ಯೂಸ್ 18 ಚಾನೆಲ್‌ನ ನಿರೂಪಕ ಅಮಿಶ್ ದೇವಗನ್ “ರಾಮ ಮಂದಿರದ ಉದ್ಘಾಟನೆಯ ಬಳಿಕ ಮೋದಿಯವರ ಜನಪ್ರಿಯತೆ ಗಗನಕ್ಕೇರಿದೆ. ಅದನ್ನು ಕುಗ್ಗಿಸುವುದು ರೈತ ಚಳವಳಿಯ ಹಿಂದಿನ ಉದ್ದೇಶವಾಗಿದೆ” ಎಂದು ಬರೆದುಕೊಂಡಿದ್ದಾರೆ.
‘राम मंदिर के बाद मोदी का graph बढ़ गया है उसे कम करने के लिए यह किसान आंदोलन है’ pic.twitter.com/hZNtKfPUJm
— Amish Devgan (@AMISHDEVGAN) February 15, 2024
‘ಇಂಡಿಯಾ ಟಿವಿ’ಯಲ್ಲಿ ವೈರಲ್ ವಿಡಿಯೋವನ್ನು ಪ್ರಸಾರ ಮಾಡುವಾಗ, ನಿರೂಪಕಿ ಮೀನಾಕ್ಷಿ ಜೋಶಿ ಅವರು “ನರೇಂದ್ರ ಮೋದಿಯವರ ಜನ ಪ್ರಿಯತೆಯನ್ನು ಕುಗ್ಗಿಸಲು ರೈತರು ಚಳವಳಿ ಪ್ರಾರಂಭಿಸಿದ್ದಾರೆ” ಎಂದು ಹೇಳಿದ್ದಾರೆ. “ಈ ವಿಡಿಯೋ ರೈತ ಚಳವಳಿ ಪ್ರಾರಂಭವಾಗುವ ಕೆಲವು ದಿನಗಳ ಹಿಂದಿನದ್ದು” ಎಂದಿದ್ದಾರೆ.
‘ಝೀ ನ್ಯೂಸ್’ ನಿರೂಪಕಿ ಶಿವಾಂಗಿ ಠಾಕೂರ್ ಅವರು, “ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ ಹೆಚ್ಚುತ್ತಿರುವುದು ರೈತರ ದೆಹಲಿ ಚಲೋಗೆ ಪ್ರತಿಭಟನೆಗೆ ಕಾರಣವೇ? ಎಂದು ಪ್ರಶ್ನಿಸಿದ್ದಾರೆ. ನಂತರ, ಅದೇ ವರದಿಯಲ್ಲಿ, ಝೀ ನ್ಯೂಸ್ ವೀಡಿಯೊದ ಸತ್ಯಾಸತ್ಯತೆಯನ್ನು ಖಚಿತಪಡಿಸಿಲ್ಲ ಎಂದಿದ್ದಾರೆ.
‘ಟೈಮ್ಸ್ ನೌ ನವಭಾರತ್’ ಕೂಡ ವೈರಲ್ ಕ್ಲಿಪ್ ಅನ್ನು ಪ್ರಸಾರ ಮಾಡಿದ್ದು, ನಿರೂಪಕಿ ಹಿಮಾಂಶು ದೀಕ್ಷಿತ್ ಅವರು “ಪ್ರಧಾನಿ ನರೇಂದ್ರ ಮೋದಿಯವರ ಇಮೇಜ್‌ಗೆ ಹಾನಿ ಮಾಡುವುದು ಮತ್ತು ಅವರ ಜನಪ್ರಿಯತೆಯನ್ನು ತಗ್ಗಿಸುವುದು ರೈತರ ಚಳವಳಿಯ ಗುರಿಯಾಗಿದೆ” ಎಂದು ಹೇಳಿದ್ದಾರೆ.
