ಸೂರತ್ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗುತ್ತಿದ್ದಂತೆ ಕಾಂಗ್ರೆಸ್ ಅಭ್ಯರ್ಥಿ ನೀಲೇಶ್ ಕುಂಭಾನಿ ಅವರನ್ನು ಕಾಂಗ್ರೆಸ್ ಪಕ್ಷದಿಂದ 6 ವರ್ಷಗಳ ಕಾಲ ಉಚ್ಛಾಟನೆ ಮಾಡಲಾಗಿದೆ.
ನೀಲೇಶ್ ಕುಂಭಾನಿ ಸೂರತ್‌ನಿಂದ ಲೋಕಸಭೆ ಸ್ಪರ್ಧೆಗೆ ಕಾಂಗ್ರೆಸ್‌ನಿಂದ ಟಿಕೆಟ್ ಪಡೆದಿದ್ದರು. ಆದರೆ ಅವರ ನಾಮಪತ್ರವನ್ನು ಚುನಾವಣಾ ಅಧಿಕಾರಿ ತಿರಸ್ಕರಿಸಿದ ಕಾರಣ ಭಾರತೀಯ ಜನತಾ ಪಕ್ಷದ ಮುಖೇಶ್ ದಲಾಲ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದರು.
ನೀಲೇಶ್ ಕುಂಭಾನಿ ನಾಮಪತ್ರ ಸಲ್ಲಿಕೆ ವೇಳೆ ಅತ್ಯಂತ ನಿರ್ಲಕ್ಷ್ಯವಹಿಸಿದ್ದಾರೆ ಅಥವಾ ಬಿಜೆಪಿ ಜೊತೆ ಸಂಬಂಧ ಹೊಂದಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ. ನಿಮ್ಮ ನಾಮಪತ್ರದ ತಿರಸ್ಕಾರವು ನೀವು ಅತ್ಯಂತ ನಿರ್ಲಕ್ಷ್ಯವಹಿಸಿರುವುದು ಅಥವಾ ಬಿಜೆಪಿಯೊಂದಿಗೆ ಸಂಬಂಧವನ್ನು ಹೊಂದಿದ್ದೀರಿ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಆದರೂ ನ್ಯಾಯದ ತತ್ವಗಳಿಗೆ ಅನುಸಾರವಾಗಿ, ಶಿಸ್ತು ಸಮಿತಿಯು ಅದರ ಮುಂದೆ ನಿಮ್ಮ ವಾದವನ್ನು ಮಂಡಿಸಲು ಸಾಕಷ್ಟು ಸಮಯವನ್ನು ಒದಗಿಸಿದೆ. ಪಕ್ಷಕ್ಕೆ ಯಾವುದೇ ವಿವರಣೆ ನೀಡದೆ ಏಕಾಏಕಿ ನಾಪತ್ತೆಯಾಗಿರುವುದು ನಿಮ್ಮನ್ನು ಆರು ವರ್ಷಗಳ ಕಾಲ ಅಮಾನತುಗೊಳಿಸುವ ನಿರ್ಧಾರಕ್ಕೆ ಕಾರಣವಾಗಿದೆ ಎಂದು ಶಿಸ್ತು ಸಮಿತಿ ಸದಸ್ಯ ಬಾಲುಭಾಯ್ ಪಟೇಲ್ ಸಹಿ ಹಾಕಿರುವ ಅಮಾನತು ಆದೇಶದಲ್ಲಿ ಹೇಳಲಾಗಿದೆ.
ಸೂರತ್‌ಗೆ ಸ್ಥಳಾಂತರಗೊಂಡಿರುವ ಸೌರಾಷ್ಟ್ರದ ಪಾಟಿದಾರ್ ಸಮುದಾಯದ ಜನರನ್ನು ಅವರು ಪ್ರತಿನಿಧಿಸುತ್ತಾರೆ ಎಂಬ ನಿರೀಕ್ಷೆಯಲ್ಲಿ ನೀಲೇಶ್ ಕುಂಭಾಣಿ ಅವರಿಗೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಪಕ್ಷದ ಟಿಕೆಟ್ ನೀಡಲಾಗಿದೆ. ನಾಮಪತ್ರದ ತಿರಸ್ಕಾರ ಬೆಳವಣಿಗೆಯಿಂದ ಸೂರತ್‌ನ ಜನರು ಮತ್ತು ಪಕ್ಷದ ಕಾರ್ಯಕರ್ತರು ಕೋಪಗೊಂಡಿದ್ದಾರೆ ಮತ್ತು ತಮ್ಮ ಕೋಪವನ್ನು ವಿಭಿನ್ನ ರೀತಿಯಲ್ಲಿ ವ್ಯಕ್ತಪಡಿಸುತ್ತಿದ್ದಾರೆ. ನಿಮ್ಮನ್ನು ಪಕ್ಷದಿಂದ ಆರು ವರ್ಷಗಳ ಕಾಲ ಅಮಾನತುಗೊಳಿಸಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ ಎಂದು ಕಾಂಗ್ರೆಸ್‌ನ ಶಿಸ್ತು ಸಮಿತಿ ಹೇಳಿದೆ.
