ಕಾಶ್ಮೀರಿ ಪಂಡಿತರ ಸಂಘಟನೆ, ಆಲ್ ಇಂಡಿಯಾ ಕಾಶ್ಮೀರಿ ಹಿಂದೂ ಫೋರಂ (ಎಐಕೆಹೆಚ್‌ಎಫ್) ಶನಿವಾರ ಜಮ್ಮುವಿನ ಪಕ್ಷದ ಪ್ರಧಾನ ಕಚೇರಿಯಲ್ಲಿ ಕಾಂಗ್ರೆಸ್‌ನೊಂದಿಗೆ ವಿಲೀನಗೊಂಡಿದೆ.
ಜಮ್ಮು ಮತ್ತು ಕಾಶ್ಮೀರ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ವಿಕಾರ್ ರಸೂಲ್ ವಾನಿ ಅವರು ಎಐಕೆಹೆಚ್‌ಎಫ್ ಅಧ್ಯಕ್ಷ ರತನ್ ಲಾಲ್ ಭಾನ್ ಮತ್ತು ಇತರ ಪದಾಧಿಕಾರಿಗಳನ್ನು ಪಕ್ಷಕ್ಕೆ ಸ್ವಾಗತಿಸಿದ್ದಾರೆ.
ಎಐಕೆಹೆಚ್‌ಎಫ್ ಅನ್ನು 1998 ರಲ್ಲಿ ಸ್ಥಾಪಿಸಲಾಯಿತು. ಅದರ ನೂರಾರು ಸದಸ್ಯರು ಕಾಂಗ್ರೆಸ್‌ಗೆ ಸೇರಿರುವುದು ಪಕ್ಷಕ್ಕೆ ದೊಡ್ಡ ಬಲ ಬಂದಂತಾಗಿದೆ ಎಂದು ವಾನಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಎಲ್ಲಾ ಕಾಶ್ಮೀರಿ ಪಂಡಿತ ಸಂಘಟನೆಗಳನ್ನು ಕಾಂಗ್ರೆಸ್ ಪಕ್ಷ ಸೇರಲು ಆಹ್ವಾನಿಸಿರುವ ರಸೂಲ್ ವಾನಿ, “ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ 10 ವರ್ಷಗಳಿಂದ ಪಂಡಿತ ಸಮುದಾಯವನ್ನು ‘ಮೂರ್ಖರನ್ನಾಗಿ’ ಮಾಡಿದೆ ಎಂದಿದ್ದಾರೆ.
“ಬಿಜೆಪಿ ಅಧಿಕಾರಕ್ಕೆ ಬಂದರೆ ಕಾಶ್ಮೀರಿ ಪಂಡಿತರ ಪುನರ್ವಸತಿಗಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿತ್ತು. ಈ ಮೂಲಕ ಪಂಡಿತರನ್ನು ಮತ ಸೆಳೆಯುವ ವಿಷಯವನ್ನಾಗಿ ಬಳಸಿಕೊಂಡಿತ್ತು. ಆದರೆ, ಕಳೆದ 10 ವರ್ಷದ ಅಧಿಕಾರಾವಧಿಯಲ್ಲಿ ಬಿಜೆಪಿ ಪಂಡಿತ ಸಮುದಾಯಕ್ಕೆ 10 ಪೈಸೆಯ ಕೆಲಸ “ಎಂದು ವಾನಿ ಹೇಳಿದ್ದಾರೆ.
“ಕಳೆದ 10 ವರ್ಷಗಳಿಂದ ಬಿಜೆಪಿಯು ಪಂಡಿತ ಸಮುದಾಯವನ್ನು ಮೂರ್ಖರನ್ನಾಗಿಸುತ್ತಿರುವುದರಿಂದ ಇತರ ಕಾಶ್ಮೀರಿ ಪಂಡಿತ ಗುಂಪುಗಳನ್ನೂ ಕಾಂಗ್ರೆಸ್‌ಗೆ ಬರುವಂತೆ ನಾನು ಮನವಿ ಮಾಡುತ್ತೇನೆ. ನೆಹರು ಕುಟುಂಬವು ಮೂಲತಃ ಕಾಶ್ಮೀರಕ್ಕೆ ಸೇರಿದೆ. ಸ್ಥಳಾಂತರಗೊಂಡ ಪಂಡಿತರ ಬಗ್ಗೆ ಕಾಂಗ್ರೆಸ್ ಹೆಚ್ಚಿನ ಸಹಾನುಭೂತಿ ಹೊಂದಿದೆ” ಎಂದು ವಾನಿ ತಿಳಿಸಿದ್ದಾರೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರವು ಕಾಶ್ಮೀರಿ ಪಂಡಿತರಿಗಾಗಿ ಸಾಕಷ್ಟು ಕೆಲಸ ಮಾಡಿರುವುದರಿಂದ ಕಾಂಗ್ರೆಸ್‌ನೊಂದಿಗೆ ತಮ್ಮ ಸಂಘಟನೆಯನ್ನು ವಿಲೀನಗೊಳಿಸಲು ನಿರ್ಧರಿಸಿದ್ದೇವೆ ಎಂದು ಎಐಕೆಹೆಚ್‌ಎಫ್ ಅಧ್ಯಕ್ಷ ರತನ್ ಲಾಲ್ ಭಾನ್ ಹೇಳಿದ್ದಾರೆ.
“ನಾವು ನಮ್ಮ ಕುಟುಂಬಕ್ಕೆ ಮರಳಿದಂತಹ ಭಾವನೆ ಮೂಡುತ್ತಿದೆ. ಬಿಜೆಪಿ ಪಂಡಿತರನ್ನು ಶೋಷಿಸಿತ್ತಲ್ಲದೆ, ನಮಗಾಗಿ ಏನನ್ನೂ ಮಾಡಿಲ್ಲ” ಎಂದಿದ್ದಾರೆ.
ಇದನ್ನೂ ಓದಿ : ನಿರಂಕುಶಾಧಿಕಾರ ದೇಶಕ್ಕೆ ಹಾನಿಕರ, ಸಮ್ಮಿಶ್ರ ಸರಕಾರವನ್ನು ಅಧಿಕಾರಕ್ಕೆ ತರಬೇಕು-ಉದ್ಧವ್ ಠಾಕ್ರೆ


