Homeಮುಖಪುಟಪಾಕಿಸ್ತಾನದ ಯುವತಿಗೆ ಚೆನ್ನೈನಲ್ಲಿ ಹೃದಯ ಕಸಿ: ದ್ವೇಷ ಕಾರಿದ ಕೆಲ ಬಲಪಂಥೀಯ 'ಎಕ್ಸ್‌' ಬಳಕೆದಾರರು

ಪಾಕಿಸ್ತಾನದ ಯುವತಿಗೆ ಚೆನ್ನೈನಲ್ಲಿ ಹೃದಯ ಕಸಿ: ದ್ವೇಷ ಕಾರಿದ ಕೆಲ ಬಲಪಂಥೀಯ ‘ಎಕ್ಸ್‌’ ಬಳಕೆದಾರರು

- Advertisement -
- Advertisement -

ಚೆನ್ನೈನಲ್ಲಿ ಪಾಕಿಸ್ತಾನದ ಪ್ರಜೆಯೋರ್ವರಿಗೆ ಹೃದಯ ಶಸ್ತ್ರಚಿಕಿತ್ಸೆ ನಡೆಸಿದ್ದಕ್ಕೆ ಕೆಲ ಬಲಪಂಥೀಯ ಸಾಮಾಜಿಕ ಮಾಧ್ಯಮ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿ ಪೋಸ್ಟ್‌ ಮಾಡಿದ್ದು, ಮಾನವೀಯತೆಯನ್ನೇ ಅಣಕಿಸುವಂತೆ ಮಾಡಿದೆ.

ಅಂಗಾಂಗ ದಾನಕ್ಕೆ ವಿದೇಶಿಯರಿಗೆ ಆದ್ಯತೆ ನೀಡಿದ್ದಕ್ಕಾಗಿ ಆರೋಗ್ಯ ವ್ಯವಸ್ಥೆಗೆ ಅವಮಾನ, ಪಾಕಿಸ್ತಾನದ ಪ್ರಜೆಯ ಮೇಲಿನ ಧಾರ್ಮಿಕ ಮತ್ತು ಪ್ರಾದೇಶಿಕ ದ್ವೇಷವನ್ನು ಪ್ರಚೋದಿಸುವುದು, ಚೆನ್ನೈನ ‘ಎನ್‌ಜಿಒ’ ಹೃದಯ ಕಸಿ ಶಸ್ತ್ರಚಿಕಿತ್ಸೆಗೆ ವೆಚ್ಚ ಭರಿಸಿದೆ ಎಂದು ಬಲಪಂಥೀಯ ಸಾಮಾಜಿಕ ಮಾಧ್ಯಮ ಬಳಕೆದಾರರು ಟೀಕಿಸಿರುವುದು ಕಂಡು ಬಂದಿದೆ.

ಇಲ್ಲಿ ನಾವು ಪಾಕಿಸ್ತಾನಿಯರಿಗೆ ನಮ್ಮ ಹೃದಯವನ್ನು ನೀಡುತ್ತಿದ್ದೇವೆ, ಆದರೆ ವೈಟಿಂಗ್‌ ಲಿಸ್ಟ್‌ನಲ್ಲಿದ್ದ ಭಾರತದ ಪ್ರಜೆಗೆ ಇದನ್ನು ನೀಡಬಹುದಿತ್ತು ಎಂದು ಎಕ್ಸ್‌ ಬಳಕೆದಾರರು ಬರೆದಿದ್ದಾರೆ.

ಅಂಗಗಳನ್ನು ಬಯಸುತ್ತಿರುವ ವಿದೇಶಿ ಪ್ರಜೆಗಳ ಪಟ್ಟಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ NOTTO ನೋಡಿಕೊಳ್ಳುತ್ತದೆ. ವೈಟಿಂಗ್‌ ಲಿಸ್ಟ್‌ನಲ್ಲಿ ಯಾವುದೇ ಭಾರತೀಯರು ಇಲ್ಲದಿದ್ದರೆ ಮಾತ್ರ ಅಂಗವನ್ನು ವಿದೇಶಿಯರಿಗೆ ಹಂಚಲಾಗುತ್ತದೆ. ಇದನ್ನು NOTTOನ ಮಾಜಿ ನಿರ್ದೇಶಕಿ ಡಾ. ವಸಂತಿ ರಮೇಶ್ ಅವರು 2018ರಲ್ಲಿ ದೃಢಪಡಿಸಿದ್ದರು.