ಸೂರತ್‌ನ ಮಾಜಿ ಕಾರ್ಪೊರೇಟರ್ ಕುಂಭಾನಿ ಅವರು 2022ರ ವಿಧಾನಸಭಾ ಚುನಾವಣೆಯಲ್ಲಿ ಸೂರತ್ ನಗರದ ಕಾಮ್ರೇಜ್ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ಸೂರತ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನೀಲೇಶ ಕುಂಭಾನಿಯವರ ನಾಮಪತ್ರವನ್ನು ಮೂವರು ಅನುಮೋದಕರ ಸಹಿಗಳಲ್ಲಿ ವ್ಯತ್ಯಾಸದ ಕಾರಣದಿಂದ ಸೂರತ್ ಜಿಲ್ಲಾ ಚುನಾವಣಾ ಅಧಿಕಾರಿ (ಡಿಇಒ) ಮತ್ತು ಜಿಲ್ಲಾಧಿಕಾರಿ ಸೌರಭ್ ಪರ್ಘಿ ಅವರು ತಿರಸ್ಕರಿಸಿದ್ದರು. ಇದೇ ರೀತಿ ಸೂರತ್ ಕಾಂಗ್ರೆಸ್‌ನ ಬದಲಿ ಅಭ್ಯರ್ಥಿ ಸುರೇಶ್ ಪಡಸಾಲ ಅವರ ನಾಮಪತ್ರವನ್ನು ಕೂಡ ತಿರಸ್ಕರಿಸಲಾಗಿತ್ತು.
ಡಾಕ್ಯುಮೆಂಟ್‌ನಲ್ಲಿನ ಸಹಿಗಳು ತಮ್ಮದಲ್ಲ ಎಂದು ಆರೋಪಿಸಿ ಮೂವರು ಪ್ರಸ್ತಾವಕರು ಚುನಾವಣಾಧಿಕಾರಿಗೆ ಅಫಿಡವಿಟ್‌ಗಳನ್ನು ಸಲ್ಲಿಸಿದ ನಂತರ ಕುಂಭಾಣಿ ಅವರ ನಾಮಪತ್ರವನ್ನು ತಿರಸ್ಕರಿಸಲಾಗಿತ್ತು. ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಂಡ ನಂತರ, ಬಿಜೆಪಿಯು ಕಣದಲ್ಲಿದ್ದ ಉಳಿದ ಎಂಟು ಅಭ್ಯರ್ಥಿಗಳನ್ನು ತಮ್ಮ ನಾಮಪತ್ರಗಳನ್ನು ಹಿಂತೆಗೆದುಕೊಳ್ಳುವಂತೆ ಮನವೊಲಿಸಿದೆ, ಇದರ ಪರಿಣಾಮವಾಗಿ ಬಾಲುಭಾಯ್ ಪಟೇಲ್ ಅವಿರೋಧವಾಗಿ ಆಯ್ಕೆಯಾಗಿದ್ದರು.
ವೀಡಿಯೊ ಸಂದೇಶವೊಂದರಲ್ಲಿ ಕುಂಭಣಿ ಅವರು ನಾಪತ್ತೆಯಾಗಿರುವುದನ್ನು ನಿರಾಕರಿಸಿದ್ದಾರೆ ಮತ್ತು ಕಾಂಗ್ರೆಸ್ ಪಕ್ಷದ ಹಲವಾರು ಹಿರಿಯ ನಾಯಕರೊಂದಿಗೆ ಸಂಪರ್ಕದಲ್ಲಿದ್ದೇನೆ ಎಂದು ಹೇಳಿದ್ದರು. ನನ್ನ ನಾಮಪತ್ರ ರದ್ದತಿಯನ್ನು ಪ್ರಶ್ನಿಸಿ ನಾನು ಅರ್ಜಿಯನ್ನು ಸಿದ್ಧಪಡಿಸಿದ್ದೆ ಮತ್ತು ಅದಕ್ಕಾಗಿ ಅಹಮದಾಬಾದ್‌ಗೆ ತೆರಳುತ್ತಿದ್ದಾಗ ಕೆಲವು ನಾಯಕರ ಪಿತೂರಿ ಮೇರೆಗೆ ಕಾಂಗ್ರೆಸ್ ಪಕ್ಷದ ಕೆಲವು ಕಾರ್ಯಕರ್ತರು ನನ್ನ ನಿವಾಸದ ಬಳಿ ಪ್ರತಿಭಟನೆ ನಡೆಸಿದರು ಎಂದು ಹೇಳಿದ್ದಾರೆ. ಪ್ರಚಾರದ ವೇಳೆ ಕೆಲ ಕಾಂಗ್ರೆಸ್ ನಾಯಕರು ತನಗೆ ಸಹಾಯ ಮಾಡಲಿಲ್ಲ ಎಂದು ಆರೋಪಿಸಿದ್ದು, ಕಾಂಗ್ರೆಸ್ ಪಕ್ಷಕ್ಕೆ ನಾನು ಬದ್ಧನಾಗಿದ್ದೇನೆ, ನಾನು ಕಾಂಗ್ರೆಸ್‌ನ ನಿಷ್ಠಾವಂತ ಸದಸ್ಯನಾಗಿದ್ದೇನೆ ಮತ್ತು ಪಕ್ಷದಲ್ಲೇ ಉಳಿಯುತ್ತೇನೆ. ಪಕ್ಷದ ಉನ್ನತ ನಾಯಕತ್ವದ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ ಎಂದು ಹೇಳಿದ್ದರು.
ಇದನ್ನು ಓದಿ: 100 ಕೋಟಿ ದಾಟಿದ ಬಿಜೆಪಿಯ ಗೂಗಲ್ ಜಾಹೀರಾತು ವೆಚ್ಚ!; ಕರ್ನಾಟಕವೇ ಪ್ರಮುಖ ಟಾರ್ಗೆಟ್


