Homeಮುಖಪುಟಚುನಾವಣಾ ಬಾಂಡ್‌: ಔಷಧ ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾದ 7 ಫಾರ್ಮಾ ಕಂಪನಿಗಳಿಂದ ರಾಜಕೀಯ ಪಕ್ಷಗಳಿಗೆ ದೇಣಿಗೆ

ಚುನಾವಣಾ ಬಾಂಡ್‌: ಔಷಧ ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾದ 7 ಫಾರ್ಮಾ ಕಂಪನಿಗಳಿಂದ ರಾಜಕೀಯ ಪಕ್ಷಗಳಿಗೆ ದೇಣಿಗೆ

- Advertisement -
- Advertisement -

ಭಾರತದ ಮೂವತ್ತೈದು ಔಷಧೀಯ ಕಂಪನಿಗಳು ಚುನಾವಣಾ ಬಾಂಡ್‌ಗಳ ಮೂಲಕ ರಾಜಕೀಯ ಪಕ್ಷಗಳಿಗೆ ಸುಮಾರು 1,000 ಕೋಟಿ ರೂಪಾಯಿಗಳನ್ನು ನೀಡಿವೆ ಎಂದು ಚುನಾವಣಾ ಆಯೋಗವು ಮಾರ್ಚ್ 14 ರಂದು ಬಿಡುಗಡೆ ಮಾಡಿದ ಅಂಕಿ ಅಂಶಗಳು ಬಹಿರಂಗಪಡಿಸಿವೆ.

ಇವುಗಳಲ್ಲಿ ಕನಿಷ್ಠ ಏಳು ಕಂಪನಿಗಳು ಬಾಂಡ್‌ಗಳನ್ನು ಖರೀದಿಸಿದಾಗ ಕಳಪೆ ಗುಣಮಟ್ಟದ ಔಷಧ ಆರೋಪಗಳ ಮೇಲೆ ನೋಟಿಸ್‌ಗಳನ್ನು ಸ್ವೀಕರಿಸಿದ್ದವು.

ಔಷಧ ತಯಾರಕರು, ಔಷಧಗಳು ಮತ್ತು ಸೌಂದರ್ಯವರ್ಧಕಗಳ ಕಾಯ್ದೆ-1940 (Drugs and Cosmetics Act, 1940) ರಿಂದ ನಿಯಂತ್ರಿಸಲ್ಪಡುತ್ತಾರೆ. ಈ ಕಾಯ್ದೆಯು ಔಷಧ ಉತ್ಪಾದನಾ ಘಟಕಗಳನ್ನು ಮತ್ತು ಮಾರುಕಟ್ಟೆಯಲ್ಲಿ ಮಾರಾಟವಾಗುವ ಔಷಧಿಗಳ ಗುಣಮಟ್ಟವನ್ನು ಪರೀಕ್ಷಿಸಲು ರಾಜ್ಯ ನಿಯಂತ್ರಿತ ಆಹಾರ ಮತ್ತು ಔಷಧ ಆಡಳಿತಗಳಿಗೆ ಅಧಿಕಾರ ನೀಡುತ್ತದೆ.

ಯಾವುದೇ ರಾಜ್ಯದ ಆಹಾರ ಮತ್ತು ಔಷಧ ಆಡಳಿತವು, ಕಂಪನಿಯ ಔಷಧಿಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾದಲ್ಲಿ ಅವರಿಗೆ ನೋಟಿಸ್ ಕಳುಹಿಸಬಹುದು. ಆದರೆ, ಶಿಕ್ಷಾರ್ಹ ಕ್ರಮ, ಉತ್ಪಾದನೆಯನ್ನು ಸ್ಥಗಿತಗೊಳಿಸುವುದು ಅಥವಾ ಉತ್ಪಾದನಾ ಪರವಾನಗಿಯನ್ನು ರದ್ದುಗೊಳಿಸುವುದು ಕಂಪನಿಯ ಕಾರ್ಖಾನೆ ಇರುವ ರಾಜ್ಯದ ಸರ್ಕಾರ ಅಥವಾ ಕೇಂದ್ರ ಸರ್ಕಾರ ಮಾಡಬೇಕು.