ಪಾಕಿಸ್ತಾನದ 19 ವರ್ಷದ ಆಯೇಷಾ ರಶನ್ 2019ರಿಂದ NOTTOನ ವೈಟಿಂಗ್‌ ಲಿಸ್ಟ್‌ನಲ್ಲಿದ್ದರು. ಆಕೆ ಹೃದಯ ಕಸಿಗೆ ತನ್ನ ವಿನಂತಿಯನ್ನು ಸಲ್ಲಿಸಿದ ಐದು ವರ್ಷಗಳ ನಂತರ 2024ರ ಜನವರಿಯಲ್ಲಿ 69 ವರ್ಷದ ದೆಹಲಿ ಮೂಲದ ದಾನಿಯ ಹೃದಯವನ್ನು ಕಸಿಗೆ ಆಕೆಯನ್ನು ಆಯ್ಕೆ ಮಾಡಲಾಗಿತ್ತು. ಆಯೇಷಾ ಚಿಕಿತ್ಸೆಗಾಗಿ 2014 ರಲ್ಲಿ ಭಾರತಕ್ಕೆ ಭೇಟಿ ನೀಡಿದಾಗ ವೈದ್ಯರು ಅವಳಿಗೆ ಸಹಾಯ ಮಾಡಲು ಹೃದಯ ಪಂಪ್‌ನ್ನು ಅಳವಡಿಸಿದ್ದರು. ಆದರೆ ನಂತರ ಅದು ನಿಷ್ಕ್ರಿಯವಾಗಿತ್ತು.

ಆಯೇಷಾ ಅವರ ಶಸ್ತ್ರಚಿಕಿತ್ಸೆಗಾಗಿ ಹೃದಯವನ್ನು ದೆಹಲಿಗೆ ವಿಮಾನದಲ್ಲಿ ಸಾಗಿಸಲಾಯಿತು. ಚೆನ್ನೈ ಮೂಲದ ಎಂಜಿಎಂ ಹೆಲ್ತ್‌ಕೇರ್‌ನಲ್ಲಿ ಕಸಿ ಮಾಡಲಾಗಿದ್ದು, ಆಕೆಯ ಚಿಕಿತ್ಸಾ ವೆಚ್ಚವನ್ನು ಐಶ್ವರ್ಯ ಟ್ರಸ್ಟ್ ಎಂಬ ಎನ್‌ಜಿಒ ಭರಿಸಿತ್ತು. ಆಕೆಯ ಚಿಕಿತ್ಸಾ ಬಿಲ್ಲುಗಳನ್ನು ಪಾವತಿಸಲು ಕೆಲ ರೋಗಿಗಳು ಮತ್ತು ವೈದ್ಯರು ಸಹ ಸಹಾಯ ಮಾಡಿದ್ದರು.

ಈ ಕುರಿತು ಪ್ರತಿಕ್ರಿಯಿಸಿದ ಎಂಜಿಎಂ ಹೆಲ್ತ್‌ಕೇರ್‌ನ ವೈದ್ಯ ಕೆಜಿ ಸುರೇಶ್ ರಾವ್, ನಮಗೆ ರೋಗಿಗಳು-ರೋಗಿಗಳು. ನಾವು ಅವರ ಧರ್ಮ ಅಥವಾ ಅವರ ಜನ್ಮಸ್ಥಳವನ್ನು ನೋಡುವುದಿಲ್ಲ. ನಾವು ಸಾಧ್ಯವಿರುವ ಸಹಾಯವನ್ನು ಮಾಡುತ್ತೇವೆ. ಈ ಸಂದರ್ಭದಲ್ಲಿ ಅವಳು ಪಾಕಿಸ್ತಾನಿ ಅಥವಾ ಭಾರತೀಯ ಎಂದು ನಾವು ನೋಡಲಿಲ್ಲ. ಅವಳು ರೋಗಿ ಮತ್ತು ಚಿಕ್ಕ ಯುವತಿ ಎಂದು ನೋಡಿದೆವು ಎಂದು ಹೇಳಿದ್ದಾರೆ.

2019ರಿಂದ ಆಯೇಷಾಗೆ ಚಿಕಿತ್ಸೆ ನೀಡುತ್ತಿರುವ ಹಿರಿಯ ಹೃದಯ ಶಸ್ತ್ರಚಿಕಿತ್ಸಕ ಡಾ.ಕೆ.ಆರ್.ಬಾಲಕೃಷ್ಣನ್ ಮಾತನಾಡುತ್ತಾ, ಆಯೇಷಾ ಅವರ ತಾಯಿ ಒಂಟಿ ಪೋಷಕರಾಗಿದ್ದರು ಮತ್ತು ಮಗಳ ಚಿಕಿತ್ಸೆಯನ್ನು ಮುಂದುವರಿಸಲು ಕುಟುಂಬ ಬೇಕಾದಷ್ಟು ಸಂಪನ್ಮೂಲಗಳನ್ನು ಹೊಂದಿರಲಿಲ್ಲ ಎಂದು ಹೇಳಿದ್ದಾರೆ.

