Homeಕರ್ನಾಟಕಸಂವಿಧಾನಕ್ಕೆ ಅಪಾಯ ಎದುರಾಗಿರುವುದು ಆರ್‌ಎಸ್‌ಎಸ್, ಅದರ ನಾಯಕರಿಂದ: ಸಿಎಂ ಸಿದ್ದರಾಮಯ್ಯ

ಸಂವಿಧಾನಕ್ಕೆ ಅಪಾಯ ಎದುರಾಗಿರುವುದು ಆರ್‌ಎಸ್‌ಎಸ್, ಅದರ ನಾಯಕರಿಂದ: ಸಿಎಂ ಸಿದ್ದರಾಮಯ್ಯ

- Advertisement -
- Advertisement -

“ನರೇಂದ್ರ ಮೋದಿಯವರೇ, ಸಂವಿಧಾನಕ್ಕೆ ಅಪಾಯ ಎದುರಾಗಿರುವುದು ಬಾಬಾ ಸಾಹೇಬ್ ಅಂಬೇಡ್ಕರ್ ಇಲ್ಲವೇ ಅವರ ಅನುಯಾಯಿಗಳಿಂದ ಅಲ್ಲ, ಅಪಾಯ ಎದುರಾಗಿರುವುದು ನಿಮ್ಮ ಮಾತೃ ಸಂಸ್ಥೆಯಾದ ಆರ್‌ಎಸ್‌ಎಸ್ ಮತ್ತು ಅದರ ನಾಯಕರಿಂದ. ಇದಕ್ಕೆ ಇತಿಹಾಸ ಸಾಕ್ಷಿ ಇದೆ. ಇತಿಹಾಸವನ್ನು ಮರೆಯಬಾರದೆಂದು ನಮಗೆ ಪಾಠ ಮಾಡಿದವರು ಇದೇ ಬಾಬಾಸಾಹೇಬ್ ಅಂಬೇಡ್ಕರ್ ಅವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

“ಅಂಬೇಡ್ಕರ್ ಅವರು ಮತ್ತೆ ಹುಟ್ಟಿ ಬಂದರೂ ಸಂವಿಧಾನವನ್ನು ಬದಲಾಯಿಸಲು ಸಾಧ್ಯ ಇಲ್ಲ” ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ. ಅವರು ಹೇಳಬೇಕಾಗಿರುವುದು ಅದಲ್ಲ, “ಯಾವ ಆರ್‌ಎಸ್‌ಎಸ್ ನಾಯಕರು ಹೇಳಿದರೂ ಸಂವಿಧಾನವನ್ನು ಬದಲಾಯಿಸಲು ಸಾಧ್ಯ ಇಲ್ಲ” ಎಂದು ಹೇಳಬೇಕಾಗಿತ್ತು ಎಂದಿದ್ದಾರೆ.

“ಭಾರತ ಸಂವಿಧಾನದ ಅತ್ಯಂತ ಕೆಟ್ಟ ವಿಚಾರ ಏನಂದ್ರೆ, ಅದರಲ್ಲಿ ಭಾರತೀಯತೆ ಎನ್ನುವುದೇ ಇಲ್ಲ ಪುರಾತನ ಭಾರತದ ಕಾನೂನು-ಕಟ್ಟಳೆಗಳಾಗಲಿ, ಸಂರಚನೆಗಳಾಗಲಿ, ನುಡಿಗಟ್ಟುಗಳಾಗಲಿ ಯಾವುದೂ ಇಲ್ಲ. ಸ್ಪಾರ್ತದ ಲೈಕುರ್ಗಸ್ ಅಥವಾ ಪರ್ಸಿಯಾದ ಸೊಲೊನ್ ಬರೆಯುವುದಕ್ಕು ಮೊದಲೇ ಮನು ಈ ನಿಯಮಗಳನ್ನು ಇಲ್ಲಿ ರಚಿಸಿದ್ದರು. ಇವತ್ತಿಗೂ ಮನುಸಂಸ್ಮೃತಿಯಲ್ಲಿ ಮನು ಉಲ್ಲೇಖಿಸಿರುವ ಕಾನೂನುಗಳು ಪ್ರಪಂಚದ ಗೌರವಕ್ಕೆ ಪಾತ್ರವಾಗಿವೆ ಮತ್ತು ಸ್ವಾಭಾವಿಕ ವಿಧೇಯತೆ ಮತ್ತು ಅನುಸರಣೆಯಲ್ಲಿವೆ. ಆದರೆ, ನಮ್ಮ ಸಂವಿಧಾನವನ್ನು ರಚಿಸಿದ ಪಂಡಿತರಿಗೆ ಇದ್ಯಾವುದೂ ಲೆಕ್ಕಕ್ಕಿಲ್ಲ – ಇದು ಆರ್‌ಎಸ್‌ಎಸ್ ಮುಖವಾಣಿಯಾದ “ಆರ್ಗನೈಸರ್ ಪತ್ರಿಕೆಯ ಸಂಪಾದಕೀಯದ ಸಾಲುಗಳು” ಎಂದು ಸಿಎಂ ತಿಳಿಸಿದ್ದಾರೆ.