“ಇಂತಹ ಪ್ರಕರಣಗಳಲ್ಲಿ ರಾಜ್ಯ ಅಥವಾ ಕೇಂದ್ರ ಸರ್ಕಾರ ಔಷಧ ಉತ್ಪಾದಕರ ಮೇಲೆ ಕ್ರಮ ಕೈಗೊಳ್ಳಲು ಆಸಕ್ತಿ ತೋರದಿರುವುದನ್ನು ಅಥವಾ ಕಠಿಣ ಕ್ರಮ ಕೈಗೊಳ್ಳದೆ ಸಡಿಲ ವಿಧಾನ ಅನುಸರಿಸುವುದನ್ನು ನಾವು ನೋಡಬಹುದು” ಎಂದು ‘ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ಎಥಿಕ್ಸ್‌’ನ ಸಂಪಾದಕ ಅಮರ್ ಜೆಸಾನಿ ಹೇಳಿರುವುದಾಗಿ Scorll.in ವರದಿ ಮಾಡಿದೆ. “ರಾಜ್ಯ ಮಟ್ಟದಲ್ಲಿ ನಿಯಂತ್ರಕ ಪ್ರಕರಣಗಳಲ್ಲಿ ರಾಜಿ ಮಾಡಿಕೊಳ್ಳಲು ಕೆಲ ಫಾರ್ಮಾ ಕಂಪನಿಗಳು ರಾಜಕೀಯ ಪಕ್ಷಗಳಿಗೆ ಹಣಕಾಸಿನ ನೆರವು ಒದಗಿಸಿದರೆ” ಆಶ್ಚರ್ಯವೇನಿಲ್ಲ ಎಂದು ಅಮರ್ ಜೆಸಾನಿ ಹೇಳಿದ್ದಾರೆ.

ಔಷಧ ನಿಯಂತ್ರಣ ಸಂಸ್ಥೆಗಳು, ಫಾರ್ಮಾ ಕಂಪನಿಗಳಿಗೆ ಸರ್ಕಾರಗಳಿಂದ ರಿಯಾಯಿತಿಗಳನ್ನು ಪಡೆಯಲು, ಅಗ್ಗದ ಭೂಮಿ ತಮ್ಮದಾಗಿಸಿಕೊಳ್ಳಲು, ತೆರಿಗೆ ವಿನಾಯಿತಿ ಪಡೆಯಲು, ಅನುಕೂಲಕರ ನೀತಿಗಳನ್ನು ರೂಪಿಸಿಕೊಳ್ಳಲು ಮತ್ತು ಬೆಲೆ ಮಿತಿಗಳನ್ನು ತೆಗೆದು ಹಾಕಲು ಸಹಾಯ ಮಾಡುವ ಒಂದು ಕ್ಷೇತ್ರವಾಗಿ ಮಾರ್ಪಟ್ಟಿವೆ ಎಂದು ತಜ್ಞರನ್ನು ಉಲ್ಲೇಖಿಸಿ Scorll.in ವರದಿ ಮಾಡಿದೆ.

ಚುನಾವಣಾ ಬಾಂಡ್‌ಗಳನ್ನು ಖರೀದಿಸಿದ ಅಥವಾ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದ ಕಂಪನಿಗಳ ಹೆಸರುಗಳು ಬಹಿರಂಗಗೊಂಡಿವೆ. ಆದರೆ, ಸ್ಪಷ್ಟವಾಗಿ ಯಾವ ಪಕ್ಷಗಳಿಗೆ ನೀಡಿದ್ದಾರೆ ಎಂಬ ಮಾಹಿತಿ ಗೊತ್ತಾಗಿಲ್ಲ. ಸುಪ್ರೀಂ ಕೋರ್ಟ್ ಆದೇಶಿಸಿದಂತೆ ಬಾಂಡ್‌ಗಳ ಸೀರಿಯಲ್ ನಂಬರ್‌ಗಳು ಬಹಿರಂಗೊಂಡರೆ ಮೇಲೆ ಉಲ್ಲೇಖಿಸಿದ ಫಾರ್ಮಾ ಕಂಪನಿಗಳು ಯಾವ ಪಕ್ಷಕ್ಕೆ ದೇಣಿಗೆ ನೀಡಿವೆ ಎಂಬುವುದು ಗೊತ್ತಾಗಬಹುದು.

