ಚೀನಾ ಭಾರತದ ಭೂ ಪ್ರದೇಶದೊಳಗೆ ಪ್ರವೇಶಿಸುವಾಗ ಪ್ರಧಾನಿ ಮೋದಿ ನಿದ್ದೆ ಮಾತ್ರೆ ತೆಗೆದುಕೊಂಡು ಮಲಗಿದ್ರಾ? ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ವಾಗ್ದಾಳಿ ನಡೆಸಿದ್ದಾರೆ.
ರಾಜಸ್ಥಾನದ ಚಿತ್ತೋರಗಢದಲ್ಲಿ ಗುರುವಾರ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಖರ್ಗೆ, ಪ್ರಧಾನಿ ಮೋದಿಯವರನ್ನು ‘ಸುಳ್ಳುಗಾರರ ಸರದಾರ’ ಎಂದು ಕರೆದಿದ್ದು, ಚೀನಾ ಭಾರತದ ಭೂ ಪ್ರದೇಶಗಳನ್ನು ಆಕ್ರಮಿಸುತ್ತಿರುವಾಗ ಮೋದಿ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಗಾಂಧಿ ಕುಟುಂಬವನ್ನು ದೂಷಿಸುವುದರಲ್ಲಿ ನಿರತರಾಗಿದ್ದಾರೆ ಎಂದು ಹೇಳಿದ್ದಾರೆ.
ಮೋದಿಯವರಿಗೆ ನಿಜವಾಗಲು 56 ಇಂಚಿನ ಎದೆ ಇದ್ದಿದ್ದರೆ, ಧೈರ್ಯ ಇದ್ದಿದ್ದರೆ ಚೀನಾ ಭಾರತದ ಭೂ ಪ್ರದೇಶವನ್ನು ಆಕ್ರಮಿಸಲು ಹೇಗೆ ಅನುಮತಿಸುತ್ತಿದ್ದರು? ಎಂದು ಖರ್ಗೆ ಪ್ರಶ್ನಿಸಿದ್ದಾರೆ.
ಅವರು (ಚೀನಾ) ಭಾರತದೊಳಗೆ ನುಗ್ಗುವಾಗ ನೀವು ನಿದ್ದೆ ಮಾಡಿದ್ರಾ? ನಿದ್ದೆ ಮಾತ್ರೆ ತಗೊಂಡಿದ್ರಾ? ಎಂದು ಖರ್ಗೆ ತೀಕ್ಷ್ಣವಾಗಿ ಕುಟುಕಿದ್ದಾರೆ.
ವಿಪಕ್ಷಗಳ ನಾಯಕರ ಮೇಲೆ ಕೇಂದ್ರದ ತನಿಖಾ ಸಂಸ್ಥೆಗಳು ಗುರಿಯಾಗಿಸುತ್ತಿರುವುದನ್ನು ಉಲ್ಲೇಖಿಸಿದ ಖರ್ಗೆ, ಭ್ರಷ್ಟ ನಾಯಕರು ಎನ್ನಲಾದ ವ್ಯಕ್ತಿಗಳು ಆಡಳಿತ ಪಕ್ಷಕ್ಕೆ ಸೇರಿದಾಗ ಆರೋಪ ಮುಕ್ತರಾಗುತ್ತಿದ್ದಾರೆ. ಕೇಂದ್ರ ಸಚಿವ ಅಮಿತ್ ಶಾ ಅವರ ಬಳಿ ದೊಡ್ಡ ವಾಶಿಂಗ್ ಮೆಷಿನ್ ಇದೆ. ನಾಯಕರು ನಮ್ಮ ಬಳಿ ಇರುವಾಗ ಭ್ರಷ್ಟರಾಗಿರುತ್ತಾರೆ. ನಿಮ್ಮ ಬಳಿ ಬಂದ ಒಂದು ತಿಂಗಳಲ್ಲಿ ಶುದ್ಧರಾಗುತ್ತಿದ್ದಾರೆ ಎಂದಿದ್ದಾರೆ.
ಇದನ್ನೂ ಓದಿ: ಸ್ವತಂತ್ರ ಭಾರತದ ಮೊದಲ ಪ್ರಧಾನಿ ಸುಭಾಷ್ ಚಂದ್ರ ಬೋಸ್ ಎಂದ ಕಂಗನಾ: ವ್ಯಾಪಕ ಟ್ರೋಲ್


