HomeಅಂಕಣಗಳುFund Transfer from center to states : ’ಸುದ್ದಿಯೇನೆ, ಮನೋಲ್ಲಾಸಿನಿ?’

Fund Transfer from center to states : ’ಸುದ್ದಿಯೇನೆ, ಮನೋಲ್ಲಾಸಿನಿ?’

- Advertisement -
- Advertisement -

ಕೋಟ್ಯಾಂತರ ಜನ ಅತ್ತೂ ಕರದೂ ಹಾಕಿದ ಮೇಲೆ? ನೆರೆ ಪರಿಹಾರಕ್ಕೆ ಅಂತ ಇಟಗೊರಿ? ಅಂತ ಕೇಂದ್ರದವರು ರಾಜ್ಯಕ್ಕೆ 1,200 ಕೋಟಿ ರೂಪಾಯಿ ಕೊಟ್ಟಾರ.

ಇದಕ್ಕ ಥರಾಥರಾ ಪ್ರತಿಕ್ರಿಯೆ ಬಂದಾವ.

‘ಇದು ಕಮ್ಮಿ’ ಅಂತ ಕೆಲವು ಜನಾ, ‘ಇದ ಹೆಚ್ಚು, ಇದಕ್ಕಿಂತ ಹೆಚ್ಚು ಏನ್ ಕೊಡತಾರ’ ಅಂತ ಕೆಲವರು ಅಂದರ, ಇನ್ನೂ ಕೆಲವರು ‘ಅವರು ದೇವರು ಇದ್ದಂಗೆ, ಅವರು ಕೃಪಾ ಮಾಡತಾರ. ಸ್ವಲ್ಪ ತಡಾ ಆಗಬಹುದು, ಅಷ್ಟ- ಖುದಾ ಕೆ ಘರ್ ಮೆ ದೇರ್ ಹೈ, ಅಂಧೇರಾ ನಹಿ,’ ಅಂತನೂ ಹೇಳ್ಯಾರ.

ಈ ಗನಗಂಬೀರ ವಿಷಯವನ್ನು ನಮ್ಮಂತಾ ಹುಲು ಮಾನವರು ಸ್ವಲ್ಪ ತಿಳಕೊಳ್ಳೋಣ, ಬನ್ನಿ

‘ಧನ ವಿನಿಯೋಗ’

ಒಂದು ವರ್ಷದಲ್ಲಿ ಕೇಂದ್ರ ಸರಕಾರದಿಂದಾ ರಾಜ್ಯಗಳಿಗೆ ಬರಬಹುದಾದ ರೊಕ್ಕಕ್ಕ ಧನ ವಿನಿಯೋಗ ಅಂತಾರ
ಇದು ಮೂರು ರೀತಿಯದು-

1. ಹಣಕಾಸು ಆಯೋಗ ಹೇಳಿದಷ್ಟು ಕೊಡುವುದು ಹಾಗೂ ಬ್ಯಾರೆ ರೀತಿ ಹಣ ಹಂಚಿಕೆ.

2. ಕೇಂದ್ರದ ಯೋಜನೆಗಳು

3. ಕೇಂದ್ರ ಹಾಗೂ ರಾಜ್ಯದ ಹೆಸರಿನಲ್ಲಿ ವಸೂಲು ಮಾಡುವ ತೆರಿಗೆ ಅಥವಾ ಸುಂಕ. ನಮ್ಮ ಉತ್ತರ ಕರ್ನಾಟಕದಾಗ ಸುಂಕ ಅಂತೇವೆಲ್ಲಾ, ಅಂತಾ ಸುಂಕ ಅಲ್ಲ ಮತ್ತ.

ಒಂದು ವರ್ಷಕ್ಕ ಕೇಂದ್ರ ರಾಜ್ಯಗಳಿಗೆ ಹಂಚುವ ಹಣ ಸುಮಾರು 50 ಲಕ್ಷ ಕೋಟಿ. ಇದರಾಗ 39 ಲಕ್ಷ ಕೋಟಿ ತೆರಿಗೆಯ ಮರು ಹಂಚಿಕೆ, 6 ಲಕ್ಷ ಕೋಟಿ ಮತ್ತ 5 ಲಕ್ಷ ಕೋಟಿ ವಿನಿಯೋಗ. ಇದನ್ನು ಬಿಟ್ಟು ಸುಮಾರು 3 ಲಕ್ಷ ಕೋಟಿ ನೇರ ಹಾಗೂ ನೇರವಲ್ಲದ ಸಬ್ಸಿಡಿ ಬಿಡುಗಡೆಯಾಗುತ್ತದೆ- ಪೆಟ್ರೋಲು, ಪೆಟ್ರೋಲಿನಿಂದ ಮಾಡಿದ ಗೊಬ್ಬರ, ಹಾಗೂ ಗೊಬ್ಬರದಿಂದ ಬೆಳೆದ ಧಾನ್ಯಗಳಿಗೆ.