ಅದೇನೇ ಇರಲಿ, ಔಷಧ ಕಂಪನಿಗಳು ರಾಜಕೀಯ ಪಕ್ಷಗಳಿಗೆ ನೂರಾರು ಕೋಟಿ ರೂಪಾಯಿಯ ಹಣಕಾಸಿನ ನೆರವು ನೀಡಿರುವುದರಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದು ‘ಆಲ್ ಇಂಡಿಯಾ ಡ್ರಗ್ ಆಕ್ಷನ್ ನೆಟ್‌ವರ್ಕ್‌ನ ಭಾಗವಾಗಿರುವ ಕಾರ್ಯಕರ್ತ ಎಸ್ ಶ್ರೀನಿವಾಸನ್ ತಿಳಿಸಿದ್ದಾರೆ. ಫಾರ್ಮಾ ಕಂಪನಿಗಳು ಪ್ರಜಾಪ್ರಭುತ್ವ ಉಳಿಸಲು, ಚುನಾವಣೆಗಾಗಿ ಅಥವಾ ದಾನವಾಗಿ ಹಣಕಾಸಿನ ನೆರವು ನೀಡಿವೆ ಎಂದರೆ ಇಲ್ಲಿ ಯಾರೂ ನಂಬಲು ಸಾಧ್ಯವಿಲ್ಲ ಎಂದು ಶ್ರೀನಿವಾಸನ್‌ ಹೇಳಿದ್ದಾರೆ.

ಚುನಾವಣಾ ಬಾಂಡ್‌ಗಳನ್ನು ಖರೀದಿಸಿದ ವರ್ಷಗಳಲ್ಲಿ ರಾಜ್ಯ ಆಹಾರ ಮತ್ತು ಔಷಧ ಸಂಸ್ಥೆಗಳಿಂದ ನೋಟಿಸ್‌ಗಳನ್ನು ಪಡೆದ ಏಳು ಫಾರ್ಮಾ ಕಂಪನಿಗಳ ಪಟ್ಟಿ ಇಲ್ಲಿದೆ:

1. ಹೆಟೆರೊ ಲ್ಯಾಬ್ಸ್ ಅಂಡ್ ಹೆಟೆರೊ ಹೆಲ್ತ್‌ಕೇರ್ :

ಈ ಕಂಪನಿಯು ಏಪ್ರಿಲ್ 2022ರಲ್ಲಿ ರೂ 39 ಕೋಟಿಯ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದೆ. ಇದಕ್ಕೂ ಹಿಂದಿನ 10 ತಿಂಗಳ ಅವಧಿಯಲ್ಲಿ ಹೈದರಾಬಾದ್ ಮೂಲದ ಈ ಕಂಪನಿಯು, ಮಹಾರಾಷ್ಟ್ರ ಆಹಾರ ಮತ್ತು ಔಷಧ ನಿಯಂತ್ರಣ ಮಂಡಳಿಯಿಂದ ಗುಣಮಟ್ಟವಿಲ್ಲದ ಔಷಧಿಗಳಿಗಾಗಿ ಆರು ನೋಟಿಸ್‌ಗಳನ್ನು ಸ್ವೀಕರಿಸಿದೆ.

