ಲೋಕಸಭೆ ಚುನಾವಣೆಗೆ ಬಿಜೆಪಿ ಬಿಡುಗಡೆ ಮಾಡಿದ ಪ್ರಣಾಳಿಕೆಯ ಬಗ್ಗೆ ವಿರೋಧ ಪಕ್ಷಗಳು ಭಾನುವಾರ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದೆ. ಬಿಜೆಪಿಯ ಭರವಸೆಗಳು ಸುಳ್ಳಿನಿಂದ ತುಂಬಿಕೊಂಡಿದೆ ಮತ್ತು ವಿಶ್ವಾಸಾರ್ಹವಲ್ಲ ಎಂದು ಹೇಳಿದ್ದು, ಕೇಸರಿ ಪಕ್ಷವು ಪ್ರಣಾಳಿಕೆಯಲ್ಲಿ ನಿರುದ್ಯೋಗ ಮತ್ತು ಹಣದುಬ್ಬರವನ್ನು ನಿರ್ಲಕ್ಷಿಸಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದೆ.
ಪ್ರಣಾಳಿಕೆಯು ಬಡವರು, ಯುವಕರು, ರೈತರು ಮತ್ತು ಮಹಿಳೆಯರ ಮೇಲೆ ವಿಶೇಷ ಗಮನವನ್ನು ಹರಿಸಿದೆ. ಏಕರೂಪ ನಾಗರಿಕ ಸಂಹಿತೆಯನ್ನು(ಯುಸಿಸಿ) ಜಾರಿಗೆ ತರಲು ಮತ್ತು ಏಕಕಾಲದಲ್ಲಿ ಚುನಾವಣೆಗಳನ್ನು(ಒಂದು ರಾಷ್ಟ್ರ, ಒಂದು ಚುನಾವಣೆ) ನಡೆಸುವುದಾಗಿ ಬಿಜೆಪಿಯು ಭರವಸೆ ನೀಡಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಹಣದುಬ್ಬರ ಮತ್ತು ನಿರುದ್ಯೋಗ ಬಿಜೆಪಿಯ ಪ್ರಣಾಳಿಕೆಯಿಂದ “ಕಾಣೆಯಾಗಿದೆ” ಎಂದು ಹೇಳಿದ್ದಾರೆ. ಜನರ ಜೀವನಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳನ್ನು ಚರ್ಚಿಸಲು ಬಿಜೆಪಿ ಬಯಸುವುದಿಲ್ಲ. ಇಂಡಿಯಾ ಮೈತ್ರಿ ಕೂಟದ ಯೋಜನೆ ತುಂಬಾ ಸ್ಪಷ್ಟವಾಗಿದೆ. 30 ಲಕ್ಷ ಹುದ್ದೆಗಳಿಗೆ ನೇಮಕಾತಿ ಮತ್ತು ಪ್ರತಿ ವಿದ್ಯಾವಂತ ಯುವಕನಿಗೆ 1 ಲಕ್ಷ ರೂಪಾಯಿಗಳ ಶಾಶ್ವತ ಉದ್ಯೋಗ ನೀಡುವುದಾಗಿ ರಾಹುಲ್ ಗಾಂಧಿ ಹೇಳಿದ್ದಾರೆ. ಈ ಬಾರಿ ಯುವಕರು ಪ್ರಧಾನಿ ಮೋದಿಯವರ ಬಲೆಗೆ ಬೀಳುವುದಿಲ್ಲ, ಅವರು ಈಗ ಕಾಂಗ್ರೆಸ್‌ನ ಕೈಗಳನ್ನು ಬಲಪಡಿಸುತ್ತಾರೆ ಮತ್ತು ದೇಶದಲ್ಲಿ ‘ಉದ್ಯೋಗ ಕ್ರಾಂತಿ’ಗೆ ನೆರವಾಗುತ್ತಾರೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಬಿಜೆಪಿಯ ಪ್ರಣಾಳಿಕೆಯು ಕೇವಲ ಬಾಯಿ ಮಾತಿಗೆ ಮಾತ್ರ ಅವರ ನಿಜವಾದ ಪ್ರಣಾಳಿಕೆ, ‘ಸಂವಿಧಾನ್ ಬದ್ಲೋ ಪತ್ರ’ (ಸಂವಿಧಾನದ ಬದಲಿಸುವ ಪ್ರಣಾಳಿಕೆ) ಎಂದು ಆರೋಪಿಸಿದರು. ನೆನಪಿಡಿ, ಬಿಜೆಪಿ ದೇಶ, ಸಮಾಜ, ಪ್ರಜಾಪ್ರಭುತ್ವದ ವಿರುದ್ಧ ಈ ಎಲ್ಲ ಷಡ್ಯಂತ್ರಗಳನ್ನು ತಳಮಟ್ಟದಿಂದ ಪ್ರಾರಂಭಿಸುತ್ತದೆ. ಆರಂಭದಲ್ಲಿ ಉನ್ನತ ನಾಯಕರು ಜನರ ಮುಂದೆ ಸಂವಿಧಾನದ ಮೇಲೆ ಪ್ರಮಾಣ ವಚನ ಸ್ವೀಕರಿಸುತ್ತಾರೆ, ಆದರೆ ರಾತ್ರಿಯಲ್ಲಿ ಅವರು ಸಂವಿಧಾನವನ್ನು ನಾಶಮಾಡಲು ಸ್ಕ್ರಿಪ್ಟ್ ಬರೆಯುತ್ತಾರೆ. ಸಂಪೂರ್ಣ ಅಧಿಕಾರ ಸಿಕ್ಕ ನಂತರ ಸಂವಿಧಾನದ ಮೇಲೆ ದಾಳಿ ನಡೆಸುತ್ತಾರೆ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನವು “ಭಾರತದ ಆತ್ಮ” ಎಂದು ಹೇಳಿದ ಪ್ರಿಯಾಂಕ ಗಾಂಧಿ ಬಿಜೆಪಿಯನ್ನು ಸೋಲಿಸಲು ಎಲ್ಲಾ ವಿರೋಧ ಪಕ್ಷಗಳು ಒಂದಾಗಬೇಕು ಎಂದು ಹೇಳಿದರು.
ಇಂದು ನಾವೆಲ್ಲರೂ ಒಗ್ಗೂಡಿ ಬಿಜೆಪಿಯ ಸಂವಿಧಾನ ಬದಲಾವಣೆ ಮಿಷನ್‌ನ್ನು ತಿರಸ್ಕರಿಸಬೇಕಾಗಿದೆ ಮತ್ತು ದೇಶವನ್ನು ಸಂವಿಧಾನದಿಂದ ನಡೆಸಲಾಗುವುದು ಮತ್ತು ಸಂವಿಧಾನವನ್ನು ಬದಲಾಯಿಸುವ ಉದ್ದೇಶ ಹೊಂದಿರುವವರನ್ನು ನಾವು ಒಟ್ಟಾಗಿ ಸೋಲಿಸುತ್ತೇವೆ ಎಂದು ಗಟ್ಟಿಯಾಗಿ ಹೇಳಬೇಕಾಗಿದೆ ಎಂದು ಅವರು ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಸಮಾಜದ ಎಲ್ಲಾ ವರ್ಗಗಳಿಗೆ ಅನುಕೂಲವಾಗುವ ಯಾವುದೇ ಕೆಲಸವನ್ನು ಅವರು ಮಾಡುತ್ತಿಲ್ಲ. ಬಿಜೆಪಿಯ ಪ್ರಣಾಳಿಕೆಯನ್ನು ನಂಬಲು ಸಾಧ್ಯವಿಲ್ಲ ಎಂದು ಹೇಳಿದರು. ನರೇಂದ್ರ ಮೋದಿ ಅವರು ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಹೇಳಿದ್ದರು, ಅವರು ಎಂಎಸ್‌ಪಿ ಹೆಚ್ಚಿಸುವುದಾಗಿ ಮತ್ತು ಕಾನೂನುಬದ್ಧ ಗ್ಯಾರಂಟಿ ನೀಡುವುದಾಗಿ ಹೇಳಿದ್ದರು. ಅವರು ತಮ್ಮ ಅಧಿಕಾರಾದಲ್ಲಿದ್ದರೂ ಅಂತಹ ಯಾವುದೇ ದೊಡ್ಡ ಕೆಲಸವನ್ನು ಮಾಡಲಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿಯ ಪ್ರಣಾಳಿಕೆಗೆ ‘ಸಂಕಲ್ಪ ಪತ್ರ’ ಎಂದು ಹೆಸರಿಟ್ಟಿರುವುದಕ್ಕೆ ಕಾಂಗ್ರೆಸ್ ನಾಯಕ ಪವನ್ ಖೇರಾ ಆಕ್ಷೇಪವನ್ನು ವ್ಯಕ್ತಪಡಿಸಿದ್ದು, ಅದಕ್ಕೆ ‘ಮಾಫಿನಾಮಾ’ ಎಂದು ಹೆಸರಿಡಬೇಕು ಎಂದು ಹೇಳಿದ್ದಾರೆ.ದೇಶದ ದಲಿತರು, ರೈತರು, ಯುವಕರು ಮತ್ತು ಬುಡಕಟ್ಟು ಜನರಲ್ಲಿ ಮೋದಿಜಿ ಕ್ಷಮೆ ಕೇಳಬೇಕಿತ್ತು. ಕೇಸರಿ ಪಕ್ಷದ ಪ್ರಣಾಳಿಕೆಯು ವಿಶ್ವಾಸಾರ್ಹವಲ್ಲ. 2036ರ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸುತ್ತೇವೆ ಎಂದು ಬಿಜೆಪಿ ಪ್ರಣಾಳಿಕೆಯಲ್ಲಿ ಬರೆದುಕೊಂಡಿದ್ದಾರೆ. ಆಗ ಎಲ್ಲಿರುತ್ತೀರಿ? 5 ವರ್ಷಗಳ ಖಾತೆ ಕೊಡಿ. ಅವರು ತುಂಬಾ ಸುಳ್ಳು ಹೇಳಿದ್ದಾರೆ, ಈಗ ಯಾರೂ ಅವರನ್ನು ನಂಬುವುದಿಲ್ಲ ಎಂದು ಖೇರಾ ಹೇಳಿದ್ದಾರೆ.
