‘ಜನತಾದಳದ ವರಿಷ್ಠರಾದ ಹೆಚ್.ಡಿ. ದೇವೇಗೌಡ, ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅವರು ನಮ್ಮ ನಡುವಿನ ಕೆಲವು ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲಿಲ್ಲ; ಅವರು ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣೆಸುತ್ತಿದ್ದಾರೆ’ ಎಂದು ಜೆಡಿಎಸ್ ಹಿರಿಯ ಮುಖಂಡ ಮರಿತಿಬ್ಬೇಗೌಡ ಆರೋಪ ಮಾಡಿದ್ದಾರೆ.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರ ಹುಬ್ಬಳ್ಳಿ ನಿವಾಸದಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಅವರು, ಜೆಡಿಎಸ್ ವರಿಷ್ಠರಾದ ದೇವೇಗೌಡ ಮತ್ತು ಕುಮಾರಸ್ವಾಮಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ, ಜೆಡಿಎಸ್ ತೊರೆಯುವ ಸೂಚನೆಯನ್ನೂ ನೀಡಿದ್ದಾರೆ.
ರಾಜೀನಾಮೆ ಅಂಗೀಕಾರವಾದ ನಂತರ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಪಕ್ಷದ ಕಾರ್ಯಕರ್ತರನ್ನು ಕಡೆಗಣಿಸಬವಾರದು ಎಂದು ಆಗಾಗ ನಮ್ಮ ಪಕ್ಷದ ನಾಯಕರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಆದರೆ, ನಮ್ಮ ಸಲಹೆಗಳು ವರಿಷ್ಠರಿಗೆ ಹಿಡಿಸಲಿಲ್ಲ. ದಕ್ಷಿಣ ಪಧವೀಧರ ಕ್ಷೇತ್ರದ ಚುನಾವಣೆಯಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ಕೊಡಬೇಕು ಎಂದು ಕೇಳಿದ್ದೆವು. ಆ ಸಂದರ್ಭದಲ್ಲಿ ಅವರು ರಾಜಕಾರಣದಲ್ಲೇ ಇಲ್ಲದ ವ್ಯಕ್ತಿಗೆ ಟಿಕೆಟ್ ಕೊಟ್ಟರು. ಪಕ್ಷದ ಕಾರ್ಯಕರ್ತರಿಗೆ ಕೊಟ್ಟರೆ ಗೆಲ್ಲಿಸುವ ಜವಾಬ್ದಾರಿ ನಮ್ಮದು ಎಂದು ಹೇಳಿದ್ದೆವು. ಆದರೆ, ಅವರು ಟಿಕೆಟ್ ಕೊಡಲಿಲ್ಲ’ ಎಂದು ಬೇಸರ ಹೊರಹಾಕಿದರು.
‘ವಯಕ್ತಿಕ ಕಾರಣದಿಂದ ನಾನು ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ನಾನು ಜನತಾ ದಳದಿಂದ ಎರಡು ಬಾರಿ ಟಿಕೆಟ್ ಪಡೆದಿದ್ದೆ. ಎರಡು ಬಾರಿ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಗೆದ್ದಿದ್ದೇನೆ. ಈ ಅವಧಿಯಲ್ಲಿ ಮೂರು ವರ್ಷಗಳ ಕಾಲ ವಿಧಾನ ಪರಿಷತ್ ಉಪ ಸಭಾಪತಿ ಆಗಿದ್ದೆ. ನನ್ನ ರಾಜಕೀಯ ಜೀವನ ಪ್ರಾರಂಭವಾಗಿದ್ದು 1985ರಿಂದ ಜನತಾ ದಳದ ಮೂಲಕ; ಕೆಲವು ಸಲ ನನಗೆ ವಿಧಾನ ಪರಿಷತ್ ಹಾಗೂ ವಿಧಾನಸಭೆ ಟಿಕೆಟ್ ಪಕ್ಷದಿಂದ ಸಿಗಲಿಲ್ಲ’ ಎಂದರು.
‘2000ನೇ ಇಸವಿಯಲ್ಲಿ ನಾನು ನಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ವಿಧಾನ ಪರಿಷತ್ಗೆ ಆಯ್ಕೆಯಾಗಿದ್ದೆ. ಎರಡನೇ ಬಾರಿ ಪಕ್ಷೇತರವಾಗಿ ಗೆದ್ದು ಬಂದಿದ್ದೆ; ಮೂರು ನಾಲ್ಕನೇ ಬಾರಿ ನಾನು ಜನತಾದಳದಿಂದ ಗೆದ್ದು ಬಂದಿದ್ದೇನೆ. ಪಕ್ಷದ ನಿಷ್ಠಾವಂತ ಸದಸ್ಯನಾಗಿ ಕೆಲಸ ಮಾಡಿದ್ದೇನೆ’ ಎಂದರು.
