“ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮುಸ್ಲಿಮರು ಬಹುಸಂಖ್ಯಾತ ಸಮುದಾಯವಾಗುತ್ತಾರೆ ಎಂಬ ಭಯವನ್ನು ಹಿಂದೂಗಳಲ್ಲಿ ಮೂಡಿಸುತ್ತಿದ್ದಾರೆ. ಎಷ್ಟು ದಿನ ಮುಸಲ್ಮಾನರ ಬಗ್ಗೆ ಭಯ ಹುಟ್ಟಿಸುತ್ತೀರಿ..? ನಮ್ಮ ಧರ್ಮ ಬೇರೆ ಇರಬಹುದು; ಆದರೆ, ನಾವು ಈ ದೇಶಕ್ಕೆ ಸೇರಿದವರು” ಎಂದು ಹೈದರಾಬಾದ್ ಸಂಸದ, ಅಖಿಲ ಭಾರತ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮುಸ್ಲಿಂಮರಿಗೆ ಹೆಚ್ಚು ಮಕ್ಕಳು ಎಂಬರ್ಥದಲ್ಲಿ ಟೀಕೆ ಮಾಡಿದ್ದ ಪ್ರಧಾನಿ ಮೋದಿ ವಿರುದ್ಧ ನೇರ ವಾಗ್ದಾಳಿ ನಡೆಸಿದ ಅವರು, “ನೀವು ದ್ವೇಷದ ಗೋಡೆಯನ್ನು ಏಕೆ ಕಟ್ಟುತ್ತಿದ್ದೀರಿ? ಮುಸ್ಲಿಮರು ಹೆಚ್ಚು ಮಕ್ಕಳನ್ನು ಉತ್ಪಾದಿಸುತ್ತಾರೆ ಎಂಬ ಭಯವನ್ನು ಏಕೆ ಸೃಷ್ಟಿಸುತ್ತಿದ್ದೀರಿ? ಮೋದಿ ಸರಕಾರದ ಅಂಕಿಅಂಶಗಳ ಪ್ರಕಾರ ಮುಸ್ಲಿಮರ ಜನಸಂಖ್ಯೆಯ ಬೆಳವಣಿಗೆ ಕುಸಿದಿದೆ. ಮುಸ್ಲಿಮರು ಕಾಂಡೋಮ್‌ಗಳನ್ನು ಹೆಚ್ಚು ಬಳಸುತ್ತಾರೆ ಮತ್ತು ಇದನ್ನು ಹೇಳಲು ನನಗೆ ನಾಚಿಕೆ ಇಲ್ಲ” ಎಂದು ಓವೈಸಿ ಹೇಳಿದರು.
‘ಈ ಮಾಹಿತಿಯ ಮೂಲ ಮೋದಿ ಸರ್ಕಾರದ ಡೇಟಾವೇ ಹೊರತು ನಾವಲ್ಲ’ ಎಂದು ಓವೈಸಿ ಹೇಳಿದ್ದಾರೆ. “ನರೇಂದ್ರ ಮೋದಿ ದ್ವೇಷವನ್ನು ಸೃಷ್ಟಿಸುತ್ತಿದ್ದಾರೆ; ಮುಸ್ಲಿಮರು ಗರಿಷ್ಠ ಸಂತಾನೋತ್ಪತ್ತಿ ದರವನ್ನು ಹೊಂದಿದ್ದಾರೆ ಎಂದು ಹೇಳುವ ಮೂಲಕ ಅವರು ಬಹುಸಂಖ್ಯಾತ ಸಮುದಾಯವನ್ನು ದಾರಿತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ” ಎಂದು ಎಐಎಂಐಎಂ ನಾಯಕ ಹೇಳಿದರು.
ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಅವರು ಮುಸ್ಲಿಮರ ಕುರಿತಾದ ಹೇಳಿಕೆಗೆ ರಾಜಕೀಯ ಬಿರುಗಾಳಿ ಎಬ್ಬಿಸಿದ್ದರು. ರಾಜಸ್ಥಾನದ ಬನ್ಸ್ವಾರಾದಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, “ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ತಾಯಿ, ಸಹೋದರಿಯರ ಬಳಿ ಚಿನ್ನ ಲೆಕ್ಕ ಹಾಕಿ, ಅದರ ಬಗ್ಗೆ ಮಾಹಿತಿ ಪಡೆದು ಆ ಆಸ್ತಿಯನ್ನು ಹಂಚುತ್ತೇವೆ ಎಂದು ಹೇಳುತ್ತದೆ. ಯಾರಿಗೆ ಹಂಚುತ್ತೇವೆ ಎಂದು ಮನಮೋಹನ್ ಸಿಂಗ್ ಸರ್ಕಾರ ಹೇಳಿತ್ತು; ದೇಶದ ಆಸ್ತಿಗಳ ಮೇಲಿನ ಮೊದಲ ಹಕ್ಕು ಮುಸ್ಲಿಮರಿಗೆ” ಎಂದು ಹೇಳಿದ್ದರು.
“ಈ ಹಿಂದೆ ಅವರ (ಕಾಂಗ್ರೆಸ್) ಸರ್ಕಾರ ಅಧಿಕಾರದಲ್ಲಿದ್ದಾಗ, ಅವರು ದೇಶದ ಆಸ್ತಿಯಲ್ಲಿ ಮುಸ್ಲಿಮರಿಗೆ ಮೊದಲ ಹಕ್ಕು ಎಂದು ಹೇಳಿದ್ದರು. ಇದರರ್ಥ ಈ ಆಸ್ತಿಯನ್ನು ಯಾರಿಗೆ ಹಂಚಲಾಗುತ್ತದೆ? ಇದನ್ನು ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ಹಂಚಲಾಗುತ್ತದೆ. ನುಸುಳುಕೋರರಿಗೆ ವಿತರಿಸಲಾಗುವುದು. ನೀವು ಕಷ್ಟಪಟ್ಟು ಸಂಪಾದಿಸಿದ ಹಣ ನುಸುಳುಕೋರರಿಗೆ ಹೋಗಬೇಕೇ? ನೀವು ಇದನ್ನು ಅನುಮೋದಿಸುತ್ತೀರಾ” ಎಂದು ಪ್ರಧಾನಿ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿವೆ. ಚುನಾವಣಾ ಸಮಿತಿಯು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ತಮ್ಮ ಪಕ್ಷದ ಎಲ್ಲಾ ಸ್ಟಾರ್ ಪ್ರಚಾರಕರಿಂದ ನಿರೀಕ್ಷಿತ ರಾಜಕೀಯ ಭಾಷನಗಳ ಉನ್ನತ ಗುಣಮಟ್ಟದ ಬಗ್ಗೆ ತಿಳಿಸುವಂತೆ ಸೂಚಿಸಿದೆ.
ಇದನ್ನೂ ಓದಿ; ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ: ಸಂತ್ರಸ್ತ ಮಹಿಳೆಯೊಬ್ಬರಿಂದ ದೂರು; ಅಂತರ ಕಾಯ್ದುಕೊಂಡ ಮೈತ್ರಿ ಪಕ್ಷಗಳು