ಅವುಗಳಲ್ಲಿ ಕನಿಷ್ಠ ಮೂರು ನೋಟಿಸ್‌ಗಳು ಕೋವಿಡ್ -19 ಗೆ ಚಿಕಿತ್ಸೆ ನೀಡಲು ವ್ಯಾಪಕವಾಗಿ ಬಳಸಲಾಗುವ ರೆಮ್‌ಡೆಸಿವಿರ್ ಎಂಬ ಆಂಟಿವೈರಲ್ ಔಷಧಕ್ಕೆ ಸಂಬಂಧಿಸಿದೆ. ಈ ಔಷಧವು ಕೋವಿಡ್‌ ಸಮಯದಲ್ಲಿ ಹೆಟೆರೊ ಸಂಸ್ಥೆಯ ವ್ಯವಹಾರವನ್ನು ವಿಸ್ತರಿಸಲು ಸಹಾಯ ಮಾಡಿತ್ತು.

ಮಹಾರಾಷ್ಟ್ರ ಆಹಾರ ಮತ್ತು ಔಷಧ ನಿಯಂತ್ರಣ ಮಂಡಳಿ ನಡೆಸಿದ ಪ್ರಯೋಗಾಲಯ ಪರೀಕ್ಷೆಯಲ್ಲಿ ರೆಮ್‌ಡೆಸಿವಿರ್ ಮಾದರಿಯಲ್ಲಿ ಕ್ಲಿಯರ್ ಲಿಕ್ವಿಡ್ ಬದಲಿಗೆ ಹಳದಿ ಬಣ್ಣದ ಲಿಕ್ವಿಡ್ ಕಂಡು ಬಂದಿದೆ. ಜುಲೈ 2021ರಲ್ಲಿ ಹೆಟೆರೊಗೆ ಈ ಕುರಿತು ಸೂಚನೆ ನೀಡಲಾಗಿತ್ತು. ಎರಡನೇ ಮಾದರಿಯಲ್ಲಿ ಅಗತ್ಯಕ್ಕಿಂತ ಕಡಿಮೆ ಪ್ರಮಾಣದ ಔಷಧವನ್ನು ಹೊಂದಿತ್ತು. ಈ ಸಂಬಂಧ ಅದೇ ವರ್ಷ ಅಕ್ಟೋಬರ್‌ನಲ್ಲಿ ನೋಟಿಸ್ ನೀಡಲಾಗಿತ್ತು. ರೆಮ್‌ಡೆಸಿವಿರ್‌ನ ಮೂರನೇ ಮಾದರಿಯೂ ನಕಲಿ ಎಂದು ಕಂಡು ಬಂದಿತ್ತು. ಈ ಸಂಬಂಧ ಡಿಸೆಂಬರ್ 2021ರಲ್ಲಿ ನೋಟಿಸ್ ನೀಡಲಾಗಿತ್ತು.

ನಕಲಿ ಔಷಧವು ಕಂಪನಿಯ ಉತ್ಪಾದನಾ ಪರವಾನಗಿಯನ್ನು ಅಮಾನತುಗೊಳಿಸುವುದ್ದಕ್ಕೆ ಕಾರಣವಾಗಬಹುದು ಎಂದು ಮಹಾರಾಷ್ಟ್ರದ ಔಷಧಗಳ ಮಾಜಿ ಜಂಟಿ ಆಯುಕ್ತ ಓಂಪ್ರಕಾಶ್ ಸಾಧ್ವಾನಿ ಹೇಳಿದ್ದಾರೆ. ಆದರೆ, ತೆಲಂಗಾಣದ ಔಷಧ ನಿಯಂತ್ರಣ ಸಂಸ್ಥೆ ಹೆಟೆರೊ ಕಂಪನಿ ವಿರುದ್ಧ ಕ್ರಮಕೈಗೊಂಡಿಲ್ಲ. ಹೆಟೆರೊ ಮಹಾರಾಷ್ಟ್ರದಿಂದ ನಕಲಿ ಔಷಧಗಳನ್ನು ಹಿಂಪಡೆದಿದೆ.