‘ಟೈಮ್ಸ್ ನೌ ನವಭಾರತ್’ನ ರಾಷ್ಟ್ರೀಯ ಸಂಪಾದಕ ಅಮಿತ್ ಕುಮಾರ್, “ಪ್ರತಿಭಟನೆ ನಡೆಸುತ್ತಿರುವವರ ಅಜೆಂಡಾಕ್ಕೂ ರೈತರಿಗೂ ಯಾವುದೇ ಸಂಬಂಧವಿಲ್ಲ. ಮೋದಿ ಸರ್ಕಾರದ ಪ್ರತಿಷ್ಠೆಯನ್ನು ಹಾಳು ಮಾಡುವುದು ಮತ್ತು ಪ್ರತಿಸ್ಪರ್ಧಿ ರಾಜಕೀಯ ಪಕ್ಷಗಳಿಗೆ ಲಾಭ ಮಾಡಿಕೊಡುವುದು ಅವರ ನಿಜವಾದ ಉದ್ದೇಶವಾಗಿದೆ” ಎಂದಿದ್ದಾರೆ.
‘ಇಂಡಿಯಾ ಟುಡೇ’ ಕೂಡ ವೈರಲ್ ವಿಡಿಯೋವನ್ನು ಪ್ರಸಾರ ಮಾಡಿದ್ದು, “ರೈತ ಮುಖಂಡರ ಹೇಳಿಕೆಗಳು ರೈತರ ನೈಜ ಕಾರ್ಯಸೂಚಿಗೆ ವಿರುದ್ಧವಾಗಿವೆ” ಎಂದು ನಿರೂಪಕಿ ನಬಿಲಾ ಜಮಾಲ್ ಹೇಳಿದ್ದಾರೆ. “ಎಂಎಸ್‌ಪಿ ಕಾನೂನಿಗೆ ರೈತರು ಧ್ವನಿ ಎತ್ತುತ್ತಿರುವಾಗ ದಲ್ಲೆವಾಲ್ ಮೋದಿಯವರ ಜನಪ್ರಿಯತೆಯನ್ನು ಕುಗ್ಗಿಸುವ ಬಗ್ಗೆ ಯಾಕೆ ಮಾತನಾಡುತ್ತಿದ್ದಾರೆ” ಎಂದು ಹೇಳಿದ್ದಾರೆ. ಅಲ್ಲದೆ, ರೈತರ ನಿಜವಾದ ಅಜೆಂಡಾ ಏನು ಎಂದು ಪ್ರಶ್ನಿಸಿದ್ದಾರೆ.
‘ರಿಪಬ್ಲಿಕ್ ಟಿವಿ’ ಕೂಡ ಈ ವಿಡಿಯೋವನ್ನು ಪ್ರಸಾರ ಮಾಡಿದ್ದು, “ರೈತರು ನಿಜವಾಗಿಯೂ ತಮ್ಮ ಹಕ್ಕುಗಳಿಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೋ ಅಥವಾ ಅವರಿಗೆ ಬೇರೆ ಉದ್ದೇಶವಿದೆಯೇ?” ಎಂದು ಪ್ರಶ್ನಿಸಿದೆ.
ಸುದ್ದಿ ಸಂಸ್ಥೆ ಎಎನ್‌ಐ, “ರಾಮ ಮಂದಿರದ ಉದ್ಘಾಟನೆಯ ಬಳಿಕ ಮೋದಿಯವರ ಜನಪ್ರಿಯತೆ ಗಗನಕ್ಕೇರಿದೆ. ಅದನ್ನು ಕುಗ್ಗಿಸಲು ರೈತರು ಹೋರಾಟ ಮಾಡುತ್ತಿರುವುದಾಗಿ ರೈತ ಮುಖಂಡ ದಲ್ಲೇವಾಲ್ ಹೇಳಿದ್ದಾರೆ. ಇದಕ್ಕೆ ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಪ್ರತಿಕ್ರಿಯೆ ನೀಡಿದ್ದು, “ಇದೊಂದು ರಾಜಕೀಯ ಹೇಳಿಕೆ. ಈ ರೀತಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡರೆ ಜನ ಪ್ರಧಾನಿ ಮೋದಿಯವರನ್ನು ಬೆಂಬಲಿಸುವುದನ್ನು ನಿಲ್ಲಿಸುತ್ತಾರಾ? ಇದು ಪ್ರತಿಭಟನೆ ನಡೆಸುವ ಸರಿಯಾದ ದಾರಿಯಲ್ಲ ಎಂದು ಜನರೆಡೆಯಲ್ಲಿ ಒಂದು ಸಂದೇಶ ಹರಿದಾಡುತ್ತಿದೆ” ಎಂದು ಹೇಳಿದ್ದಾರೆ ಎಂದು ಖಟ್ಟರ್ ಹೇಳಿಕೆಯ ವಿಡಿಯೋ ಪೋಸ್ಟ್ ಮಾಡಿದೆ.