ಇನ್ನು ಪ್ರಕೃತಿ ವಿಕೋಪ ಮುಂತಾದ ತುರ್ತುಗಳಿಗೆ ಕೊಡುವ ಧನಸಹಾಯ, ಅದು ಬ್ಯಾರೇನ.

ಸುಂಕ- ತೆರಿಗೆಯೊಳಗ ಎರಡು ಥರಾ. ನೇರ ಹಾಗೂ ನೇರವಲ್ಲದ ಅಥವಾ ಅಪ್ರತ್ಯಕ್ಷ. ಸರಕಾರಕ್ಕ ನಾವೆಲ್ಲಾ ಡೈರೆಕ್ಟಾಗಿ ರೊಕ್ಕ ಕೊಟ್ಟರ ಅದು ನೇರ. ಇನ್ನೊಬ್ಬರ ಮೂಲಕ ಕೊಟ್ಟರ ಅದು ಇನ್‍ಡೈರೆಕ್ಟ್ ತೆರಿಗೆ.

ಕೇಂದ್ರ ನೇರವಾಗಿ ವಸೂಲು ಮಾಡುವ ಆದಾಯ ತೆರಿಗೆಯನ್ನು ಅದು ರಾಜ್ಯಗಳಿಗೆ ಕೊಡೋದಿಲ್ಲ. ಸೆಸ್ ಅನ್ನುವ ಸಂಶಯಾಸ್ಪದ ಹೆಸರಿನ ತೆರಿಗೆ ಒಂದು ಅದ. ಈ ಕೆಲಸಕ್ಕೆ ಇದನ್ನು ಉಪಯೋಗಸ್ತೇವಿ ಅಂತೇಳಿ ವಸೂಲು ಮಾಡೋದು ಸೆಸ್ಸು. ಇದನ್ನೂ ರಾಜ್ಯಗಳ ಜೊತೆ ಹಂಚಿಕೊಳ್ಳಬೇಕಾಗಿಲ್ಲ. ಕಳೆದ 10 ವರ್ಷದಾಗ ಈ ಸೆಸ್ಸುಗಳ ಸಂಖ್ಯೆ ಸುಮಾರು 100 ಶೇಕಡಾ ಹೆಚ್ಚಾಗೇದ.

ಇನ್ನು ಜಿಎಸ್‍ಟಿ ಅಥವಾ ಸರಕು ಹಾಗೂ ಸೇವಾ ತೆರಿಗೆ. ಸಿಂಪಲ್ ಆಗಿ ಹೇಳಬೇಕಂದರೆ ಆದಾಯ ಬಿಟ್ಟರ ಉಳಿದ ಎಲ್ಲಾ ತೆರಿಗೆ ಇದರಾಗ ಬರ್ತಾವ. ಅದು ಆದಾಯದ ಮ್ಯಾಲೆ ಆದರ ಇದು ಖರ್ಚಿನ ಮ್ಯಾಲೆ. ಇದರಾಗ ಏನ್ರಿ, ಯಾವುದರ ಹೆಸರಾಗ ರೊಕ್ಕ ಕಸಗೊಳೋದು ಅಂತೀರೇನು? ಅದಕ್ಕ ಹೇಳೋದು ಸಾವಿನ ನಂತರ ಈ ಜೀವನದಾಗ ಖಾತ್ರಿ ಇರೋದು ತೆರಿಗೆ ಮಾತ್ರ ಅಂತ.

ಜಿಎಸ್‍ಟಿಯ ಪಾಲು ರಾಜ್ಯಗಳಿಗೆ ಸಿಗತದ. ಇನ್ನು ಕೇಂದ್ರಕ್ಕ ಕೊಡಲಾರದ ತಾವ ಹಾಕಿ ತಾವೇ ಬಳಸೋ ತೆರಿಗೆ ಕೆಲವು ಅವ. ಹೊಟೆಲ್ ಒಳಗ ಊಟಾ ಮಾಡಿ, ಬೀರ್ ಬಾಟಲ್ ಕೈಯಾಗ ಹಿಡಕೊಂಡು ಸಿನಿಮಾಕ್ಕ ಹೋದವರು ರಾಜ್ಯಕ್ಕೆ ಮೂರು ಥರದ ಸುಂಕ ಸೇವಾ ಮಾಡಿರತಾರ.