ಯುವಕರು ಉದ್ಯೋಗ ಹುಡುಕುತ್ತಿದ್ದಾರೆ, ಹಣದುಬ್ಬರ ಹೆಚ್ಚುತ್ತಿದೆ, ಹಣದುಬ್ಬರ ಮತ್ತು ನಿರುದ್ಯೋಗದ ಬಗ್ಗೆ ಅವರು ಚಿಂತಿಸುವುದಿಲ್ಲ, 10 ವರ್ಷಗಳಲ್ಲಿ ಈ ವ್ಯಕ್ತಿಗೆ ಬಡವರಿಗಾಗಿ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ, ಅವರ ಪ್ರಣಾಳಿಕೆಯನ್ನು ನಂಬುವುದು ಸರಿಯಲ್ಲ ಎಂದು ಖೇರಾ ಹೇಳಿದ್ದಾರೆ.
ಬಿಜೆಪಿಯ ಪ್ರಣಾಳಿಕೆಯು ನಕಲಿ ಭರವಸೆಗಳ ದಾಖಲೆ ಮತ್ತು ಹಣದುಬ್ಬರ ಮತ್ತು ನಿರುದ್ಯೋಗದ ಬಗ್ಗೆ ಗಮನಹರಿಸಿಲ್ಲ ಎಂದು ದೆಹಲಿ ಸಚಿವೆ ಮತ್ತು ಎಎಪಿ ನಾಯಕ ಅತಿಶಿ ಹೇಳಿದ್ದಾರೆ. ನಿರುದ್ಯೋಗದಿಂದ ಜನರು ಕಂಗಾಲಾಗಿದ್ದಾರೆ. (ಎಲ್‌ಪಿಜಿ) ಸಿಲಿಂಡರ್‌ಗಳ ಬೆಲೆ 300 ರೂ.ನಿಂದ 1,200 ರೂ.ಗೆ ಏರಿಕೆಯಾಗಿದೆ. ಡೀಸೆಲ್ ಬೆಲೆ 55 ರಿಂದ 90 ರೂ.ಗೆ ಏರಿಕೆಯಾಗಿದೆ. ಪ್ರತಿ ಕುಟುಂಬವು ಖರ್ಚು ವೆಚ್ಚಗಳಿಗೆ ತೊಂದರೆ ಎದುರಿಸುತ್ತಿದೆ. ಈ ನಕಲಿ ಭರವಸೆಗಳನ್ನು ಇಂದು ಬಿಜೆಪಿ ಬಿಡುಗಡೆ ಮಾಡಿರುವುದನ್ನು ಈಗ ಯಾರೂ ನಂಬುವುದಿಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ಮನೀಶ್ ತಿವಾರಿ, ಬಿಜೆಪಿಯ ಪ್ರಣಾಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ್ದು, ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಹಣದುಬ್ಬರದ ಬಗ್ಗೆ ಗಮನ ಹರಿಸಿಲ್ಲ ಎಂದು ಹೇಳಿದ್ದಾರೆ.
ಇದನ್ನು ಓದಿ: ಚುನಾವಣಾ ಬಾಂಡ್‌ಗಳ 2ನೇ ಅತಿ ದೊಡ್ಡ ಖರೀದಿದಾರ ಮೇಘಾ ಎಂಜಿನಿಯರಿಂಗ್ ವಿರುದ್ಧ ಎಫ್‌ಐಆರ್