ನರೇಂದ್ರ ಮೋದಿಯವರೇ ಬಾಬಾಸಾಹೇಬ್ ಅಂಬೇಡ್ಕರ್ ಅಧ್ಯಕ್ಷತೆಯ ಸಂವಿಧಾನ ರಚನಾ ಸಮಿತಿ ನೀಡಿದ ಕರಡು ಪ್ರತಿಯನ್ನು ನಮ್ಮ ದೇಶ ಅಂಗೀಕರಿಸಿದ್ದು 1949ರ ನವಂಬರ್ 26ರಂದು. ಅದಾಗಿ ಕೇವಲ ನಾಲ್ಕೇ ದಿನಕ್ಕೆ ಅಂದರೆ 1949ರ ನವಂಬರ್ 30ರಂದು ನಿಮ್ಮ ಮಾತೃಸಂಸ್ಥೆಯಾದ ಆರ್‌ಎಸ್‌ಎಸ್ ಬರೆದಿರುವ ಈ ಸಂಪಾದಕೀಯದ ಬಗ್ಗೆ ಈಗಿನ ನಿಮ್ಮ ನಿಲುವು ಏನು? ಇದನ್ನು ಒಪ್ಪುತ್ತೀರಾ? ನಿರಾಕರಿಸುತ್ತೀರಾ?” ಎಂದು ಸಿಎಂ ಪ್ರಶ್ನಿಸಿದ್ದಾರೆ.

“ನಮ್ಮದು ಎಂದು ಹೇಳಲಾಗುತ್ತಿರುವ ಈ ಸಂವಿಧಾನವು, ಪಾಶ್ಚಾತ್ಯ ದೇಶಗಳ ಸಂವಿಧಾನಗಳಿಂದ ಬೇರೆ ಬೇರೆ ಕಲಮ್ಮುಗಳನ್ನು ಹೆಕ್ಕಿ ತಂದು ಒಟ್ಟುಗೂಡಿಸಿದ ಕಂತೆಯಾಗಿದ್ದು, ಇದರಲ್ಲಿ ಹಲವಾರು ತೊಡಕುಗಳು ಮತ್ತು ಭಿನ್ನನಿಲುವುಗಳು ಎದ್ದು ಕಾಣುತ್ತವೆ. ನಮ್ಮದು ಅಂತ ಕರೆದುಕೊಳ್ಳುವ ಯಾವ ಭಾರತೀಯ ಅಂಶವೂ ಇದರಲ್ಲಿಲ್ಲ. ನಮ್ಮ ರಾಷ್ಟ್ರೀಯ ಕಾರ್ಯಯೋಜನೆ ಏನು ಮತ್ತು ನಮ್ಮ ಬದುಕಿನ ಮುಖ್ಯ ಧಾತುವೇನು ಎಂಬುದರ ಬಗ್ಗೆ ಇದರ ನಿರ್ದೇಶಕ ತತ್ವಗಳಲ್ಲಿ ಒಂದೇ ಒಂದು ಪದವಿದೆಯೇ? ಇಲ್ಲ!” ಎಂದು ಹೇಳಿದವರು ಗೋಳ್ವಾಲ್ಕರ್ ಅವರು ಎಂದು ಸಿಎಂ ನೆನಪಿಸಿದ್ದಾರೆ.

“ನರೇಂದ್ರ ಮೋದಿ ಅವರೇ, ನೀವು ಗುರೂಜಿ ಎಂದೇ ಗೌರವದಿಂದ ಕರೆಯುವ ಆರ್‌ಎಸ್‌ಎಸ್‌ನ ಎರಡನೇ ಸಂರಸಂಘ ಚಾಲಕರಾದ ಎಂ.ಎಸ್. ಗೋಳ್ವಾಲ್ಕರ್ ನಿಮ್ಮ ‘ಧರ್ಮ ಗ್ರಂಥ’ ವಾದ ಬಂಚ್ ಆಫ್ ಥಾಟ್ಸ್‌ನಲ್ಲಿ ವ್ಯಕ್ತಪಡಿಸಿರುವ ಈ ಅಭಿಪ್ರಾಯವನ್ನು ಇಲ್ಲಿಯವರೆಗೆ ನೀವು ನಿರಾಕರಿಸಿಲ್ಲ. ಈಗಲಾದರೂ ಹೇಳಿ ಈ ಅಭಿಪ್ರಾಯಕ್ಕೆ ನಿಮ್ಮ ಸಹಮತ ಇದೆಯೇ? ಭಿನ್ನಮತ ಇದೆಯೇ?” ಎಂದು ಸಿಎಂ ಕೇಳಿದ್ದಾರೆ.