#WATCH | On farmer leader Jagjit Singh Dallewal's, 'we have to bring graph of PM Modi down' remark, Haryana CM Manohar Lal Khattar says "This is a political statement. Will the people stop supporting PM Modi if such a huge protest is organised? A message is getting circulated in… pic.twitter.com/jmqD39evDH
— ANI (@ANI) February 15, 2024
ಮಾಧ್ಯಮಗಳು ಮಾತ್ರವಲ್ಲದೆ ಭಾರತ ಸರ್ಕಾರದ ಹಿರಿಯ ಸಲಹೆಗಾರ ಕಾಂಚನ್ ಗುಪ್ತಾ, ಬಿಜೆಪಿ ಚಂಡೀಗಢ, ಅಂಶುಲ್ ಸಕ್ಸೇನಾ, ರೋಷನ್ ಸಿನ್ಹಾ ಮತ್ತು ಪನ್ ಫ್ಯಾಕ್ಟ್ಸ್ ಇವರ ಎಕ್ಸ್ ಖಾತೆಗಳಲ್ಲೂ ವೈರಲ್ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
ಫ್ಯಾಕ್ಟ್‌ಚೆಕ್ : ಮಾಧ್ಯಮಗಳಲ್ಲಿ ಪ್ರಸಾರವಾದ ವಿಡಿಯೋದ ಸತ್ಯಾಸತ್ಯತೆ ತಿಳಿಯುವ ಸಲುವಾಗಿ ನಾನುಗೌರಿ.ಕಾಂ ಮೊದಲು ರೈತ ನಾಯಕ ಜಗಜೀತ್ ಸಿಂಗ್ ದಲ್ಲೆವಾಲ್ ಅವರ ಹೇಳಿಕೆಯ ಸಂಪೂರ್ಣ ವಿಡಿಯೋವನ್ನು ಹುಡುಕಿದೆ. ಈ ವೇಳೆ ನಮಗೆ ಅನ್ ಮ್ಯೂಟ್ (Unmute) ಎಂಬ ಫೇಸ್‌ಬುಕ್ ಖಾತೆಯಲ್ಲಿ, ದಲ್ಲೇವಾಲ್ ಅವರು ಪಂಜಾಬಿ ಭಾಷೆಯಲ್ಲಿ ಮಾತನಾಡಿರುವ ವಿಡಿಯೋ ದೊರೆತಿದೆ.
ಒಟ್ಟು 26 ನಿಮಿಷದ ವಿಡಿಯೋದಲ್ಲಿ 18 ನಿಮಿಷ 40 ಸೆಕೆಂಡ್‌ಗೆ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಹೇಳಿಕೆಯನ್ನು ದಲ್ಲೇವಾಲ್ ನೀಡಿದ್ದಾರೆ. ಸಂಪೂರ್ಣ ವಿಡಿಯೋ ಪಂಜಾಬಿ ಭಾಷೆಯಲ್ಲಿ ಇರುವುದರಿಂದ ನಾವು ವಿಡಿಯೋದ ಭಾಷಾಂತರಕ್ಕಾಗಿ ಆಲ್ಟ್ ನ್ಯೂಸ್‌ನ ಫ್ಯಾಕ್ಟ್ ಚೆಕ್ ವರದಿಯನ್ನು ಪರಿಶೀಲಿಸಿದ್ದೇವೆ. ವರದಿಯಲ್ಲಿ ದಲ್ಲೇವಾಲ್ ಅವರ ಹೇಳಿಕೆಯ ವಿಡಿಯೋವನ್ನು ತಿರುಚಲಾಗಿದೆ ಎಂದು ಹೇಳಲಾಗಿದೆ.
