ಚುನಾವಣೆಯ ಸಂದರ್ಭದಲ್ಲಿ ಇವಿಎಂಗಳು ಮತ್ತು ವಿವಿಪ್ಯಾಟ್ ಯಂತ್ರಗಳ ವಿಶ್ವಾಸಾರ್ಹತೆ ವಿಷಯದ ಕುರಿತು ಮಾಹಿತಿ ಹಕ್ಕು ಕಾಯ್ದೆ (ಆರ್ಟಿಐ) ಅಡಿಯಲ್ಲಿ ಕೇಳಲಾದ ಪ್ರಶ್ನೆಗಳಿಗೆ ಮಾಹಿತಿ ನೀಡದ ಚುನಾವಣಾ ಆಯೋಗದ ಬಗ್ಗೆ ಕೇಂದ್ರ ಮಾಹಿತಿ ಆಯೋಗ (ಸಿಐಸಿ) ಟೀಕಿಸಿದೆ ಮತ್ತು 30 ದಿನಗಳೊಳಗೆ ಲಿಖಿತ ವಿವರಣೆ ನೀಡುವಂತೆ ಚುನಾವಣಾ ಆಯೋಗಕ್ಕೆ ಸಿಐಸಿ ಸೂಚಿಸಿದೆ. ಇದಲ್ಲದೆ ಮಾಹಿತಿಯನ್ನು ನೀಡದಿರುವುದು ಕಾನೂನಿನ ಘೋರ ಉಲ್ಲಂಘನೆ ಎಂದು ಹೇಳಿದೆ.
ವಿದ್ಯುನ್ಮಾನ ಮತಯಂತ್ರಗಳ (ಇವಿಎಂ), ಪೇಪರ್ ಆಡಿಟ್ ಟ್ರಯಲ್ (ವಿವಿಪಿಎಟಿ) ಮತ್ತು ಮತ ಎಣಿಕೆ ವಿಶ್ವಾಸಾರ್ಹತೆ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದವರಲ್ಲಿ ಓರ್ವರಾದ ಮಾಜಿ ಐಎಎಸ್ ಅಧಿಕಾರಿ ಎಂ ಜಿ ದೇವಸಹಾಯಂ ಅವರು ಈ ಕುರಿತು ಆರ್‌ಟಿಐ ಮಾಹಿತಿಯನ್ನು ಕೋರಿದ್ದು, ತೆಗೆದುಕೊಂಡ ಕ್ರಮಗಳ ಬಗ್ಗೆ ವಿವರಣೆಯನ್ನು ನೀಡುವಂತೆ ಆಗ್ರಹಿಸಿದ್ದರು.
ನವೆಂಬರ್ 22, 2022ರಂದು ಸಲ್ಲಿಸಲಾದ ಆರ್‌ಟಿಐ ಅರ್ಜಿಯಲ್ಲಿ, ಸಾರ್ವಜನಿಕ ಅಧಿಕಾರಿಗಳು, ಸಮಸ್ಯೆಯ ಕುರಿತು ನಡೆಸಿದ ಸಭೆಗಳ ವಿವರಗಳು ಮತ್ತು ಎಲ್ಲಾ ಸಂಬಂಧಿತ ಟಿಪ್ಪಣಿಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಲು ಬಯಸಿದ್ದರು. ಕಡ್ಡಾಯವಾಗಿ 30 ದಿನಗಳ ಅವಧಿಯೊಳಗೆ ವರದಿ ಸಲ್ಲಿಸಬೇಕೆಂದಿದ್ದರೂ ಚುನಾವಣಾ ಆಯೋಗ ಅವರಿಗೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಹಿರಿಯ ಅಧಿಕಾರಿಗಳು ದೇವಸಹಾಯಂ ಅವರ ಮೊದಲ ಮನವಿಯನ್ನು ಆಲಿಸಲಿಲ್ಲ. ಆದ್ದರಿಂದ ಅವರು ಎರಡನೇ ಬಾರಿಗೆ ಚುನಾವಣಾ ಆಯೋಗಕ್ಕೆ ಮನವಿಯನ್ನು ಸಲ್ಲಿಸಿದ್ದರು.
ಮುಖ್ಯ ಮಾಹಿತಿ ಆಯುಕ್ತ ಹೀರಾಲಾಲ್ ಸಮರಿಯಾ ಅವರನ್ನು ಈ ಬಗ್ಗೆ ಪ್ರಶ್ನಿಸಿದಾಗ, ದೇವಸಹಾಯಂಗೆ ಏಕೆ ಯಾವುದೇ ಪ್ರತಿಕ್ರಿಯೆಯನ್ನು ನೀಡಲಿಲ್ಲ ಎಂಬ ಬಗ್ಗೆ ತೃಪ್ತಿಕರ ಉತ್ತರವನ್ನು ನೀಡಲು ವಿಫಲರಾಗಿದ್ದಾರೆ ಎಂದು ವರದಿಯು ಉಲ್ಲೇಖಿಸಿದೆ. ಆರ್‌ಟಿಐ ಅರ್ಜಿಗೆ 30 ದಿನಗಳೊಳಗೆ ಪ್ರತಿಕ್ರಿಯೆಯನ್ನು ನೀಡುವಂತೆ ಸಮರಿಯಾ ಚುನಾವಣಾ ಆಯೋಗಕ್ಕೆ ಸೂಚಿಸಿದ್ದಾರೆ.
ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಮತ್ತು ಭಾರತೀಯ ನಿರ್ವಹಣಾ ಸಂಸ್ಥೆ (ಐಐಎಂ) ಪ್ರಾಧ್ಯಾಪಕರು ಸೇರಿದಂತೆ ಪ್ರಸಿದ್ಧ ತಾಂತ್ರಿಕ ವೃತ್ತಿಪರರು ಮತ್ತು ಶಿಕ್ಷಣ ತಜ್ಞರು ಮತ್ತು ನಿವೃತ್ತ ಐಎಎಸ್, ಐಪಿಎಸ್ ಮತ್ತು ಐಎಫ್‌ಎಸ್ ಅಧಿಕಾರಿಗಳು ಸೇರಿದಂತೆ ಮಾಜಿ ನಾಗರಿಕ ಸೇವಾ ಅಧಿಕಾರಿಗಳು ಇವಿಎಂ ವಿಶ್ವಾಸಾರ್ಹತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿಕೊಂಡು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರು. ಪತ್ರದಲ್ಲಿ ತಾಂತ್ರಿಕ ವೃತ್ತಿಪರರು, ಶಿಕ್ಷಣ ತಜ್ಞರು ಮತ್ತು ಮಾಜಿ ನಾಗರಿಕ ಸೇವಾಧಿಕಾರಿಗಳು ಈ ಬಗ್ಗೆ ಇಸಿಐನಿಂದ ತುರ್ತು ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತೇವೆ ಎಂದು ಹೇಳಿದ್ದರು.
ಇದನ್ನು ಓದಿ: ಸಂವಿಧಾನದ ಮೇಲೆ ಆರೆಸ್ಸೆಸ್, ಬಿಜೆಪಿ ದಾಳಿ ನಡೆಸುತ್ತಿದೆ: ರಾಹುಲ್ ಗಾಂಧಿ