‘ನಾನು ನನಗೆ ಮತ ನೀಡಿದ ಶಿಕ್ಷಕ ಬಂಧುಗಳ ಜೊತೆ ಸಮಾಲೋಚನೆ ಮಾಡಿ ರಾಜೀನಾಮೆ ನಿರ್ಧಾರ ಮಾಡಿದ್ದೇನೆ. ಎಲ್ಲರೂ ಪಕ್ಷ ಬಿಡಿ ಎಂದು ಅಭಿಪ್ರಾಯ ಸೂಚಿಸಿದ್ದಾರೆ. ಹೀಗಾಗಿ ನಾನು ರಾಜೀನಾಮೆ ನೀಡಿದ್ದೇನೆ. ಶೀಘ್ರವೇ ನನ್ನ ಮುಂದಿನ ನಡೆ ತಿಳಿಸಲಾಗುವುದು’ ಎಂದು ಹೇಳುವ ಮೂಲಕ ಅವರು ಜೆಡಿಎಸ್ ತೊರೆಯುವ ಸುಳಿವು ನೀಡಿದ್ದಾರೆ.
ಜೆಡಿಎಸ್ ನಾಯಕರು ಮೊಸಳೆ ಸವಾರಿ ಮಾಡುತ್ತಿದ್ದಾರೆ:
ಸಭಾಪತಿ ಬಸವರಾಜ ಹೊರಟ್ಟಿಯವರ ಬಗ್ಗೆ ಮಾತನಾಡಿ, ‘ಹೊರಟ್ಟಿ ನನ್ನ ರಾಜಕೀಯ ಗುರುಗುಳು; ಇವತ್ತು ನಾನು ಅವರಿಗೆ ರಾಜೀನಾಮೆ ಸಲ್ಲಿಸಿದ್ದೇನೆ. ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ಸಲ್ಲಿಸಿದ್ದೇನೆ. ನಮ್ಮ ಪಕ್ಷದ ನಾಯಕರು ಮೊಸಳೆ ಮೇಲೆ ಸವಾರಿ ಮಾಡುತ್ತಿದ್ದಾರೆ. ಮೊಸಳೆ ಅಂದರೆ ಬಿಜೆಪಿ; ಮೊಸಳೆ ಸವಾರಿ ಅವರಿಗೆ ಒಳ್ಳೆದಲ್ಲ’ ಎಂದು ಹೇಳುವ ಬಿಜೆಪಿ ಜೊತೆಗಿನ ಮೈತ್ರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ರಾಜೀನಾಮೆ ಅಂಗೀಕಾರವಾಗಿದೆ: ಹೊರಟ್ಟಿ
ಮಾಧ್ಯಮಗಳ ಮುಂದೆಯೇ ರಾಜೀನಾಮೆ ಪತ್ರ ಸ್ವೀಕರಿಸಿದ ಸಭಾಪತಿ ಬಸವರಾಜ ಹೊರಟ್ಟಿ, ‘ನಿಮ್ಮ ರಾಜೀನಾಮೆ ಅಂಗೀಕಾರವಾಗಿದೆ’ ಎಂದು ಹೇಳಿದರು. ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಹುಬ್ಬಳ್ಳಿಯ ಗೃಹ ಕಚೇರಿಗೆ ಆಗಮಿಸಿದ ಗೌಡರು, ರಾಜೀನಾಮೆ ಪತ್ರ ಸಲ್ಲಿಸಿದರು. ‘ಮರಿತಿಬ್ಬೇಗೌಡ ಸ್ವಹಿತಾಸಕ್ತಿಯಿಂದ ರಾಜೀನಾಮೆ ನೀಡಿದ್ದು, ಅವರ ರಾಜೀನಾಮೆ ಅಂಗೀಕರಿಸಲಾಗಿದೆ. ಇನ್ನು ಮುಂದೆ ಅವರು ಪರಿಷತ್ತಿನ ಸದಸ್ಯರಲ್ಲ; ಮುಂದಿನ ಕ್ರಮಗಳನ್ನು ಜಾರಿಗೊಳಿಸಲಾಗುತ್ತದೆ’ ಎಂದು ಮಾಧ್ಯಮಗಳಿಗೆ ಬಸವರಾಜ ಹೊರಟ್ಟಿಯವರು ಮಾಹಿತಿ ನೀಡಿದರು.
ಇದನ್ನೂ ಓದಿ;