“ವೇದಗಳ ನಂತರ ನಮ್ಮ ಹಿಂದೂ ರಾಷ್ಟ್ರಕ್ಕೆ ಪೂಜನೀಯವಾದ ಗ್ರಂಥವೆಂದರೆ ಮನುಸ್ಮೃತಿಯಾಗಿದ್ದು, ಅನಾದಿ ಕಾಲದಿಂದಲೂ ನಮ್ಮ ಸಂಸ್ಕೃತಿ – ಸಂಪ್ರದಾಯ, ಆಲೋಚನೆಗಳು ಮತ್ತು ಆಚಾರಗಳಿಗೆ ಅದುವೇ ಆಧಾರವಾಗಿದೆ. ಶತಮಾನಗಳಿಂದ ನಮ್ಮ ದೇಶವು ಸಾಗಿಬಂದ ಆಧ್ಯಾತ್ಮಿಕ ಮತ್ತು ದೈವಿಕ ಪಥಗಳಿಗೆ ಈ ಕೃತಿಯೇ ಕ್ರೋಢೀಕೃತ ರೂಪವಾಗಿದೆ. ಇವತ್ತಿಗೂ ಕೋಟ್ಯಂತರ ಹಿಂದೂಗಳು ತಮ್ಮ ಜೀವನ ಮತ್ತು ಆಚರಣೆಗಳಲ್ಲಿ ಅನುಸರಿಸುತ್ತಿರುವ ಕಟ್ಟಳೆಗಳಿಗೆ ಈ ಮನುಸ್ಮೃತಿಯೇ ಮೂಲವಾಗಿದೆ. ಇವತ್ತು ಮನುಸ್ಮೃತಿಯೇ ಹಿಂದೂ ಕಾನೂನು” ಎಂದು ಹೇಳಿದವರು ವಿನಾಯಕ ದಾಮೋದರ ಸಾವರ್ಕರ್ ದೆಹಲಿಯ ಪ್ರಭಾತ್ ಸಂಸ್ಥೆ ಹಿಂದಿಯಲ್ಲಿ ಪ್ರಕಟಿಸಿರುವ ಸಾವರ್ಕರ್ ಸಮಗ್ರ ಬರಹಗಳ ಪುಸ್ತಕದ ಸಂಪುಟ 4ರ 416ನೇ ಪುಟದಲ್ಲಿ ಸಂವಿಧಾನದ ಬಗೆಗಿನ ಸಾವರ್ಕರ್ ಅಭಿಪ್ರಾಯ ಇದು” ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

“ನರೇಂದ್ರ ಮೋದಿಯವರೇ ನೀವು ಅಧಿಕಾರಕ್ಕೆ ಬಂದ ನಂತರ ನಿಮ್ಮ ಪಕ್ಷ ಮತ್ತು ಪರಿವಾರ ಸಾವರ್ಕರ್ ಅವರನ್ನು ಅಪ್ರತಿಮ ದೇಶಭಕ್ತರೆಂದು ಬಿಂಬಿಸುತ್ತಾ ಬಂದಿದ್ದೀರಿ. ಅವರು ಸಂವಿಧಾನದ ಬಗ್ಗೆ ವ್ಯಕ್ತಪಡಿಸಿರುವ ಅಭಿಪ್ರಾಯವನ್ನು ಕೂಡಾ ನೀವು ಸಮರ್ಥಿಸಬಹುದು ಎಂದು ಭಾವಿಸಿದ್ದೇನೆ. ಆ ಬಗ್ಗೆ ನಿಮಗೆ ಸಹಮತ ಇಲ್ಲ ಎಂದಾದರೆ ಅದನ್ನು ದೇಶದ ಮುಂದೆ ಹೇಳಿಬಿಡಿ” ಎಂದು ಸಿಎಂ ಸವಾಲ್ ಹಾಕಿದ್ದಾರೆ.

ಇದನ್ನೂ ಓದಿ : ಬಡವರಿಗೆ ವಸತಿ, ಶಿಕ್ಷಣ, ವೈದ್ಯಕೀಯ ಸೌಲಭ್ಯ ಸಿಗುವಂತಾಗುವುದೇ ನಿಜವಾದ ಅಭಿವೃದ್ಧಿ: ನ್ಯಾ. ಓಕಾ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಯ್‌ ಬರೇಲಿ, ಅಮೇಥಿ ಕ್ಷೇತ್ರಗಳಿಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಘೋಷಣೆ: ರಾಹುಲ್‌ ಗಾಂಧಿ, ಕಿಶೋರಿ ಲಾಲ್‌...

0
ಲೋಕಸಭಾ ಚುನಾವಣೆಗೆ ಉತ್ತರಪ್ರದೇಶದ ರಾಯ್‌ ಬರೇಲಿ ಕ್ಷೇತ್ರದಿಂದ ಮತ್ತು ಅಮೇಥಿ ಕ್ಷೇತ್ರದಿಂದ ಯಾರು ಸ್ಪರ್ಧಿಸುತ್ತಾರೆ ಎಂಬುವುದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಈ ಎರಡೂ ಕ್ಷೇತ್ರಗಳಿಗೆ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಘೋಷಿಸಿದ್ದು, ಉತ್ತರಪ್ರದೇಶದ ರಾಯ್‌...