ತಮಿಳಿಸೈ ಸೌಂದರರಾಜನ್ ಸೋಮವಾರ ತೆಲಂಗಾಣ ರಾಜ್ಯಪಾಲೆ ಮತ್ತು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಹುದ್ದೆಗೆ ರಾಜೀನಾಮೆ ನೀಡಿದ್ದು, ಅವರು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸುವ ಸಾಧ್ಯತೆ ಇದೆ.
62 ವರ್ಷದ ತಮಿಳಿಸೈ ಸೌಂದರರಾಜನ್ ಅವರು ಚುನಾವಣಾ ರಾಜಕೀಯಕ್ಕೆ ಮರಳಲಿದ್ದು 2024ರ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನಿಂದ ಸ್ಪರ್ಧಿಸುವ ನಿರೀಕ್ಷೆಯಿದೆ. ಸದ್ಯದಲ್ಲೇ ಬಿಡುಗಡೆಯಾಗಲಿರುವ ತಮಿಳುನಾಡು ರಾಜ್ಯದ ಬಿಜೆಪಿ ಅಭ್ಯರ್ಥಿಗಳ ಮೂರನೆಯ ಪಟ್ಟಿಯಲ್ಲಿ ತಮಿಳಿಸೈ ಸೌಂದರರಾಜನ್ ಅವರ ಹೆಸರು ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ ಎಂದು India Today TV ವರದಿ ಮಾಡಿದೆ.
ತೆಲಂಗಾಣ ರಾಜಭವನ ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ತೆಲಂಗಾಣದ ಗೌರವಾನ್ವಿತ ಗವರ್ನರ್ ಮತ್ತು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಡಾ.ತಮಿಳಿಸೈ ಸೌಂದರರಾಜನ್ ಅವರು ತಕ್ಷಣದಿಂದ ಜಾರಿಗೆ ಬರುವಂತೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆಯನ್ನು ಭಾರತದ ಗೌರವಾನ್ವಿತ ರಾಷ್ಟ್ರಪತಿಗಳಿಗೆ ಸಲ್ಲಿಸಲಾಗಿದೆ ಎಂದು ತಿಳಿಸಲಾಗಿದೆ.
ಸೆಪ್ಟೆಂಬರ್ 2019ರಲ್ಲಿ ಐದು ವರ್ಷಗಳ ಕಾಲ ಬಿಜೆಪಿಯ ತಮಿಳುನಾಡು ಘಟಕದ ರಾಜ್ಯಧ್ಯಕ್ಷರಾಗಿದ್ದ ಸೌಂದರರಾಜನ್ ಅವರು ತೆಲಂಗಾಣ ರಾಜ್ಯಪಾಲರಾಗಿ ನೇಮಕಗೊಂಡಿದ್ದರು ಮತ್ತು ನಂತರ ಫೆಬ್ರವರಿ 2021 ರಲ್ಲಿ ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ಹೆಚ್ಚುವರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.
ತಮಿಳಿಸೈ ಸೌಂದರರಾಜನ್ ಅವರು ತಮಿಳುನಾಡು ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷರಾದ ಕುಮಾರಿ ಆನಂದನ್ ಅವರ ಪುತ್ರಿ ಮತ್ತು ಉದ್ಯಮಿ ಮತ್ತು ರಾಜಕಾರಣಿ ಎಚ್ ವಸಂತಕುಮಾರ್ ಅವರ ಸೊಸೆಯಾಗಿದ್ದಾರೆ. ವೃತ್ತಿಯಲ್ಲಿ ವೈದ್ಯೆರಾಗಿರುವ ಅವರು ಸ್ತ್ರೀರೋಗ ತಜ್ಞರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ಸೌಂದರರಾಜನ್ ಅವರು ಬಿಜೆಪಿಯ ರಾಜ್ಯ ಘಟಕದಲ್ಲಿ 1999ರಲ್ಲಿ ದಕ್ಷಿಣ ಚೆನ್ನೈ ಜಿಲ್ಲಾ ವೈದ್ಯಕೀಯ ವಿಭಾಗದ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು. 2001ರಲ್ಲಿ ವೈದ್ಯಕೀಯ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ, 2005ರಲ್ಲಿ ಅಖಿಲ ಭಾರತ ಸಹ ಸಂಚಾಲಕರಾಗಿ (ದಕ್ಷಿಣ ರಾಜ್ಯಗಳ ವೈದ್ಯಕೀಯ ವಿಭಾಗ), 2007ರಲ್ಲಿ ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. 2010ರಲ್ಲಿ ಬಿಜೆಪಿಯ ರಾಜ್ಯ ಉಪಾಧ್ಯಕ್ಷರಾಗಿ ಮತ್ತು 2013ರಲ್ಲಿ ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು.
ಇದನ್ನು ಓದಿ: ಚುನಾವಣಾ ಬಾಂಡ್: ತೆಲಂಗಾಣ ಮೂಲದ ಕಂಪೆನಿಯಿಂದ ಅತಿ ಹೆಚ್ಚು ದೇಣಿಗೆ ಪಡೆದಿದ್ದ ಜೆಡಿಎಸ್