ಕೇಂದ್ರ ಸರಕಾರದ ಯೋಜನೆಗಳು- ಒಟ್ಟು 99. ಇದರೊಳಗ ಮೂರು ಥರಾ. ಹಳೇ ಯೋಜನೆ, ನಡುವೆ ನಿಂತು ಹೋಗಿ, ಮತ್ತೆ ಶುರು ಆದ ಹಳೇ ಯೋಜನೆ, ಹಾಗೂ ಹೊಸಾ ಹೆಸರಿನ ಹಳೇ ಯೋಜನೆ.

ಮನೆ ಕಟ್ಟುವುದು, ಮನೆಯಲ್ಲಿ ಸಂಡಾಸು ಕಟ್ಟುವುದು, ಹಾದಿ ಮ್ಯಾಲೆ ಹೋಗೋರು ಹಾದಿ ಮ್ಯಾಲಿನ ಕಸಾ ಗುಡಸೋದು, ಇಂತಾ ಯೋಜನೆ ಒಂದಿಷ್ಟು. ಇನ್ನ ಉತ್ತರಾಖಂಡೀ ಶುದ್ಧ ಹಿಂದೀ ಯಲ್ಲಿ ಹೆಸರಿಟ್ಟ ಉನ್ನತೀಕರಣ್ ಯೋಜನಾ, ವಿಕಾಸ್ ಯೋಜನಾ, ಆಯೋಜನಾ, ನೀತಿ, ಗೀತಿ, ಅವೆಲ್ಲಾ ಬ್ಯಾರೆ.
ಇದರೊಳಗ ಸಂಪೂರ್ಣ ಕೇಂದ್ರ ತಮ್ಮದೇ ದುಡ್ಡು ಹಾಕಿ ನೇರವಾಗಿ ಜಾರಿ ಮಾಡೋ ಅಂಥಾವು 27 ಸ್ಕೀಮು. ಇನ್ನು ಇದರಾಗ ರಾಜ್ಯದವರದೂ ಪಾಲು ಇರಲಿ ಅಂತೇಳಿ, ರಾಜ್ಯದ ನಿಗರಾಣಿಯಲ್ಲಿ ಮಾಡೋ ಅಂಥಾವು 72. ಇವಕ್ಕ ಬರೋ ಫಂಡು ಬ್ಯಾರೆ.

‘ಅಣಕಾಸು ಹಾಯೋಗ’

ಸಣ್ಣ ವಯಸ್ಸಿನಲ್ಲಿಯೇ ದೊಡ್ಡ ವಕೀಲರಾಗಿ, ಭಾರಿ ಭಯಂಕರ ಭಾಷಣಕಾರರಾಗಿ, ‘ಸೋಷಿಯಲ್ ಮೀಡಿಯಾ ಸ್ಟಾರ್’ ಅನ್ನುವ ಬಿರುದಿಗೆ ಭೀಷಣರಾಗಿ, ಆ ನಂತರ ‘ಇದನ್ನ ಯಾಕ್ ಬಿಡೋದ್, ಟ್ರೈಮಾಡೇ ಬಿಡೋಣ’ ಅಂತ ಸಂಸತ್ ಸದಸ್ಯರಾಗಿಯೇ ಬಿಟ್ಟ ನಾಯಕರೊಬ್ಬರು ಕೇಂದ್ರದ ಹತ್ತಿರ ನಾವು ಯಾಕ್ ಕೇಳ್ ಬೇಕು? ನಮ್ಹತ್ರಾನೆ ಇದೆಯಲ್ಲಾ ಬೇಕಾದಷ್ಟು ದುಡ್ಡು, ಮೋದೀಜೀ 14 ನೇ ಅಣಕಾಸು ಹಾಯೋಗದ ಅಡಿಯಲ್ಲಿ ಬೇಕಷ್ಟು ಕೊಟ್ಟಿದಾರೆ, ಅಲ್ವಾ, ಅಂತಂದ್ರು. ನೆನಪ ಅದನ, ಆ ಡೀಪು ಥಾಟಿನ ಗೂಡಾರ್ಥ ಏನು ಹಂಗಂದರೆ?