2021ರಲ್ಲಿ ಹೆಟೆರೊದ ಇತರ ಎರಡು ಉತ್ಪನ್ನಗಳಾದ ಆಂಟಿಫಂಗಲ್ ಔಷಧಿ ಇಟ್ಬೋರ್ ಕ್ಯಾಪ್ಸುಲ್ ಮತ್ತು ಬ್ಯಾಕ್ಟೀರಿಯಾದ ಸೋಂಕು ತಡೆಗೆ ಬಳಸಲಾಗುವ ಮೊನೊಸೆಫ್‌ನಲ್ಲಿ ಗುಣಮಟ್ಟದ ಕೊರತೆ ಕಂಡು ಬಂದಿತ್ತು.

2022 ರಲ್ಲಿ ಹೆಟೆರೊ ಖರೀದಿಸಿದ ರೂ 39 ಕೋಟಿ ಮೌಲ್ಯದ ಬಾಂಡ್‌ಗಳ ಜೊತೆಗೆ, ಜುಲೈ 2023 ರಲ್ಲಿ ರೂ 10 ಕೋಟಿ ಮತ್ತು ಅಕ್ಟೋಬರ್ 2023 ರಲ್ಲಿ ರೂ 11 ಕೋಟಿ ಮೌಲ್ಯದ ಬಾಂಡ್‌ಗಳನ್ನು ಸಹ ಖರೀದಿಸಿದೆ. ಕಂಪನಿಯು ಒಟ್ಟು ರೂ 60 ಕೋಟಿ ಮೌಲ್ಯದ ಬಾಂಡ್‌ಗಳು ಖರೀದಿಸಿದೆ.

2. ಟೊರೆಂಟ್ ಫಾರ್ಮಾ:

ಮೇ 2019 ರಿಂದ ಜನವರಿ 2024 ರ ನಡುವೆ ಈ ಕಂಪನಿಯು ರೂ 77.5 ಕೋಟಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದೆ.

ಗುಜರಾತ್ ಈ ಮೂಲದ ಕಂಪನಿಯ ಆಂಟಿಪ್ಲೇಟ್‌ಲೆಟ್ ಮೆಡಿಸಿನ್ ಡಿಪ್ಲಾಟ್-150 ಸ್ಯಾಲಿಸಿಲಿಕ್ ಆಸಿಡ್ ಪರೀಕ್ಷೆಯಲ್ಲಿ ವಿಫಲವಾಗಿತ್ತ. 2018 ರಲ್ಲಿ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತವು ಕಂಪನಿಯ ಔಷಧ ಕಳಪೆ ಗುಣಮಟ್ಟದ್ದಾಗಿದೆ ಎಂದು ಘೋಷಿಸಿತ್ತು.

ಅಕ್ಟೋಬರ್ 2019ರಲ್ಲಿ, ಯುಎಸ್‌ನ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ತನ್ನ ಉತ್ಪಾದನಾ ಘಟಕದಲ್ಲಿ ಪುನರಾವರ್ತಿತ ಗುಣಮಟ್ಟ ಸಂಬಂಧಿತ ವೈಫಲ್ಯಗಳಿಗಾಗಿ ಸಂಸ್ಥೆಗೆ ಎಚ್ಚರಿಕೆಯನ್ನು ನೀಡಿತ್ತು. ಈ ಸಂಬಂಧ ಭಾರತೀಯ ಅಧಿಕಾರಿಗಳು ಕಂಪನಿ ವಿರುದ್ದ ತನಿಖೆ ನಡೆಸಿ ಉತ್ಪಾದನಾ ಪರವಾನಗಿಯನ್ನು ರದ್ದುಗೊಳಿಸಬಹುದಿತ್ತು. ಆದರೆ, ಗುಜರಾತ್ ಸರ್ಕಾರ ಔಷಧ ಕಂಪನಿ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ.

ಫೆಬ್ರವರಿ 2023ರಲ್ಲಿ, ಅತಿಸಾರಕ್ಕೆ ಚಿಕಿತ್ಸೆ ನೀಡಲು ಬಳಸಲಾಗುವ ಲೋಪಮೈಡ್ ಔಷಧವು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿತ್ತು ಮತ್ತು ಕಳಪೆ ಗುಣಮಟ್ಟದ್ದಾಗಿತ್ತು.