ಆಲ್ಟ್ ನ್ಯೂಸ್ ತಿಳಿಸಿದಂತೆ, ಮೋದಿಯವರ ಜನಪ್ರಿಯತೆ ರಾಮ ಮಂದಿರ ಉದ್ಘಾಟನೆಯ ಬಳಿಕ ಹೆಚ್ಚಾಗಿದೆ. ಅದನ್ನು ಕುಗ್ಗಿಸಬೇಕು ಎಂದು ದಲ್ಲೇವಾಲ್ ಹೇಳಿರುವುದು ನಿಜ. ಆದರೆ, ಅವರು ಅಷ್ಟನ್ನು ಮಾತ್ರ ಹೇಳಿಲ್ಲ. ದಲ್ಲೇವಾಲ್ ಹೇಳಿರುವುದು “ಯಾವುದೇ ರಾಜಕಾರಣಿ ನಮ್ಮ ಸಮಸ್ಯೆಗಳನ್ನು ಆಲಿಸಬೇಕಿದ್ದರೆ ಅವರ ಜನಪ್ರಿಯತೆಗೆ ಕುತ್ತು ಬರಬೇಕು. ಜನಪ್ರಿಯತೆ ಕುಂದುವಾಗ ಅವರು ಜನರ ಬಳಿಗೆ ಬರುತ್ತಾರೆ. ಅದೇ ರೀತಿ ಮೋದಿಯವರು ಈಗ ಭಾರೀ ಜನಪ್ರಿಯತೆಯಲ್ಲಿದ್ದಾರೆ. ಅದನ್ನು ನಾವು ಕುಗ್ಗಿಸಬೇಕು. ಆಗ ಅವರು ನಮ್ಮ ಬೇಡಿಕೆಗಳನ್ನು ಆಲಿಸಲು ಬರುತ್ತಾರೆ” ಎಂದಾಗಿದೆ. ಅಲ್ಲದೆ, ನಮ್ಮ ಹೋರಾಟದ ಉದ್ದೇಶ ಮೋದಿಯವರ ಜನಪ್ರಿಯತೆ ಕುಗ್ಗಿಸುವುದು ಮಾತ್ರ ಎಂದು ಅವರು ಹೇಳಿಲ್ಲ.
ಇಲ್ಲಿ ದಲ್ಲೇವಾಲ್ ಅವರ ಹೇಳಿಕೆಯ ಸಂಪೂರ್ಣ ವಿಡಿಯೋವನ್ನು ಎಡಿಟ್ ಮಾಡಿ, ಅವರು ಮೋದಿಯವರ ಬಗ್ಗೆ ಮಾತನಾಡಿರುವ ಭಾಗವನ್ನು ಮಾತ್ರ ಮಾಧ್ಯಮಗಳು ಪ್ರಸಾರ ಮಾಡಿವೆ. ಅದನ್ನೇ ಸಾಮಾಜಿಕ ಜಾಲತಾಣಗಳಲ್ಲೂ ಹಂಚಿಕೊಳ್ಳಲಾಗಿದೆ. ಈ ಮೂಲಕ ರೈತ ನಾಯಕನ ಹೇಳಿಕೆಗೆ ಬೇರೆಯದ್ದೇ ಬಣ್ಣ ಹಚ್ಚಲಾಗಿದೆ. ರೈತ ಹೋರಾಟದ ಕುರಿತು ಜನರಲ್ಲಿ ತಪ್ಪು ಭಾವನೆ ಮೂಡಿಸುವ ಪ್ರಯತ್ನ ಮಾಡಲಾಗಿದೆ ಎಂದು ಆಲ್ಟ್ ನ್ಯೂಸ್ ಹೇಳಿದೆ.
ಇದನ್ನೂ ಓದಿ : FACT CHECK| ನಾಸೀರ್ ಹುಸೇನ್ ಬೆಂಬಲಿಗರು ‘ಪಾಕಿಸ್ತಾನ್ ಝಿಂದಾಬಾದ್ʼ ಘೋಷಣೆ ಕೂಗಿದ್ದಾರಾ? ಕನ್ನಡ ಮಾದ್ಯಮಗಳ ಸುದ್ದಿಯ ವಾಸ್ತವಾಂಶವೇನು?