ಆ ಆಯೊಗದ ಕತಿ ಮಜಾ ಐತಿ. ಸಂವಿಧಾನದ 280ನೇ ಕಲಮಿನ ಪ್ರಕಾರ ಪ್ರತಿ ಐದು ವರ್ಷಕ್ಕೊಮ್ಮೆ ಒಂದು ಹಣಕಾಸು ಆಯೋಗ ಆಗಬೇಕು. ತಾನು ತೆರಿಗೆದಾರರಿಂದ ಸಂಗ್ರಹಿಸಿದ ಹಣವನ್ನ ರಾಜ್ಯಗಳ ಗ್ರಾಮ ಪಂಚಾಯಿತಿ ಹಾಗೂ ನಗರಸಭೆಗಳಿಗೆ ಎಷ್ಟೆಷ್ಟು ಪ್ರಮಾಣದಾಗ ಎಷ್ಟೆಷ್ಟು ಕಂತಿನೊಳಗ ಕೊಡಬೇಕು ಅಂತ ನಿರ್ಧಾರ ಮಾಡೋದು ಈ ಆಯೋಗ. ಈಗ ರಿಸರ್ವ ಬ್ಯಾಂಕಿನ ಮಾಜಿ ಗವರ್ನರ್ ವೈ ವಿ ರೆಡ್ಡಿ ಅವರ ಸದಾರತ್ತಿನೊಳಗ 14ನೇ ಆಯೋಗ ಹಣಕಾಸು ಸಂಗ್ರಹದ 42 ಶೇಕಡಾ ರಾಜ್ಯಗಳಿಗೆ ಕೊಡಬೇಕು ಅಂತ ಹೇಳಿತು. ಕೇಂದ್ರ ಸರಕಾರ ಒಪ್ಪಿಕೊಂಡಿತು. ಆದರೆ ಆ ರೊಕ್ಕಾನ ನಾವು ಹೇಳಿದಂಗ ಖರ್ಚು ಮಾಡಬೇಕು ಅನ್ನೋ ಷರತ್ತು ಹಾಕಿತು.

ಹಿಂದಿಗಿಂತ ಹಣ ವಿನಿಯೋಗದ ಪ್ರಮಾಣ ಹೆಚ್ಚಾದರೂ ಖರ್ಚು ಮಾಡುವ ಸ್ವಾತಂತ್ರ್ಯದ ಪ್ರಮಾಣ ಕಮ್ಮಿ ಆಯಿತು.

ಹಂಗೂ ಸ್ವಾತಂತ್ರ್ಯ ಯಾರಿಗೆ ಬೇಕಾಗೇದ ಬಿಡ್ರಿ. ರೊಕ್ಕ ಇದ್ದರ ಸಾಕು.
“ತುಮ್ ಆಜಾದ್ ಹೋ ಸೋನೆ ಕಿ ಪಿಂಜರೇ ಮೆ.
ಚೀಖನೆ ಕೀ ಆಜಾದೀ ಹೈ ತುಮ್ಹೆ
ಮಗರ್ ಆವಾಜ್ ನಹೀ ಉಠಾನಾ,”
ಅನ್ನೋ ಶಾಯರಿ ಅದಅಲ್ಲಾ, ಹಂಗ.
ಹಣಕಾಸು ಆಯೋಗದ ಶಿಫಾರಸಿನ ಮೇರೆಗೆ ಬಂದ ಹಣವನ್ನು ನಗರ ಹಾಗೂ ಗ್ರಾಮೀಣ ಪ್ರದೇಶದ ಆಡಳಿತಕ್ಕಾಗಿ ಖರ್ಚು ಮಾಡಬೇಕು. ಇದು ಕಾನೂನು ಹಾಗೂ ಸಂಪ್ರದಾಯ.

ಉತ್ತರ ಕರ್ನಾಟಕದ ಮೇಲೆ 118 ವರ್ಷಗಳಲ್ಲಿ ಬೀಳದಷ್ಟು ಮಳಿ ಬಿದ್ದು, ಕೃಷ್ಣಾ ನದಿಯಲ್ಲಿ ಕೇವಲ ಮೂರು ವಾರದಲ್ಲಿ 600 ಟಿಎಂಸಿ ನೀರು ಬಂದು ಜನರ ಜೀವಾ, ಜೀವನ ಎರಡನ್ನೂ ಹರಿಸಿಕೊಂಡು ಹೋತಲ್ಲಾ, ಅದು ಪ್ರಕೃತಿ ವಿಕೋಪ ಅಲ್ಲಾ.

14 ನೇ ಹಣಕಾಸು ಆಯೋಗದ ದುಡ್ಡನ್ನು ನೆರೆ ಪರಿಹಾರದಂತ ಕೆಲಸಕ್ಕೆ ಬಳಸಿಗೋಬೇಕು, ಕೇಂದ್ರದಿಂದ ಹೆಚ್ಚಿನ ಹಣ ಕೇಳಬಾರದು ಎನ್ನುವ ಫರಮಾನು ಕೊಡಿಸುವ ಯುವ, ಶಿಕ್ಷಿತ, ನಾಯಕರನ್ನು ನಾವು ಆರಿಸಿ ಕಳಿಸಿದ್ದೇವಲ್ಲಾ, ಅದು ವಿಕೋಪ.

ಅದು ನೈಸರ್ಗಿಕವೋ ಕೃತ್ರಿಮವೋ ಅದು ಇನ್ನೊಂದು ದಿನದ ಚರ್ಚೆಯ ವಿಷಯ, ಅಲ್ಲವೇ ಮನೋಲ್ಲಾಸಿನೀ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...