@colourSaffron ಎಂಬ ಎಕ್ಸ್‌ ಖಾತೆಯಲ್ಲಿ, ಭಾರತ ಏಕೆ ಉಚಿತ ಹೃದಯ ಕಸಿ ಮಾಡುತ್ತಿದೆ, ಈ ಕೃತಜ್ಞತೆಯಿಲ್ಲದ ಜನರಿಗಿಂತ ಹೆಚ್ಚಿನ ಅಗತ್ಯವಿರುವ ಅನೇಕ ಬಡವರು ಭಾರತದಲ್ಲಿದ್ದಾರೆ ಎಂದು ಬರೆಯಲಾಗಿದೆ.

ಮತ್ತೊಬ್ಬ ಬಳಕೆದಾರರಾದ @chaijeeevi, ಪಾವತಿ ಬಗ್ಗೆ ಹೇಳದೆ ಅವರು ನಮಗೆ ಚಿಕಿತ್ಸೆ ನೀಡುವ ಬಗ್ಗೆ ಮಾತನಾಡುವುದು ಕೂಡ ಇಲ್ಲ ಮತ್ತು ಇಲ್ಲಿ ಅವರು ಶತ್ರುಗಳಿಗೆ ಉಚಿತ ಚಿಕಿತ್ಸೆಯನ್ನು ನೀಡುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಭಾರತೀಯ ಸಾಮಾಜಿಕ ಮಾಧ್ಯಮ ಬಳಕೆದಾರರ ಈ ಪೋಸ್ಟ್‌ ಬಗ್ಗೆ ಪ್ರತಿಕ್ರಿಯಿಸಿದ @TheLiverDoc ಆನ್ ಎಕ್ಸ್ ಎಂದು ಕರೆಯಲ್ಪಡುವ ಡಾ ಸಿರಿಯಾಕ್ ಅಬ್ಬಿ ಫಿಲಿಪ್ಸ್, ಇದು ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಸುದ್ದಿ. ಕಾಮೆಂಟ್‌ ಮಾಡುವ ವಿಭಾಗದಲ್ಲಿರುವ ಹೆಚ್ಚಿನ ಸಂಖ್ಯೆಯ ಜನರು ಮಾನವೀಯತೆಯನ್ನು ಅರ್ಥ  ಅರ್ಥಮಾಡಿಕೊಳ್ಳುವುದಿಲ್ಲ. ಇದು ವೈದ್ಯಕೀಯ ಉಪಚಾರದ ಮೂಲವಾಗಿದೆ. ಆರೋಗ್ಯ ಸೇವೆಯು ಸಾರ್ವತ್ರಿಕ ಹಕ್ಕಾಗಿದ್ದು, ನಕಾರಾತ್ಮಕವಾಗಿ ಕಾಮೆಂಟ್ ಮಾಡುವವರು ನಾಚಿಕೆಪಡಬೇಕು ಎಂದು ಹೇಳಿದ್ದಾರೆ.

ಇದನ್ನು ಓದಿ: ಬರಪರಿಹಾರ: ಮೋದಿಗೆ ಶ್ಲಾಘಿಸಿ ಕನ್ನಡಿಗರಿಂದ ಉಗಿಸಿಕೊಂಡ ಬಿಜೆಪಿ ನಾಯಕರು: ರಿಪೋರ್ಟ್ ಓದಿ..

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಿರ್ಗಿಸ್ತಾನ್‌ನಲ್ಲಿ ಹಿಂಸಾಚಾರ: ಮನೆಬಿಟ್ಟು ಹೊರಬರದಂತೆ ಭಾರತೀಯ ವಿದ್ಯಾರ್ಥಿಗಳಿಗೆ ಸೂಚನೆ

0
ಕಿರ್ಗಿಸ್ತಾನ್‌ನ ರಾಜಧಾನಿ ಬಿಷ್ಕೆಕ್‌ನಲ್ಲಿ ವಿದೇಶಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಗುಂಪು ಹಿಂಸಾಚಾರದ ವರದಿಗಳ ಮಧ್ಯೆ ಭಾರತ ಮತ್ತು ಪಾಕಿಸ್ತಾನವು ಶನಿವಾರ ಬಿಷ್ಕೆಕ್‌ನಲ್ಲಿರುವ ವಿದ್ಯಾರ್ಥಿಗಳಿಗೆ ತಾವು ತಂಗಿರುವ ಹಾಸ್ಟೆಲ್‌, ಮನೆಗಳಿಂದ ಹೊರಗೆ ಬರದಂತೆ ಸೂಚಿಸಿದೆ. ಕಿರ್ಗಿಸ್ತಾನ್‌ನಲ್ಲಿರುವ ಭಾರತದ...