ಟೊರೆಂಟ್ ಫಾರ್ಮಾ ಕಂಪನಿಯು 2019 ರ ಮೇ ಮತ್ತು ಅಕ್ಟೋಬರ್‌ನಲ್ಲಿ 12.5 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದೆ. 2021ರ ಏಪ್ರಿಲ್‌ನಲ್ಲಿ 7.50 ಕೋಟಿ ರೂಪಾಯಿ, ಜನವರಿ ಮತ್ತು ಅಕ್ಟೋಬರ್ 2022 ರಲ್ಲಿ 25 ಕೋಟಿ ರೂಪಾಯಿ, 2023 ರ ಅಕ್ಟೋಬರ್‌ನಲ್ಲಿ 7 ಕೋಟಿ ರೂಪಾಯಿ ಮತ್ತು 2024 ರ ಜನವರಿಯಲ್ಲಿ 25.5 ಕೋಟಿ ರೂಪಾಯಿ ಮೌಲ್ಯದ ಬಾಂಡ್‌ಗಳನ್ನು ಕಂಪನಿ ಖರೀದಿಸಿದೆ.

3. ಝೈಡಸ್ ಹೆಲ್ತ್‌ಕೇರ್ :

ಈ ಕಂಪನಿಯು 2022 ಮತ್ತು 2023ರ ನಡುವೆ 29 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದೆ.

2021ರಲ್ಲಿ, ಬಿಹಾರದ ಔಷಧ ನಿಯಂತ್ರಣ ಸಂಸ್ಥೆಯು ಗುಜರಾತ್ ಮೂಲದ ಕಂಪನಿ ತಯಾರಿಸಿದ ರೆಮೆಡಿಸಿವಿರ್ ಔಷಧಿಗಳಲ್ಲಿ ಬ್ಯಾಕ್ಟೀರಿಯಾದ ಎಂಡೋಟಾಕ್ಸಿನ್ ಕುರುಹುಗಳು ಕಂಡುಬಂದ ನಂತರ ನಕಲಿ ಎಂದು ಘೋಷಿಸಿತ್ತು. ಹಲವಾರು ರೋಗಿಗಳು ಈ ಔಷಧಿಗಳಿಂದ ಪ್ರತಿಕೂಲ ಪರಿಣಾಮ ಅನುಭವಿಸಿದ್ದಾರೆಂದು ವರದಿಯಾಗಿದೆ.

ಆದರೆ, ಗುಜರಾತ್ ಔಷಧ ನಿಯಂತ್ರ ಸಂಸ್ಥೆಯು ಕಂಪನಿಯ ಔ‍ಷಧಗಳ ಹೆಚ್ಚಿನ ಪರೀಕ್ಷೆಗಾಗಿ ಯಾವುದೇ ಮಾದರಿಗಳನ್ನು ಸಂಗ್ರಹಿಸಿಲ್ಲ. ಅಲ್ಲದೆ, ಝೈಡಸ್ನ ಉತ್ಪಾದನಾ ಘಟಕದ ವಿರುದ್ಧವೂ ಯಾವುದೇ ಕ್ರಮ ಕೈಗೊಂಡಿಲ್ಲ.

4.ಗ್ಲೆನ್‌ಮಾರ್ಕ್:

ಗುಣಮಟ್ಟವಿಲ್ಲದ ಔಷಧಿಗಳಿಗಾಗಿ ಈ ಕಂಪನಿಯು 2022 ಮತ್ತು 2023 ರ ನಡುವೆ ಐದು ನೋಟಿಸ್‌ಗಳನ್ನು ಸ್ವೀಕರಿಸಿದೆ. ಇವುಗಳಲ್ಲಿ ನಾಲ್ಕನ್ನು ಮಹಾರಾಷ್ಟ್ರದ ಆಹಾರ ಮತ್ತು ಔಷಧಗಳ ನಿಯಂತ್ರಣ ಸಂಸ್ಥೆ ನೀಡಿದೆ. ಕಂಪನಿಯ ರಕ್ತದೊತ್ತಡ ನಿಯಂತ್ರಿಸುವ ಔಷಧಿ ‘ಟೆಲ್ಮಾ’ ಗುಣಮಟ್ಟ ಹೊಂದಿಲ್ಲ ಎಂದು ಸಂಸ್ಥೆಯಯ ಹೇಳಿತ್ತು. ಗ್ಲೆನ್‌ಮಾರ್ಕ್ ಕಂಪನಿಯು ನವೆಂಬರ್ 2022 ರಲ್ಲಿ 9.75 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದೆ.

