ಚುನಾವಣಾ ಬಾಂಡ್‌ಗಳ ಯೋಜನೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಚುನಾವಣಾ ಬಾಂಡ್ ವಿಶ್ವದ ಅತಿದೊಡ್ಡ ಸುಲಿಗೆ ದಂಧೆ ಮತ್ತು ವಿಶ್ವದ ಅತಿದೊಡ್ಡ ಹಗರಣ ಎಂದು ಹೇಳಿದ್ದಾರೆ.
ಮಂಡ್ಯದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹಲ್ ಗಾಂಧಿ, ಮೋದಿ ಅವರು ಇತ್ತೀಚೆಗೆ ಸುದ್ದಿ ಸಂಸ್ಥೆ ANIಗೆ ನೀಡಿದ ಸಂದರ್ಶನವನ್ನು ಉಲ್ಲೇಖಿಸಿದ್ದಾರೆ, ಚುನಾವಣಾ ಬಾಂಡ್ ಯೋಜನೆಯನ್ನು ಸಮರ್ಥಿಸುವಾಗ ಪ್ರಧಾನಿ ಹೆದರುತ್ತಿದ್ದರು, ಇದನ್ನು ಸುಪ್ರೀಂಕೋರ್ಟ್ ಅಸಂವಿಧಾನಿಕ ಎಂದು ರದ್ದುಗೊಳಿಸಿದೆ. ಚುನಾವಣಾ ಬಾಂಡ್‌ಗಳು ವ್ಯಕ್ತಿಗಳು ಮತ್ತು ಕಂಪೆನಿಗಳಿಗೆ ರಾಜಕೀಯ ಪಕ್ಷಗಳಿಗೆ ಅನಾಮಧೇಯವಾಗಿ ಹಣ ನೀಡಲು ಅವಕಾಶ ಮಾಡಿಕೊಟ್ಟವು ಎಂದು ಹೇಳಿದ್ದಾರೆ.
ಒಂದೂವರೆ ಗಂಟೆಗಳ ಸಂದರ್ಶನದಲ್ಲಿ ಅವರು ಚುನಾವಣಾ ಬಾಂಡ್‌ಗಳ ಬಗ್ಗೆ ಸ್ಪಷ್ಟೀಕರಣವನ್ನು ನೀಡಲು ಪ್ರಯತ್ನಿಸಿದರು. ಚುನಾವಣಾ ಬಾಂಡ್‌ಗಳ ಬಗ್ಗೆ ಮಾತನಾಡುವಾಗ ಅವರ ಕೈಗಳು ನಡುಗುತ್ತಿದ್ದವು. ಏಕೆಂದರೆ ಎಲೆಕ್ಟೋರಲ್ ಬಾಂಡ್ ಯೋಜನೆಯು ವಿಶ್ವದ ಅತಿದೊಡ್ಡ ಹಗರಣವಾಗಿದೆ ಎಂದು ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ(ಸ್ಟಾರ್ ಚಂದ್ರು) ಪರ ಪ್ರಚಾರ ನಡೆಸುತ್ತಿದ್ದ ರಾಹುಲ್ ಗಾಂಧಿ ಹೇಳಿದ್ದಾರೆ.
ಚುನಾವಣಾ ಬಾಂಡ್ ಯೋಜನೆಯನ್ನು ಪರಿಚಯಿಸಿದಾಗ, ಇದು ರಾಜಕೀಯ ವ್ಯವಸ್ಥೆಯನ್ನು ಸ್ವಚ್ಛಗೊಳಿಸುತ್ತದೆ ಎಂದು ಪ್ರಧಾನಿ ಹೇಳಿದ್ದರು. ಆದರೆ, ಬಿಜೆಪಿ ಸರ್ಕಾರವು ದಾನಿಗಳ ವಿವರಗಳನ್ನು ಮತ್ತು ಚುನಾವಣಾ ಬಾಂಡ್‌ಗಳ ಮೂಲಕ ಪಡೆದ ದೇಣಿಗೆಗಳ ಸಂಖ್ಯೆಯನ್ನು ಸುಪ್ರೀಂಕೋರ್ಟ್ ರದ್ದುಗೊಳಿಸುವ ಮೊದಲು ಮರೆಮಾಚಿತ್ತು. ಚುನಾವಣಾ ಬಾಂಡ್‌ಗಳ ಡೇಟಾವನ್ನು ಸಾರ್ವಜನಿಕಗೊಳಿಸಿದಾಗ, ಕಂಪನಿಯೊಂದು ಸರ್ಕಾರಿ ಗುತ್ತಿಗೆಯನ್ನು ಪಡೆದುಕೊಂಡ ನಂತರ ಮರುದಿನವೇ ಚುನಾವಣಾ ಬಾಂಡ್‌ಗಳ ಮೂಲಕ (ಬಿಜೆಪಿಗೆ) ಕೋಟಿಗಳನ್ನು ನೀಡಿದೆ ಎಂದು ತೋರಿಸಿದೆ. ಕೇಂದ್ರೀಯ ತನಿಖಾ ದಳ (ಸಿಬಿಐ) ಅಥವಾ ಜಾರಿ ಇಲಾಖೆ (ಇಡಿ) ತನಿಖೆಯನ್ನು ನಡೆಸುತ್ತಿರುವ ಆರೋಪಿತ ಕಂಪನಿಗಳು ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆ ನೀಡಿದರು ಮತ್ತು ಆ ಬಳಿಕ ತನಿಖೆ ನೆನೆಗುದಿಗೆ ಬಿದ್ದಿದೆ. ಸಣ್ಣ ಪುಂಡರು ಇಂತಹ ಕೆಲಸಗಳನ್ನು ಮಾಡುತ್ತಾರೆ, ಯಾರನ್ನಾದರೂ ಬೆದರಿಸಿ ಹಣ ಪಡೆಯುತ್ತಾರೆ. ಸರ್ಕಾರ ಕಂಪೆನಿಗಳಿಗೆ ಬೆದರಿಕೆ ಹಾಕಿ ಹಣ ಪಡೆದಿದೆ ಎಂದು ಹೇಳಿದ್ದಾರೆ.
ಕರ್ನಾಟಕದ ಕಾಂಗ್ರೆಸ್ ಸರಕಾರ ಜಾರಿಗೊಳಿಸಿರುವ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ ರಾಹುಲ್ ಗಾಂಧಿ, ಇದೇ ಮಾದರಿಯಲ್ಲಿ ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಒಕ್ಕೂಟವೂ ಗ್ಯಾರಂಟಿ ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ಅಳವಡಿಸಿಕೊಂಡಿದೆ ಎಂದು ಹೇಳಿದ್ದಾರೆ.
ಕೇಂದ್ರದಲ್ಲಿ ತಮ್ಮ ಸರಕಾರ ಅಸ್ತಿತ್ವಕ್ಕೆ ಬಂದರೆ, ಮಹಿಳೆಯರಿಗೆ ತಿಂಗಳಿಗೆ 8,500 ರೂ.ನಂತೆ ವರ್ಷಕ್ಕೆ ಒಂದು ಲಕ್ಷ ರೂ.ಗಳನ್ನು ದೇಶದ ಬಡ ಕುಟುಂಬದ ಹಿರಿಯ ಮಹಿಳೆಯರ ಖಾತೆಗೆ ಜಮಾ ಮಾಡಲಿದ್ದೇವೆ. ದಿನದ 24 ಗಂಟೆ ದುಡಿಯುವ ಮಹಿಳೆಯರಿಗೆ ಅನುಕೂಲ ಕಲ್ಪಿಸುವ ಇದು ಕ್ರಾಂತಿಕಾರಿ ಹೆಜ್ಜೆಯಾಗಲಿದೆ ಎಂದು ಹೇಳಿದ್ದಾರೆ.
ಮೋದಿ ಸರಕಾರ ಶ್ರೀಮಂತರ ಕೋಟ್ಯಂತರ ರೂ.ಸಾಲಮನ್ನಾ ಮಾಡಿದೆ. ಅನ್ನದಾತರ ಸಾಲಮನ್ನಾ ಮಾಡಲು ಸಾಧ್ಯವಾಗುವುದಿಲ್ಲ ಏಕೆ? ಎಂದು ಪ್ರಶ್ನಿಸಿದ ರಾಹುಲ್ ಗಾಂಧಿ, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಲಿದೆ. ಬೆಳೆಗಳಿಗೆ ಸ್ವಾಮಿನಾಥನ್ ವರದಿ ಅನ್ವಯ ಕನಿಷ್ಠ ಬೆಂಬಲ ನಿಗದಿ ಮಾಡಲಿದ್ದು, ಬೆಳೆ ವಿಮಾ ಪರಿಹಾರವನ್ನು 30 ದಿನದಲ್ಲಿ ಪಾವತಿಸಲಿದೆ ಎಂದು ಹೇಳಿದ್ದಾರೆ.
ಇದನ್ನು ಓದಿ: ಚುನಾವಣಾ ಬಾಂಡ್ ಯೋಜನೆಗೆ ಜನಸಾಮಾನ್ಯರ ತೆರಿಗೆಯ ’14 ಕೋಟಿ ರೂ.’ ವ್ಯಯಿಸಿದ್ದ ಮೋದಿ ಸರಕಾರ!