5. ಸಿಪ್ಲಾ :

ಭಾರತದ ಪ್ರಮುಖ ಔಷಧ ಉತ್ಪದನಾ ಸಂಸ್ಥೆಯಾದ ಇದು 2018 ಮತ್ತು 2022 ರ ನಡುವೆ ತನ್ನ ಔಷಧಿಗಳಿಗಾಗಿ ನಾಲ್ಕು ಶೋಕಾಸ್ ನೋಟಿಸ್‌ಗಳನ್ನು ಸ್ವೀಕರಿಸಿದೆ. 2019 ರಿಂದ, ಕಂಪನಿಯು ರೂ 39.2 ಕೋಟಿ ಮೌಲ್ಯದ ಬಾಂಡ್‌ಗಳನ್ನು ಖರೀದಿಸಿದೆ.

ಆಗಸ್ಟ್ 2018 ರಲ್ಲಿ, ಕಂಪನಿಯ ಆರ್‌ಸಿ ಕೆಮ್ಮಿನ ಸಿರಪ್ ತಪಾಸಣೆಯ ಸಮಯದಲ್ಲಿ ಮಾನದಂಡಗಳನ್ನು ಪೂರೈಸಲು ವಿಫಲವಾಗಿತ್ತು. 2019ರಲ್ಲಿ ಕಂಪನಿಯು ರೂ 14 ಕೋಟಿ ಮೌಲ್ಯದ ಬಾಂಡ್‌ಗಳನ್ನು ಖರೀದಿಸಿತ್ತು.

ಜುಲೈ 2021 ರಲ್ಲಿ, ಕಂಪನಿಯ ರೆಮೆಡಿಸಿವಿರ್ ಔಷಧಿ ಸಿಪ್ರೆಮಿಗೆ ಸಂಬಂಧಪಟ್ಟಂತೆ ಎರಡು ಬಾರಿ ನೋಟಿಸ್‌ಗಳನ್ನು ಸ್ವೀಕರಿಸಿದೆ. ಹೆಟೆರೊದಂತೆಯೇ, ಸಿಪ್ರೆಮಿಯು ಅಗತ್ಯಕ್ಕಿಂತ ಕಡಿಮೆ ಪ್ರಮಾಣದ ರೆಮೆಡಿಸಿವಿರ್ ಅನ್ನು ಹೊಂದಿರುವುದು ಕಂಡುಬಂದಿತ್ತು. ನವೆಂಬರ್ 2022 ರಲ್ಲಿ ಸಿಪ್ಲಾ ರೂ 25.2 ಕೋಟಿ ಮೌಲ್ಯದ ಬಾಂಡ್‌ಗಳನ್ನು ಖರೀದಿಸಿದೆ.

6. ಐಪಿಸಿಎ ಲ್ಯಾಬೊರೇಟರೀಸ್ ಲಿಮಿಟೆಡ್:

ನವೆಂಬರ್ 2022 ಮತ್ತು ಅಕ್ಟೋಬರ್ 2023 ರ ನಡುವೆ ಈ ಕಂಪನಿಯು ರೂ 13.5 ಕೋಟಿ ಮೌಲ್ಯದ ಬಾಂಡ್‌ಗಳನ್ನು ಖರೀದಿಸಿದೆ. ಅಕ್ಟೋಬರ್ 2018 ರಲ್ಲಿ ಕಂಪನಿಯ ಔಷಧಿಯಾದ ಲಾರಿಯಾಗೊ ಅಗತ್ಯಕ್ಕಿಂತ ಕಡಿಮೆ ಕ್ಲೋರೊಕ್ವಿನ್ ಫಾಸ್ಫೇಟ್ ಮಟ್ಟವನ್ನು ಹೊಂದಿರುವುದು ಬಹಿರಂಗವಾಗಿತ್ತು. ಮುಂಬೈನ ಆಹಾರ ಮತ್ತು ಔಷಧ ನಿಯತ್ರಣ ಸಂಸ್ಥೆಯು ಗುರುತಿಸಿ ಔಷಧವನ್ನು ಐಪಿಸಿಎಯ ಡೆಹ್ರಾಡೂನ್ ಕಾರ್ಖಾನೆಯಲ್ಲಿ ತಯಾರಿಸಲಾಗಿತ್ತು.

ಇಂಟಸ್‌ ಫಾರ್ಮಾಸ್ಯೂಟಿಕಲ್:

ಅಕ್ಟೋಬರ್ 2022 ರಲ್ಲಿ 20 ಕೋಟಿ ಮೌಲ್ಯದ ಬಾಂಡ್‌ಗಳನ್ನು ಈ ಕಂಪನಿ ಖರೀದಿಸಿತ್ತು. 2020ರಲ್ಲಿ, ಕಂಪನಿಯ ಎನ್ಪಿರಿಲ್-5 ಮಾತ್ರೆಎಯು ಮಹಾರಾಷ್ಟ್ರದ ಆಹಾರ ಮತ್ತು ಔಷಧ ನಿಯಂತ್ರಣ ಸಂಸ್ಥೆಯ ಪರೀಕ್ಷೆಯಲ್ಲಿ ವಿಫಲವಾಗಿತ್ತು.

ಇತ್ತೀಚಿನ ವರ್ಷಗಳಲ್ಲಿ, ಹಲವಾರು ದೇಶಗಳಲ್ಲಿ ಭಾರತದ ಕೆಮ್ಮಿನ ಸಿರಪ್‌ಗಳು ಮತ್ತು ಕಣ್ಣಿನ ಮುಲಾಮುಗಳಿಗೆ ಸಂಬಂಧಿಸಿದ ಸಾವುಗಳು ಸಂಭವಿಸಿರುವುದು ಮತ್ತು ಸೋಂಕು ಹರಡಿರುವುದು ಭಾರತದ ಔಷಧೀಯ ಕ್ಷೇತ್ರದ ಗುಣಮಟ್ಟದ ಬಗ್ಗೆ ಪ್ರಶ್ನೆಗಳನ್ನು ಎತ್ತಿದೆ.

ಹಲವು ದೇಶಗಳ ಸರ್ಕಾರಗಳು ಭಾರತದ ಕಂಪನಿಗಳಿಂದ ಔಷಧ ಖರೀದಿಯನ್ನು ಸ್ಥಗಿತಗೊಳಿಸಿವೆ. ವಿಶ್ವ ಆರೋಗ್ಯ ಸಂಸ್ಥೆಯಂತಹ ಜಾಗತಿಕ ಸಂಸ್ಥೆಗಳು ಎಚ್ಚರಿಕೆಗಳನ್ನು ನೀಡಿವೆ. ಆದರೆ, ಭಾರತೀಯ ಅಧಿಕಾರಿಗಳು ಕಂಪನಿಗಳ ಮೇಲೆ ಯಾವುದೇ ಕಠಿಣ ಕ್ರಮ ಕೈಗೊಂಡಂತೆ ಕಾಣುತ್ತಿಲ್ಲ.

ಇದನ್ನೂ ಓದಿ : ಮಾ.21ರೊಳಗೆ ಚುನಾವಣಾ ಬಾಂಡ್‌ ಕುರಿತು ಸಂಪೂರ್ಣ ಮಾಹಿತಿ ಬಹಿರಂಗಗೊಳಿಸಿ: ಸುಪ್ರೀಂಕೋರ್ಟ್‌ನಿಂದ ಎಸ್‌ಬಿಐಗೆ ಖಡಕ್‌ ಸೂಚನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read